ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ವೀರಪ್ಪನ್‌ ಶರಣಾಗತಿ ಒಪ್ಪಿಕೊಳ್ಳಲು ತಮಿಳುನಾಡು ಸರಕಾರ ಸಿದ್ಧವಿಲ್ಲ’

By Staff
|
Google Oneindia Kannada News

ಚೆನ್ನೈ : ಕಾಡುಗಳ್ಳ, ನರಹಂತಕ ವೀರಪ್ಪನ್‌ ಶರಣಾಗಲು ಸಿದ್ಧವಿದ್ದರೂ ಕೂಡ ಆತನ ಶರಣಾಗತಿಯನ್ನು ಒಪ್ಪಿಕೊಳ್ಳಲು ತಮಿಳುನಾಡು ಸರಕಾರ ಸಿದ್ಧವಿಲ್ಲ ಎಂದು ಚೆನ್ನೈನ ಉನ್ನತ ಪೊಲೀಸ್‌ ಅಧಿಕಾರಿಗಳು ಗುರುವಾರ ರಾತ್ರಿ ತಿಳಿಸಿದ್ದಾರೆ. ಈ ಹೊತ್ತು ವೀರಪ್ಪನ್‌ ಶರಣಾಗಲು ಒಪ್ಪಿದರೆ, ಆತನಿಗೆ ಯಾವುದೇ ರೀತಿಯ ಭರವಸೆಗಳನ್ನು ನೀಡಲು ಸಾಧ್ಯವಿಲ್ಲ. ಹೀಗಾಗಿ ವೀರಪ್ಪನ್‌ನನ್ನು ಹಿಡಿಯುವಂತೆ ಮಾತ್ರ ಎಸ್‌ಟಿಎಫ್‌ಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ವೀರಪ್ಪನ್‌ ಕರ್ನಾಟಕ -ತಮಿಳುನಾಡು ಗಡಿಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಡಗಿದ್ದಾನೆ. ಆತನ ಅಡಗುತಾಣದ ಬಗ್ಗೆ ಖಚಿತ ಸುಳಿವು ದೊರತಿದೆ. ಕರ್ನಾಟಕದ 300 ವಿಶೇಷ ಪೊಲೀಸರ ನೆರವಿನಿಂದ ನಾಲ್ಕೂ ಕಡೆ ಅಡಗುತಾಣ ಸುತ್ತುವರಿದಿದ್ದು ಆತ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಆತನನ್ನು ಬಂಧಿಸಿಯೇ ತೀರುತ್ತೇವೆ ಎಂದು ತಮ್ಮ ಹೆಸರನ್ನು ಬಹಿರಂಗ ಪಡಿಸಲಿಚ್ಛಿಸದ ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಶರಣಾಗತಿ ಸುಲಭದ ಮಾತಲ್ಲ : ಈ ಮಧ್ಯೆ ವೀರಪ್ಪನ್‌ ಶರಣಾಗುವುದು ಇಲ್ಲ ಆತನ ಅಡಗುತಾಣವನ್ನು ಎಸ್‌.ಟಿ.ಎಫ್‌. ಸುತ್ತುವರಿಯುವುದು ಸುಲಭದ ಮಾತಲ್ಲ ಎಂದು ಸತ್ಯಮಂಗಲ ಅರಣ್ಯಕ್ಕೆ ಹೋಗಿ ಚೆನ್ನೈಗೆ ಮರಳಿ ಬಂದ ಹಾಲಿ ಪೊಲೀಸ್‌ ಆಯುಕ್ತ ಹಾಗೂ ಮಾಜಿ ಎಸ್‌.ಟಿ.ಎಫ್‌. ವರಿಷ್ಠ ಕೆ. ವಿಜಯ್‌ಕುಮಾರ್‌ ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ ಚೆನ್ನೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ವೀರಪ್ಪನ್‌ ಶರಣಾಗುತ್ತಾನೆ, ವೀರಪ್ಪನ್‌ ಅಡಗುತಾಣವನ್ನು ಪೊಲೀಸರು ಸುತ್ತುವರಿದಿದ್ದಾರೆ ಎಂಬ ವದಂತಿಗಳಿಗೆ ತೆರೆ ಎಳೆದರು. ಅದೊಂದು ದಟ್ಟ ಅರಣ್ಯ, ಅಲ್ಲಿ ಹಲವು ವರ್ಷದಿಂದ ವಾಸಿಸುತ್ತಾ, ಕಾಡಿನ ಇಂಚಿಂಚನ್ನೂ ತಿಳಿದಿರುವ ವೀರಪ್ಪನ್‌ ಅಡಗುತಾಣವನ್ನು ಸುತ್ತುವರಿಯುವುದು ಸುಲಭದ ಮಾತಲ್ಲ ಎಂದು ಹೇಳಿದರು.

ಈವರೆಗಿನ ಎಲ್ಲ ವದಂತಿಗಳನ್ನೂ ಸತ್ಯದೂರ ಎಂದು ತಿರಸ್ಕರಿಸಿದರು. ಆದರೆ, ವೀರಪ್ಪನ್‌ ಶಿಕಾರಿಯಲ್ಲಿ ಮಹತ್ವದ ಹಂತ ತಲುಪಿದ್ದೇವೆ. ಕಾರ್ಯಾಚರಣೆ ಸಾಕಷ್ಟು ಪ್ರಗತಿ ಸಾಧಿಸಿದೆ. ಎಸ್‌.ಟಿ.ಎಫ್‌.ಗೆ ವೀರಪ್ಪನ್‌ ಚಲನವಲನಗಳ ಬಗ್ಗೆ ಖಚಿತ ಮಾಹಿತಿ ದೊರೆತಿದೆ ಎಂದು ಹೇಳುವ ಮೂಲಕ ಮತ್ತೆ ಕುತೂಹಲ ಮೂಡಿಸಿದರು.

ಈ ಬಾರಿ ಸತ್ಯಮಂಗಲ ಅರಣ್ಯದ ಬಳಿ ಇರುವ ಗ್ರಾಮಸ್ಥರು ಪೊಲೀಸರೊಂದಿಗೆ ಸಹಕರಿಸುತ್ತಿದ್ದಾರೆ. ಇದು ಕಾರ್ಯಾಚರಣೆಗೆ ನೆರವು ನೀಡುತ್ತದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು. ಸತ್ಯಮಂಗಲ ಹಾಗೂ ಕೊಯಮತ್ತೂರಿಗೆ ಹಠಾತ್‌ ಭೇಟಿ ನೀಡಿದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಇದು ನನ್ನ ಖಾಸಗಿ ಭೇಟಿ, ಈ ಭೇಟಿಯ ಕಾಲದಲ್ಲಿ ನಾನು, ನನ್ನ ಸಹೋದ್ಯೋಗಿಗಳಾದ ಎಸ್‌.ಟಿ.ಎಫ್‌. ಅಧಿಕಾರಿಗಳನ್ನು ಭೇಟಿ ಮಾಡಿದೆ ಅಷ್ಟೆ ಎಂದು ವಿಜಯಕುಮಾರ್‌ ಉತ್ತರಿಸಿದರು.

ವೀರಪ್ಪನ್‌ ಜೊತೆ ಶರಣಾಗತಿ ಬಗ್ಗೆ ಮಾತನಾಡಲು ಯಾವುದೇ ಸಂಧಾನಕಾರರನ್ನು ಕಳುಹಿಸಿಲ್ಲ. ಅಂತಹ ಅಗತ್ಯವೂ ಈಗಿಲ್ಲ ಎಂದು ಅವರು ಪ್ರಶ್ನೆಯಾಂದಕ್ಕೆ ಉತ್ತರವಾಗಿ ತಿಳಿಸಿದರು.

(ಇನ್‌ಫೋ ವಾರ್ತೆ / ಪಿಟಿಐ)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X