ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಾಥನಾದ ಮಲ್ಲಿನಾಥ !

By Super
|
Google Oneindia Kannada News

ಬೆಂಗಳೂರು : ಮಲ್ಲಿನಾಥ ಪುರಾಣ, ರಾಮಾಯಣವನ್ನು ರಚಿಸಿ, ಅಭಿನವ ಪಂಪ ಎಂದೇ ಹೆಸರಾಗಿದ್ದ, ಕಲಾರಾಧಕ ಕವಿ ನಾಗಚಂದ್ರ ಬಿಜಾಪುರದಲ್ಲಿ ಕಟ್ಟಿಸಿದ ಸುಮಾರು 900 ವರ್ಷಗಳಷ್ಟು ಪುರಾತನವಾದ ಮಲ್ಲಿನಾಥ ದೇವಾಲಯ ಇಂದು ಅವಸಾನದ ಅಂಚಿನಲ್ಲಿದೆ.

ದೇವಳದ ಸ್ಥಿತಿ ಶೋಚನೀಯವಾಗಿದೆ. ಸುಮಾರು 200 ಅಡಿ ಉದ್ದಗಲದ ಮಲ್ಲಿನಾಥ ದೇವಾಲಯ ದಿಕ್ಕುಕಾಣದೆ ಅನಾಥವಾಗಿದೆ. ಮೂರು ಗರ್ಭಗೃಹಗಳ ಮೂಲ ಸ್ವರೂಪಕ್ಕೆ ಚ್ಯುತಿಯಾಗಿದೆ. ಆವರಣ ಗೋಡೆಗಳಲ್ಲಿನ ಶಿಲ್ಪಕಲಾ ಸೌಂದರ್ಯ ನಾಶವಾಗುತ್ತಿದೆ. ಅಂದು ಅತ್ಯಂತ ವೈಭವದಿಂದ ಕೂಡಿ ಮೆರೆದ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸುವ ಹೂನ್ನಾರ ನಡೆದ ಹಿನ್ನೆಲೆಯಲ್ಲಿ ಮೇಲಂತಸ್ತಿನ ಗುಡಿ-ಗೋಪುರ ಕೆಡವಲಾಗಿದೆ.

ತ್ರಿಕೂಟ ಮಂದಿರಕ್ಕೆ ಮಂಕುಕವಿದಿದೆ. ಜಿನಬಿಂಬಗಳು, ಯಕ್ಷ, ಯಕ್ಷಿಣಿ, ಕಿನ್ನರರ ವಿಗ್ರಹಗಳು, ಭಿತ್ತಿ - ವಿತಾನಗಳ ಅಲಂಕರಣಗಳೇ ಮೊದಲಾದ ಅತ್ಯಮೂಲ್ಯ ಶಿಲ್ಪಕಲಾ ಪ್ರತಿಮೆಗಳನ್ನು ನಾಶಮಾಡಲಾಗಿದೆ. ದೇವಳದ ವಿಗ್ರಹಗಳನ್ನು ಕಿತ್ತೆಸಲಾಗಿದೆ.

ಗೋಳಗುಮ್ಮಟ, ಇಬ್ರಾಹಿಂ ರೋಜ, ಬಾರಹಕಮಾನ್‌ ಮುಂತಾದ ಐತಿಹಾಸಿಕ ಕುರುಹುಗಳನ್ನು ಕೊಂಡಾಡುವ ಜನ, ನಮ್ಮ ಆದಿಕವಿ ಪಂಪನ ವಂಶಜನಾದ ನಾಗಚಂದ್ರ ಕಟ್ಟಿಸಿದ ಗುಡಿಯನ್ನು ಕಡೆಗಣಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಎಲ್ಲ ವಿಷಯವನ್ನೂ ಸಂಶೋಧಕಿ ಪ್ರೊ. ಕಮಲಾ ಹಂಪನಾ ವಿವರಿಸಿದರು.

ಒತ್ತಾಯ: ಇತಿಹಾಸ ಪ್ರಸಿದ್ಧವಾದ ಈ ದೇವಾಲಯವನ್ನು ಕೂಡ ಬಿಜಾಪುರದ ಇತರ ಪ್ರವಾಸಿತಾಣಗಳ ಜೊತೆಗೆ ಪ್ರವಾಸಿಗರಿಗೆ ತೋರಿಸಬೇಕು, ಮಲ್ಲಿನಾಥ ದೇಗುಲದ ಹಿರಿಮೆ ಸಾರಬೇಕು, ದೇವಾಲಯ ಹಾಗೂ ನಾಗಚಂದ್ರನ ಕುರಿತ ಮಾಹಿತಿಗಳ ಕರಪತ್ರ ಹಂಚಬೇಕು, ಕೇಂದ್ರ ಸರಕಾರದ ಪುರಾತತ್ವ ಇಲಾಖೆ ದೇಗುಲದ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಬೇಕು.

ಕನ್ನಡ ಸಾಹಿತ್ಯ ಪರಿಷತ್ತು ಪ್ರತಿವರ್ಷ ಮೂರು ದಿನಗಳ ಕಾಲ ನಾಗಚಂದ್ರನ ಬಗ್ಗೆ ವಿಚಾರ ಸಂಕಿರಣ ನಡೆಸಬೇಕು, ರಾಜ್ಯ ಸರಕಾರ ಮಲ್ಲಿನಾಥ ದೇವಾಲಯದ ರಕ್ಷಣೆಗೆ ಗಮನಹರಿಸಬೇಕು, ಬಿಜಾಪುರ ಮಾರ್ಗವಾಗಿ ಚಲಿಸುವ ರೈಲಿಗೆ ಕವಿ ನಾಗಚಂದ್ರನ ಹೆಸರಿಡಲು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಅವರು ಒತ್ತಾಯಿಸಿದರು.

ದೇವಾಲಯದ ಹತ್ತಿರ ಇರುವ ವೃತ್ತಕ್ಕೆ ನಾಗಚಂದ್ರ ವೃತ್ತ ಎಂದು ನಾಮಕರಣ ಮಾಡಬೇಕು. ವೃತ್ತದ ಮಧ್ಯೆ ಕವಿಯ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕು. ಪೀಠದಲ್ಲಿ ನಾಗಚಂದ್ರನ ಬಗ್ಗೆ ಮಾಹಿತಿ ಒದಗಿಸುವ ಫಲಕ ಹಾಕಬೇಕು ಎಂದು ಕಮಲಾ ಹಂಪನಾ ಒತ್ತಾಯಿಸಿದರು.

English summary
900 years old Bijapur mallinatha temple built by Nagachandra is in ruins
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X