• search

ಜಂಬೂಸವಾರಿ ಇಲ್ಲ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಮೈಸೂರು : ವಿಜಯನಗರದ ಅರಸರ ಕೊಡುಗೆಯಾಗಿ ಮೈಸೂರು ನಾಡಿಗೆ ಬಂದ ದಸರೆ, ನಮ್ಮ ಸಂಸ್ಕೃತಿಯ ಪ್ರತೀಕ. ದಸರಾ ಕನ್ನಡಿಗರ ನಾಡಹಬ್ಬ. ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದ ದಸರೆಗೆ ಈ ಬಾರಿ ಬರದ ಕಾರ್ಮೋಡ ಕವಿದಿದೆ. ವಿಜಯೋತ್ಸವದ ಪ್ರತೀಕವಾದ ಜಂಬೂಸವಾರಿ ರದ್ದಾಗಿದೆ.

    ಭೀಕರ ಬರದಿಂದ ರಾಜ್ಯ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರ ಕೈಗೊಂಡಿದೆ. ಅದ್ಧೂರಿಯ ಮೆರವಣಿಗೆಯನ್ನು ಕೈಬಿಟ್ಟು, ಸರಳವಾಗಿ ನಾಡಹಬ್ಬ ಆಚರಿಸಲು ತೀರ್ಮಾನಿಸಲಾಗಿದೆ. ಈ ವಿಷಯವನ್ನು ರಾಜ್ಯ ಸಂಸ್ಕೃತಿ ಸಚಿವೆ ರಾಣಿ ಸತೀಶ್‌ ಮೈಸೂರಿನಲ್ಲಿ ತಿಳಿಸಿದ್ದಾರೆ.

    ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ರಾಜ್ಯದ ಜನತೆ ಬರದಿಂದ ಕುಡಿಯುವ ನೀರಿಗೂ ಹಾಹಾಕಾರ ಪಡುತ್ತಿರುವಾಗ ವೈಭವದ ಮೆರವಣಿಗೆ ನಡೆಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

    ಸಂಪ್ರದಾಯಕ್ಕೆ ಚ್ಯುತಿ ಇಲ್ಲ: ಆದರೆ, ಹಬ್ಬದ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಅತ್ಯಂತ ಸರಳ ದಸರೆ ಆಚರಿಸಲಾಗುವುದು. ಚಾಮುಂಡೇಶ್ವರಿ ತಾಯಿಗೆ ಸಾಂಪ್ರದಾಯಿಕ ಪೂಜೆಯ ಮೂಲಕ ಹಬ್ಬ ನಡೆಯಲಿದೆ ಎಂದರು. ಸ್ತಬ್ಧ ಚಿತ್ರಗಳು, ಮೆರವಣಿಗೆ, ಜಂಬೂಸವಾರಿ, ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಬಿಡಲಾಗಿದೆ ಎಂದು ಅವರು ಹೇಳಿದರು.

    ವಸ್ತು ಪ್ರದರ್ಶನ : ಬನ್ನಿಮಂಟಪದ ಬಳಿ ನಡೆಸಲಾಗುತ್ತಿದ್ದ ಪಂಜಿನ ಮೆರವಣಿಗೆಯನ್ನೂ ಈ ಬಾರಿ ರದ್ದು ಮಾಡಲಾಗಿದೆ. ಆದರೆ, ಜನರ ನಂಬಿಕೆಗೆ ಧಕ್ಕೆ ಬಾರದಂತೆ, ಮುಜುಗರಕ್ಕೆ ಆಸ್ಪದ ನೀಡದಂತೆ ಹಬ್ಬ ಆಚರಿಸಲಾಗುವುದು ಎಂದರು. 65 ದಿನಗಳ ಕಾಲ ನಡೆಯುವ ದಸರಾ ವಸ್ತು ಪ್ರದರ್ಶನಕ್ಕೆ ಟೆಂಡರ್‌ ಕರೆಯಲಾಗಿದೆ. ಆದರೆ, ಪ್ರದರ್ಶನ ನಡೆಸಬೇಕೆ ಬೇಡವೆ ಎಂಬುದನ್ನು ಮುಖ್ಯಮಂತ್ರಿ ಹಾಗೂ ದಸರಾ ವಸ್ತು ಪ್ರದರ್ಶನ ಸಮಿತಿಯಾಂದಿಗೆ ಸಮಾಲೋಚಿಸಿದ ಬಳಿಕ ನಿರ್ಧರಿಸಲಾಗುವುದು ಎಂದರು.

    ಕಳೆದ ವರ್ಷ ದಸರೆ ಉತ್ಸವಕ್ಕೆ 75 ಲಕ್ಷರುಪಾಯಿ ಬಿಡುಗಡೆ ಮಾಡಲಾಗಿತ್ತು. ಈ ಬಾರಿ ಸರಳ ದಸರೆಗೆ 30 ಲಕ್ಷ ಮಂಜೂರು ಮಾಡಲಾಗಿದೆ. ಈ ಪೈಕಿ 20 ಲಕ್ಷ ರುಪಾಯಿ ಬಿಡುಗಡೆ ಮಾಡಲಾಗಿದೆ. ಇದರಲ್ಲೂ ಹಣ ಉಳಿಸಿ, ಬರ ಕಾಮಗಾರಿಗೆ ಬಳಸಲಾಗುವುದು ಎಂದರು.

    ಇತಿಹಾಸ : ವಿಜಯನಗರ ಅರಸರ ಮೂಲಕ 1610ರಿಂದ ದಸರಾ ಆಚರಣೆಗೆ ಬಂದ ಈ ಇತಿಹಾಸ ಪ್ರಸಿದ್ಧ ಉತ್ಸವವನ್ನು ಮೈಸೂರು ಒಡೆಯರು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬಂದರು. 1975ರಿಂದ ಈಚೆಗೆ ದಸರಾ ನಾಡಹಬ್ಬವಾಗಿ ಕರ್ನಾಟಕ ಸರಕಾರದ ವತಿಯಿಂದ ಆಚರಿಸಲಾಗುತ್ತಿದೆ.

    ಆದರೆ, ಅದೇಕೋ ಕಳೆದ ನಾಲ್ಕಾರು ವರ್ಷದಿಂದ ದಸರೆಯ ಉತ್ಸವಕ್ಕೆ ಒಂದಿಲ್ಲಾ ಒಂದು ಅಡ್ಡಿ ಆತಂಕಗಳು ಬಂದೇ ಬರುತ್ತಿವೆ. ಕಳೆದ ವರ್ಷ ರಾಜ್‌ ಅಪಹರಣದ ಹಿನ್ನೆಲೆಯಲ್ಲಿ ದಸರಾ ಉತ್ಸವ ಕಳಾಹೀನವಾಗಿದ್ದರೆ, ಅದರ ಹಿಂದಿನ ವರ್ಷ ಒರಿಸ್ಸಾ ಚಂಡಮಾರುತದ ಹಿನ್ನೆಲೆಯಲ್ಲಿ ಅಂತಹ ಆಡಂಬರ ಇಲ್ಲದೆ ದಸರೆ ಆಚರಿಸಲಾಗಿತ್ತು. ಈಬಾರಿ ದಸರೆಯ ಮೇಲೆ ಬರದ ಕಾರ್ಮೋಡ.

    ವಾರ್ತಾ ಸಂಚಯ

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more