ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದ ಓದುಗರ ಮುಂದೆ ಹೊಸ ರೂಪಿನೊಂದಿಗೆ ಪ್ರಜಾಮತ

By Staff
|
Google Oneindia Kannada News

ಬೆಂಗಳೂರು : ಅರುವತ್ತು ವರ್ಷಗಳಷ್ಟು ಇತಿಹಾಸವಿರುವ, 1987ರಿಂದ ಪ್ರಕಟಣೆ ನಿಂತು ಹೋಗಿದ್ದ ಪ್ರಜಾಮತ ನಿಯತಕಾಲಿಕ ಹೊಸ ರೂಪಿನೊಂದಿಗೆ ಮತ್ತೆ ಬಿಡುಗಡೆಯಾಗಿದೆ. ಆದರೀಗ ಇದು ಪಾಕ್ಷಿಕ. ಅದರ ಜೊತೆಗೇ ಬರೇ ಪದಬಂಧಗಳಿರುವ ಶೃತಿ ಎಂಬ ಮಾಸಿಕ ಕೂಡ ಓದುಗರ ಪಾಲಿಗೆ.

ಬುಧವಾರ ರಾತ್ರಿ ನಗರದ ಗುರುನಾನಕ್‌ ಭವನದಲ್ಲಿ ಒಂದೂವರೆ ತಾಸು ತಡವಾಗಿ ಶುರುವಾದ ನಿಯತಕಾಲಿಕಗಳ ಬಿಡುಗಡೆಯ ಸಮಾರಂಭದ ತುಂಬ ಪತ್ರಿಕೆಗಳ ದರ ಸಮರದ್ದೇ ಮಾತು.

ರವಿ ಬೆಳಗೆರೆ ಉವಾಚ : ಈಗ ಎಲ್ಲಾ ಪತ್ರಿಕೆಗಳೂ ಅಗ್ಗದ ಬೆಲೆಯಲ್ಲಿ ಓದುಗನ ಮುಂದಿವೆ. ತನಗೆ ಬೇಕಾದ ಸರಕನ್ನು ಕೊಡುವ, ಜನ ಜೀವನಕ್ಕೆ ಸ್ಪಂದಿಸುವ ಪತ್ರಿಕೆಯನ್ನು ಮಾತ್ರ ಓದುಗ ಬೆಳೆಸುತ್ತಾ ಹೋಗುತ್ತಾನೆ. ಇತ್ತೀಚೆಗೆ ವಿಜಯ ಕರ್ನಾಟಕ ಪತ್ರಿಕೆಯ ಮಾಲೀಕ ವಿಜಯ ಸಂಕೇಶ್ವರರು ತಮ್ಮ ಪತ್ರಿಕೆಯ ಬೆಲೆಯನ್ನು 1 ರುಪಾಯಿಗೆ ಇಳಿಸಬೇಕೆಂದಿದ್ದೇನೆ ಅಂದಾಗ ನನಗೇ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿತು. ಇನ್ನು ಸಂಯುಕ್ತ ಕರ್ನಾಟಕದವರು ಇದನ್ನು ಕೇಳಿದರೆ ಗತಿಯೇನು ಎಂದು ಪ್ರಜಾಮತ ಕುರಿತು ಮಾತಾಡಿದ ಪತ್ರಕರ್ತ ರವಿ ಬೆಳೆಗೆರೆ ಹೇಳಿದರು.

ಗುಪ್ತ ಸಮಾಲೋಚನೆ ಬೇಕು : ಹಿಂದೆ ಪ್ರಜಾಮತ ಗುಪ್ತ ಸಮಾಲೋಚನೆ ಅಂಕಣದಿಂದ ಹದಿ ಹರೆಯದರ ಮನ ಗೆದ್ದಿತ್ತು. ಹೊಸ ಪ್ರಜಾಮತದಲ್ಲಿ ಅದು ಕಾಣುತ್ತಿಲ್ಲ. ಮುಂದಿನ ಸಂಚಿಕೆಯಿಂದಲಾದರೂ ಅದನ್ನು ಪ್ರಕಟಿಸಿ ಎಂದು ರವಿ ಬೆಳಗೆರೆ ಪ್ರಜಾಮತದ ಪ್ರಧಾನ ಸಂಪಾದಕ ಅಶೋಕ್‌ ಬಾಬು ಅವರನ್ನು ಕೇಳಿಕೊಂಡರು. ಯಾವುದೇ ಪತ್ರಿಕೆಯ ಮೊದಲ ಸಂಚಿಕೆ ಬಗೆಗೆ ಮಾತಾಡಬಾರದು. ಇದೇ ಪತ್ರಿಕೆಯ 100ನೇ ಸಂಚಿಕೆ ಬಂದ ನಂತರ ಒಂದು ಸಮಾರಂಭ ನಡೆಯಲಿ. ಆಗ ಸಾಧಕ- ಬಾಧಕಗಳ ಬಗೆಗೆ ಮಾತಾಡಬಹುದು ಎಂದರು.

ಇದಕ್ಕೂ ಮುನ್ನ ಪ್ರಜಾಮತ ಹಾಗೂ ಶೃತಿ ನಿಯತಕಾಲಿಕಗಳನ್ನು ಬಿಡುಗಡೆ ಮಾಡಿದ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ವಿ.ಶ್ರೀನಿವಾಸ ಪ್ರಸಾದ್‌, ಪತ್ರಿಕೆಗಳ ದರ ಸಮರ ಆರೋಗ್ಯಕರ ಬೆಳವಣಿಗೆ ಅಲ್ಲ ಎಂದರು. ಕರ್ನಾಟಕ ಪತ್ರಿಕಾ ಅಕಾಡೆಮಿ ಅಧ್ಯಕ್ಷ ಎನ್‌.ಅರ್ಜುನ ದೇವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಹಾಗೂ ವಿಧಾನ ಪರಿಷತ್‌ ಸದಸ್ಯ ಪಿ.ರಾಮಯ್ಯ, ಸಾಹಿತ ಹಾಗೂ ವಿಧಾನ ಪರಿಷತ್‌ ಸದಸ್ಯ ಎಲ್‌.ಹನುಮಂತಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ಪ್ರಾಧಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಚ್‌.ವಿಶ್ವನಾಥ್‌ ಹಾಗೂ ಪ್ರಜಾಮತದ ಪ್ರಧಾನ ಸಂಪಾದಕ ಅಶೋಕ್‌ ಬಾಬು ಸಮಾರಂಭದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X