ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗೇನಹಳ್ಳಿಯಾಗೆ ಒಳ್ಳೆಯ ಹುಡುಗರುಹೆಂಡಾವ ಬಿಡಿಸಿದರು

By Staff
|
Google Oneindia Kannada News

ಚಿಕ್ಕಮಗಳೂರು : ಜಿಲ್ಲೆಯ ರಂಗೇನಹಳ್ಳಿ ಗ್ರಾಮದಲ್ಲಿ 18- 25 ವಯಸ್ಸಿನ ಕೆಲ ಮಾದರಿ ಯುವಕರು ಸ್ವ- ಸಹಾಯ ಗುಂಪು ಕಟ್ಟಿಕೊಂಡು, ಹೆಂಡ- ಸಾರಾಯಿ ನಿಷೇಧಿಸಿ, ಸಚ್ಚಾರಿತ್ರ ಹುಟ್ಟುಹಾಕಿ, ಆರ್ಥಿಕವಾಗಿ ಜನರನ್ನು ಸ್ಥಿತಿವಂತರಾಗುವಂತೆ ಮಾಡಿರುವ ಯಶೋಗಾಥೆ ಇದು...

ಸರ್ಕಾರ ಆಯೋಜಿಸಿರುವ ಸ್ವರ್ಣ ಜಯಂತಿ ಗ್ರಾಮ ಸ್ವರಾಜ್ಯ ಯೋಜನೆಯಡಿ ಯುವಕರು ಸ್ವ- ಸಹಾಯ ಸಮೂಹ ಕಟ್ಟಿಕೊಂಡರು. ಗುಂಪಿನ ಪ್ರತಿ ಸದಸ್ಯ ವಾರಕ್ಕೆ 30 ರುಪಾಯಿ ಕೊಡಬೇಕು. ಈ ರೀತಿ ಸದಸ್ಯರು ಸೇರಿಸುವ ಮೊತ್ತ ಆಪದ್ಧನ. ಮದುವೆ ಮೊದಲಾದ ಕಾರ್ಯಗಳಿಗೆ, ಆರೋಗ್ಯ ಇನ್ನಿತರೆ ತುರ್ತು ಪರಿಸ್ಥಿತಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ (ಗರಿಷ್ಠ 3 ಪ್ರತಿಶತ) ಸಾಲ ಕೊಡಲಾಗುವುದು.

ಪ್ರಾಮಾಣಿಕರಿಗೆ ಜೈ, ಕುಡುಕರಿಗೆ ಧಿಕ್ಕಾರ

ಸಂಸ್ಥೆಯ ಗಮನಾರ್ಹ ಅಂಶವೆಂದರೆ ಕುಡಿಯೋ ಮಂದಿಗೆ ಸದಸ್ಯತ್ವ ಕೊಡುವುದಿಲ್ಲ. ಸದಸ್ಯತ್ವ ಪಡೆದ ನಂತರ ಹಾಗೇನಾದರೂ ಮಾಡಿದಲ್ಲಿ ಗುಂಪಿನಿಂದ ಹೊರಹಾಕಲಾಗುತ್ತದೆ. ಮೊನ್ನೆ ಸಂಸ್ಥೆಯ ಸದಸ್ಯನೊಬ್ಬ ಹುಡುಗಿಯಾಬ್ಬಳನ್ನು ಕಟ್ಟಿಕೊಂಡು ಓಡಿಹೋದ ಎಂಬ ಕಾರಣಕ್ಕೆ ಆತನನ್ನು ಗುಂಪಿನಿಂದ ಕಿತ್ತು ವಗಾಯಿಸಿದರು.

ಸ್ವ ಸಹಾಯ ಗುಂಪಿನ ಅಧ್ಯಕ್ಷ ಕೃಷ್ಣ ಹೇಳುತ್ತಾರೆ- ನಮ್ಮಲ್ಲಿ ಪ್ರಾಮಾಣಿಕತೆಗಷ್ಟೆ ಬೆಲೆ. ಕುಡಿತ- ಸುಳ್ಳು ಹೇಳೋ ಮಂದಿಗೆ ಇಲ್ಲಿ ಜಾಗ ಇಲ್ಲ. ಸ್ನೇಹಿತರು ಅನ್ನೋ ಕಾರಣಕ್ಕೂ ಇಂಥಾ ವಿಷಯಗಳಲ್ಲಿ ರಾಜಿಗೆ ನಾವು ಸಿದ್ಧವಿಲ್ಲ. ತಪ್ಪಿಗೆ ಮುಲಾಜು ಕೊಟ್ಟು ಮೆತ್ತಗಿದ್ದರೆ ನಾವು ಮುಂದುವರೆಯಲು ಸಾಧ್ಯವಿಲ್ಲ.

ಪ್ರೇಮಿಸಿ, ಹುಡುಗಿ ಜೊತೆ ಓಡಿಹೋದ ಎಂಬ ಕಾರಣಕ್ಕೆ ಸದಸ್ಯತ್ವದಿಂದ ತೆಗೆದು ಹಾಕಿರುವುದು ಸರಿಯೆ ಎಂಬ ಪ್ರಶ್ನೆಗೆ, ನಾನು ಮೊದಲೇ ಹೇಳಿದೆನಲ್ಲಾ ಯಾವುದೇ ಹಿಚಿಕಿಚಿಗೆ ನಮ್ಮ ಗುಂಪಿನಲ್ಲಿ ಅವಕಾಶ ಇಲ್ಲ ಅಂತ ಎಂದು ಕೃಷ್ಣ ಕಡ್ಡಿ ಮುರಿದಂತೆ ಉತ್ತರಿಸುತ್ತಾರೆ.

ಯುವಕರಲ್ಲಿ ಉತ್ಸಾಹ ಇದೆ. ಮಾಡುವ ಕೆಲಸ ಕಿರ್ದಿ ಪುಸ್ತಕದಲ್ಲಿ ಚಾಚೂ ತಪ್ಪದೆ ದಾಖಲಾಗುತ್ತಿದೆ. ಪಾರದರ್ಶಕವಾಗಿದೆ ವ್ಯವಹಾರ. ಈ ಗುಂಪು ಇದೇ ಕಟ್ಟುನಿಟ್ಟು, ಶಿಸ್ತು ಮುಂದುವರೆಸಿದಲ್ಲಿ ಬ್ಯಾಂಕುಗಳು 25 ಸಾವಿರ ರುಪಾಯಿವರೆಗೆ ಸಾಲ ಕೊಡಲು ಮುಂದೆ ಬರಲಿವೆ. ಮಾದರಿ ಸ್ವ- ಸಹಾಯ ಸಮೂಹಕ್ಕೆ ಸರ್ಕಾರವೂ 10 ಸಾವಿರ ರುಪಾಯಿ ನೆರವು ಕೊಡುತ್ತದೆ. ಸದಸ್ಯರೊಬ್ಬರ ಮನೆ ಮದುವೆಗೆಂದು ಸಂಸ್ಥೆ ಈಗಾಗಲೇ 20 ಸಾವಿರ ರುಪಾಯಿ ಸಾಲ ಕೊಟ್ಟಿದೆ.

ಸದಸ್ಯರ ಜೀವನ ಸ್ಥಿತಿ ಸುಧಾರಿಸುವುದೇ ನಮ್ಮ ಗುರಿ. ಇನ್ನು ಒಂದು ಒಂದೂವರೆ ವರ್ಷದಲ್ಲಿ ಹಾಲು ಡೇರಿಯನ್ನು ಸ್ಥಾಪಿಸಬೇಕೆಂಬುದು ನಮ್ಮ ಕನಸು ಎಂದು ಕೃಷ್ಣ ಹೇಳುವಾಗ ಅವರ ಉದ್ದಿಶ್ಯ ಸ್ಪಷ್ಟವಾಗುತ್ತದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X