ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂ.ಇ.ಎಸ್‌. ಕಾಲೇಜು ಅಧ್ಯಕ್ಷಪ್ರೊ. ಎಂ.ಪಿ.ಎಲ್‌. ಶಾಸ್ತ್ರೀ ನಿಧನ

By Staff
|
Google Oneindia Kannada News

ಬೆಂಗಳೂರು : ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮೈಸೂರು ಎಜುಕೇಷನ್‌ ಸೊಸೈಟಿ (ಎಂ.ಇ.ಎಸ್‌) ಅಧ್ಯಕ್ಷ ಹಾಗೂ ಖ್ಯಾತ ಶಿಕ್ಷಣ ತಜ್ಞ ಪ್ರೊ. ಎಂ.ಪಿ.ಎಲ್‌. ಶಾಸ್ತ್ರೀ ಅವರು ಬುಧವಾರ ಬೆಳಗ್ಗೆ ಇಲ್ಲಿ ಹೃದಯಾಘಾತದಿಂದ ನಿಧನರಾದರು.

ಅವರಿಗೆ 93 ವರ್ಷ ವಯಸ್ಸಾಗಿತ್ತು. ಅವರಿಗೆ ಒಬ್ಬ ಮಗ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಎಂ.ಇ.ಎಸ್‌. ಕಾಲೇಜು, ಕಿಶೋರ್‌ ಕೇಂದ್ರ, ಟೀಚರ್ಸ್‌ ಕಾಲೇಜುಗಳೂ ಸೇರಿದಂತೆ ಒಟ್ಟು 12ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಶಾಸ್ತ್ರೀ ಅವರು ವಿದ್ಯಾಸಾಗರ ಗೌರವಕ್ಕೂ ಪಾತ್ರರಾಗಿದ್ದರು.

35 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದ್ದ ಅವರು ದಶಕಗಳ ಕಾಲ ವಿಧಾನಪರಿಷತ್‌ ಸದಸ್ಯರಾಗಿ ಹಾಗೂ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಹಿರಿಯ ಶಿಕ್ಷಣ ತಜ್ಞ ಶಾಸ್ತ್ರೀ ಅವರ ನಿಧನಕ್ಕೆ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಕಂಬನಿ ಮಿಡಿದಿದ್ದಾರೆ. ರಾಜ್ಯ ಒಬ್ಬ ಶ್ರೇಷ್ಠ ವಿದ್ಯಾಸಂಪನ್ನ ಹಾಗೂ ಶಿಕ್ಷಣ ತಜ್ಞರನ್ನು ಕಳೆದುಕೊಂಡಿದೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಅಂತಿಮ ನಮನ: ಶಾಸ್ತ್ರೀ ಅವರ ನಿಧನದ ಸುದ್ದಿ ತಿಳಿದ ರಾಜ್ಯದ ವಾರ್ತಾ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್‌ ಅವರು ಮೃತರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು. ಕಾಂಗ್ರೆಸ್‌ ಮುಖಂಡರಾದ ಬಿ.ಕೆ. ಹರಿಪ್ರಸಾದ್‌, ಎಂ.ಆರ್‌. ಸೀತಾರಾಂ, ವಿರೋಧ ಪಕ್ಷದ ನಾಯಕರಾದ ಕೆ.ಎಚ್‌. ಶ್ರೀನಿವಾಸ್‌, ರಾಮಚಂದ್ರಗೌಡ ಮೊದಲಾದ ಗಣ್ಯರು ಶಾಸ್ತ್ರೀ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಿದರು.

ಎಂ.ಪಿ.ಎಲ್‌. ಶಾಸ್ತ್ರೀ ಅವರ ಬಗ್ಗೆ : ಶಿಕ್ಷಣ ಕ್ಷೇತ್ರದಲ್ಲಿ ಬೃಹದಾಕಾರವಾಗಿ ಬೆಳೆದು, ಸಾವಿರಾರು ಪ್ರತಿಭಾವಂತರನ್ನು ನಾಡಿಗೆ ನೀಡಿದ ಶಾಸ್ತ್ರೀ ಅವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಮುತ್ತೂರಿನಲ್ಲಿ. 1910ರಲ್ಲಿ ಸಂಸ್ಕೃತ ಪಂಡಿತರ ಕುಟುಂಬದಲ್ಲಿ ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಮುಗಿಸಿದರು.

ಹೈಸ್ಕೂಲ್‌ ಹಾಗೂ ಕಾಲೇಜು ವ್ಯಾಸಂಗ ಬೆಂಗಳೂರಿನ ನ್ಯಾಷನಲ್‌ ಹೈಸ್ಕೂಲ್‌ನಲ್ಲಿ ನಡೆಯಿತು. ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಶಿಕ್ಷಣ. ರಾಜನೀತಿ, ಭಾರತೀಯ ಇತಿಹಾಸದ ಆಳ ಅಧ್ಯಯನ. ಆನಂತರ ಪ್ರಾಧ್ಯಾಪಕ ವೃತ್ತಿ.

ಜಿಎಚ್‌ಎಸ್‌ಎಸ್‌ ಹಾಗೂ ಎಂಇಎಸ್‌ ಕಾಲೇಜಿನ ಪ್ರಾಂಶುಪಾಲರಾಗಿ ಸಾವಿರಾರು ವಿದ್ಯಾರ್ಥಿಗಳನ್ನು ಸತ್‌ಪ್ರಜೆಗಳನ್ನಾಗಿ ಹಾಗೂ ವಿದ್ಯಾವಂತರನ್ನಾಗಿ ರೂಪಿಸಿದ ಶಾಸ್ತ್ರೀ ಅವರು ಬೆಂಗಳೂರು ವಿಶ್ವವಿದ್ಯಾಲಯದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಎಂ.ಪಿ.ಎಲ್‌. ಶಾಸ್ತ್ರೀ ಅವರಿಗೆ ಕರ್ನಾಟಕ ಸಂಗೀತ ಎಂದರೆ ಬಲು ಅಚ್ಚುಮೆಚ್ಚು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X