ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರಿದ್ದ ನೀರು ದರ ವಾಪಸ್‌ : ಕೃಷ್ಣ ಮಹಿಮೆಯೋ, ಕನಕಪುರ ಮಹಿಮೆಯೋ?

By Staff
|
Google Oneindia Kannada News

ಬೆಂಗಳೂರು, ಜ. 22 : ಬೆಂಗಳೂರು ನಗರದಲ್ಲಿ ಡಿಸೆಂಬರ್‌ 1ರಿಂದ ಪೂರ್ವಾನ್ವಯವಾಗುವಂತೆ ಏರಿಸಿದ್ದ ನೀರಿನ ದರವನ್ನು ತತ್‌ಕ್ಷಣದಿಂದಲೇ ವಾಪಸ್‌ ಪಡೆಯುವಂತೆ ರಾಜ್ಯದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಬೆಂಗಳೂರು ಜಲ ಮಂಡಳಿಗೆ ಸೂಚಿಸಿದ್ದಾರೆ. ಸೋಮವಾರ ಸಂಜೆ ಈ ಆದೇಶ ಮಂಡಳಿಯ ಅಧ್ಯಕ್ಷ ವಿದ್ಯಾಶಂಕರ್‌ ಅವರಿಗೆ ತಲುಪಿದೆ.

ಸೋಮವಾರ ಬೆಳಗ್ಗೆ ಬೆಂಗಳೂರು ನಗರದ ಶಾಸಕರೊಂದಿಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿಗಳು ನೀರಿನ ದರ ವಾಪಸ್‌ ಪಡೆಯುವ ನಿರ್ಧಾರ ಕೈಗೊಂಡರು. ಭಿನ್ನಿಪೇಟೆ ಕ್ಷೇತ್ರದ ಶಾಸಕ ಸೋಮಣ್ಣ ಹಾಗೂ ಇತರರು ತೀವ್ರ ಪ್ರಮಾಣದಲ್ಲಿ ಏರಿರುವ ನೀರಿನ ಬಿಲ್‌ ಅನ್ನು ಕೃಷ್ಣ ಅವರಿಗೆ ತೋರಿಸಿ, ಮಧ್ಯಮವರ್ಗದ ಮೇಲೆ ಎಷ್ಟು ಹೊರೆ ಬಿದ್ದಿದೆ ಎಂಬುದನ್ನು ವಿವರಿಸಿದರು.

ನೀರು ದರ ಏರಿಕೆಯಿಂದ ಕನಕಪುರ ಲೋಕಸಭಾ ಉಪ ಚುನಾವಣೆಯ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆಯೂ ಚರ್ಚಿಸಿದರು. ಈ ಹಿನ್ನೆಲೆಯಲ್ಲಿ ತತ್‌ಕ್ಷಣವೇ ಬೆಲೆ ಏರಿಕೆಗೆ ತಡೆ ನೀಡಿದ ಮುಖ್ಯಮಂತ್ರಿಗಳು, ಪರಿಷ್ಕೃತ ದರ ಏರಿಕೆ ಪಟ್ಟಿಯನ್ನು ತಮಗೆ ನೀಡುವಂತೆ ಜಲಮಂಡಳಿಗೆ ಸೂಚಿಸಿದರು ಎಂದು ಮೂಲಗಳು ಹೇಳಿವೆ.

ಬೆಂಗಳೂರು ಜಲ ಮಂಡಳಿಯು ಡಿಸೆಂಬರ್‌ 1ರಿಂದ ಪೂರ್ವಾನ್ವಯವಾಗುವಂತೆ ನೀರಿನ ದರವನ್ನು ಶೇ.71ರಷ್ಟು ಏರಿಸಿ ಆದೇಶ ಹೊರಡಿಸಿತ್ತು. ಭಾರಿ ಪ್ರಮಾಣದ ನೀರಿನ ದರ ಏರಿಕೆಗೆ ಪ್ರತಿಪಕ್ಷಗಳು ಮತ್ತು ನಾಗರಿಕರಿಂದ ತೀವ್ರ ಪ್ರತಿಭಟನೆ ಬಂದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಜಾರಿಗೆ ತಾತ್ಕಾಲಿಕ ತಡೆ ನೀಡಿದ್ದ ಮುಖ್ಯಮಂತ್ರಿಗಳು, ಮಾಹಿತಿ ತಂತ್ರಜ್ಞಾನ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್‌ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ವೈಜ್ಞಾನಿಕ ರೀತಿಯಲ್ಲಿ ದರ ನಿಗದಿಗೆ ಸೂಚಿಸಿದ್ದರು.

ಮುಖ್ಯಮಂತ್ರಿಗಳ ಆದೇಶದಂತೆ ಡಿ.28ರಂದು ಪ್ರೊ. ಬಿ.ಕೆ.ಸಿ. ಅವರು ಕೊಂಚ ರಿಯಾಯಿತಿಯಾಂದಿಗೆ ಹೊಸ ನೀರಿನ ದರವನ್ನೂ ಪ್ರಕಟಿಸಿದ್ದರು. ಈ ದರವನ್ನು ಜಲ ಮಂಡಳಿ ಜಾರಿಮಾಡಿ ಗ್ರಾಹಕರಿಗೆ ಬಿಲ್‌ ಕೂಡ ನೀಡಿದೆ. ಈ ಮಧ್ಯೆ ಆಡಳಿತಾರೂಢ ಕಾಂಗ್ರೆಸ್‌ ಸರಕಾರಕ್ಕೆ ಪ್ರತಿಷ್ಠೆಯ ಕಣವಾಗಿರುವ ಕನಕಪುರ ಲೋಕಸಭಾ ಉಪ ಚುನಾವಣೆ ಬಂದ ಹಿನ್ನೆಲೆಯಲ್ಲಿ ನೀರಿನ ದರ ಏರಿಕೆಗೆ ಏಕಾಏಕಿ ರದ್ದಾಗಲು ಮತ್ತೊಂದು ಕಾರಣವಾಗಿದೆ.

ಕನಕಪುರ ಅತಿ ದೊಡ್ಡ ಲೋಕಸಭಾ ಕ್ಷೇತ್ರವಾಗಿದ್ದು, ಇದರ ವ್ಯಾಪ್ತಿಯಲ್ಲಿ ಬೆಂಗಳೂರಿನ ಹಲವು ಭಾಗಗಳೂ ಸೇರುತ್ತವೆ. ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಂಗಳೂರು ದಕ್ಷಿಣದ ಹಲವು ಪ್ರದೇಶಗಳು ಒಳಪಡುವ ಕಾರಣ, ಆ ಮತದಾರರ ಮನವೊಲಿಸಲು ಮುಖ್ಯಮಂತ್ರಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

(ಇನ್‌ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿಯ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X