ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂರೆ ಹೋಗುತ್ತಿರುವ ದ್ರೌಪದಿ ಮಾನ, ತಾಯ ಗರ್ಭದಲ್ಲೂ ಅಸುರಕ್ಷಿತ ಸ್ತ್ರೀ

By Staff
|
Google Oneindia Kannada News

ನವದೆಹಲಿ: ದುರ್ಬಲ ಹಾಗೂ ಹಿಂದುಳಿದ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸಿಕೊಳ್ಳಲು ಅನುವಾಗುವಂತೆ ಸಾಮಾಜಿಕ ನೀತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾಷ್ಟ್ರಪತಿ ಕೆ.ಆರ್‌.ನಾರಾಯಣನ್‌ ಖಾಸಗಿ ವಲಯಗಳನ್ನು ಒತ್ತಾಯಿಸಿದ್ದಾರೆ.

ಖಾಸಗಿ ಉದ್ದಿಮೆದಾರರು ಸೋಷಿಯಲಿಸಂ ಒಪ್ಪಿಕೊಳ್ಳಬೇಕೆಂದು ಇದರರ್ಥವಲ್ಲ . ಆದರೆ, ಅಮೆರಿಕಾ ದೇಶದಂತೆ ವಿಭಿನ್ನ ಹಾಗೂ ಧನಾತ್ಮಕ ಸಾಮಾಜಿಕ ನೀತಿಗಳನ್ನು ನಮ್ಮ ಖಾಸಗಿ ಉದ್ದಿಮೆದಾರರು ರೂಢಿಸಿಕೊಳ್ಳಬೇಕು ಎಂದು ಗಣರಾಜ್ಯೋತ್ಸವ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ರಾಷ್ಟ್ರಪತಿಗಳು ತಿಳಿಸಿದ್ದಾರೆ.

ಶಾಂತಿ ಹಾಗೂ ಸಹಕಾರ ನೀತಿಯನ್ನು ಅನುಸರಿಸುವ ಮೂಲಕ ಶಕ್ತ ರಾಷ್ಟ್ರವಾಗಿ ಹೊರಹೊಮ್ಮಿರುವ ಭಾರತ, ದೇಶದೊಳಗೆ ಹಾಗೂ ಜಾಗತಿಕ ಮಟ್ಟದಲ್ಲಿ ಕ್ಷೋಭೆ ಉಂಟು ಮಾಡಲು ಪ್ರಯತ್ನಿಸುತ್ತಿರುವ ಪೈಶಾಚಿಕ ಶಕ್ತಿಗಳಿಗೆ ಪ್ರಜಾಸತ್ತಾತ್ಮಕ ದಿಟ್ಟ ಉತ್ತರ ನೀಡಿದೆ. ಇದೆಲ್ಲವನ್ನೂ ಹೊರತುಪಡಿಸಿ ನಾವು ಆರ್ಥಿಕ ಬಲಾಢ್ಯ ಭಾರತವನ್ನು ಕಟ್ಟಲು ದುಡಿಯಬೇಕಾಗಿದೆ ಎಂದು ಗಣರಾಜ್ಯೋತ್ಸವ ಸಂದರ್ಭದಲ್ಲಿ ತಮ್ಮ 5 ಪುಟಗಳ ಭಾಷಣದಲ್ಲಿ ನಾರಾಯಣನ್‌ ಕರೆ ನೀಡಿದ್ದಾರೆ.

ಭಾರತ-ಪಾಕ್‌ ನಡುವಣ ಸಂಘರ್ಷದ ಕುರಿತು ಮೌನ

ಮಕ್ಕಳ ಕಲ್ಯಾಣ, ಪಂಚಾಯತ್‌ ರಾಜ್‌ ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆ ಮುಂತಾದ ವಿಷಯಗಳಿಗೆ ತಮ್ಮ ಭಾಷಣದಲ್ಲಿ ಒತ್ತು ನೀಡಿರುವ ರಾಷ್ಟ್ರಪತಿಗಳು, ಭಾರತ ಹಾಗೂ ಪಾಕ್‌ ನಡುವೆ ತಲೆದೋರಿರುವ ಸಂಘರ್ಷ ಸಂಬಂಧ ವಿಚಾರಗಳು ಹಾಗೂ ರಕ್ಷಣೆ ಕುರಿತು ಮೌನ ವಹಿಸಿದ್ದಾರೆ.

ಭಾರತದಲ್ಲಿನ ಮಹಿಳೆಯರ ಸಮಸ್ಯೆಗಳು ಸಾಮಾಜಿಕ ಅಸಮಾನತೆ ಹಾಗೂ ಅನ್ಯಾಯದ ಸಂಕೇತವಾಗಿದೆ ಎಂದಿರುವ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದೂ , ಇಂದಿಗೂ ದೇಶದಲ್ಲಿ ದಲಿತರ ಹಾಗೂ ಮಹಿಳೆಯರ ಆಕ್ರಂದನದ ದನಿ ಕೇಳುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ದಲಿತ ಹಾಗೂ ಗುಡ್ಡಗಾಡು ಬುದ್ಧಿಜೀವಿಗಳು ಹೊರಡಿಸಿದ ಭೋಪಾಲ್‌ ಘೋಷಣೆಯಲ್ಲಿ ಖಾಸಗಿ ಸಂಸ್ಥೆಗಳು ಹಾಗೂ ಉದ್ದಿಮೆಗಳಿಗೆ ಹಿಂದುಳಿದವರಿಗೆ ಅವಕಾಶ ಕಲ್ಪಿಸಲು ಒತ್ತಾಯಿಸಿರುವುದನ್ನು ಕುರಿತು ಪ್ರಸ್ತಾಪಿಸಿರುವ ರಾಷ್ಟ್ರಪತಿಗಳು- ಪ್ರಸ್ತುತ ಹಾಗೂ ಭವಿಷ್ಯದ ಆರ್ಥಿಕ ಪದ್ಧತಿಯಲ್ಲಿ ಖಾಸಗಿ ಕಂಪನಿಗಳು ಉದಾರ ಸಾಮಾಜಿಕ ಪರಿಕಲ್ಪನೆ ಅಳವಡಿಸಿಕೊಳ್ಳುವುದು ಅಗತ್ಯ ಎಂದಿದ್ದಾರೆ.

ತಾಯಗರ್ಭ ಸೇರಿದಂತೆ ಮಹಿಳೆಗೆ ಯಾವ ಸ್ಥಳವೂ ಸುರಕ್ಷಿತವಲ್ಲ !

ನಮ್ಮದು ಅತ್ಯಂತ ಉದಾತ್ತ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದ್ದು , ಇದು ಮುಂದೂ ತನ್ನ ಹೆಚ್ಚುಗಾರಿಕೆ ಹಾಗೂ ಸಾರ್ವತ್ರಿಕತೆಯನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಈ ಸಮಸ್ಯೆಗಳನ್ನು ನಿಮ್ಮೊಂದಿಗೆ ಚರ್ಚಿಸುತ್ತಿದ್ದೇನೆ. ಸಾಮಾಜಿಕ-ಆರ್ಥಿಕ ಸಮಸ್ಯೆಗಳಿಗೆ ನಾವು ಸ್ಪಂದಿಸಲೇಬೇಕಾಗಿದೆ. ಅಭಿವೃದ್ಧಿ ಹೊಂದಿದ ಸಮಾಜದಲ್ಲಿ ಮಹಿಳೆ ಸಂತೋಷದಿಂದ ಇರುತ್ತಾಳೆ. ಆಕೆಯ ಸ್ಥಾನಮಾನ ಉನ್ನತವಾಗಿರುತ್ತದೆ ಎಂದಿರುವ ನಾರಾಯಣನ್‌, ಸ್ವಾತಂತ್ರ್ಯ ಚಳವಳಿಯಲ್ಲಿ ಸಾಮಾನ್ಯ ಮಹಿಳೆಯರನ್ನೂ ಅತ್ಯಂತ ಕ್ರಿಯಾಶೀಲವಾಗಿ ಗಾಂಧೀಜಿ ಬಳಸಿಕೊಂಡ ಬಗೆಯಲ್ಲೇ ನಾವು ಕೂಡ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಮುಂದಕ್ಕೆ ತರಬೇಕಾಗಿದೆ ಎಂದಿದ್ದಾರೆ.

ಮಾಧ್ಯಮಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವರದಿಯಿಲ್ಲದ ಒಂದು ದಿನವೂ ಇಲ್ಲ . ಅತ್ಯಂತ ಕಿರಿಯ ವಯಸ್ಸಿನಲ್ಲೇ ವರದಕ್ಷಿಣೆ ಕಿಚ್ಚಿಗೆ ಮಹಿಳೆ ಬಲಿಯಾಗುತ್ತಿದ್ದಾಳೆ. ಹೆಣ್ಣು ಭ್ರೂಣ ಹತ್ಯೆಯೂ ಹೆಚ್ಚುತ್ತಿರುವುದನ್ನು ನಾವು ಗಮನಿಸಬೇಕು. ಅತ್ಯಾಚಾರ, ದುಡಿಯುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ, ಮನೆಯಲ್ಲಿ ಹಿಂಸೆ ಪ್ರಕರಣಗಳು ಸಾಮಾನ್ಯವಾಗುತ್ತಿವೆ.

ಭಾರತದಲ್ಲಿ ಕೊಲೆಯಾಗುತ್ತಿರುವ ಮಹಿಳೆಯಲ್ಲಿ ಅರ್ಧ ಭಾಗದಷ್ಟು ಮಹಿಳೆಯರು ತಮ್ಮ ಮಲಗುವ ಕೋಣೆಗಳಲ್ಲೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವರದಕ್ಷಿಣೆ ಸಾವುಗಳ ಸಂಖ್ಯೆ 15.2 ರಷ್ಟು ಹೆಚ್ಚಿದ್ದರೆ, ಲೈಂಗಿಕ ಕಿರುಕುಳ ಪ್ರಕರಣಗಳು ಶೇ.40 ರಷ್ಟು ಹೆಚ್ಚಾಗಿವೆ. ಕಳ್ಳ ಸಾಗಣೆಯಾಗುತ್ತಿರುವ ಹುಡುಗಿಯರ ಸಂಖ್ಯೆ ಪ್ರತಿಶತ 87.2 ರಷ್ಟು ಹೆಚ್ಚಾಗಿದೆ ಎಂದು 1998 ರ ಅಂಕಿಅಂಶಗಳನ್ನು ರಾಷ್ಟ್ರಪತಿ ದೇಶದ ಮುಂದಿಟ್ಟಿದ್ದಾರೆ. ಮಹಿಳೆಯರಿಗೆ ಯಾವ ಸ್ಥಳವೂ ಸುರಕ್ಷಿತವಾಗಿಲ್ಲ ; ತಾಯಗರ್ಭವೂ ಸೇರಿದಂತೆ ಎಂದು ಅವರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

ಪ್ರತಿ ಪಂಚಾಯತ್‌ನಲ್ಲೂ ದ್ರೌಪದಿ ಮಾನ ಸೂರೆ ಹೋಗುತ್ತಿದೆ..

ನಗರ ಸಾರಿಗೆ ಬಸ್ಸುಗಳು, ನಗರದ ಗಲ್ಲಿಗಳು, ಪಂಚಾಯತ್‌ ಮಾತ್ರವಲ್ಲದೇ ತನ್ನ ಮನೆಯಲ್ಲಿಯೇ ಮಹಿಳೆ ಮಾನ ಕಳೆದುಕೊಳ್ಳುತ್ತಿದ್ದಾಳೆ ಎಂದು ವ್ಯಥೆ ವ್ಯಕ್ತಪಡಿಸಿರುವ ರಾಷ್ಟ್ರಪತಿ- ಪ್ರತಿ ಪಂಚಾಯತ್‌ನಲ್ಲೂ ದ್ರೌಪದಿ ಮಾನ ಸೂರೆ ಹೋಗುತ್ತಿದೆ.. ಎನ್ನುವ ಪ್ರಧಾನಿ ವಾಜಪೇಯಿ ಅವರ ಕವನದ ಸಾಲನ್ನು ಉಲ್ಲೇಖಿಸಿದ್ದಾರೆ.

ಭಾರತದ ಭವಿಷ್ಯ ಇವತ್ತಿನ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿಂತಿದೆ. ಆರೋಗ್ಯಪೂರ್ಣ ಮಕ್ಕಳ ಬೆಳವಣಿಗೆ ಹಾಗೂ ಮಾನವೀಯ ಮೌಲ್ಯಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿಯಾಗಿದೆ. ಭಾರತದ ಸಂಸ್ಕೃತಿ ಹಾಗೂ ಪ್ರಾಚೀನ ತತ್ವಶಾಸ್ತ್ರ ಮಾನವೀಯತೆಯನ್ನು ಬೋಧಿಸುತ್ತವೆ. ಶಾಂತಿಯ ಗೂಡಿನೊಳಗೆ ಇಡೀ ವಿಶ್ವದ ಇರುವಿಕೆಯ ಆದರ್ಶವನ್ನು ಸಾರುತ್ತವೆ. ಆಧುನಿಕ ಯುಗದಲ್ಲಿ ಕೂಡ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಜಗತ್ತಿಗೆ ಅಹಿಂಸೆ ತತ್ವ ಪ್ರಚುರಪಡಿಸಿದ ಚಾರಿತ್ರಿಕ ಮಹತ್ವ ನಮ್ಮದು ಎಂದು ನಾರಾಯಣನ್‌ ಅವರು ಹಳೆ ಬೇರಿನ ಬೆಂಬಲದಲ್ಲಿ ಹೊಸ ಸಮಾಜ ನಿರ್ಮಾಣದ ಆಶಯ ವ್ಯಕ್ತಪಡಿಸಿದ್ದಾರೆ.

ಕೊನೆಯ ಮಾತು :
ಸಾಮಾಜಿಕ ಹಾಗೂ ಆರ್ಥಿಕ ಬಲಾಢ್ಯ ಭಾರತದ ಕನಸನ್ನು ನನಸುಗೊಳಿಸಲು ನಾವೆಲ್ಲ ಬದ್ಧರಾಗೋಣ. ಗಣರಾಜ್ಯೋತ್ಸವ ಸಂದರ್ಭದಲ್ಲಿ ಕಂಕಣಬದ್ಧರಾಗೋಣ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X