ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀ ಕೃಷ್ಣಾಯ ನಮಃ

By Staff
|
Google Oneindia Kannada News

(ಇನ್ಫೋ ಇನ್‌ಸೈಟ್‌)

Sri Vidyadheesha teertha swamiji - paryaya peetha Udupiಉಡುಪಿಯಲ್ಲಿ ಮತ್ತೆ ಪರ್ಯಾಯೋತ್ಸವದ ಸಂಭ್ರಮ. ಇದರ ಪೂರ್ವಭಾವಿ ಪ್ರಕ್ರಿಯೆಯಾಗಿ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿಗಳು ಗುರುವಾರ ಪುರ ಪ್ರವೇಶ ಮಾಡಿದ್ದಾರೆ. ಪರ್ಯಾಯ ಪೀಠವಿರಲಿ, ಇಲ್ಲದಿರಲಿ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಭಕ್ತ ಕೋಟಿಯನ್ನು ಸೃಷ್ಟಿಸಿಕೊಂಡ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಯ ಪರ್ಯಾಯ ಅವಧಿ ಜನವರಿ 17ಕ್ಕೆ ಮುಗಿಯುತ್ತದೆ. ನಂತರ ಕೃಷ್ಣ ಪೂಜೆಯ ಅಧಿಕಾರ ಪಲಿಮಾರು ಮಠಾಧೀಶರಿಗೆ.

ಈ ಹಿನ್ನೆಲೆಯಲ್ಲಿ ಮುಂದಿನ ಪರ್ಯಾಯ ಪೀಠ ಏರುವ ವಿದ್ಯಾಧೀಶ ಸ್ವಾಮೀಜಿ ತಮ್ಮ ಪರ್ಯಾಯ ಅವಧಿಯಲ್ಲಿ ಹಮ್ಮಿಕೊಳ್ಳುವ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಲೋಕದಲ್ಲಿ ಕ್ಷೋಭೆ ಗಲಭೆಗಳು ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಕೃಷ್ಣ ಜಪದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಸ್ವಾಮೀಜಿಗಳ ಮೊದಲ ಗುರಿ. ಆ ಪ್ರಕಾರ ಸಾವಿರ ಕೋಟಿ ಶ್ರೀಕೃಷ್ಣ ಜಪ ಮಾಡುವುದು ತಮ್ಮ ಪರ್ಯಾಯ ಅವಧಿಯ ಮುಖ್ಯ ಯೋಜನೆಯಾಗಲಿದೆ ಎಂದು ಸ್ವಾಮೀಜಿ ಘೋಷಿಸಿದ್ದಾರೆ.

ದೇಶದಲ್ಲಿ ಯುದ್ಧದ ವಾತಾವರಣವೂ ಸೃಷ್ಟಿಯಾಗುತ್ತಿದೆ. ಆದ್ದರಿಂದ ಲೋಕ ಕಲ್ಯಾಣಕ್ಕಾಗಿ ಕೃಷ್ಣ ಜಪದ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂಬ ವಿವರಣೆಯನ್ನೂ ಸ್ವಾಮೀಜಿ ಕೊಟ್ಟಿದ್ದಾರೆ. ‘ಶ್ರೀ ಕೃಷ್ಣಾಯ ನಮಃ’ ಮತ್ತು ‘, ‘ಶ್ರೀರಾಮ’ ಎಂಬ ಮಂತ್ರವನ್ನು ಬರೆಯುವ ಮೂಲಕ ಈ ಸಾವಿರ ಕೋಟಿ ಜಪ ಯಜ್ಞದಲ್ಲಿ ಕೃಷ್ಣ ಭಕ್ತರು ಪಾಲ್ಗೊಳ್ಳಬೇಕು ಎಂದು ಸ್ವಾಮೀಜಿ ಕೇಳಿಕೊಂಡಿದ್ದಾರೆ.

ಕೃಷ್ಣ ಮೂರ್ತಿಗೆ ವಜ್ರ ಕವಚ

ಉಡುಪಿ ಕೃಷ್ಣನಿಗೆ ವಜ್ರದ ಕಿರೀಟದ ಹೊರತಾಗಿ ಮಠದಲ್ಲಿ ಬರೇ ಚಿನ್ನದ್ದೇ ಕಾರುಬಾರು. ಪಲಿಮಾರು ಸ್ವಾಮೀಜಿಯ ಎರಡನೇ ಯೋಜನೆ ಕೃಷ್ಣ ದೇವನಿಗೆ ವಜ್ರ ಕವಚ ತೊಡಿಸುವುದು. ಇದಕ್ಕೆ ದಶ ದಿಕ್ಕುಗಳಿಂದ ಟೀಕೆಗಳು ಬರುತ್ತವೆ ಎಂಬುದು ಸ್ವಾಮೀಜಿಗೂ ಗೊತ್ತು. ಹಿಂದೆ ಉಡುಪಿಯಲ್ಲಿ ಬಂಗಾರ ರಥ ನಿರ್ಮಿಸಿದಾಗಲೂ ಟೀಕೆಗಳು ಧಾಂಗುಡಿಯಿಟ್ಟಿದ್ದವು.

ಆದರೆ ರಥಕ್ಕಾಗಿ ಸಂಗ್ರಹಿಸಿದ ಹಣದಲ್ಲಿ ಅನೇಕಾನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬ ಸಮರ್ಥನೆಯನ್ನು ನೀಡುವ ಸ್ವಾಮೀಜಿ, ಇದೇ ಮಾದರಿಯಲ್ಲಿ ವಜ್ರ ಕವಚಕ್ಕಾಗಿ ಹಣ ಸಂಗ್ರಹಿಸಲಾಗುವುದು ಎಂದಿದ್ದಾರೆ. ಆದರೆ ಈ ಮೂಲಕ ಹಮ್ಮಿಕೊಳ್ಳುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರತ್ಯೇಕವಾಗಿ ಸ್ವಾಮೀಜಿ ಏನೂ ಹೇಳಲಿಲ್ಲ. ವಿದ್ಯಾಧೀಶರ ವಜ್ರ ಕವಚದ ಯೋಜನೆ ಅವರ ಗುರುಗಳ ಕನಸು. ಜಪ, ಒಡವೆಯ ನಂತರ ಶ್ರೀಗಳ ಯೋಜನೆ ಅಧ್ಯಯನ ಕ್ಷೇತ್ರಕ್ಕೆ ಸಂಬಂಧಿಸಿದ್ದು. ಆ ಪ್ರಕಾರ :

  • ಮಧ್ವಾಚಾರ್ಯರ ಸರ್ವ ಮೂಲ ಗ್ರಂಥ ಪ್ರವಚನ, ಜಿಜ್ಞಾಸುಗಳಿಗೆ ಉಚಿತ ಊಟ, ವಸತಿ, ಸನ್ಯಾಸಿಗಳಿಗೆ ಹಿತವಾದ ಪಾಠ ಪ್ರವಚನ
  • ದಾಸ ಸಾಹಿತ್ಯ ಅಧ್ಯಯನ ಮಾಡ ಬಯಸುವವರಿಗೆ ಮಾರ್ಗದರ್ಶನ.
  • ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ
  • ಮಠದ ಪರಿಸರದಲ್ಲಿರುವ ಶಾಲೆಗಳಲ್ಲಿ ಬಡ ಮಕ್ಕಳಿಗೆ ಅನ್ನದಾನ
  • ಪಲಿಮಾರಿನಲ್ಲಿ ರುವ ಯೋಗ ದೀಪಿಕಾ ಶಾಲೆಯಲ್ಲಿ 70 ವಿದ್ಯಾರ್ಥಿಗಳಿಗೆ ಜ್ಯೋತಿಷ್ಯ, ಆಗಮ, ಪೌರೋಹಿತ್ಯ ಕಲಿಕೆಗೆ ಅವಕಾಶ
  • ಮಠದಲ್ಲಿ 100 ವಿದ್ಯಾರ್ಥಿಗಳಿಗೆ ವೇದಾಧ್ಯಯನ ಅವಕಾಶ
ಇಷ್ಟಕ್ಕೂ ಪರ್ಯಾಯ ಎಂದರೇನು ?

ಉಡುಪಿ ಕೃಷ್ಣ ದೇವಸ್ಥಾನ ಅಥವಾ ಕೃಷ್ಣ ಮಠದ ಸುತ್ತಲೂ 8 ಮಠಗಳಿವೆ. (ಪಲಿಮಾರು, ಅದಮಾರು, ಕೃಷ್ಣಾಪುರ, ಪುತ್ತಿಗೆ, ಶಿರೂರು, ಸೋದೆ, ಕಾಣಿಯೂರು, ಪೇಜಾವರ) ದೇವಸ್ಥಾನದ ಕೃಷ್ಣ ಮೂರ್ತಿಯನ್ನು ಅಷ್ಠಮಠದವರ ಹೊರತಾಗಿ ಇತರರು ಮುಟ್ಟುವಂತಿಲ್ಲ. ಮಹಾಪೂಜೆ ಮಾಡುವಂತಿಲ್ಲ. ಪ್ರತಿಮಠದವರಿಗೂ ಕೃಷ್ಣ ಪೂಜೆಗೆ ಎರಡು ವರ್ಷಗಳ ಅವಧಿಯನ್ನು ನಿಗದಿಪಡಿಸಲಾಗಿದೆ. ಆ ಪ್ರಕಾರ ಪೂಜಾ ಅಧಿಕಾರ ಹಸ್ತಾಂತರ ಕಾರ್ಯಕ್ರಮವನ್ನು ಪರ್ಯಾಯೋತ್ಸವ ಎಂದು ಕೃಷ್ಣ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಪ್ರಸ್ತುತ ಕೃಷ್ಣ ಪೂಜಾ ಅಧಿಕಾರ ವಹಿಸಿಕೊಳ್ಳಲಿರುವ ವಿದ್ಯಾಧೀಶ ಸ್ವಾಮೀಜಿ ಜನಿಸಿದ್ದು 1955ರಲ್ಲಿ . ಅದಮಾರು ಮಠದ ವಿಭುದೇಶ ತೀರ್ಥ ಸ್ವಾಮೀಜಿಗಳಿಂದ 1979ರಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ವಿದ್ಯಾಧೀಶರು ಪಲಿಮಾರು ಮಠದ 30ನೇ ಮಠಾಧೀಶ. ಪಲಿಮಾರು ಮಠದ ಮೂಲ ಸ್ವಾಮೀಜಿ ಹೃಷಿಕೇಶ ತೀರ್ಥರು. ಮಧ್ವಾಚಾರ್ಯರ ಶಿಷ್ಯ. ‘ಸಂಪ್ರದಾಯ ಪದ್ಧತಿ’ ಕೃತಿ ಹೃಷಿಕೇಶ ತೀರ್ಥರದೇ. ಮಧ್ವಾಚಾರ್ಯರ ಕೃತಿಗಳ ಭಾಷಾಂತರಗಳನ್ನು ಮಾಡಿದ ಅಗ್ಗಳಿಕೆಯೂ ಅವರದೇ.

28ನೇ ಮಠಾಧೀಶರಾಗಿದ್ದ ರಘುಮಾನ್ಯ ತೀರ್ಥರು ಪಲಿಮಾರು ಊರಿನಲ್ಲಿ ಸುಧಾರಣೆಗಳನ್ನು ತಂದು ಜನಪ್ರಿಯರಾಗಿದ್ದರು. ಶಾಲೆ, ಮೆಡಿಕಲ್‌ ಶಾಪ್‌, ಗ್ರಾಮ ಪಂಚಾಯತ್‌ಗಳು ಊರಿನಲ್ಲಿ ತಲೆಯೆತ್ತಲು ಸಹಾಯ ಮಾಡಿದವರು. ಶ್ರೀಕೃಷ್ಣ ನಿಗೆ ಚಿನ್ನದ ತೊಟ್ಟಿಲು ಹಾಗೂ 1989ರಲ್ಲಿ ಚಿನ್ನದ ರಥ ಸಮರ್ಪಿಸಿದ ಕೀರ್ತಿ ಮಠದ 29 ನೇ ಸ್ವಾಮೀಜಿ ವಿದ್ಯಾಮಾನ್ಯರಿಗೆ ಸಲ್ಲಬೇಕು. ಈಗ ವಿದ್ಯಾಧೀಶರ ಸರದಿ. ಅವರು ‘ಸುವರ್ಣ ಯುಗ’ ವನ್ನು ಮುಂದುವರಿಸುತ್ತಿದ್ದಾರೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X