ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳ್ಳರು ಎಲ್ಲಾ ಕಡೆ ಇದ್ದಾರೆ, ಕೊಳೆಗೇರಿಯಲ್ಲಿ ಪ್ರಾಮಾಣಿಕರೂ ಇದ್ದಾರೆ

By Staff
|
Google Oneindia Kannada News

* ಟಿ.ಎಂ. ಸತೀಶ್‌

ಬೆಂಗಳೂರು, ಜ.11: ಪೊಲೀಸ್‌ ಇಲಾಖೆಯಲ್ಲಿರುವವರೆಲ್ಲರೂ ಕೆಟ್ಟವರಲ್ಲ. ಹಾಗೆಂದ ಮಾತ್ರಕ್ಕೆ ಆ ಇಲಾಖೆಯಲ್ಲಿ ಇರುವವರೆಲ್ಲರೂ ಒಳ್ಳೆಯವರು- ಪ್ರಾಮಾಣಿಕರು ಎಂದರೆ ಅವರೇ ಒಪ್ಪೋದಿಲ್ಲ.. ಎಂದು ಮಾಸ್ಟರ್‌ ಹಿರಣ್ಣಯ್ಯ ಆಗಾಗ ಹೇಳುತ್ತಿದ್ದರು.

ಅದೇ ರೀತಿ ಬಡವರೆಲ್ಲರೂ ಕಳ್ಳರಲ್ಲ. ಶ್ರೀಮಂತರೆಲ್ಲಾ ಸಭ್ಯರೇನಲ್ಲವಲ್ಲ. ಗುಡಿಸಿಲಿನಲ್ಲಿರುವವನನ್ನು ಕಳ್ಳನೆಂದೂ ಉಪ್ಪರಿಗೆಯಲ್ಲಿರುವವನನ್ನು ಸದ್ಗುಣ ಸಂಪನ್ನನೆಂದು ತಿಳಿಯುವುದು ಎಷ್ಟರ ಮಟ್ಟಿಗೆ ಸರಿ....

ನಿಮಗೆಲ್ಲಾ ಗೊತ್ತಲ್ಲ ಬೆಂಗಳೂರಿನಲ್ಲಿ ಒಂದೆರಡು ಕೊಲೆ, ಸುಲಿಗೆ, ಕಳ್ಳತನ ಆಯಿತೆಂದು ಸಿಡಿಮಿಡಿಗೊಂಡ ಬೆಂಗಳೂರಿನ ಕಮೀಷನರ್‌ ಸಾಂಗ್ಲಿಯಾನ ಡಕಾಯಿತರನ್ನು ಗುಂಡಿಟ್ಟು ಕೊಲ್ಲುವಂತೆಯೂ, ಉದ್ದ ಉಗುರು ಬೆಳೆಸಿ ಮೈಮೇಲೆ ಬೀಳುವ ಗಂಡಸರನ್ನು ಪರಚುವಂತೆಯೂ ಬೆಂಗಳೂರಿಗರಿಗೆ ಮತ್ತು ಮಹಿಳೆಯರಿಗೆ ಆದೇಶ ಕೊಟ್ಟರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಬೆಂಗಳೂರಿನ ಸ್ಲಂಗಳಲ್ಲಿರುವ 16ರ ಮೇಲ್ಪಟ್ಟ ಹರೆಯದ ಯುವಕರ ಭಾವಚಿತ್ರ ಮತ್ತು ಕೈಬೆರಳ ಗುರುತು ಸಂಗ್ರಹಿಸುವ ನಿರ್ಧಾರ ತಳೆದಿದ್ದರು. (ಇದಕ್ಕೆ ಸರ್ವತ್ರ ವಿರೋಧ ಕೇಳಿಬಂದ ತರುವಾಯ ಆ ಯೋಚನೆಯನ್ನೇ ಕೈಬಿಟ್ಟರು ಎಂಬುದು ಬೇರೆ ವಿಷಯ.)

ಪ್ರಾಮಾಣಿಕ ಆಟೋ ಚಾಲಕ: ಈಗಿನ ಸುದ್ದಿ ಏನು ಗೊತ್ತೆ ? ಬೆಂಗಳೂರಿನ ಶಾಂತಿನಗರ ಸ್ಲಂನಲ್ಲಿ ಬಾಡಿಗೆ ಮನೆಯಾಂದರಲ್ಲಿ ವಾಸಿಸುತ್ತಿರುವ ಕಡುಬಡವ ಆಟೋಚಾಲಕ ಇತ್ತೀಚೆಗೆ ತನ್ನ ಆಟೋದಲ್ಲಿ ಸ್ಕಾಟ್‌ಲ್ಯಾಂಡ್‌ ಯಾರ್ಡ್‌ ಆಫೀಸರ್‌ ಬಿಟ್ಟು ಹೋಗಿದ್ದ 60 ಸಾವಿರ ರುಪಾಯಿ ನಗದು ಮತ್ತು ಒಂದು ಪೆಟ್ಟಿಗೆ ಚಿನ್ನಾಭರಣಗಳನ್ನು ಪೊಲೀಸರಿಗೆ ಪ್ರಾಮಾಣಿಕವಾಗಿ ತಂದೊಪ್ಪಿಸಿದ.

ಈತನ ಪ್ರಾಮಾಣಿಕತೆಯನ್ನು ಮೆಚ್ಚಿದ ಸಾಂಗ್ಲಿಯಾನಾ ಆತನಿಗೆ 500 ರುಪಾಯಿಗಳ ನಗದು ಬಹುಮಾನ ನೀಡಿದರು. ಕೈಯಲ್ಲಿ ಲಕ್ಷಾಂತರ ರುಪಾಯಿ ಬೆಲೆ ಬಾಳುವ ವಸ್ತುಗಳಿದ್ದರೂ, ಸಾವಿರಾರು ರುಪಾಯಿ ನಗದಿದ್ದರೂ ಆತ ವಿಚಲಿತನಾಗಲಿಲ್ಲ. ಆತನ ಪ್ರಾಮಾಣಿಕತೆಗೆ ಚ್ಯುತಿ ತಂದುಕೊಳ್ಳಲಿಲ್ಲ. ಕಂಡವರ ಸ್ವತ್ತು ನಮಗೇಕೆ ಎಂಬುದು ಆ ಆಟೋಚಾಲಕ ಶ್ರೀನಿವಾಸನ ನಿಲುವು.

‘ಅಲ್ಲ ಸ್ವಾಮಿ ಹಾಲು ಕುಡಿದ ಮಕ್ಕಳೇ ಬದುಕಲ್ಲ... ಅಂತಹದರಲ್ಲಿ ವಿಷ ಕುಡಿದ ಮಕ್ಕಳು ಬದುಕುತ್ತವಾ’ ಹೇಳಿ. ನಿಮಗೆ ಗೊತ್ತಾ ನನಗೆ ಬಂದ 500 ರುಪಾಯಿ ಬಹುಮಾನವನ್ನು ನಾನು ನನ್ನ ಹೆಂಡತಿ ಕೈಗೆ ಕೊಟ್ಟೆ ಆಕೆ ಕಿರಾಣಿ ಅಂಗಡಿ ಸಾಲ ತೀರಿಸಿದಳು. ನಿಜವಾಗಲೂ ನಾನು ಬಹುಮಾನದ ಹಣ ನಿರೀಕ್ಷಿಸಿರಲಿಲ. ಈಗ ನನಗೆ ತೃಪ್ತಿ ಆಗಿದೆ ಅಂತಾರೆ ಶ್ರೀನಿವಾಸ.

ಎರಡು ಹೆಣ್ಣು ಮಕ್ಕಳು ಮತ್ತು ಎರಡು ಗಂಡು ಮಕ್ಕಳ ತಂದೆಯಾದ ಶ್ರೀನಿವಾಸ್‌ ಬೆಳಗಿನಿಂದ ರಾತ್ರಿವರೆಗೆ ಆಟೋ ಓಡಿಸಿದರೆ ಅವರಿಗೆ ಸಿಗುವುದು 200 ಅಥವಾ 300 ರುಪಾಯಿ, ಬೆಂಗಳೂರಲ್ಲಿ ಮನೆಗೆ ಬಾಡಿಗೆ ಕಟ್ಟಿಕೊಂಡು, ಮಕ್ಕಳ ಸ್ಕೂಲ್‌ಫೀಸ್‌, ಬಟ್ಟೆ ಬರೆ - ಊಟ ತಿಂಡಿ ಒದಗಿಸಲು ಈ ಹಣ ಏನೇನೂ ಸಾಲದು. ಕಾಯಿಲೆ ಬಿದ್ದರಂತೂ ಆಟೋ ಓಡಿಸುವಂತಿಲ್ಲ... ಆಗ ಉಪವಾಸವೇ ಗಟ್ಟಿ. ಆದರೂ ಈತ ದಿಢೀರ್‌ ಶ್ರೀಮಂತಿಕೆ ಬಯಸಲಿಲ್ಲ. ‘ಸಾರ್‌ ಯಾರದೋ ದುಡ್ಡಲ್ಲಿ ನನ್ನ ಹೆಂಡತಿ ಮಕ್ಕಳನ್ನು ಸಾಕುವ ಗತಿ ನನಗೆ ಬಾರದಿರಲಿ - ಕಳ್ಳತನದ ಹಣದಿಂದ ಹೊಟ್ಟೆ ತುಂಬಿಕೊಳ್ಳುವ ಬದಲು ಆತ್ಮಹತ್ಯೆಯೇ ವಾಸಿ’ ಅಂತಾರೆ ಶ್ರೀನಿವಾಸ್‌....

ಈ ಘಟನೆಗೆ ಇಷ್ಟು ಪ್ರಾಮುಖ್ಯ ಏಕೆ ಗೊತ್ತೆ.... ಶ್ರೀಮಂತಿಕೆಯ ಸೋಗು ಹಾಕಿಕೊಂಡ ಜನ ಮಾಡಬಾರದ ಕೆಲಸ ಮಾಡುತ್ತಾರೆ. ಬಚಾವೂ ಆಕ್ತಾರೆ. ಸ್ವಂತ ಮಕ್ಕಳೆ ಮನೆಯಲ್ಲಿ ಕಳ್ಳತನ ಮಾಡಿದ್ರು, ಮೊದಲು ಅನುಮಾನ ಪಡೋದು ಮನೆಕೆಲಸದ ಆಳುಗಳ ಮೇಲೆ.

ಇದೇ ಕೆಲಸಾನ ನಮ್ಮ ಸಾಂಗ್ಲಿಯಾನಾರೂ ಮಾಡಿದ್ರು... ಸ್ಲಂ ನಲ್ಲಿ ವಾಸಿಸುವವರನ್ನೆಲ್ಲಾ ಸಾರಾ ಸಗಟಾಗಿ ಕಳ್ಳರೆಂದು ಭಾವಿಸಿದರು. ಈಗ ಅವರೇ ಕೈಯಾರೆ ಸ್ಲಂ ನಿವಾಸಿಯ ಪ್ರಾಮಾಣಿಕತೆ ಮೆಚ್ಚಿ ಬಹುಮಾನ ಕೊಟ್ಟಿದ್ದಾರೆ. ಈ ಬಗ್ಗೆ ಸಾಂಗ್ಲಿಯಾನಾ ಏನು ಹೇಳ್ತಾರೆ? ಏನಾದರೂ ಹೇಳಿಕೊಳ್ಳಲಿ. ಶ್ರೀನಿವಾಸ್‌ ಅವರ ಸಂತತಿ ಸಾವಿರವಾಗಲಿ.

Tell us what you think of this report

ವಾರ್ತಾ ಸಂಚಯ
ಕೊಳೆಗೇರಿವಾಸಿಗಳ ಬೆರಳಚ್ಚು, ಫೋಟೋ ಸಂಗ್ರಹವಿಲ್ಲ -ಸಾಂಗ್ಲಿಯಾನಾ
ಬೆರಳಚ್ಚು ಭಾವಚಿತ್ರ ಸಂಗ್ರಹಕ್ಕೆ ಕೊಳೆಗೇರಿನಿವಾಸಿಗಳ ವಿರೋಧ
‘ನಿಮ್ಮನ್ನು ನೀವೆ ರಕ್ಷಿಸಿಕೊಳ್ಳಿ ಎಂಬುದು ದುರ್ಬಲ ಸರ್ಕಾರದ ಲಕ್ಷಣ’

ಮುಖಪುಟ / ಸಾಂಗ್ಲಿಯಾನಾ ವಾಚ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X