ಮತ್ತೆ ನಡುಗಿತು ಬೆಂಗಳೂರು : ಕತ್ತು ಕೊಯ್ದು ತಾಯಿ-ಮಗಳ ಹತ್ಯೆ
ಬೆಂಗಳೂರು : ಮತ್ತೆ ರಕ್ತ ನೆಲಕ್ಕೆ ತೊಟ್ಟಿಕ್ಕಿದೆ. ಕತ್ತು ಕೊಯ್ಯುವ ಹಂತಕರ ಅಟ್ಟಹಾಸವೂ ಮುಂದುವರಿದಿದೆ. ಗುರುವಾರ (ಜ.31) ಹಂತಕರು ಇಬ್ಬರು ನತದೃಷ್ಟರ ಕೊರಳು ಕೊಯ್ದಿದ್ದಾರೆ. ಈ ದುಷ್ಕೃತ್ಯಕ್ಕೆ ಬಲಿಯಾದವರು 30 ವರ್ಷ ವಯಸ್ಸಿನ ಪ್ರಿಯಾದೇವಿ ಹಾಗೂ ಆಕೆಯ ಮಗಳು ಆಕೆಯ 4 ವರ್ಷ ವಯಸ್ಸಿನ ಮಗಳು ನೇಹಾ ಕುಮಾರಿ.
ಭಾಷ್ಯಂ ವೃತ್ತದ ಸಮೀಪದಲ್ಲಿರುವ 59 ನೇ ಕ್ರಾಸ್ನ ಕಟ್ಟಡವೊಂದರ ಮೊದಲ ಮಹಡಿಯಲ್ಲಿ ವಾಸವಾಗಿರುವ ವಿದ್ಯುತ್ ಸಲಕರಣೆಗಳ ವ್ಯಾಪಾರಿ, ಹಿತೇಂದ್ರ ಬಾಲಾರ್ ಅವರನ್ನೀಗ ಪತ್ನಿ- ಪುತ್ರಿಯ ದಾರುಣ ಹತ್ಯೆಯ ಭಯಾನಕ ನೆನಪುಗಳು ಕಿತ್ತು ತಿನ್ನುತ್ತಿವೆ. ಕುಖ್ಯಾತ ದಂಡುಪಾಳ್ಯ ಹಂತಕರ ಮಾದರಿಯಲ್ಲೇ ಈ ಕೊಲೆ ನಡೆದಿದೆ.
ಗುರುವಾರ ಮಧ್ಯಾಹ್ನ 2.15 ರಿಂದ 2.45 ರ ಆಸುಪಾಸಿನಲ್ಲಿ ಕೊಲೆ ಸಂಭವಿಸಿದ್ದು, ಹಂತಕರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ನಗರ ಪೊಲೀಸ್ ಕಮೀಷನರ್ ಎಚ್.ಟಿ.ಸಾಂಗ್ಲಿಯಾನ ಹೇಳಿದ್ದಾರೆ. ಹಿತೇಂದ್ರ ಅವರ ಮನೆಯಿಂದ ಮಧ್ಯಾಹ್ನ ಕೆಲವು ವಸ್ತುಗಳು ಬಿದ್ದ ಸದ್ದು ಕೇಳಿಸಿ, 2 ನೇ ಮಹಡಿಯಲ್ಲಿನ ವ್ಯಾಪಾರಿಯಾಬ್ಬರ ಮಗಳು ಬಂದು ಬಾಗಿಲು ಬಡಿದರೂ ಯಾರೂ ಬಾಗಿಲು ತೆಗೆದಿಲ್ಲ . ಇದರಿಂದ ಗಾಬರಿಗೊಂಡ ಆಕೆ, ತನ್ನ ತಂದೆಯ ಮೂಲಕ ಹಿತೇಂದ್ರ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರು. ಹಿತೇಂದ್ರ ಅವರು ಮನೆಯ ಕೆಳ ಅಂತಸ್ತಿನಲ್ಲಿರುವ ಅಂಗಡಿಯವರಿಗೆ ಮನೆಯಲ್ಲಿ ಏನು ನಡೆಯುತ್ತಿದೆ ನೋಡುವಂತೆ ಫೋನ್ ಮೂಲಕ ತಿಳಿಸಿದರು. ಅಂಗಡಿಯವರು ಬಂದು ನೋಡುವ ಹೊತ್ತಿಗೆ ಬಾಗಿಲು ತೆರೆದಿತ್ತು , ಕೊಲೆಗಾರರು ಪರಾರಿಯಾಗಿದ್ದರು.
ಕೊಲೆಗಾರ ಮನೆಯಲ್ಲಿನ ಚಿನ್ನಾಭರಣಗಳನ್ನು ದೋಚಿದ್ದಾನೆ. ಹಿತೇಂದ್ರ ಅವರಿಗೆ ಪರಿಚಿತನಾದ ವ್ಯಕ್ತಿ ಈ ಕೃತ್ಯ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೂಲತಃ ರಾಜಸ್ತಾನದವರಾದ ಹಿತೇಂದ್ರ ಅವರು 1992 ರಿಂದ ಇದೇ ಮನೆಯಲ್ಲಿ ವಾಸಿಸುತ್ತಿದ್ದರು. ಹತ್ಯೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು, ತನಿಖೆ ಮುಂದುವರಿಯುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ಸಾಂಗ್ಲಿಯಾನಾ ವಾಚ್