ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಾಥವಾಗಿ ಬಿದ್ದ ಹೆಣಗಳಿಗೆ ಸ್ವಯಂ ಸೇವಕರಿಂದ ಅಗ್ನಿ ಸಂಸ್ಕಾರ

By Staff
|
Google Oneindia Kannada News

ಭುಜ್‌ : ಮನೆಯವರ, ನೆರೆಯವರ ಶವ ಸಂಸ್ಕಾರ ಮಾಡುವ ಭಾಗ್ಯವನ್ನೂ ಕಳಕೊಂಡ, ಭೂಕಂಪದ ಹೊಡೆತದ ನಡುವೆ ಬದುಕಿದ ಮಂದಿಯಲ್ಲಿ ಮಡುಗಟ್ಟಿದ ಮೌನ. ಕೆಲ ಹೆಂಗಸರ ಬಾಯಲ್ಲಿಷ್ಟು ಬಟ್ಟೆ. ಕಿವುಚಿದ ಮುಖ. ಅವರಿಗರಿವಿಲ್ಲದಂತೆಯೇ ಕಣ್ಣೀರ ಹೊಳೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಷ್ಟ ಸಾಧ್ಯವಾದ ಕೆಲಸಕ್ಕೆ ಕೈ ಹಚ್ಚಿರುವ ಸ್ವಯಂ ಸೇವಕರು ಶುಕ್ರವಾರ ಅಸಂಖ್ಯ ಹೆಣಗಳನ್ನು ಸುಟ್ಟರು. ಇದರೊಂದಿಗೆ ತಮ್ಮ ಜನ ಬದುಕಿರಬಹುದು ಎಂಬ ಜನರ ನಂಬುಗೆಯನ್ನೂ.

ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಸಲುವಾಗಿ ಸಿಕ್ಕ ಶವಗಳಿಗೂ ರಾಸಾಯನಿಕಗಳ ಸಿಂಚನ. ಧಾರ್ಮಿಕ ಅಂತ್ಯ ಸಂಸ್ಕಾರದ ಸಂಪ್ರದಾಯಕ್ಕೂ ಕೊಡಲಿ ಪೆಟ್ಟು ತಿಂದ ಜನ ತಾವು ಬಲ್ಲ ಮಂದಿಯ ಕಳೇಬರಗಳನ್ನು ಗುರ್ತಿಸುವುದೂ ಕಷ್ಟವಾಗಿತ್ತು. ಇಡೀ ಭುಜ್‌ ಜಿಲ್ಲೆಯ ಬದುಕುಳಿದ ಮಂದಿ ಸ್ತಂಭೀಭೂತರಾಗಿದ್ದರು. ಅವರ ಪಾಲಿಗೆ ಎಲ್ಲಾ ಶೂನ್ಯದಂತಿತ್ತು.

ಹರಡುತ್ತಿರುವ ಅತಿಸಾರ : ಗುಜರಾತಿನಲ್ಲಿ ಈಗಾಗಲೇ ಅಲ್ಲಲ್ಲಿ ಅತಿಸಾರ ಕಾಣಿಸಿಕೊಂಡಿದ್ದು, ಸುಮಾರು 50 ಮಂದಿ ರೋಗದಿಂದ ಬಳಲುತ್ತಿರುವ ವರದಿಯಾಗಿದೆ. ಖಾವ್ಡ ಗ್ರಾಮದಲ್ಲಿರುವ ನೀರಿನ ಮೂಲ ಸಂಗ್ರಹಣಾ ತೊಟ್ಟಿಯಲ್ಲಿನ ನೀರು ಹಾಳಾಗಿದೆ. ಈ ನೀರನ್ನು ಜನ ಉಪಯೋಗಿಸುವುದು ಸದ್ಯಕ್ಕೆ ಅನಿವಾರ್ಯವಾಗಿದೆ. ಕ್ಷಿಪ್ರವಾಗಿ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡದಿದ್ದಲ್ಲಿ ಈಗ ನಾಶವಾಗಿರುವ ಗುಜರಾತ್‌ ರೋಗದ ಗೂಡಾಗಿ ಹೋಗುತ್ತದೆ ಎನ್ನುತ್ತಾರೆ ರೆಡ್‌ಕ್ರಾಸ್‌ ಸಂಸ್ಥೆಯ ಅಧಿಕಾರಿ ಪ್ಯಾಟ್ರಿಕ್‌ ಫುಲ್ಲರ್‌.

ಜನರಿಗೆ ಆದಷ್ಟು ಬೇಗ ಪುನರ್ವಸತಿ ಕಲ್ಪಿಸಿಕೊಡಬೇಕು. ನೀರಿಗೆ ಬೇರೆ ವ್ಯವಸ್ಥೆ ಮಾಡಬೇಕು. ರೋಗಾಣುಗಳಿಂದ ತುಂಬಿರುವ ಇಲ್ಲಿನ ನೀರನ್ನೇ ಜನ ಇನ್ನೂ ಎರಡು ಮೂರು ದಿನ ಬಳಸಿದಲ್ಲಿ ಅತಿಸಾರದ ಜತೆಗೆ ಉಸಿರಾಟದ ತೊಂದರೆಯೂ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಸರ್ಕಾರ ಈ ಬಗ್ಗೆ ತ್ವರಿತ ಹೆಜ್ಜೆ ಇಡಬೇಕಾದುದು ಅನಿವಾರ್ಯ ಎಂದು ಪ್ಯಾಟ್ರಿಕ್‌ ಎಚ್ಚರಿಕೆ ನೀಡಿದ್ದಾರೆ.

(ರಾಯ್ಟರ್ಸ್‌)

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X