ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರುತ್ತಿರುವ ಕನಕಪುರ ಚುನಾವಣೆಯ ವಿದ್ಯಮಾನಗಳ ಸುತ್ತಾ..

By Staff
|
Google Oneindia Kannada News

ಬೆಂಗಳೂರು : ಕನಕಪುರ ಉಪಚುನಾವಣೆಗೆ ಈಹೊತ್ತು ರಂಗೇರುತ್ತಿದೆ. ಎಲ್ಲ ರಾಜಕೀಯ ಪಕ್ಷಗಳೂ ಭರದ ಪ್ರಚಾರದಲ್ಲಿ ತೊಡಗಿವೆ. ಆ ಪಕ್ಷದ ಮೇಲೆ ಈ ಪಕ್ಷ, ಈ ಪಕ್ಷದ ಮೇಲೆ ಆ ಪಕ್ಷ ಆರೋಪ, ಪ್ರತ್ಯಾರೋಪಗಳನ್ನೂ ಮಾಡುತ್ತಿವೆ. ಕಟೌಟ್‌, ಬ್ಯಾನರ್‌ಗಳು ರಾರಾಜಿಸುತ್ತಿವೆ. ಪ್ರಭಾವಿ ರಾಜಕಾರಣಿಗಳನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ ಮೂಲಕ ಗೆಲುವನ್ನು ಕಾಣುವ ಪ್ರಯತ್ನಗಳೂ ಸಾಗಿವೆ.

ಮಾಜಿ ಶಾಸಕ ಜುಲ್ಫಿಕರ್‌ ಹಷ್ಮಿ ಅವರು ಶುಕ್ರವಾರ ಸಂಯುಕ್ತ ಜನತಾದಳವನ್ನು ಸೇರಿದರೆ, ಇತ್ತ ಬೆಂಗಳೂರು ಬಿನ್ನಿಪೇಟೆಯ ಜನಪ್ರಿಯ ಶಾಸಕ ಹಾಗೂ ಮಾಜಿ ಸಚಿವ ಸೋಮಣ್ಣ ಅವರು, ಈ ತಿಂಗಳ 21ರಂದು ನಡೆಯಲಿರುವ ಕನಕಪುರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಬೆಂಬಲಿಸುವುದಾಗಿ ಪ್ರಕಟಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರ ರಾಜಕಾರಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಅನಿವಾರ್ಯತೆ ಇದೆ. ಅವರು ಲೋಕಸಭೆಗೆ ಆಯ್ಕೆಯಾದರೆ, ಕರ್ನಾಟಕದ ಧ್ವನಿಯಾಗುತ್ತಾರೆ. ಹೀಗಾಗಿ ದೇವೇಗೌಡರನ್ನು ಗೆಲ್ಲಿಸುವ ಒಂದಂಶದ ಗುರಿಯಾಂದಿಗೆ ತಾವು ಕಾಯಾ-ವಾಚಾ-ಮನಸಾ ಅವರ ಗೆಲುವಿಗೆ ಶ್ರಮಿಸುವುದಾಗಿ ಘೋಷಿಸಿದರು.

ಹಾಲಿ ಕಾಂಗ್ರೆಸ್‌ನ ಸಹ ಸದಸ್ಯರಾಗಿರುವ ನೀವು ಆ ಪಕ್ಷಕ್ಕೆ ರಾಜೀನಾಮೆ ನೀಡುತ್ತೀರಾ ಎಂದು ಪತ್ರಕರ್ತರು ಕೇಳಿದಾಗ, ನಾನು ಪಕ್ಷೇತರ ಅಭ್ಯರ್ಥಿಯಾಗಿ ಬಸ್‌ ಗುರುತಿನಿಂದ ಭಿನ್ನಿಪೇಟೆ ವಿಧಾನಸಭೆಗೆ ಆಯ್ಕೆಯಾದೆ. ಆನಂತರ ಎಸ್‌.ಎಂ. ಕೃಷ್ಣ ಅವರ ಹೃದಯಶ್ರೀಮಂತಿಕೆಗೆ ಸೋತು ಕಾಂಗ್ರೆಸ್‌ ಸೇರಿದೆ. ಈಗ ನಾನು ದೇವೇಗೌಡರನ್ನು ಬೆಂಬಲಿಸುತ್ತಿದ್ದೇನೆ. ಬೇಕಾದರೆ ಕೃಷ್ಣ ಅವರು ನನ್ನನ್ನು ಪಕ್ಷದಿಂದ ತೆಗೆದುಹಾಕಲಿ ಎಂದ ಅವರು, ಡಿ.ಕೆ. ಶಿವಕುಮಾರ್‌ಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆ ಎಂದರು.

ಸಂಯುಕ್ತ ದಳ ಕಚೇರಿಗೆ ಗೌಡರ ಭೇಟಿ : ಉಭಯ ಜನತಾದಳಗಳ ಸರ್ವಸಮ್ಮತ ಅಭ್ಯರ್ಥಿಯಾಗಿರುವ ದೇವೇಗೌಡರು ಶುಕ್ರವಾರ ರೇಸ್‌ಕೋರ್ಸ್‌ ಬಳಿಯ ಸಂಯುಕ್ತ ಜನತಾದಳ ಕಚೇರಿಗೆ ಭೇಟಿ ನೀಡಿದ್ದರು. ಸಂಯುಕ್ತ ದಳದ ಹಿರಿಯ ನಾಯಕರಾದ ವಿ.ಎಸ್‌. ಕೃಷ್ಣಯ್ಯರ್‌, ಸಿ. ಭೈರೇಗೌಡ, ಲೀಲಾದೇವಿ ಪ್ರಸಾದ್‌ ಮೊದಲಾದವರು ಗೌಡರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಉಭಯ ದಳಗಳ ನೂರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.

ಗೌಡರ ವಿರುದ್ಧ ದೂರು : ಪ್ರತಿಷ್ಠೆಯ ಕಣವಾಗಿರುವ ಕನಕಪುರ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ದೇವೇಗೌಡರು ಅಲ್ಪಸಂಖ್ಯಾಕರ ಮತಗಳಿಗಾಗಿ ಕೋಮು ಭಾವನೆಗಳನ್ನು ಕೆರಳಿಸುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಪಕ್ಷ ಗೌಡರ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಪ್ರಕಟಿಸಿದೆ.

ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ವಿ.ಎಸ್‌. ಉಗ್ರಪ್ಪ ಹಾಗೂ ವಿಧಾನಪರಿಷತ್‌ ಸದಸ್ಯ ಬಿ.ಎ. ಹಸನಬ್ಬ ಅವರು ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕನಕಪುರ ಕ್ಷೇತ್ರದ ಶೇ.70ರಷ್ಟು ಮತದಾರರಿಗೂ ಗುರುತುಚೀಟಿ ನೀಡದಿರುವಾಗ ಗುರುತು ಚೀಟಿ ಕಡ್ಡಾಯ ಮಾಡಿರುವುದು ತಪ್ಪು ಎಂದ ಅವರು, ಚುನಾವಣೆ ಆಯೋಗದ ಈ ಕ್ರಮವನ್ನು ವಿರೋಧಿಸಿದರು.

ಎಚ್ಚರಿಕೆ : ಕನಕಪುರ ಚುನಾವಣೆಯಲ್ಲಿ ಪಕ್ಷಪಾತ ಮಾಡದೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಸಿಬ್ಬಂದಿಗಳಿಗೆ ಕರೆ ನೀಡಿರುವ ದಳ ಮುಖಂಡ ಸಿ. ಭೈರೇಗೌಡರು, ಕಾಂಗ್ರೆಸ್‌ ಪಕ್ಷದ ಏಜೆಂಟರಂತೆ ವರ್ತಿಸುವ ಸರಕಾರಿ ಅಧಿಕಾರಿಗಳ ಪಾಲಿಕೆ ತಾವು ಯಮನಾಗಿ ಕಾಡುವುದಾಗಿ ಎಚ್ಚರಿಕೆಯನ್ನೂ ನೀಡಿದರು.

ಈ ಮಧ್ಯೆ ಬಿ.ಜೆ.ಪಿ. ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ ಅವರ ಪರ ಕೇಂದ್ರ ಸಚಿವರಾದ ಅನಂತಕುಮಾರ್‌, ರಾಜ್ಯ ನಾಯಕರಾದ ಬಸವರಾಜ ಪಾಟೀಲ್‌ ಸೇಡಂ, ಯಡಿಯೂರಪ್ಪ, ಈಶ್ವರಪ್ಪ ಮೊದಲಾದವರು ಚುನಾವಣೆ ಪ್ರಚಾರ ಆರಂಭಿಸಿದ್ದು, ವಾಜಪೇಯಿ ನೇತೃತ್ವದ ಎನ್‌.ಡಿ.ಎ. ಸರಕಾರವನ್ನು ಬೆಂಬಲಿಸುವಂತೆ ಪ್ರಾರ್ಥಿಸಿದರು. ಹಣ ಬಲದಿಂದ ಡಿ.ಕೆ. ಶಿವಕುಮಾರ್‌ ಗೆಲ್ಲುತ್ತಾರೆ ಎಂಬುದು ಸುಳ್ಳು ಎಂದು ಉತ್ತರ ಹಳ್ಳಿ ಶಾಸಕ ಅಶೋಕ್‌ ಈ ಸಂದರ್ಭದಲ್ಲಿ ತಿಳಿಸಿದರು.

(ಇನ್‌ಫೋ ವಾರ್ತೆ)

ಕನಕಪುರ ‘ಕುರುಕ್ಷೇತ್ರ’ದ ಪರ್ವಗಳು..
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X