ಮಂಗಳಗಂಗೋತ್ರಿ: ಉತ್ಸಾಹಿಗಳಿಗೆ ಬರ, ಕ್ಯಾಂಪಸ್ಸಿನಲ್ಲಿ ಬರಿ ಬೇಜಾರು
*ಕೆ. ರಾಘವೇಂದ್ರ ಕಾಮತ್, ಮಂಗಳೂರು ವಿಶ್ವವಿದ್ಯಾಲಯ
ಕೋಣಾಜೆ : ಪ್ರತಿ ವರ್ಷವೂ ಜನವರಿ ಉರುಳುತ್ತಿರುವಂತೆಯೇ ವಿಶ್ವವಿದ್ಯಾಲಯಗಳಲ್ಲಿ ಉತ್ಸವಗಳ ಸುಗ್ಗಿ. ಕಾಲೇಜು ಡೇ, ವ್ಯಾಲೆಂಟೈನ್ಸ್ ಡೇ, ಸಾರಿ ಡೇ, ಎಥ್ನಿಕ್ ಡೇ.... ಹೀಗೆ ಪ್ರತಿ ಡೇಗಳಲ್ಲಿಯೂ ಮಿಂಚುವ, ಲಕಲಕಿಸುವ ವಿದ್ಯಾರ್ಥಿಗಳು. ಪುಟಿಯುವ ಉತ್ಸಾಹಕ್ಕೆ ಸಂಭ್ರಮದ ಚಿನ್ನ ಲೇಪಿಸುವ ‘ಡೇ’ಗಳು. ಆದರೆ ಮಂಗಳೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಮುಖದಲ್ಲಿ ಈ ಸಂಭ್ರಮದ ಗೆರೆಗಳಿಲ್ಲ. ಈ ಬಾರಿ ಕ್ಯಾಂಪಸ್ ಡೇ ಕ್ಯಾನ್ಸಲ್.
ಕ್ಯಾಂಪಸ್ ಡೇಯನ್ನು ರದ್ದು ಪಡಿಸಿರುವ ಹಿನ್ನೆಲೆಯಲ್ಲಿ ಬರದ ಬರೆಯಾಗಲಿ, ಅಧ್ಯಯನದ ಕಾತರವಾಗಲೀ ಇಲ್ಲ. ಬದಲಾಗಿ ಯಾವುದೇ ವಿದ್ಯಾರ್ಥಿ ಸಂಘಟನೆ ಅಥವಾ ವಿದ್ಯಾರ್ಥಿ ನಾಯಕ ಮುಂದೆ ಬಂದಿಲ್ಲ. ಕ್ಯಾಂಪಸ್ ಡೇಯನ್ನು ನಿರ್ವಹಿಸುತ್ತೇನೆ ಎಂದು ಜವಾಬ್ದಾರಿ ಹೊರುವ ಹೆಗಲಿಲ್ಲ.
ಈ ಬಾರಿ ಕ್ಯಾಂಪಸ್ ಡೇ ಇಲ್ಲ ಅಂತ ವಿದ್ಯಾರ್ಥಿ ಸಮೂಹದ ಜೊತೆಗೆ ಅಧ್ಯಾಪಕರೂ ಬೇಜಾರು ಮಾಡಿಕೊಂಡಿದ್ದಾರೆ. ಹಾಜರಾತಿ ಪುಸ್ತಕ, ಡಸ್ಟರು, ಪಾಠ, ಅಸೈನ್ಮೆಂಟು ಮತ್ತೆ ಇನ್ಯಾವುದೋ ಸೆಮಿನಾರು... ಬೋರು. ಉತ್ಸವದ ಕಳೆಯಿಲ್ಲ.
ಕ್ಯಾಂಪಸ್ ಡೇ ಎಂದರೆ ಸುಮ್ಮನೆಯೇ ? ಆ ದಿನವನ್ನು ಘೋಷಿಸಿದಂದಿನಿಂದ ಶುರುವಾಗುತ್ತದೆ ನಿರೀಕ್ಷೆ, ಕಾತರ. ಹೇಗೆ ಆಚರಿಸಬೇಕು ಎಂಬ ಬಗ್ಗೆ ಲೆಕ್ಕಾಚಾರ. ಹೇಗೆ ಡ್ರೆಸ್ ಮಾಡಿಕೋಬೇಕು.. ಯಾರಿಗೆ ಸರ್ಪ್ರೆೃಸ್ ಕೊಡಬೇಕು, ಯಾರನ್ನೋ ಅವಾಕ್ಕಾಗಿಸಬೇಕು ಎಂಬ ಆಸೆ, ಖುಷಿ.
ಈ ಬಾರಿ ಕ್ಯಾಂಪಸ್ ಡೇ ಇಲ್ಲದಿದ್ದರೆ , ಹೋಗಲಿ ಬಿಡಿ ಅಂತ ಬಿಡುವ ಹಾಗೂ ಇಲ್ಲ. ಮುಂದಿನ ವರ್ಷವೂ ಇದೇ ಗತಿ ಮುಂದುವರೆದರೆ ? ಜವಾಬ್ದಾರಿಗೊಂದು ಹೆಗಲು ಇಲ್ಲದೆ ವಿಶ್ವವಿದ್ಯಾಲಯದ ಆವರಣದಲ್ಲಿ ಖುಷಿ ಇಲ್ಲ. ಅಂತಿಮ ವರ್ಷದ ವಿದ್ಯಾರ್ಥಿಗಳು ಕಳೆದ ಬಾರಿಯ ಕ್ಯಾಂಪಸ್ ಡೇಯನ್ನು ನೆನಪುಗಳ ಜಗಿಯುತ್ತಾ, ಈ ಬಾರಿ ಬಾರದ ಕ್ಯಾಂಪಸ್ಡೇಗೆ ಶಪಿಸುತ್ತಾ ಬೇಜಾರಾಗಿದ್ದಾರೆ. ವಿವಿ ಎಂಬ ಮಹಾ ಕ್ಯಾಂಪಸ್ಸಿನ ಚಿತ್ರ ವಿಚಿತ್ರಗಳನ್ನು ತುಂಬಿಕೊಳ್ಳಲು ರೆಡಿಯಾಗಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳು ನಿರಾಶರಾಗಿದ್ದಾರೆ.
ಡ್ಯಾನ್ಸ್ ಪಟುಗಳು, ಕಲಾವಿದರು, ಹಾಡುಗಾರರು... ಹೀಗೆ ಪ್ರತಿಭಾವಂತರಿಗೆ ಕಾಲೇಜಿನಲ್ಲಿ ಮಿಂಚುವ ಕೊನೆಯ ಅವಕಾಶ ಕ್ಯಾಂಪಸ್ ಡೇ. ಸ್ನಾತಕೋತ್ತರ ಪದವಿ ಮುಗಿಯಿತೆಂದರೆ ವಿದ್ಯಾರ್ಥಿಗಳು ದೊಡ್ಡವರಾಗಿ ಬಿಡುತ್ತಾರೆ. ಅಧ್ಯಯನ, ರಿಸರ್ಚ್, ಉಪನ್ಯಾಸ, ಉದ್ಯೋಗ ಎಂದು ವ್ಯಸ್ತರಾಗಿಬಿಡುತ್ತಾರೆ. ಅಧ್ಯಾಪಕರೊಂದಿಗೆ, ಸ್ನೇಹಿತರೊಂದಿಗೆ ಕಾಲೇಜು ಎಂಬ ವಿಸ್ಮಯವನ್ನು ಮೊಗೆದುಕೊಳ್ಳಲು ಇರುವ ಇಂತಹ ಅವಕಾಶಗಳನ್ನು ಮಿಸ್ ಆದರೆ ಕ್ಯಾಂಪಸ್ ಖಿನ್ನವಾಗುವುದಿಲ್ಲವೇ?
ಮುಖಪುಟ / ಇವತ್ತು... ಈ ಹೊತ್ತು...