ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಕಪುರ ಲೋಕಸಭೆ ಕ್ಷೇತ್ರದ 25 ಲಕ್ಷ ಮತದಾರರಿಗೆ 3000 ಮತಕೇಂದ್ರ

By Staff
|
Google Oneindia Kannada News

ಬೆಂಗಳೂರು :ಕನಕಪುರ ಲೋಕಸಭೆ ಕ್ಷೇತ್ರಕ್ಕೆ ಫೆ.21ರಂದು ನಡೆಯಲಿರುವ ಉಪಚುನಾವಣೆಗೆ 3008 ಮತಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಚುನಾವಣೆ ಇಲಾಖೆ ನಿರ್ಧರಿಸಿದೆ. ಈ ಪೈಕಿ 910 ಮತಗಟ್ಟೆಗಳನ್ನು ಅತಿಸೂಕ್ಷ್ಮ ಹಾಗೂ 922 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆದು ಗುರುತಿಸಿದೆ.

ಪ್ರತಿಷ್ಠೆಯ ಕಣವಾಗಿ ಪರಿವರ್ತನೆಯಾಗಿರುವ ಕನಕಪುರ ಲೋಕಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ ಯಾವುದೇ ಆಹಿತಕರ ಘಟನೆಗಳು ನಡೆಯದಂತೆ ಹಾಗೂ ಶಾಂತಿಯುತವಾಗಿ ಮತದಾನ ನಡೆಯುವಂತೆ ನೋಡಿಕೊಳ್ಳಲು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿದೆ.

ಗುರುತುಚೀಟಿ ಕಡ್ಡಾಯ: ನಕಲಿ ಮತದಾನವನ್ನು ತಡೆಯಲು ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಲಾಗಿದೆ. ಮತದಾನದ ವೇಳೆಯಲ್ಲಿ ಮತದಾರರು ಚುನಾವಣೆ ಆಯೋಗ ನೀಡಿರುವ ಗುರುತಿನ ಚೀಟಿ ತೋರಿಸಿ ಮತ ಚಲಾಯಿಸಬಹುದಾಗಿದೆ. ಗುರುತುಚೀಟಿ ಇಲ್ಲದ ಅಥವಾ ಪಡೆಯದ ಮತದಾರರು ತಾವೇ ಅಸಲಿ ಮತದಾರ ಎಂದು ಸಾಬೀತು ಪಡಿಸಲು ಭಾವಚಿತ್ರ ಇರುವ ಪಾಸ್‌ಪೋರ್ಟ್‌, ಪಡಿತರ ಚೀಟಿ, ಬ್ಯಾಂಕ್‌ ಪಾಸ್‌ಬುಕ್‌, ಮಾನ್ಯತೆ ಪಡೆದ ಕಾಲೇಜು ನೀಡಿರುವ ಗುರುತುಚೀಟಿ, ಶಸ್ತ್ರಾಸ್ತ್ರ ಪರವಾನಗಿ, ರೈಲ್ವೆ ಅಥವಾ ಬಸ್‌ ಪಾಸ್‌, ಅಸ್ತಿ ದಾಖಲೆ, ಪಿಂಚಣಿ ದಾಖಲೆ, ಸರಕಾರಿ ಇಲಾಖೆ ನೀಡಿರುವ ಅಧಿಕೃತ ಗುರುತು ಪತ್ರ, ಅಂಗವಿಕಲ ಕಲ್ಯಾಣ ಇಲಾಖೆ ಮತ್ತಿತರ ಸಂಸ್ಥೆಗಳಿಂದ ಪಡೆಯಲಾದ ಗುರುತು ಪತ್ರ ಹಾಜರುಪಡಿಸಿ ಮತಚಲಾಯಿಸಬಹುದು.

ಎಲೆಕ್ಟ್ರಾನಿಕ್‌ ಮತಯಂತ್ರ : ಈ ವಿಷಯವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಾರಾಯಣಸ್ವಾಮಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಕೇಂದ್ರ ಚುನಾವಣೆ ಆಯೋಗದ ಆದೇಶದ ರೀತ್ಯ ಈ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್‌ ಮತಯಂತ್ರಗಳನ್ನು ಬಳಸಲು ನಿರ್ಧರಿಸಲಾಗಿದೆ.

ವಿದ್ಯುನ್ಮಾನ ಮತಯಂತ್ರಗಳ ಬಳಕೆ ಬಗ್ಗೆ ಮತದಾರರಿಗೆ ಅರಿವು ಮೂಡಿಸಲು ವಿಶೇಷ ತಂಡ ರಚಿಸಲಾಗಿದೆ. ದೂರದರ್ಶನ, ವಿಡಿಯೋಕೇಂದ್ರಗಳಲ್ಲಿ ವಿದ್ಯುನ್ಮಾನ ಮತಯಂತ್ರ ಬಳಕೆಯ ಸಾಕ್ಷ್ಯಚಿತ್ರಪ್ರದರ್ಶನ ಮಾಡುವುದರ ಜೊತೆಗೆ ಕರಪತ್ರಗಳ ಮೂಲಕ ಮಾಹಿತಿ ನೀಡಲಾಗುವುದು ಎಂದು ಅವರು ಹೇಳಿದರು.

ಮತಗಟ್ಟೆಗಳಿಗೆ ಸಿಬ್ಬಂದಿ ಹಾಗೂ ಸಲಕರಣೆ ಸಾಗಿಸಲು ಹಾಗೂ ಚುನಾವಣೆ ಉಸ್ತುವಾಗಿ ಗಮನಿಸಲು 470 ಬಸ್‌ ಹಾಗೂ 256 ಜೀಪುಗಳನ್ನು ನಿಯೋಜಿಸಲಾಗುತ್ತಿದೆ. ಮತದಾನದ ಬಳಿಕ ಬಿಗಿಬಂದೋಬಸ್ತ್‌ನಲ್ಲಿ ಮತಯಂತ್ರಗಳನ್ನು ಬೆಂಗಳೂರಿಗೆ ತರಲಾಗುವುದು. ಫೆ.24ರಂದು ಮಹಾರಾಣಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.

ಮತದಾರರ ಸಂಖ್ಯೆ : ಕನಕಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಉತ್ತರಹಳ್ಳಿ, ಕನಕಪುರ, ಸಾತನೂರು, ಚನ್ನಪಟ್ಟಣ, ರಾಮನಗರ, ಮಾಗಡಿ, ಆನೇಕಲ್‌, ಮಳವಳ್ಳಿ ವಿಧಾನಸಭಾ ಕ್ಷೇತ್ರಗಳು ಇದ್ದು. ಒಟ್ಟು ಮತದಾರರ ಸಂಖ್ಯೆ 24,98,548. ಈ ಪೈಕಿ 13,14,223 ಪುರುಷರು ಹಾಗೂ 11,84,325 ಮಹಿಳಾ ಮತದಾರರಿದ್ದಾರೆ. 1999ರಲ್ಲಿ ನಡೆದ ಚುನಾವಣೆಯಲ್ಲಿ ಮತದಾರರ ಸಂಖ್ಯೆ 21,07,890 ಆಗಿತ್ತು.

ಉಭಯ ದಳ ಬಣಗಳ ಸರ್ವ ಸಮ್ಮತಿ ಅಭ್ಯರ್ಥಿಯಾದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಕಾಂಗ್ರೆಸ್‌ ಪಕ್ಷದಿಂದ ರಾಜ್ಯ ಸಹಕಾರ ಸಚಿವ ಡಿ.ಕೆ. ಶಿವಕುಮಾರ್‌, ಭಾರತೀಯ ಜನತಾಪಕ್ಷದಿಂದ ಕೇಂದ್ರ ರೇಷ್ಮೇ ಮಂಡಳಿ ಅಧ್ಯಕ್ಷರಾಗಿದ್ದ ಈಶ್ವರಪ್ಪ ಸೇರಿದಂತೆ ಒಟ್ಟು 14 ಮಂದಿ ಚುನಾವಣೆ ಕಣದಲ್ಲಿದ್ದಾರೆ.

(ಇನ್‌ಫೋ ವಾರ್ತೆ)

ಕನಕಪುರ ‘ಕುರುಕ್ಷೇತ್ರ’ದ ಪರ್ವಗಳು..
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X