ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಷ್ಕರ್‌-ಇ-ತೊಯಿಬ, ಜೈಷ್‌-ಇ-ಮೊಹಮ್ಮದ್‌ಗಳಿಗೆ ಕೈಕೊಟ್ಟ ಮುಷರ್ರಫ್‌

By Staff
|
Google Oneindia Kannada News

ಇಸ್ಲಮಾಬಾದ್‌: ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನದ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರ್ರಫ್‌ ಅವರು ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್‌-ಇ-ತೊಯಿಬ ಹಾಗೂ ಜೈಷ್‌-ಇ-ಮೊಹಮ್ಮದ್‌ಗಳನ್ನು ನಿಷೇಧಿಸಿದ್ದಾರೆ.

ಶನಿವಾರ ರಾತ್ರಿ ರಾಷ್ಟ್ರವನ್ನುದ್ದೇಶಿ ಭಾಷಣ ಮಾಡಿದ ಮುಷರ್ರಫ್‌, ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸುವ ಪಾಕ್‌ ಸರ್ಕಾರದ ಕ್ರಮವನ್ನು ಪ್ರಕಟಿಸಿದರು. ಆದರೆ, ಯಾವುದೇ ಪಾಕ್‌ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆಗಳನ್ನು ಅವರು ನಿರಾಕರಿಸಿದರು.

ಕಾಶ್ಮೀರ ವಿಚಾರದಲ್ಲಿ ಪಾಕ್‌ನ ರಾಜ್‌ ತಾಂತ್ರಿಕ ನಿಲುವು ಮುಂದುವರಿಯಲಿದೆ. ಆದರೆ, ಕಾಶ್ಮೀರ ಹೆಸರಿನಲ್ಲಿ ಭಯೋತ್ಪಾದಕ ಸಂಸ್ಥೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಮುಷರ್ರಫ್‌ ಸ್ಪಷ್ಟಪಡಿಸಿದರು. ಭಾರತ ಬಯಸಿರುವ 20 ಉಗ್ರರನ್ನು ಹಸ್ತಾಂತರಿಸಲು ಸಾಧ್ಯವಿಲ್ಲ . ಆದರೆ, ಆ ಉಗ್ರರ ಕುರಿತು ಖಚಿತ ಪುರಾವೆಗಳನ್ನು ಒದಗಿಸಿದಲ್ಲಿ ಪಾಕ್‌ನಲ್ಲಿಯೇ ವಿಚಾರಣೆ ನಡೆಸಲಾಗುವುದು ಎಂದರು.

ಭಯೋತ್ಪಾದನೆ ವಿರುದ್ಧ ಹೋರಾಟ

ಅಮೆರಿಕಾದಲ್ಲಿ ಸೆ.11 ರ ದಾಳಿಯ ನಂತರ ವಿಶ್ವದ ಚಿತ್ರಣವೇ ಬದಲಾಗಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಂತರರಾಷ್ಟ್ರೀಯ ಸಮುದಾಯದ ಜೊತೆ ಗುರ್ತಿಸಿಕೊಳ್ಳಲು ಪಾಕಿಸ್ತಾನ ನಿರ್ಧರಿಸಿದೆ ಎಂದು ಮುಷರ್ರಫ್‌ ಹೇಳಿದರು.

ಪಾಕಿಸ್ತಾನದ ಜನತೆಯನ್ನು ತಪ್ಪು ದಾರಿಗೆಳೆಯುತ್ತಿರುವ ಧಾರ್ಮಿಕ ಪಂಡಿತರನ್ನು ಟೀಕಿಸಿದ ಮುಷರ್ರಫ್‌, ಜನಾಂಗೀಯ ಹಿಂಸಾಚಾರದಿಂದ ಪಾಕ್‌ ಜನತೆ ರೋಸಿ ಹೋಗಿದ್ದಾರೆ. ಪಾಕಿಸ್ತಾನವನ್ನು ಮತಾಂಧ ರಾಷ್ಟ್ರವನ್ನಾಗಿ ರೂಪಿಸಬೇಕೆ ಅಥವಾ ಆಧುನಿಕ ಹಾಗೂ ಚಲನಶೀಲ ರಾಷ್ಟ್ರವನ್ನಾಗಿ ರೂಪಿಸಬೇಕೆ ಎಂದು ನಿರ್ಣಯಿಸುವ ನಿರ್ಣಾಯಕ ದಿನ ಬಂದಿದೆ ಎಂದು ಮುಷರ್ರಫ್‌ ಹೇಳಿದರು.

ಅಮೆರಿಕ, ರಷ್ಯ, ಬ್ರಿಟನ್‌ ಸ್ವಾಗತ

ಭಯೋತ್ಪಾದನೆ ವಿರುದ್ಧ ಪಾಕ್‌ ಅಧ್ಯಕ್ಷ ಮುಷರ್ರಫ್‌ ಅವರು ತಳೆದಿರುವ ನಿಲುವನ್ನು ಹಾಗೂ ಭಯೋತ್ಪಾದಕ ಸಂಸ್ಥೆ ವಿರುದ್ಧ ನಿಷೇಧ ಹೇರಿರುವ ಕ್ರಮವನ್ನು ಅಮೆರಿಕ, ರಷ್ಯಾ ಹಾಗೂ ಬ್ರಿಟನ್‌ ಸ್ವಾಗತಿಸಿವೆ. ತಕ್ಷಣದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಲು ಭಾರತ ನಿರಾಕರಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X