ಪಂಪನಿಗಿಂತಲೂ ಹಿಂದೆ ಕನ್ನಡ ಸಾಹಿತ್ಯ ರಚಿಸಿದವರು ಯಾರು ?
ಬೆಂಗಳೂರು : ಪಂಪನಿಗಿಂತಲೂ ಹಿಂದೆ ಸಾಕಷ್ಟು ಮಂದಿ ಸಾಹಿತ್ಯ ರಚಿಸಿದ್ದರು. ಆದ್ದರಿಂದ ಪಂಪ ಆದಿಕವಿಯೇನೂ ಅಲ್ಲ ಎಂದು ಮಧುರೈ ಕಾಮರಾಜ ವಿಶ್ವವಿದ್ಯಾಲಯ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ಪಾ.ಶ. ಶ್ರೀನಿವಾಸ ಪ್ರತಿಪಾದಿಸಿದ್ದಾರೆ.
ಅವರು ಅಣ್ಣಿಗೇರಿಯ ಆದಿಕವಿ ಪಂಪ ಪ್ರತಿಷ್ಠಾನ ಹಾಗೂ ಮದರಾಸು ವಿವಿಯ ಕನ್ನಡ ವಿಭಾಗ ಪಂಪನ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಇತ್ತೀಚೆಗೆ ಮಾತನಾಡುತ್ತಿದ್ದರು. ಇಂಗ್ಲಿಷ್ನಲ್ಲಿ ಶೇಕ್ಸ್ಪಿಯರ್ ಇದ್ದ ಹಾಗೆ ಕನ್ನಡದಲ್ಲಿ ಪಂಪನಿದ್ದಾನೆ. ನಮಗೆ ದೊರೆತಿರುವ ಕೃತಿಗಳಲ್ಲಿ ಪಂಪನದೇ ಮುಖ್ಯವಾಗಿವೆ. ಆದ್ದರಿಂದ ಅವನನ್ನೇ ಆದಿಕವಿ ಎಂದು ಕರೆಯುತ್ತಿದ್ದೇವೆ ಎಂದು ಶ್ರೀನಿವಾಸ್ ಹೇಳಿದರು.
ಕಾವ್ಯ ಧರ್ಮ, ಮಾರ್ಗ ಹಾಗೂ ದೇಸಿಗಳನ್ನು ಸಮರ್ಥವಾಗಿ ತನ್ನ ಕಾವ್ಯದಲ್ಲಿ ಪಂಪ ಸಮನ್ವಯಗೊಳಿಸಿರುವುದಾಗಿ ಹೇಳಿದ ಶ್ರೀನಿವಾಸ್, ತಾಯಿ ನಾಡು ಮತ್ತು ಭಾಷೆಯ ಬಗ್ಗೆ ಅಪಾರ ಅಭಿಮಾನ ಇಟ್ಟು ಕೊಂಡ ವ್ಯಕ್ತಿ ಪಂಪ ಎಂದರು. ಕಾರ್ಯಕ್ರಮದಲ್ಲಿ ಚೆನ್ನೈನ ಏಷ್ಯನ್ ಸ್ಟಡೀಸ್ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಿ.ಗೋಪಾಲ ಕೃಷ್ಣ, ಡಾ. ಕೃಷ್ಣಭಟ್ ಅರ್ತಿಕಜೆ ಭಾಗವಹಿಸಿದ್ದರು.
ಮುಖಪುಟ / ಇವತ್ತು... ಈ ಹೊತ್ತು...