• search

ಪಾಲಿಕೆ ಚುನಾವಣೆ : ಮತಗಟ್ಟೆ ಅಪಹರಣ, ಲಾಠಿ ಪ್ರಹಾರ, ಘರ್ಷಣೆ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು : ಕೆಂಪಾಪುರ ಅಗ್ರಹಾರದಲ್ಲಿ ರೊಚ್ಚಿಗೆದ್ದ ಮತದಾರರಿಂದ ಕಲ್ಲು ತೂರಾಟ, ಪೊಲೀಸರಿಂದ ಲಾಠಿ ಪ್ರಹಾರ, ಗಾಯತ್ರಿನಗರ, ವೈಯಾಲಿಕಾವಲ್‌ನಲ್ಲಿ ಮತಗಟ್ಟೆ ಅಪಹರಣ, ಹಲವೆಡೆ ಗುಂಪು ಘರ್ಷಣೆ, ವ್ಯಾಪಕ ನಕಲಿ ಮತದಾನ, ನೂರಾರು ಜನರ ಬಂಧನ ಇದಿಷ್ಟೂ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ - ಮತದಾನದ ದಿನದ ಮುಖ್ಯಾಂಶಗಳು.

    ಭಾನುವಾರ ಬೆಳಗ್ಗೆ 7 ಗಂಟೆಗೆ ಶಾಂತಿಯುತವಾಗೇ ಮತದಾನ ಆರಂಭವಾದರೂ, ಮತದಾನ ಆರಂಭಗೊಂಡ ಕೇವಲ 1 ಗಂಟೆಯ ಅವಧಿಯಲ್ಲೇ ಮತಪೆಟ್ಟಿಗೆ ಅಪಹರಣ, ಕಲ್ಲು ತೂರಾಟ, ಅಕ್ರಮ ಮತದಾನ, ನಕಲಿ ಮತದಾನ, ಧರಣಿ, ಗುಂಪು ಘರ್ಷಣೆ ಮೊದಲಾದ ಅಹಿತಕರ ಘಟನೆಗಳು ನಡೆದವು. ಈ ಹಿನ್ನೆಲೆಯಲ್ಲಿ 20 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಆದೇಶಿಸಲಾಗಿದೆ.

    ಗಾಯತ್ರಿನಗರದ ಮತಗಟ್ಟೆ ಸಂಖ್ಯೆ 111ಕ್ಕೆ ನುಗ್ಗಿದ ದುಷ್ಕರ್ಮಿಗಳು ಚುನಾವಣಾಧಿಕಾರಿಯನ್ನು ಥಳಿಸಿ, ಮತಪೆಟ್ಟಿಗೆ ಅಪಹರಿಸಿ, 140 ಮತಪತ್ರ ತೆಗೆದುಕೊಂಡು, ಮತಪೆಟ್ಟಿಗೆಯನ್ನು ಚರಂಡಿಯಲ್ಲಿ ಎಸೆದು ಪರಾರಿಯಾಗಿದ್ದರೆ, ಅರಮನೆ ನಗರದ 8 ಮತ್ತು 9ನೇ ಮತಗಟ್ಟೆಗೆ ನುಗ್ಗಿದ 50 ಮಂದಿ ದುಷ್ಕರ್ಮಿಗಳು ಮತಪೆಟ್ಟಿಗೆ ಅಪಹರಿಸಿ, ಮತಪತ್ರಗಳಿಗೆ ಬೆಂಕಿಹಚ್ಚಿದ ಘಟನೆಯೂ ನಡೆಯಿತು.

    ಈ ಮಧ್ಯೆ ಸ್ಥಳೀಯ ಶಾಸಕರು ಟ್ಯಾನರಿ ರಸ್ತೆಯಿಂದ ನೂರಾರು ಹೆಂಗಸರನ್ನು ಕರೆತಂದು ನಕಲಿ ಮತದಾನ ಮಾಡಿಸುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ರೂಪಿಣಿ ಅರೋಪಿಸಿದ ಹಿನ್ನೆಲೆಯಲ್ಲಿ ಕೆಲಕಾಲ ಮತದಾನ ಸ್ಥಗಿತಗೊಂಡಿತ್ತು.

    91 ಜನರ ಬಂಧನ : ನಗರದ ವಿವಿಧ ವಾರ್ಡ್‌ಗಳಲ್ಲಿ ನಕಲಿ ಮತದಾನ ಮಾಡಲು ಯತ್ನಿಸಿದ 91ಜನರನ್ನು ಬಂಧಿಸಲಾಗಿದೆ. ಪೊಲೀಸರು ನಕಲಿ ಮತದಾನ ಪ್ರಯತ್ನಗಳನ್ನು ವಿಫಲಗೊಳಿಸಿದ್ದು, ಒಂದೆರಡು ಮತಕೇಂದ್ರಗಳನ್ನು ಬಿಟ್ಟು ಉಳಿದಂತೆ ಶಾಂತಿಯುತವಾಗಿ ಮತದಾನ ನಡೆದಿದೆ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಎಚ್‌.ಟಿ. ಸಾಂಗ್ಲಿಯಾನ ತಿಳಿಸಿದ್ದಾರೆ. ಮದ್ಯ ಸಾಗಿಸುತ್ತಿದ್ದ ವಾಹನವೊಂದನ್ನೂ ಸಹ ವಶಪಡಿಸಿಕೊಂಡಿರುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.

    ಲಾಠಿ ಪ್ರಹಾರ : ಕೆಂಪಾಪುರ ಅಗ್ರಹಾರದಲ್ಲಿ ನೂರಾರು ಜನರ ಹೆಸರು ಮತಪಟ್ಟಿಯಿಂದ ಬಿಟ್ಟು ಹೋಗಿದ್ದು, ರೊಚ್ಚಿಗೆದ್ದ ಜನರು ಕಲ್ಲುತೂರಾಟದಲ್ಲಿ ತೊಡಗಿದಾಗ, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಇಲ್ಲಿ ಮತದಾನವನ್ನು ರದ್ದುಪಡಿಸಲಾಗಿದೆ.

    ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿ ರಶ್ಮೀ ಅವರು ಸ್ಥಳಕ್ಕೆ ಭೇಟಿ ನೀಡಿ ನಾಗರಿಕರ ಅಹವಾಲನ್ನು ಆಲಿಸಿದರು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬೆಂಗಳೂರಿಗೆ ಶೋಭೆ ತರುವುದಿಲ್ಲ : ತಿಲಕನಗರ, ಗುಟ್ಟಹಳ್ಳಿ, ಮಹಾಲಕ್ಷ್ಮೀ ಬಡಾವಣೆಯಲ್ಲಿ ನಕಲಿ ಮತದಾನವಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಮತಗಟ್ಟೆ ಅಪಹರಣ ಹಾಗೂ ನಕಲಿ ಮತದಾನ ವಿರೋಧಿಸಿ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ನೇತೃತ್ವದಲ್ಲಿ ಧರಣಿಯನ್ನೂ ನಡೆಸಲಾಯಿತು.

    ಗಾಯತ್ರಿನಗರ, ವೈಯಾಲಿಕಾವಲ್‌ನಲ್ಲಿ ಮತಪೆಟ್ಟಿಗೆ ಅಪಹರಿಸಿದ ಪ್ರಕರಣವನ್ನು ಖಂಡಿಸಿದ ಶಾಸಕ ಸುರೇಶ್‌ ಕುಮಾರ್‌ ಬೆಂಗಳೂರಿನಂತಹ ಶಾಂತಿಪ್ರಿಯರ ನಗರಿಗೆ ಇಂಥ ಪ್ರಕರಣಗಳು ಖಂಡಿತಾ ಶೋಭೆ ತರುವುದಿಲ್ಲ ಎಂದು ಹೇಳಿದರು.

    ಶೇ.50 ಮತದಾನ : ಸಂಜೆ 4ಗಂಟೆ ವೇಳೆಗೆ ಬೆಂಗಳೂರಿನಲ್ಲಿ ಸರಾಸರಿ 50ರಷ್ಟು ಮತದಾನವಾಗಿದೆ. ನಿರಸವಾಗಿ ಆರಂಭವಾದ ಮತದಾನ ಮಧ್ಯಾಹ್ನದ ನಂತರ ಚುರುಕುಗೊಂಡಿತ್ತು. ಹಲವು ವಾರ್ಡ್‌ಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಗುಂಪು ಘರ್ಷಣೆಗಳು ನಡೆದ ವರದಿಗಳು ಬಂದಿವೆ.

    (ಇನ್‌ಫೋ ವರದಿ)
    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more