ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಡಿಬಂಡೆಯ ಬಳಿಯಾಂದುಗುಡವಿಯಂತಹ ಪಕ್ಷಿಧಾಮ

By Staff
|
Google Oneindia Kannada News

ಕೋಲಾರ : ಹಾರುವ ಹಕ್ಕಿಗೆ ಎಲ್ಲಿ ಮನೆ? ಕರ್ನಾಟಕಕ್ಕಿಂತ ಮತ್ತೊಂದು ಮನೆ ಬೇಕೆ? ಕರ್ನಾಟಕ ಪಕ್ಷಿಗಳ ಸ್ವರ್ಗ. ಇಲ್ಲಿನ ಹವಾಮಾನ ದೇಶ - ವಿದೇಶದ ಹಕ್ಕಿಗಳನ್ನೂ ಆಕರ್ಷಿಸುತ್ತಿದೆ. ಹೀಗಾಗೇ ರಾಜ್ಯದಲ್ಲಿ ಪಕ್ಷಿಧಾಮಗಳ ಸಂಖ್ಯೆಯೂ ಹೆಚ್ಚುತ್ತಿದೆ. ರಂಗನತಿಟ್ಟು, ಕಗ್ಗಲಡು, ಗುಡವಿ, ಮಂಡಗದ್ದೆ, ಧಾರವಾಡ ಬಳಿಯ ಬೇಲೂರು, ಕೊಕ್ಕರೆ ಬೆಳ್ಳೂರುಗಳ ಸಾಲಿಗೆ ಗುಡಿಬಂಡೆ ಬಳಿಯ ವೀರಾಪುರಂ ಸಹ ಸೇರಿದೆ.

ಆಂಧ್ರಪ್ರದೇಶದ ಗಡಿಯಲ್ಲಿರುವ ಗುಡಿಬಂಡೆ ತಾಲೂಕಿನ ವೀರಾಪುರಂನ ಪ್ರಶಾಂತ ಪರಿಸರದಲ್ಲಿ ಈ ಹೊತ್ತು ನೂರಾರು ಹಕ್ಕಿಗಳು ಬೀಡುಬಿಟ್ಟಿವೆ. ಸುಮಾರು 500ರಿಂದ 600 ಜನಸಂಖ್ಯೆ ಇರುವ ಪುಟ್ಟಗ್ರಾಮದ ಸಹೃದಯೀ ನಾಗರಿಕರೂ ಈ ಹಕ್ಕಿಗಳ ಸಂರಕ್ಷಣೆಯಲ್ಲಿ ನಿರತರಾಗಿದ್ದಾರೆ.

ಸೈಬೀರಿಯಾದಿಂದ ಈ ಪಕ್ಷಿಗಳು ಬರುತ್ತವೆ ಎಂಬುದು ಇಲ್ಲಿನ ಗ್ರಾಮಸ್ಥರ ಅನಿಸಿಕೆ. ಎರಡರಿಂದ ಮೂರು ಅಡಿ ಎತ್ತರ, ಎರಡೆರಡು ಅಡಿ ಅಗಲದ ರೆಕ್ಕೆಗಳು, ಬಿಳಿ, ಹಳದಿ ಮತ್ತು ಕೆಂಪು ಬಣ್ಣದಿಂದ ಕೂಡಿದ ಕುತ್ತಿಗೆ, ಬಿಳಿ ಬಣ್ಣದ ಹೊಟ್ಟೆಯ ಈ ಹಕ್ಕಿಗಳು, ಇಲ್ಲಿಗೆ ವಲಸೆ ಬಂದು, ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿ ಮಾಡಿ ಆರು ತಿಂಗಳ ನಂತರ ತಮ್ಮೂರಿಗೆ ತೆರಳುತ್ತವೆ. ಹೆಚ್ಚೂ ಕಡಿಮೆ 50 - 60 ವರ್ಷಗಳಿಂದಲೂ ಇಲ್ಲಿಗೆ ಹಕ್ಕಿಗಳು ಆಗಮಿಸುತ್ತಿವೆ. ಆದರೆ, ಈಬಾರಿ ಹಕ್ಕಿಗಳ ಸಂಖ್ಯೆ ದುಪ್ಪಟ್ಟಾಗಿದೆ ಎನ್ನುತ್ತಾರೆ ಸ್ಥಳೀಯರು.

ಮಾನವೀಯತೆ ಮೆರೆದ ಗ್ರಾಮಸ್ಥರು : ಈ ಬಾರಿ ಕೋಲಾರ ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದೆ. ಕೆರೆಗಳೆಲ್ಲ ಬತ್ತಿಹೋಗಿವೆ. ಸಾಮಾನ್ಯವಾಗಿ ಸೀಗಡಿ, ಮೀನನ್ನೇ ಆಹಾರವಾಗಿ ಸೇವಿಸುವ ಈ ಹಕ್ಕಿಗಳು, ಆಹಾರಕ್ಕಾಗಿ ದಿನವೂ 200 - 300 ಕಿ.ಮೀಟರ್‌ ಅಲೆಯುತ್ತವೆ.

ಹಕ್ಕಿಗಳ ಸಂಕಟವನ್ನು ನೋಡಲಾರದೆ ವೀರಾಪುರದ ಗ್ರಾಮಸ್ಥರು ತಾವೇ ಮೀನುಗಳನ್ನು ಕೊಂಡು ತಂದು ಹಕ್ಕಿಗಳಿಗೆ ಹಾಗೂ ಅವುಗಳ ಮರಿಗಳಿಗೆ ನೀಡುತ್ತಿದ್ದಾರೆ. ಈ ಪ್ರದೇಶದ 5-6 ಮರಗಳಲ್ಲಿ ಮಾತ್ರ ಗೂಡುಕಟ್ಟಿ 6 ತಿಂಗಳ ಸಂಸಾರ ಮಾಡುವ ಈ ಹಕ್ಕಿಗಳನ್ನು ಇಲ್ಲಿನ ಗ್ರಾಮಸ್ಥರು ತಮ್ಮೂರಿನ ಅತಿಥಿಗಳೆಂದೇ ಪರಿಗಣಿಸುತ್ತಾರೆ.

ಜನವರಿ- ಫೆಬ್ರವರಿಯಲ್ಲಿ ತಮ್ಮ ಸಂಗಾತಿಗಳೊಂದಿಗೆ ಇಲ್ಲಿಗೆ ಆಗಮಿಸುವ ಜೋಡಿ ಹಕ್ಕಿಗಳು, ಜುಲೈ ಮಧ್ಯಭಾಗದವರೆಗೂ ಇಲ್ಲಿರುತ್ತವೆ. ನಮ್ಮೂರನ್ನೇ ಹುಡುಕಿಕೊಂಡು ಬರುವ ಈ ಹಕ್ಕಿಗಳು ನಮ್ಮ ಗೆಳೆಯರು, ಅವುಗಳ ರಕ್ಷಣೆ ನಮ್ಮ ಹೊಣೆ ಎನ್ನುವ ಗ್ರಾಮಸ್ಥರು, ಪಕ್ಷಿಯನ್ನು ಕೊಂದ ವ್ಯಕ್ತಿಯಾಬ್ಬನನ್ನು ಗಂಟೆ ಗಟ್ಟಲೆ ಮರಕ್ಕೆ ಕಟ್ಟಿಹಾಕಲಾಗಿತ್ತು ಎಂಬುದನ್ನು ಸ್ಮರಿಸುತ್ತಾರೆ.

ಈ ಪುಟ್ಟ ಗ್ರಾಮ ಮೂಲಭೂತ ಸೌಲಭ್ಯಗಳಿಂದಲೂ ವಂಚಿತವಾಗಿದೆ. ಶಿಕ್ಷಣ, ವಾಣಿಜ್ಯ ಎಲ್ಲಕ್ಕೂ ಈ ಗ್ರಾಮಸ್ಥರು ಗುಡಿಬಂಡೆಗೇ ಹೋಗಬೇಕು. ಈ ಗ್ರಾಮದ ಬಗ್ಗೆ ಸರಕಾರ ಕೊಂಚ ಮುತುವರ್ಜಿ ವಹಿಸಿದರೂ, ವೀರಾಪುರಂ ಮತ್ತೊಂದು ಗುಡವಿಯೋ, ರಂಗನತಿಟ್ಟೋ ಆಗುತ್ತದೆ, ಗ್ರಾಮವೂ ಅಭಿವೃದ್ಧಿ ಹೊಂದುತ್ತದೆ ಎನ್ನುತ್ತಾರೆ ಗ್ರಾಮದ ಹಿರೀಕರು.

ವಾರ್ತಾ ಸಂಚಯ
ಮುಖಪುಟ / ನೋಡು ಬಾ ನಮ್ಮೂರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X