ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರ ಶ್ರೀಮಂತಿಕೆ ಅನುಸರಿಸಿ ಪೂಜಾರಿಗೆ ಸಂಬಳ ನೀಡುವ ಸರ್ಕಾರ

By Staff
|
Google Oneindia Kannada News

ಬೆಂಗಳೂರು : ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ದೇಗುಲಗಳ ಪೂಜಾರಿಗಳಿಗೆ ನಿರ್ದಿಷ್ಟ ಮಾಸಿಕ ಧನ ನೀಡುವ ಪ್ರಸ್ತಾಪವನ್ನು ತಳ್ಳಿಹಾಕಿರುವ ಮುಜರಾಯಿ ಖಾತೆ ರಾಜ್ಯ ಸಚಿವೆ ಸುಮಾ ವಸಂತ್‌ ಅವರು, ದೇವಾಲಯದ ಆದಾಯವನ್ನು ಆಧರಿಸಿ ಪೂಜಾರಿಗಳಿಗೆ ಸಂಭಾವನೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ದೇಗುಲಗಳ ನಿರ್ವಹಣೆಗೆ ಹಣ ಬಿಡುಗಡೆ ಮಾಡಬೇಕು ಮತ್ತು ಪೂಜಾರಿಗಳಿಗೆ ಮಾಸಿಕ ಧನ ನೀಡುವ ಬಗ್ಗೆ ಸರ್ಕಾರ ಪರಿಶೀಲಿಸಬೇಕು ಎಂದು ಸೋಮವಾರ ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆದ ಚಿಕ್ಕಪೇಟೆ ಶಾಸಕ ಪಿ.ಸಿ.ಮೋಹನ್‌ ಅವರ ಪ್ರಶ್ನೆಗೆ ಸಚಿವೆ ಸುಮಾ ವಸಂತ್‌ ಪ್ರತಿಕ್ರಿಯಿಸುತ್ತಿದ್ದರು.

ಮುಜರಾಯಿ ಇಲಾಖೆಗೆ ಹೆಚ್ಚಿನ ಅನುದಾನ ಕೋರಿ ಪ್ರಸ್ತಾಪ ಸಲ್ಲಿಸಿದ್ದು , ಅನುದಾನದ ಲಭ್ಯತೆ ಆಧರಿಸಿ ದೇಗುಲಗಳ ನಿರ್ವಹಣೆಗೆ ಆರಾಧನಾ ಯೋಜನೆಯಲ್ಲಿ ಹೆಚ್ಚಿನ ಹಣವನ್ನು ಒದಗಿಸಲಾಗುವುದು. ದೇವಸ್ಥಾನಗಳು ಸಲ್ಲಿಸುವ ಪ್ರಸ್ತಾವನೆಯನ್ನು ಅನುಸರಿಸಿ ಜಿಲ್ಲಾಧಿಕಾರಿಗಳ ಮೂಲಕ ಹಣ ಬಿಡುಗಡೆ ಮಾಡಲಾಗುವುದು ಎಂದು ಸಚಿವೆ ಸದನದ ಗಮನಕ್ಕೆ ತಂದರು.

ರಾಜ್ಯದಲ್ಲಿ 43 ಸಾವಿರದ 217 ಮುಜರಾಯಿ ದೇವಸ್ಥಾನಗಳಿವೆ. ಇವುಗಳ ದುರಸ್ಥಿಗಾಗಿ 2001-02 ನೇ ಇಸವಿಯಲ್ಲಿ 1.23 ಕೋಟಿ ರು ಮತ್ತು ಆರಾಧನಾ ಯೋಜನೆಗಾಗಿ 4.90 ಕೋಟಿ ರುಪಾಯಿ ಹಾಗೂ ನಿರ್ಮಾಣಕ್ಕಾಗಿ 1.02 ಕೋಟಿ ರುಪಾಯಿಗಳನ್ನು ಮೀಸಲಿಡಲಾಗುವುದು ಎಂದು ಸುಮಾ ವಸಂತ್‌ ಹೇಳಿದರು.

ಕೊನೆಮಾತು : ದೇವಸ್ಥಾನಗಳ ಕುರಿತು ಸಭಾಧ್ಯಕ್ಷ ಎಂ.ವಿ.ವೆಂಕಟಪ್ಪನವರು ಹೇಳಿದ ಮಾತು ಮಾರ್ಮಿಕವಾಗಿತ್ತು . ಅವರು ಹೇಳಿದ್ದು - ‘ಒಂದು ಗ್ರಾಮದಲ್ಲಿ ನಾಲ್ಕೈದು ದೇವಸ್ಥಾನಗಳಿರುತ್ತವೆ. ಗ್ರಾಮಕ್ಕೆ ಹೋದರೆ ದೇಗುಲಗಳ ನಿರ್ವಹಣೆಗೆ ಹಣ ನೀಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಾರೆ. ರಸ್ತೆ ಬೇಡ, ದೇಗುಲಗಳ ನಿರ್ವಹಣೆಗೆ ಹಣ ಬೇಕು ಅನ್ನುತ್ತಾರೆ’.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X