ರಚನಾತ್ಮಕ ಕಾರ್ಯಕ್ರಮಗಳಿಗೆ ವಾಣಿಜ್ಯೋದ್ಯಮಿಗಳ ನೆರವಿಗೆ ಆರೆಸ್ಸೆಸ್ ಮನವಿ
ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಮ್ಮಿಕೊಳ್ಳುವ ರಚನಾತ್ಮಕ ಕಾರ್ಯಕ್ರಮಗಳಿಗೆ ವಾಣಿಜ್ಯೋದ್ಯಮಿಗಳು ನೆರವು ನೀಡುವಂತೆ ಸಂಘದ ಮುಖಂಡರು ಮನವಿ ಮಾಡಿದ್ದಾರೆ.
ಸಮರಸತಾ ಸಂಗಮದ ಅಂತಿಮ ದಿನವಾದ ಭಾನುವಾರ ಏರ್ಪಾಡಿಸಿದ್ದ ವಾಣಿಜ್ಯೋದ್ಯಮಿಗಳ ಸಮ್ಮಿಲನದಲ್ಲಿ ಮಾತನಾಡಿದ ಸಂಘದ ಮುಖಂಡ ಹೊ.ವೆ.ಶೇಷಾದ್ರಿ ಈ ಮನವಿ ಮಾಡಿದರು.
ಅನೇಕ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಆರೆಸ್ಸೆಸ್ ಹಮ್ಮಿಕೊಂಡಿದ್ದು , ಈ ಕಾರ್ಯಕ್ರಮಗಳಿಗೆ ಹಣಕಾಸಿನ ಅಗತ್ಯವಿದೆ. ದೇಶದಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸಿದಾಗಲೆಲ್ಲ ಅಲ್ಲಿ ಆರೆಸ್ಸೆಸ್ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಂಥ ಚಟುವಟಿಕೆಗಳಿಗೆ ಉದ್ದಿಮೆದಾರರು ಆರ್ಥಿಕ ನೆರವು ನೀಡಬೇಕು ಎಂದು ಶೇಷಾದ್ರಿ ಹೇಳಿದರು.
ಸ್ವದೇಶಿ ಉದ್ಯಮಕ್ಕೆ ಹೋರಾಡಿ..
ಬಹುರಾಷ್ಟ್ರೀಯ ಕಂಪನಿಗಳ ಅಬ್ಬರದ ನಡುವೆ ಸ್ವದೇಶಿ ಉದ್ಯಮಗಳನ್ನು ಉಳಿಸಿಕೊಳ್ಳಲು ಆರೆಸ್ಸೆಸ್ ಹೋರಾಡಬೇಕು ಹಾಗೂ ದೇಶದಲ್ಲಿ ಗೋಹತ್ಯೆಯನ್ನು ತಡೆಗಟ್ಟಬೇಕು ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಕೆಲವು ವಾಣಿಜ್ಯೋದ್ಯಮಿಗಳು ಸಂಘಕ್ಕೆ ಮನವಿ ಮಾಡಿಕೊಂಡರು.
ಉದ್ಯಮಿಗಳ ಮನವಿಗೆ ಪ್ರತಿಕ್ರಿಯಿಸಿದ ಶೇಷಾದ್ರಿ, ಎಲ್ಲವನ್ನೂ ಮಾಡಲು ಆರೆಸ್ಸೆಸ್ ಒಂದರಿಂದಲೇ ಸಾಧ್ಯವಿಲ್ಲ . ಸಂಘಟಿತರಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗಷ್ಟೇ ಮುನ್ನಡೆಯಲು ಸಾಧ್ಯ ಎಂದರು. ಅಶ್ಲೀಲ ಸಿನಿಮಾ ಹಾಗೂ ಜಾಹಿರಾತುಗಳ ವಿರುದ್ಧ ಸಂಘಟಿತರಾಗಿ ಹೋರಾಟ ಕೈಗೊಳ್ಳಬೇಕು ಎಂದೂ ಅವರು ಅಭಿಪ್ರಾಯ ಪಟ್ಟರು. ಇದೇ ಸಂದಭದಲ್ಲಿ ಎನಿಮಲ್ ಸೇಫ್ಟಿ ಲಾ ಗೈಡ್ ಆಫ್ ಕರ್ನಾಟಕ ಎನ್ನುವ ಕರ್ನಾಟಕ ಗೋರಕ್ಷಾ ಸಂಘದ ಪುಸ್ತಕವನ್ನು ಕೃಷ್ಣ ಮಿತ್ತಲ್ ಬಿಡುಗಡೆ ಮಾಡಿದರು.
(ಇನ್ಫೋ ವಾರ್ತೆ)
ಸಮರಸತಾ ಸಂಗಮ...
ಮುಖಪುಟ / ಇವತ್ತು... ಈ ಹೊತ್ತು...