ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗದ ರೈತ ಫ್ರಾನ್ಸಿಸ್‌ಗೆ ರಾಜೀವ್‌ಗಾಂಧಿ ಏಕತಾ ಪ್ರಶಸ್ತಿ

By Staff
|
Google Oneindia Kannada News

ಶಿವಮೊಗ್ಗ : ಕಳೆದ 50 ವರ್ಷಗಳಿಂದ ರಾಷ್ಟ್ರೀಯ ಭಾವೈಕ್ಯತೆ ವೃದ್ಧಿಗೆ ಶ್ರಮಿಸುತ್ತಿರುವ ಜಿಲ್ಲೆಯ ಕೃಷಿಕ ಎಸ್‌ . ಪಿ. ಫ್ರಾನ್ಸಿಸ್‌ ಅವರನ್ನು 2001 ವರ್ಷದ ಪ್ರತಿಷ್ಠಿತ ರಾಜೀವ ಗಾಂಧಿ ರಾಷ್ಟ್ರೀಯ ಏಕತಾ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ.

ದೆಹಲಿಯಲ್ಲಿ ಆಗಸ್ಟ್‌ 20ರಂದು ನಡೆವ ರಾಜೀವ ಗಾಂಧಿ ಜಯಂತಿ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಾಷ್ಟ್ರೀಯ ಏಕತೆ, ಭಾವೈಕ್ಯತೆ ಮತ್ತು ಸೋದರತ್ವವನ್ನು ವೃದ್ಧಿಸುವ ಉದ್ದೇಶದೊಂದಿಗೆ ಈ ಪ್ರಶಸ್ತಿಯನ್ನು ಸ್ವಾವಲಂಬಿ ಸಂಘಟನೆಯಾಗಿರುವ ರಾಷ್ಟ್ರೀಯ ಏಕತಾ ಕಾನ್ಫರೆನ್ಸ್‌ ನೀಡುತ್ತಿದೆ.

ಶಿವಮೊಗ್ಗದ ಬೀರನಹಳ್ಳಿಯಲ್ಲಿ ರೈತರಾಗಿರುವ ಫ್ರಾನ್ಸಿಸ್‌, ಸ್ವಾತಂತ್ರ್ಯ ಸಿಕ್ಕಾಗ 11 ವರ್ಷದ ಬಾಲಕ. ಬಿ.ಎ. ಪದವಿಯಾಂದಿಗೆ ಕಡಿದಾಳ್‌ ಮಂಜಪ್ಪ, ಎ. ಆರ್‌. ಬದ್ರಿನಾರಾಯಣ, ಕೆಂಗಲ್‌ ಹನುಮಂತಯ್ಯ ಮತ್ತು ಎಚ್‌. ಸಿದ್ಧಯ್ಯರಂತಹ ಹಿರಿಯರೊಂದಿಗೆ ಸಮಾಜಸೇವೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡರು.

1954ರಲ್ಲಿ ಮೈಸೂರು ವಿಶ್ವವಿದ್ಯಾಲಯ ಆಯೋಜಿಸಿದ ಯುನೆಸ್ಕೋದ ಬಡತನ ನಿವಾರಣಾ ಕಾರ್ಯಕ್ರಮದಲ್ಲಿ ಫ್ರಾನ್ಸಿಸ್‌ ಸದಸ್ಯರಾಗಿದ್ದರು. ಆಚಾರ್ಯ ವಿನೋಬಾ ಭಾವೆಯವರ ಕಟ್ಟಾ ಅನುಯಾಯಿಯಾಗಿದ್ದ ಅವರು ಎಣ್ಣೆಕೊಪ್ಪದ ಮಲ್ಲಿಕಾರ್ಜುನ ಗೌಡರ ಜೊತೆಗೂ ಸಮಾಜಸೇವೆಯನ್ನು ಹಚ್ಚಿಕೊಂಡವರು. ಕಾಂಗ್ರೆಸ್‌ನ ಸೇವಾದಳ ಶಾಖೆಯ ಸಕ್ರಿಯ ಸದಸ್ಯರಾಗಿ ಇಂದಿಗೂ ಫ್ರಾನ್ಸಿಸ್‌ ಗುರುತಿಸಿಕೊಂಡಿದ್ದಾರೆ.

ಭಾಷಾ ಅಲ್ಪಸಂಖ್ಯಾತರಿಗೆ ನೆರವು ನೀಡುವ ತಮ್ಮ ಯೋಜನೆಯಡಿಯಲ್ಲಿ ತಮಿಳು ಶಾಲೆಗಳ ಆರಂಭ, ಉಚಿತ ಕಣ್ಣು ಚಿಕಿತ್ಸೆ ಶಿಬಿರಗಳ ಸಂಯೋಜನೆ, ದೂರದರ್ಶನ ಮತ್ತು ಆಕಾಶವಾಣಿ ಸೌಲಭ್ಯಗಳಿಗಾಗಿ ಹೋರಾಡುತ್ತಿದ್ದ ಉತ್ತರ ಕರ್ನಾಟಕದ ಕನ್ನಡಿಗರಿಗೆ ಬೆಂಬಲ...ಹೀಗೆ ಫ್ರಾನ್ಸಿಸ್‌ ಸಮಾಜ ಸೇವೆಯನ್ನೆ ಬದುಕಿನ ಪ್ರವೃತ್ತಿಯನ್ನಾಗಿಸಿಕೊಂಡವರು.

ಪ್ರಸ್ತುತ ಬೆಂಗಳೂರು ನಿವಾಸಿಯಾಗಿರುವ ಇವರು ಸಣ್ಣ ಕೈಗಾರಿಕೆಯಾಂದನ್ನೂ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಈವರೆಗೆ ಐವರು ಗಣ್ಯರು ರಾಜೀವ ಗಾಂಧಿ ಏಕತಾ ಪ್ರಶಸ್ತಿ ಪಡೆದಿದ್ದು, ನ್ಯಾಯಮೂರ್ತಿ ಸಲ್ಡಾನಾ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ, ಬಾಹ್ಯಾಕಾಶ ವಿಜ್ಞಾನಿ ಯು.ಆರ್‌. ರಾವ್‌ ಮತ್ತು ಸೇನಾ ಮುಖ್ಯಸ್ಥ ಜನರಲ್‌ ಕಾರಿಯಪ್ಪ ಅವರ ಸಾಲಿಗೆ ಈಗ ಫ್ರಾನ್ಸಿಸ್‌ ಹೆಸರೂ ಸೇರ್ಪಡೆಯಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X