• search

ವ್ಯಸನಿಗಳ ಪಾಲಿನ ಅಸತೋಮಾ ಸದ್ಗಮಯ : ಮಂಗಳೂರಿನ ಪ್ರಜ್ಞಾ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    *ಇನ್ಫೋ ಇನ್‌ಸೈಟ್‌

    ರಾಜ್ಯದ ಪ್ರಥಮ ಮಾದಕ ದ್ರವ್ಯ ವ್ಯಸನ ನಿರ್ಮೂಲನಾ ಸಂಸ್ಥೆ , ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರಕ್ಕೆ ಈಗ ವಿಂಶತಿಯ ಸಂಭ್ರಮ.

    20 ತುಂಬಿದ ಖುಷಿಯನ್ನು ಆಚರಿಸಿಕೊಳ್ಳಲೆಂದು ಇತ್ತೀಚೆಗೆ ಸರಳ ಸಮಾರಂಭವನ್ನು ಪ್ರಜ್ಞಾ ಆಯೋಜಿಸಿತ್ತು. ಕಾರ್ಯಕ್ರಮ ನಡೆದ ಹಾಲ್‌ನ ತುಂಬ ಜನ ಗಿಜಿಗುಟ್ಟುತ್ತಿದ್ದರು. ಅವರೆಲ್ಲಾ ಪ್ರಜ್ಞಾದಿಂದ ನೆರವು ಪಡೆದವರು. ಕುಡಿತ ಬಿಡಲಾಗದೆ ನರಳಿದವರು, ಕುಡಿದು ಬಂದ ಗಂಡನ ಕಾಟ ತಾಳಲಾಗದೇ ಪ್ರಜ್ಞಾದ ಮೊರೆದವರು, ಕೃತಜ್ಞತೆಯ ಸೆಲೆಯನ್ನು ಎದೆಯಲ್ಲಿ ತುಂಬಿಟ್ಟುಕೊಂಡು ಪ್ರಜ್ಞಾಕ್ಕೆ ಬಂದಿದ್ದರು.

    ಪ್ರಜ್ಞಾ , ಡಿ-ಅಡಿಕ್ಷನ್‌ ಸೆಂಟರ್‌ನ ಅಡಿಯಲ್ಲಿ ಅನೌಪಚಾರಿಕವಾಗಿ ಹಲವು ಎನ್‌ಜಿಓಗಳು, ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಹಳ್ಳಿಯಾಂದರಲ್ಲಿರುವ ಮಹಿಳಾ ಸಮಾಜ ಸೇವಾ ಸಂಘಟನೆಯವರು ಕಣ್ಣ ಮುಂದೆಯೇ ಕುಡಿದು ಹಾಳಾಗುತ್ತಿರುವವನನ್ನು ಕರೆದು, ಕೈಯಲ್ಲೊಂದು ಚೀಟಿ ಇಟ್ಟು , ಪ್ರಜ್ಞಾ ಸಲಹಾ ಕೇಂದ್ರಕ್ಕೆ ಹೋಗುವ ದಾರಿಯನ್ನು ವಿವರಿಸುತ್ತಾರೆ. ಆತ ಸಲಹಾ ಕೇಂದ್ರವನ್ನು ತಲುಪಿದನೆಂದರೆ, ಹೊಸದೊಂದು ಬದುಕಿನ ಕದ ತಟ್ಟಿದನೆಂದೇ ಅರ್ಥ.

    ಜಾರುವವರಿಗೆ ಊರುಗೋಲು

    ಮೊನ್ನಿನ ಕಾರ್ಯಕ್ರಮದಲ್ಲಿಯೂ ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ‘ತನ್ನ ಮಗ ಈಗ ಕೆಲಸ ಬಿಟ್ಟು ನೆಟ್ಟಗೆ ಮನೆ ಕಡೆಗೆ ಬರುತ್ತಾನೆ. ಹೆಂಡತಿ ಮಕ್ಕಳನ್ನು ನೋಡಿಕೊಳ್ಳುತ್ತಾನೆ’ ಎಂದು ತಾಯಿಯಾಬ್ಬಳು ವಿವರಿಸಿದರೆ, ‘ಪ್ರಜ್ಞಾದಿಂದಾಗಿ ನನಗೆ ಸಮಾಜದಲ್ಲಿ ಮತ್ತೆ ಸ್ಥಾನ ಮಾನ ದೊರೆತಿದೆ’ ಎಂದು ಕುಡಿತ ಬಿಟ್ಟಿರುವ ಯುವಕನೊಬ್ಬ ಹೇಳುತ್ತಾನೆ.

    1982ರಲ್ಲಿ ಆರಂಭವಾದ ಈ ಸಂಸ್ಥೆಗೆ ಕುಟುಂಬ, ಮತ್ತು ಸಮಾಜ ಸಮಗ್ರ ಆರೋಗ್ಯವಾಗಿರಬೇಕು ಎನ್ನುವ ಕಾಳಜಿ. ಪುನರ್ವಸತಿ, ಆರೋಗ್ಯಕ್ಕಾಗಿ ಅಗತ್ಯ ಥೆರಪಿಗಳು, ಬಾಲಕಾರ್ಮಿಕತೆಯ ವಿರುದ್ಧ ಹೋರಾಟ, ಮಹಿಳಾ ಅಭಿವೃದ್ಧಿ, ಬಡವರಿಗೆ ಶಿಕ್ಷಣ...ಹಿಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನಿರಂತರ ದುಡಿತ.

    ಪ್ರಜ್ಞಾವನ್ನು ಈಗ ನಿರ್ವಹಿಸುತ್ತಿರುವವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಪ್ರೊ. ಹಿಲ್ಡಾ ರಾಯಪ್ಪನ್‌. ಕೇಂದ್ರದಲ್ಲಿ ಈಗ 40 ಹಾಸಿಗೆಗಳ ಡಿ- ಅಡಿಕ್ಷನ್‌ ಸೆಂಟರ್‌ ಇದೆ. 88 ಮಹಿಳೆಯರೂ ಸೇರಿದಂತೆ ಈವರೆಗೆ 2, 706 ಮಂದಿಯ ಮಾದಕ ವಸ್ತು ಸೇವನೆಯ ಚಟವನ್ನು ಬಿಡಿಸಲು ಸಂಸ್ಥೆ ನೆರವಾಗಿದೆ. ಒಮ್ಮೆ ಸಂಸ್ಥೆಯಿಂದ ಡಿಸ್‌ಚಾರ್ಜ್‌ ಆಗಿ ಹೋದವರು ಮತ್ತೆ ಬಂದು ಹಿಲ್ಡಾರನ್ನು ಭೇಟಿಯಾಗುತ್ತಾರೆ. ಸಂಸಾರದ ಕಷ್ಟ ಸುಖ ಹಂಚಿಕೊಂಡು ಹಗುರಾಗುತ್ತಾರೆ. ಮತ್ತೆ ತೊಂದರೆಗೆ ಸಿಲುಕಿದ್ದರೆ ಸಂಸ್ಥೆಯ ನೆರವು ಪಡೆಯುತ್ತಾರೆ. ಒಟ್ಟಿನಲ್ಲಿ ಜಾರುವವರಿಗೆಲ್ಲಾ ಊರುಗೋಲು ಈ ಪ್ರಜ್ಞಾ ಕೌನ್ಸಿಲಿಂಗ್‌ ಸೆಂಟರ್‌.

    ಬಾಲಕಾರ್ಮಿಕತೆಯಿಂದ ಮುಕ್ತರಾದವರು ಎಲ್ಲಿ ಹೋಗ್ಬೇಕು ?

    ಬಾಲ ಕಾರ್ಮಿಕರ ಬಗ್ಗೆ ಮಾತನಾಡುತ್ತಾ ಹಿಲ್ಡಾ, ಅವರನ್ನು ಹೋಟೆಲು, ಮನೆ, ತೋಟಗಳಿಂದ ಮುಕ್ತಿಗೊಳಿಸಬಹುದು. ಆದರೆ ನಂತರ ಅವರೆಲ್ಲಿ ಹೋಗುತ್ತಾರೆ. ಕೆಲಸದಿಂದ ಹೊರಗಟ್ಟಿದರೆ ಹೊಟ್ಟೆಗೆ ಅವರೇನು ಮಾಡಬೇಕು ಹೇಳಿ.. ಎಂದು ಪ್ರಶ್ನಿಸುತ್ತಾರೆ. ಅದಕ್ಕಾಗಿಯೇ ಇತ್ತೀಚೆಗೆ ಸಂಸ್ಥೆಯ ಬಾಲಕಾರ್ಮಿಕರಿಗಾಗಿ ಒಂದು ಶಾಲೆಯನ್ನು ತೆರೆದಿದೆ. ಅವರಿಗಾಗಿ ಪುನರ್ವಸತಿ ನಿರ್ಮಿಸಲು ಸಂಸ್ಥೆ ಶ್ರಮಿಸುತ್ತಿದೆ. ಈಗಾಗಲೇ 50 ಮಂದಿ ಮಕ್ಕಳುಅಲ್ಲಿ ಅ ಆ ಇ ಈ.. ಕಲಿಯುತ್ತಿದ್ದಾರೆ.

    ನೀವೂ ಪ್ರಜ್ಞಾವನ್ನು ಸಂಪರ್ಕಿಸಬೇಕೇ ? ವಿಳಾಸ : ಪ್ರೊ. ಹಿಲ್ಡಾ ರಾಯಪ್ಪನ್‌, ಪ್ರಜ್ಞಾ ಕೌನ್ಸಿಲಿಂಗ್‌ ಸೆಂಟರ್‌, ಫಳ್ನೀರ್‌ ರಸ್ತೆ, ಕಂಕನಾಡಿ, ಮಂಗಳೂರು- 575002. ಫೋನ್‌ : (0824) 432682. ಫ್ಯಾಕ್ಸ್‌ : (0824) 436727. ಈ ಮೇಯ್ಲ್‌ - prajna25@hotmail.com

    ಮುಖಪುಟ / ಲೋಕೋಭಿನ್ನರುಚಿ

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more