ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕು ದಿನಗಳ ಮೈಸೂರುಐಟಿ.ಕಾಂ 2001

By Staff
|
Google Oneindia Kannada News

ಮೈಸೂರು : ಮಾಹಿತಿ ತಂತ್ರಜ್ಞಾನ ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರಬಾರದು. ಅದು ಗ್ರಾಮಾಂತರ ಪ್ರದೇಶದಲ್ಲೂ ತನ್ನ ಛಾಪು ಮೂಡಿಸಬೇಕು ಎಂದು ರಾಜ್ಯ ಪ್ರಾಥಮಿಕ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ವಿಶ್ವನಾಥ್‌ ಹೇಳಿದ್ದಾರೆ.

ಮೈಸೂರಿನಲ್ಲಿ ಗುರುವಾರ ಆರಂಭವಾದ ನಾಲ್ಕು ದಿನಗಳ ಮೈಸೂರುಐಟಿ.ಕಾಂ ಮೇಳದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಗಾಗಿ ರಾಜ್ಯ ಸರಕಾರ ಹಲವು ಕ್ರಮಗಳನ್ನು ಹಾಕಿಕೊಂಡಿದೆ. ಇದರ ಫಲವಾಗಿ ಬೆಂಗಳೂರಿನ ನಂತರ ಮೈಸೂರು ಮಾಹಿತಿ ತಂತ್ರಜ್ಞಾನ ನಗರಿಯಾಗಿ ಹೊರಹೊಮ್ಮಲಿದೆ ಎಂದರು.

ಮೈಸೂರು ನಗರದಲ್ಲಿ ಶಾಶ್ವತವಾದ ಮಾಹಿತಿ ತಂತ್ರಜ್ಞಾನದ ವಸ್ತು ಪ್ರದರ್ಶನ ಕೇಂದ್ರ ಮತ್ತು ಅತ್ಯಾಧುನಿಕ ಮಾಹಿತಿ ಕೇಂದ್ರ ಸ್ಥಾಪಿಸುವಂತೆ ಐ.ಟಿ. ಸಚಿವರಿಗೆ ಸಲಹೆ ನೀಡಿದ ವಿಶ್ವನಾಥ್‌, ಮಾಹಿತಿ ತಂತ್ರಜ್ಞಾನ ಕೇವಲ ನಗರ ಪ್ರದೇಶದ ಸ್ವತ್ತು ಎಂದು ಭಾವಿಸುವುದು ತಪ್ಪು ಎಂದರು.

ಗ್ರಾಮೀಣ ವಿದ್ಯಾರ್ಥಿಗಳೂ ಮಾಹಿತಿ ತಂತ್ರಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಗ್ರಾಮಾಂತರ ಐ.ಟಿ. ಕ್ವಿಜ್‌ ಉತ್ತಮ ಕಾರ್ಯ ಮಾಡಿದೆ ಎಂದು ಪ್ರಶಂಸಿಸಿದರು. ಈ ಸಂಬಂಧ ರಾಜ್ಯ ಸರಕಾರ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಬೇಕು ಎಂಬುದನ್ನು ಅವರು ಸೂಚ್ಯವಾಗಿ ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಮಾಹಿತಿ ತಂತ್ರಜ್ಞಾನ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್‌, ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಬಲಪಡಿಸಲು, ಎಸ್‌.ಎಂ. ಕೃಷ್ಣ ನೇತೃತ್ವದ ಸರಕಾರ ಹಗಲಿರುಳು ಶ್ರಮಿಸುತ್ತಿದೆ ಎಂದರು. ಬೆಂಗಳೂರಿನಿಂದ ಕಳೆದ ವರ್ಷ 7700 ಕೋಟಿ ರುಪಾಯಿ ಸಾಫ್ಟ್‌ವೇರ್‌ ರಫ್ತು ಮಾಡಲಾಗಿದೆ. ರಾಜ್ಯದಲ್ಲಿ ಸಾಫ್ಟ್‌ವೇರ್‌ ಕಂಪನಿಗಳಿಗೆ ವಿಫುಲ ಅವಕಾಶವಿದೆ. 165ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳು ಈ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ ಎಂದೂ ತಿಳಿಸಿದರು.

ಬಾಲಂಗೋಸಿ: ಅಂದಹಾಗೆ ಮೈಸೂರಿನಲ್ಲಿ ವೈಭವದ ಮೈಸೂರಿ ಐಟಿ.ಕಾಂ ನಡೆಯುತ್ತಿದೆ. ದೇಶ-ವಿದೇಶಗಳಿಂದ ಆಗಮಿಸಿರುವ ಕಂಪನಿಗಳು ಮಾಹಿತಿ ತಂತ್ರಜ್ಞಾನ ವಸ್ತು ಪ್ರದರ್ಶನವನ್ನೂ ಏರ್ಪಡಿಸಿವೆ. ಮೈಸೂರು ಐಟಿ.ಕಾಂ ಹಿರಿಮೆಯನ್ನು ಕಾರ್ಯದರ್ಶಿ ಹರ್ಷ ಹಾಗೂ ವೆಂಕಟೇಶ್‌ ಆನಂದದಿಂದ ವಿವರಿಸುತ್ತಿದ್ದಾರೆ.

ಆದರೆ, ನೀವು http://www.mysoreit.com/ ವೆಬ್‌ಸೈಟ್‌ಗೊಮ್ಮೆ ಭೇಟಿ ನೀಡಿದರೆ, ಮಹಾನ್‌ ತಂತ್ರಜ್ಞರ ಕಾರ್ಯವೈಖರಿ ಏನೆಂದು ತಿಳಿದೀತು.. ಈ ವೆಬ್‌ಸೈಟ್‌ ಅಪ್‌ಡೇಟ್‌ ಆಗಿ ತಿಂಗಳುಗಳೇ ಕಳೆದಿವೆ. ಈ ಅಂಶವನ್ನು ಕರ್ನಾಟಕ.ಕಾಂ ಬೆಳಕಿಗೆ ತಂದ ತರುವಾಯ ಏನಿರಬಹುದು ಎಂಬ ಕುತೂಹಲದಿಂದ ಲಾಗ್‌ ಮಾಡಲಾಯಿತು. ಕಾಣಿಸಿದ್ದು You are not authorized to view this page.

ಅರೆರೆರೆ ! ನಮ್ಮ ಸರ್ವರ್‌ನಲ್ಲೇ ಏನೋ ದೋಷ ಇರಬೇಕು ಎಂದಂದುಕೊಂಡು yahoo search ಗೆ ಭೇಟಿ ಕೊಟ್ಟರೆ ಇದು ಉತ್ತರ : MYSOREIT.COM COMING SOON !!! Close

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X