ಅಪರಾತ್ರಿಯಲ್ಲಿ ಬಂದ ಅಭ್ಯಾಗತ ಅಕ್ಕಿಮುಡಿಯನ್ನೇ ಹೊತ್ತೊಯ್ದ
‘ಬಾರಯ್ಯಾ ಮಳೆ ಮಹದೇವ’ ಅಂತ ಅತ್ತು ಕರೆದು ಸರ್ವ ವಿಧದಿಂದಲೂ ಉತ್ತರ ಕರ್ನಾಟಕದ ರೈತರು ಕಳೆದ ವರ್ಷವಷ್ಟೇ ಸೋತು ಸುಣ್ಣವಾಗಿದ್ದರು. ದಸರೆಯ ನಂತರ ಉದುರಿದ ನಾಲ್ಕು ಚಿಟಿಕೆ ಹನಿಗಳ ಕೃಪೆ ಬಿಟ್ಟರೆ ಅವರ ಅಳಲಿಗೆ ಚಿಕ್ಕಾಸಿನ ಬೆಲೆ ಕೊಡದೆ ಮಳೆ ಭುಜ ಹಾರಿಸಿಕೊಂಡು ಎತ್ತಲೋ ಹೋಗಿ ಬಿಟ್ಟಿತ್ತು. ತಮ್ಮ ಹಣೆಯಲ್ಲಿ ತುತ್ತು ಬರೆದಿಲ್ಲ ಎನ್ನುತ್ತಲೇ ಹೊಲದ ಅರೆ ಒದ್ದೆ ಮಣ್ಣಿನಲ್ಲಿ ರೈತರು ಬಿತ್ತನೆ ಮಾಡಿದ್ದರು. ಪೈರು ಇನ್ನೇನು ಕೈಗೆ ನಿಲುಕಬೇಕು, ಅಷ್ಟರಲ್ಲಿ ಕೊಬ್ಬಿದ ಕುರಿಗೆ ಹೊಂಚು ಹಾಕುತ್ತಿದ್ದ ಹುಲಿ ಹಾಗೆ ಮಳೆ ದಾಳಿ ನಡೆಸಿದೆ. ಅಂತೂ ಇಂತು ಕುಂತಿ ಮಕ್ಕಳಿಗೆ.. ಅನ್ನುವಂತೆ ರೈತರು ಸಾಲ, ಹಸಿವು, ನೀರಡಿಕೆಯ ಮಧ್ಯೆ ಆಗಸ ನೋಡುತ್ತಿದ್ದಾರೆ.
ಅಪರಾತ್ರಿಯಲ್ಲಿ ಬಂದ ಅಭ್ಯಾಗತ ಅಕ್ಕಿ ಮುಡಿಯನ್ನೇ ಕಿತ್ತುಕೊಂಡಂತೆ ಗುಲ್ಬರ್ಗ, ಚಿತ್ರದುರ್ಗ, ತುಮಕೂರು, ಬೀದರ್, ರಾಯಚೂರಿಗೆ ಸೋಮವಾರ ರಾತ್ರಿ ಆಲಿಕಲ್ಲು ಮಳೆ ರೈತರ ನೆತ್ತಿ ಕುಟುಕಿದೆ. ಬಿರುಗಾಳಿ ತೆಂಗು ಕಂಗುಗಳು ನೆಲಕಚ್ಚಿಸಿವೆ. ಅಡಿಕೆ, ಹುಣಸೇ, ಬೇವು, ವಿದ್ಯುತ್ ಕಂಬಗಳು ಉರುಳಿ ಬಿದ್ದು ರೈತರ ಕಣ್ಣಿನ ಬೆಳಕ ನಂದಿಸಿವೆ.
ಹೀಗೆ ಮಳೆಯ ಅಬ್ಬರತಾಳಕ್ಕೆ ತುತ್ತಾದ ಗುಲ್ಬರ್ಗಾ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳು ಪ್ರತಿವರ್ಷವೂ ಬೇಸಗೆಯಲ್ಲಿ ಕುಡಿಯುವ ನೀರಿಲ್ಲದೆ ಬಳಲುತ್ತಿರುವವು. ಈಗ ಬೆಳೆ ನಾಶದಿಂದ ತತ್ತರಿಸಿವೆ.
ಹವಾಮಾನ ಇಲಾಖೆಯ ನಿರ್ದೇಶಕ ಡಾ. ಎ. ಎಲ್. ಕೊಪ್ಪರ್ ಪ್ರಕಾರ ಗಾಳಿಯ ಹಿಮ್ಮುಖ ಚಲನೆ ಈ ಅಕಾಲ ಮಳೆಗೆ ಕಾರಣ . ನೈರುತ್ಯ ಕರಾವಳಿಯಿಂದ ಪಶ್ಚಿಮ ಮಧ್ಯದ ಬಂಗಾಳ ಕೊಲ್ಲಿಯವರೆಗೆ ವಾಯುಭಾರ ಕುಸಿತ ಉಂಟಾಗಿದ್ದರಿಂದ ಮಳೆ ಬಂದಿದೆ. ಆಂಧ್ರ ಪ್ರದೇಶದ ದಕ್ಷಿಣ ಕರಾವಳಿ ಪ್ರದೇಶದಲ್ಲಿ, ಪುದುಚೇರಿ, ಮತ್ತು ಕರ್ನಾಟಕದ ಒಳನಾಡಿನಲ್ಲಿ ಇನ್ನಷ್ಟು ಮಳೆ ಬೀಳುವ ಸಂಭವ ಇದೆ. ಅಂದರೆ, ಇನ್ನೆಷ್ಟು ಬೆಳೆ ಹಾನಿ, ರಸ್ತೆ ತಡೆ, ಮನೆ ಮುರುಕ ಕೆಲಸವನ್ನು ಈ ಮಳೆ ಮಾಡುವುದೋ ಎಂದು ಹೆದರಿಕೆಯಾಗುತ್ತದೆ. ಹಾಗಾಗದಿರಲೂ ಬಹುದಲ್ಲವೇ ?
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...