ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸೌಧದ ಸರ್ಪಕಾವಲಿಗೆ ಶಾರ್ಪ್‌ ಶೂಟರ್ಸ್‌ ಪಡೆ

By Staff
|
Google Oneindia Kannada News

ಬೆಂಗಳೂರು, ಜ.20 : ಜ.21ರ ಸೋಮವಾರದಿಂದ ಕರ್ನಾಟಕ ವಿಧಾನ ಮಂಡಳ ಅಧಿವೇಶನ. ಈ ಬಾರಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ವಿಧಾನಸೌಧಕ್ಕೆ ರಕ್ಷಣೆ ಒದಗಿಸಲಾಗಿದೆ. ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲೇ ಸಂಸತ್‌ ಭವನದ ಮೇಲೆ ನಡೆದ ವಿಧ್ವಂಸಕ ದಾಳಿ, ರಾಷ್ಟ್ರಾದ್ಯಂತ ರಕ್ಷಣೆಯ ಹೊಣೆ ಹೊತ್ತವರನ್ನು ನಿದ್ದೆಯಿಂದ ಬಡಿದೆಬ್ಬಿಸಿದೆ.

ಈ ನಿಟ್ಟಿನಲ್ಲಿ ವಿಧಾನಸೌಧದ ಸರ್ಪಕಾವಲಿಗೆ ಈ ಹೊತ್ತು ಶಾರ್ಪ್‌ ಶೂಟರ್ಸ್‌ ಪಡೆಯನ್ನು ನಿಯೋಜಿಸಲಾಗಿದೆ. ಕೇವಲ ಅಲ್ಪಾವಧಿಯಲ್ಲೇ ತರಬೇತಾದ ಈ ಪಡೆ ವಿಧಾನಸೌಧವನ್ನು ಸುತ್ತುವರಿದು ನಿಲ್ಲಲಿದೆ. ಇವರೊಂದಿಗೆ ವಿಶೇಷ ತರಬೇತಿ ಪಡೆದ ರಾಜ್ಯ ಪೊಲೀಸ್‌ ವಿಶೇಷ ಪಡೆಯೂ ರಕ್ಷಣೆಯ ಉಸ್ತುವಾರಿ ವಹಿಸಲಿದೆ.

ಕೇವಲ ವಿಧಾನಸೌಧಕ್ಕಷ್ಟೇ ಅಲ್ಲದೆ ಶಾಸಕರ ಭವನ, ಹೈಕೋರ್ಟ್‌ ಆವರಣದಲ್ಲೂ ವಿಶೇಷ ಭದ್ರತಾಪಡೆಯನ್ನು ನಿಯೋಜಿಸಲಾಗಿದೆ. ಈ ವಿಷಯವನ್ನು ವಿಧಾನಸೌಧ ಉಪ ವಿಭಾಗದ ಎ.ಸಿ.ಪಿ. ಸುಧಾಕರ ಹೆಗಡೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಸೋಮವಾರದಿಂದ ಅಧಿವೇಶನ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸಶಸ್ತ್ರ ಮೀಸಲು ಪಡೆಯ ಎಂಟು ತುಕಡಿ ಹಾಗೂ 300 ಪೊಲೀಸ್‌ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

ಪಾಸ್‌ ಇಲ್ಲದೆ ಪ್ರವೇಶವಿಲ್ಲ : ಗುರುತಿನಚೀಟಿ, ಭಾವಚಿತ್ರ ಸಹಿತವಾದ ಪಾಸ್‌ ಹೊಂದಿರುವವರನ್ನು ಹೊರತುಪಡಿಸಿ ಮತ್ತಾರಿಗೂ ವಿಧಾನಸೌಧ ಪ್ರವೇಶಕ್ಕೆ ಸೋಮವಾರದಿಂದ ಅವಕಾಶವಿಲ್ಲ. ವಿಧಾನಸೌಧದ ಆವರಣಕ್ಕೆ ಬರುವ ಎಲ್ಲ ವಾಹನಗಳಿಗೂ ಕೂಡ ಪಾಸ್‌ ನೀಡಲಾಗಿದೆ. ಪ್ರೇಕ್ಷಕರ ಗ್ಯಾಲರಿಗೆ ಈ ಅಧಿವೇಶನದಿಂದ ನಿರ್ಬಂಧ ಜಾರಿಗೊಳಿಸಲಾಗಿದೆ.

ಪ್ರತಿಬಂಧಕಾಜ್ಞೆ : ಅಧಿವೇಶನದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಜನವರಿ 25ರ ಮಧ್ಯರಾತ್ರಿಯವರೆಗೆ ವಿಧಾನಸೌಧದ ಒಂದು ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆಯನ್ನೂ ಜಾರಿಗೊಳಿಸಲಾಗಿದೆ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X