ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾವೇರಿ ಬಾಲಕಿಯ ಕಲ್ನೀರ ಕಥೆ ಒಂದುಕಟ್ಟುಕತೆ: ವೈದ್ಯರ ಹೇಳಿಕೆ

By Staff
|
Google Oneindia Kannada News

ಹುಬ್ಬಳ್ಳಿ : ಹಾವೇರಿಯ 13ವರ್ಷದ ಬಾಲಕಿಯ ಕಣ್ಣಿಂದ ಕಣ್ಣೀರ ಬದಲಾಗಿ ಕಲ್ಲುಗಳು ಉದುರುತ್ತವೆ ಎಂಬ ಸೋಜಿಗದ ಸುದ್ದಿ ಶುದ್ಧ ಸುಳ್ಳು ಎಂಬುದು ಈಗ ಸಾಬೀತಾಗಿದೆ. ತಾಯಿ ಪ್ರೀತಿಯಿಂದ ವಂಚಿತಳಾದ ಬಾಲಕಿ ಶೋಭ ತನ್ನ ಎಡಗಣ್ಣಿನಿಂದ ಕಲ್ಲುಗಳು ಉದುರುತ್ತವೆ ಎಂದು ಕಟ್ಟು ಕತೆ ಕಟ್ಟಿ ಜನರನ್ನೂ, ಜನಪ್ರತಿನಿಧಿಗಳನ್ನೂ, ಪತ್ರಕರ್ತರನ್ನೂ ಅತ್ಯಂತ ಚಾಲಾಕಿತನದಿಂದ ನಂಬಿಸಿರುವ ಪ್ರಕರಣ ಬಹಿರಂಗವಾಗಿದೆ.

ತನ್ನ ತಾಯಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಸೂಕ್ಷ್ಮಮತಿಯುಳ್ಳ ಈ ಬಾಲಕಿ ಪ್ರಾಯಕ್ಕೆ ಬರುವ ವಯಸ್ಸಿನಲ್ಲಿ ಆರ್ಥಿಕ ತೊಂದರೆಯಿಂದ ತಾಯಿಯನ್ನು ತೊರೆದು ತಾಯಿಯ ತವರಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಬೇಕಾಗಿ ಬಂದ ಹಿನ್ನೆಲೆಯಲ್ಲಿ ಮಾನಸಿಕ ಕ್ಲೇಶ ಹಾಗೂ ದುಗಡದಿಂದ ಕಣ್ಣಲ್ಲಿ ಕಲ್ಲು ಬೀಳುತ್ತದೆಂಬ ಕಟ್ಟ ಕತೆ ಕಟ್ಟಿದ್ದಾಳೆ ಎಂದು ಈಕೆಯನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.

ಬಾಲಕಿಯ ಈ ವಿಚಿತ್ರ ಕಣ್ಣೀರಿನ ಬಗ್ಗೆ ಜಿಲ್ಲೆಯಾದ್ಯಂತ ಜನ ಮಾತಾಡಿಕೊಳ್ಳುತ್ತಿದ್ದುದನ್ನು ಕೇಳಿ ನಕ್ಕು ಸುಮ್ಮನಾಗಿದ್ದ ಶಾಸಕ ಬಸವರಾಜ ಶಿವಣ್ಣನವರ ಕುತೂಹಲ ತಾಳದೆ ನವೆಂಬರ್‌ 6ರ ಸೋಮವಾರ ಪತ್ರಕರ್ತರ ಜತೆಗೂಡಿ ಹಾವೇರಿಗೆ ಬಂದಿದ್ದ ಬಾಲಕಿಯನ್ನು ನೋಡಲು ಹೋಗಿದ್ದರು. ಬಾಲಕಿ ಶೋಭಾಳ ಕಣ್ಣಿಂದ ಕಲ್ಲುಗಳು ಉದುರಿದ್ದನ್ನು ಕಣ್ಣಾರೆ ಕಂಡು ದಿಗ್ಮೂಢರಾದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಫೋಟೋ ಸಹಿತ ಶೋಭಾಳ ಕಲ್ನೀರ ಕತೆಯ ಕರುಣಾಜನಕ ವರದಿ ಪ್ರಕಟವಾಗಿತ್ತು. ಈ ಬಗ್ಗೆ ಅಧ್ಯಯನ ನಡೆಸಲು ಬಾಲಕಿಯ ಗ್ರಾಮಕ್ಕೆ ಬಂದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ. ಆರ್‌. ಬಿದರಿ ಹಾಗೂ ನೇತ್ರ ತಜ್ಞರಾದ ಡಾ. ಓಣಿಯವರು ಶೋಭಾಳನ್ನು ಪ್ರೀತಿಯಿಂದ ಮಾತನಾಡಿಸಿ ಪರೀಕ್ಷಿಸಿದಾಗ ನಿಜ ಹೊರಬಿತ್ತು.

ಮಾತೃವಾತ್ಸಲ್ಯದಿಂದ ವಂಚಿತಳಾದ ಶೋಭಾ ಮತ್ತೆ ತಾಯಿಯನ್ನು ಸೇರುವ ಸಲುವಾಗಿ ಈ ಕಟ್ಟು ಕತೆ ಹುಟ್ಟುಹಾಕಿದ್ದಳು. ಪ್ರಾಯಕ್ಕೆ ಬರುವ ವಯಸ್ಸಿನಲ್ಲಿ ಹೆಣ್ಣುಮಕ್ಕಳಲ್ಲಿ ಸಾಮಾನ್ಯವಾಗಿ ಇಂತಹ ಮನೋಕ್ಲೇಶ ಉಂಟಾಗುತ್ತದೆ ಎನ್ನುತ್ತಾರೆ ವೈದ್ಯರು. ಆಯ್ದ ಬಿಳಿಯ ದುಂಡು ಕಲ್ಲುಗಳನ್ನು ಸ್ವತಃ ತಾನೇ ಕಣ್ಣಿಗೆ ಹಾಕಿಕೊಂಡು ಶೋಭಾ ಈ ನಾಟಕ ಆಡುತ್ತಿದ್ದಳು. ನೋವೂ ಅನುಭವಿಸುತ್ತಿದ್ದಳು.

ಶಾಸಕರು ಹಾಗೂ ಪತ್ರಕರ್ತರು ಈಕೆಯನ್ನು ನೋಡಲು ಹೋದಾಗಲೂ ಕೂಡ ಅರ್ಧಗಂಟೆ ಅಥವಾ ಗಂಟೆಗೊಮ್ಮೆ ಎಡಗಣ್ಣಿಂದ ಕಲ್ಲು ಬೀಳುತ್ತದೆ ಎಂದ ಈ ಬಾಲಕಿ ಚಾಣಾಕ್ಷತನದಿಂದ ಯಾರಿಗೂ ಕಾಣದಂತೆ ಕಲ್ಲನ್ನು ತನ್ನ ರೆಪ್ಪೆಯಲ್ಲಿ ಇಟ್ಟು ಮೋಸ ಮಾಡಿದ್ದೂ ಈಗ ಬೆಳಕಿಗೆ ಬಂದಿದೆ. ವೈದ್ಯರು ಕೂಲಂಕಷವಾಗಿ ಪರೀಕ್ಷೆ ನಡೆಸಿದಾಗ ಇನ್ನು ಮುಂದೆ ನನ್ನ ಕಣ್ಣಿಂದ ಕಲ್ಲು ಬೀಳುವುದಿಲ್ಲ ಎಂದು ಹೇಳಿದ್ದರಿಂದ ಸಂಶಯಗೊಂಡ ವೈದ್ಯರು, ಬಾಲಕಿಯನ್ನು ಶಾಲೆಯ ಆವರಣ ಹಾಗೂ ಊರಿನ ಪ್ರಶಾಂತ ವಾತಾವರಣದಲ್ಲಿ ತಿರುಗಾಡಿಸಿ ಮಾತಿಗೆ ಎಳೆದಾಗ ಕಲ್ಲುಗಳ ಬದಲು ಸತ್ಯ ಹೊರಬಿತ್ತು.

ಇದೊಂದು ಮನಸ್ಸಿನ ಆಘಾತದಿಂದ ಬಾಲಕಿ ಸೃಷ್ಟಿಸಿದ ಕತೆ ಎಂಬುದನ್ನು ಸಾರಿ ಹೇಳಿರುವ ವೈದ್ಯರು, ಇನ್ನು ಮುಂದೆ ಬಾಲಕಿಯನ್ನು ನೋಡಲು ಜನ ಬರುವ ಅಗತ್ಯವಿಲ್ಲ. ಇದರಿಂದ ಬಾಲಕಿಯ ಮನಸ್ಸಿನ ಮೇಲೆ ಮತ್ತಷ್ಟು ಆಘಾತವಾಗುತ್ತದೆ ಎಂದು ತಿಳಿಸಿದ್ದಾರೆ. ಬಾಲಕಿಗೂ ಧೈರ್ಯ ತುಂಬಿದ್ದಾರೆ. ಬಾಲಕಿ ತನ್ನ ಇಚ್ಛೆಯಂತೆ ಓದಲು ಅವಕಾಶ ನೀಡುವುದಲ್ಲದೆ, ಆಕೆಗೆ ಉತ್ತಮ ಪರಿಸರದಲ್ಲಿ ಬಾಳಲು ಅವಕಾಶ ಕಲ್ಪಿಸುವಂತೆ ಆಕೆಯ ಕುಟುಂಬದವರಿಗೆ ಸೂಚಿಸಿದ್ದಾರೆ. ಈಗ ಆಕೆ, ಮಾನಸಿಕ ತೊಳಲಾಟದಿಂದಲೂ ಮುಕ್ತಳಾಗಿದ್ದಾಳೆ ಎಂದೂ ಡಾ. ಬಿದರಿ ತಿಳಿಸಿದ್ದಾರೆ. (ಹುಬ್ಬಳ್ಳಿ ಪ್ರತಿನಿಧಿಯಿಂದ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X