ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಕಳದ ಬಾಹುಬಲಿಗೆ ಶತಮಾನದ ಮೊಟ್ಟ ಮೊದಲ ಮಹಾಮಜ್ಜನ

By Staff
|
Google Oneindia Kannada News

ಕಾರ್ಕಳ : ಫೆ.16ರಿಂದ ಹತ್ತುದಿನಗಳ ಕಾಲ ಕಾರ್ಕಳದ ಬಾಹುಬಲಿ ಮೂರ್ತಿಗೆ ಮಹಾ ಮಸ್ತಕಾಭಿಷೇಕ ನಡೆಯಲಿದೆ. ಈ ಸಂಭ್ರಮದ ಉತ್ಸವಕ್ಕಾಗಿ ಸಕಲ ಸಿದ್ಧತೆಗಳೂ ಭರದಿಂದ ಸಾಗಿವೆ. ಚತುರ್ಮುಖ ಬಸದಿಗಳ ದುರಸ್ತಿ, ಮೂರ್ತಿಗಳ ಸ್ವಚ್ಛತೆ, ಹಳೆ ಪ್ರಾಕಾರದ ರಚನೆ, ಮಾನಸ್ತಂಭದ ಸುತ್ತ ಶಿಲಾವಿನ್ಯಾಸ ಕಾಮಗಾರಿಗಳನ್ನು ಕೇಂದ್ರ ಪುರಾತತ್ವ ಇಲಾಖೆ ಕೈಗೆತ್ತಿಕೊಂಡಿದೆ.

38 ಲಕ್ಷ ರುಪಾಯಿ ವೆಚ್ಚದಲ್ಲಿ ಪುರಾತತ್ವ ಇಲಾಖೆ ಈ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದರೆ, ಜಿಲ್ಲಾ ಪಂಚಾಯಿತಿಯು 10 ಲಕ್ಷ ರುಪಾಯಿ ವೆಚ್ಚದಲ್ಲಿ ಈ ಜೈನಕ್ಷೇತ್ರದ ಸಂಪರ್ಕ ರಸ್ತೆಗಳ ಅಭಿವೃದ್ಧಿ ಮಾಡುತ್ತಿದೆ. ರಾಜ್ಯ ಸರಕಾರವು ಬೆಟ್ಟದ ಹಿಂಬದಿಯ ರಸ್ತೆ ರಚನೆ, ಮಠದ ಎದುರಿನ ರಸ್ತೆ, ಮಾನಸ್ತಂಭದ ಸುತ್ತ ಟಾರು ರಸ್ತೆ ನಿರ್ಮಾಣ ಮೊದಲಾದ ಕಾಮಗಾರಿಗಳನ್ನು 40 ಲಕ್ಷ ರುಪಾಯಿ ವೆಚ್ಚದಲ್ಲಿ ನಡೆಸುತ್ತಿದೆ.

14ರಂದ ದಿಗಂಬರ ಮುನಿಗಳ ಆಗಮನ : ಕಾರ್ಕಳದ ಬಾಹುಬಲಿಗೆ ನಡೆಯಲಿರುವ ಮಹಾಮಜ್ಜನಕ್ಕೆ ಸೂಕ್ತ ಮಾರ್ಗದರ್ಶನ ನೀಡಲು ಒಂಬತ್ತು ಮಂದಿ ದಿಗಂಬರ ಮುನಿಗಳು ಕ್ಷೇತ್ರಕ್ಕೆ ಫೆ.14ರಂದು ಆಗಮಿಸುತ್ತಿದ್ದಾರೆ. 600 ಲೀಟರ್‌ ಹಾಲು, 600 ಲೀಟರ್‌ನಷ್ಟು ಚಂದನ, ಶ್ರೀಗಂಧ, ಏಳನೀರು, ಅರಿಶಿನದಿಂದ ಶಾಂತಮೂರ್ತಿಗೆ ಮಹಾಮಜ್ಜನ ನಡೆಯಲಿದೆ. ಮಹಾ ಮಸ್ತಕಾಭಿಷೇಕದ ಕೊನೆಯ ದಿನ ಚತುಷ್ಕೋನ ಕಲಶ, ಪೂರ್ಣ ಕುಂಬಾಭಿಷೇಕ, ಪುಷ್ಪವೃಷ್ಟಿ ನಡೆಯಲಿದೆ.

ಕಾರ್ಕಳದ ಗೊಮ್ಮಟ : ಶ್ರವಣಬೆಳಗೊಳದ 57 ಅಡಿ ಎತ್ತರದ ಬಾಹುಬಲಿಯ ಮೂರ್ತಿಯ ನಂತರದ ಸ್ಥಾನ ಪಡೆದಿರುವ ಕಾರ್ಕಳದ ಗೊಮ್ಮಟ ಮೂರ್ತಿಯ ಎತ್ತರ 42 ಅಡಿಗಳು. ಅತ್ಯಂತ ಪ್ರಾಚೀನ ವಿಗ್ರಹಗಳಲ್ಲಿ ಒಂದಾದ ಕಾರ್ಕಳದ ಗೊಮ್ಮಟನು ಪಶ್ಚಿಮ ಘಟ್ಟಗಳ ಮಧ್ಯೆ ಸುತ್ತುವರಿದ ಹಸಿರು ವನರಾಶಿಯ ಮಧ್ಯೆ ಕಂಗೊಳಿಸುತಿಹನು.

ಸಹ್ಯಾದ್ರಿಯ ಪರ್ವತ ಶ್ರೇಣಿಗಳ ನಡುವೆ, ಹಚ್ಚಹಸುರಿನ ಮಧ್ಯೆ ಆಕಾಶ ಭೂಮಿಗಳ ಒಂದು ಮಾಡಿ ನಿಂತಂತೆ ಕಾಣುವ ಈ ಮೂರ್ತಿಗೆ 1990ರಲ್ಲಿ ಮಹಾ ಮಸ್ತಕಾಭಿಷೇಕ ಜರುಗಿತ್ತು. ಈಗ 12 ವರ್ಷಗಳ ಬಳಿಕ ಮತ್ತೆ ಮಹಾಮಜ್ಜನ ನಡೆಸಲಾಗುತ್ತಿದೆ.

500 ವರ್ಷಗಳ ಕಾಲ ಕಾರ್ಕಳವನು ಆಳಿದ ಭೈರವರಸರಲ್ಲಿ ಪ್ರಮುಖನಾದ ವೀರಪಾಂಡ್ಯ ಭೈರವರಾಜನು ಕ್ರಿ.ಶ. 1432ರಲ್ಲಿ ಬಾಹುಬಲಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದ ಎನ್ನುತ್ತದೆ ಇತಿಹಾಸ. ಈ ಗೊಮ್ಮಟನಿಗೆ ಮೊಟ್ಟ ಮೊದಲ ಬಾರಿಗೆ ಮಸ್ತಕಾಭಿಷೇಕ ನಡೆದದ್ದು 1665ರಲ್ಲಿ.

ಶ್ರೀಲಲಿತ ಕೀರ್ತಿ ಆಚಾರ್ಯರ ಆಜ್ಞೆಯಂತೆ ಇಮ್ಮುಡಿ ಭೈರವರಾಯನು 1665ರಲ್ಲಿ ಮಸ್ತಕಾಭಿಷೇಕ ಮಾಡಿಸಿದ. 20 ನೇ ಶತಮಾನದಲ್ಲಿ 1950, 1962 ಹಾಗೂ 1990ರಲ್ಲಿ ಇಲ್ಲಿ ಮಸ್ತಕಾಭಿಷೇಕ ಜರುಗಿತ್ತು. ಈಗ ನಡೆಯುತ್ತಿರುವ ಮಸ್ತಕಾಭಿಷೇಕರವು, 21ನೇ ಶತಮಾನದ ಮೊಟ್ಟ ಮೊದಲ ಅಭಿಷೇಕವಾಗಿದೆ. ಫೆ.16ರಿಂದ 26ರವರೆಗೆ ನಡೆಯಲಿರುವ ಈ ಮಹೋತ್ಸವದಲ್ಲಿ ಸುಮಾರು 50, ಸಾವಿರ ಭಕ್ತರು ಹಾಗೂ ಪ್ರವಾಸಿಗರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

(ಇನ್‌ಫೋ ವಾರ್ತೆ)

ಮುಖಪುಟ / ನೋಡು ಬಾ ನಮ್ಮೂರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X