ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿ ಶೀಘ್ರವೇ ಬರಲಿದೆ ಭ್ರಷ್ಟಾಚಾರ ಅಳೆಯಲೊಂದು ‘ಮಾಪಕ’

By Staff
|
Google Oneindia Kannada News

ನವದೆಹಲಿ : ಭೂಕಂಪದ ತೀವ್ರತೆ ಅಳೆಯಲು ರಿಕ್ಟರ್‌ ಮಾಪಕ ಇರುವಂತೆ, ಉಷ್ಣತೆಯನ್ನು ಅಳೆಯಲು ಉಷ್ಣ ಮಾಪಕ ಇರುವಂತೆ.. ಸರಕಾರಿ, ಅರೆ ಸರಕಾರಿ, ಸಾರ್ವಜನಿಕ ವಲಯ, ಬ್ಯಾಂಕ್‌ಗಳಲ್ಲಿ ನಡೆವ ಭ್ರಷ್ಟಾಚಾರ ಅಳೆಯಲು ಅತಿ ಶೀಘ್ರದಲ್ಲೇ ಹೊಸ ‘ಮಾಪಕ’ ಅರ್ಥಾತ್‌ ಮಾನದಂಡ ಬರಲಿದೆ. ಈ ವಿಷಯವನ್ನು ಜಾಗೃತ ಆಯುಕ್ತ ಎನ್‌. ವಿಠಲ್‌ ತಿಳಿಸಿದ್ದಾರೆ.

ಈ ಮಾಪಕದ ಅಳವಡಿಕೆಯಿಂದ ಸರಕಾರಿ, ಅರೆಸರಕಾರಿ, ಸಾರ್ವಜನಿಕ ವಲಯದ ಉದ್ದಿಮೆಗಳು, ಬ್ಯಾಂಕ್‌ ಹಾಗೂ ಸಹಕಾರಿ ಸಂಸ್ಥೆಗಳಲ್ಲಿ ಪಾರದರ್ಶಕತೆ ಮೂಡಲಿದೆ ಎಂದು ಅವರು ಹೇಳಿದ್ದಾರೆ. ಈ ಮಾನದಂಡಕ್ಕೆ ‘ಪ್ರಾಮಾಣಿಕತೆ ಗ್ರಹಿಕೆ ಸೂಚಿ’ ಎಂದು ನಾಮಕರಣ ಮಾಡಿರುವುದಾಗಿಯೂ ಅವರು ಪಿ.ಟಿ.ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ವಿಶ್ವಬ್ಯಾಂಕ್‌ ಸಿದ್ಧಪಡಿಸಿರುವ ವಿಶ್ವದ 91 ಭ್ರಷ್ಟದೇಶಗಳ ಪಟ್ಟಿಯಲ್ಲಿ ಭಾರತವು 72ನೇ ಸ್ಥಾನದಲ್ಲಿದೆ. 91ನೇ ಸ್ಥಾನದಲ್ಲಿರುವ ಬಾಂಗ್ಲಾದೇಶವು ಅತಿ ಹೆಚ್ಚು ಭ್ರಷ್ಟಾಚಾರವಿರುವ ರಾಷ್ಟ್ರವಾದರೆ, ಫಿನ್‌ಲ್ಯಾಂಡ್‌ ಅತಿ ಕಡಿಮೆ ಭ್ರಷ್ಟಾಚಾರದ ದೇಶವಾಗಿದೆ ಎಂಬ ಮಾಹಿತಿಯನ್ನೂ ಅವರು ಈ ಸಂದರ್ಶನದಲ್ಲಿ ನೀಡಿದ್ದಾರೆ.

ಈ ನಿಟ್ಟಿನಲ್ಲಿ ಭಾರತದಲ್ಲಿ ಭ್ರಷ್ಟಾಚಾರವನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಜಾರಿಯಲ್ಲಿರುವ ಭ್ರಷ್ಟಾಚಾರ ತೀವ್ರತೆ ಸೂಚಿ ಮತ್ತು ಸರಕಾರೇತರ ಸಂಘಸಂಸ್ಥೆಗಳ ವಿಶ್ಲೇಷಣೆಯನ್ನು ಆಳವಾಗಿ ಅಧ್ಯಯನ ಮಾಡಿದ ನಂತರ ‘ಪ್ರಾಮಾಣಿಕತೆ ಗ್ರಹಿಕೆ ಸೂಚಿ’ ಜಾರಿಗೆ ತರಲು ನಿರ್ಧರಿಸಲಾಯಿತು ಎಂದು ಅವರು ಹೇಳಿದ್ದಾರೆ.

ವಾಸ್ತವವಾಗಿ ‘ಪ್ರಾಮಾಣಿಕತೆ ಗ್ರಹಿಕೆ ಸೂಚಿ’ ಗೆ ಸಾರ್ವಜನಿಕರಿಂದ ಬರುವ ದೂರುಗಳೇ ಆಧಾರ. ಆಯೋಗಕ್ಕೆ ಪ್ರತಿವರ್ಷ ಸರಾಸರಿ 15 ಸಾವಿರ ದೂರುಗಳು ಬರುತ್ತವೆ. ದೂರು ಬಾರದ ಪ್ರಕರಣಗಳ ಸಂಖ್ಯೆ ಅಸಂಖ್ಯಾತ ಎಂದು ಅವರು ಹೇಳಿದ್ದಾರೆ.

ಇದಲ್ಲದೆ ಸುಳ್ಳು ದೂರು ನೀಡುವ ಮತ್ತು ಅನ್ಯಾಯವಾಗಿ ಕ್ರಮ ಕೈಗೊಳ್ಳುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಈ ಮೂಲಕ ಪ್ರಾಮಾಣಿಕ ಅಧಿಕಾರಿಗಳನ್ನು ರಕ್ಷಿಸಲಾಗುತ್ತದೆ ಎಂದು ವಿಠಲ್‌ ತಿಳಿಸಿದ್ದಾರೆ.

(ಪಿ.ಟಿ.ಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X