ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನು ಮಾಯ-ವೋ.. ಏನು ಮರ್ಮ-ವೋ..

By Staff
|
Google Oneindia Kannada News

ಬೆಂಗಳೂರು: ಮಧ್ಯಾಹ್ನವೆಲ್ಲ ಧಗಧಗ ಉರಿಯುವ ಸುಡು ಬಿಸಿಲು, ಬಿಸಿಲಿದೆಯಂದು ಕೊಡೆ ಮರೆತರೆ ಹನಿಯುವ ಧೂಳು ಹನಿಗಳು...ಮತ್ತೆ ಇವತ್ತಿಗೆ ಮಳೆ ಇಷ್ಟೆ ಎಂದುಕೊಂಡರೆ ರೆಚ್ಚೆಕಟ್ಟಿ ಸುರಿಯಲು ಶುರು ಹಚ್ಚಿಕೊಂಡು ಠಕಾರನೇ ನಿಂತು ಬಿಡುವ ಈ ಮಳೆಯ ಕಿತಾಪತಿ ಏನೆಂದು ತಿಳಿಯುವುದಿಲ್ಲ.

ರಾಜ್ಯವೆಲ್ಲ ನವರಾತ್ರಿಯ ಗುಂಗನ್ನು ಹೊದ್ದುಕೊಳ್ಳಲಾರಂಭಿಸಿದೆ. ಆ ಗುಂಗಿನೊಳಗೆ ಮೈಮರೆಯುವಲ್ಲಿ ರಾಜ್‌ ಅಪಹರಣದ ನೋವಿನ ಮುಳ್ಳು ಕೊಡುವ ಬೇನೆ ಕನ್ನಡಿಗರ ಬೆಂಬಿಡುತ್ತಿಲ್ಲ . ಕಾಲ ತರುವ ಸಂಭ್ರಮಗಳ್ಯಾವುದಕ್ಕೂ ದುಗುಡ ತುಂಬಿದ ಎದೆ ಸ್ಪಂದಿಸುವ ಸ್ಥಿತಿಯಲ್ಲಿಲ್ಲ. ಹೀಗೆ ನೋವುಗಳಿಗೆಲ್ಲಾ ಮುಲಾಮು ಹಚ್ಚುವ ಕಾಲ ಅಣ್ಣಾವ್ರನ್ನು ಕರೆತರುತ್ತದೆ, ದಸರಾದಲ್ಲಿ ಅಂಬಾರಿ ನೋಡಿದಾಗ ಆಗುವ ಸಂತಸಕ್ಕಿಂತ ಹೆಚ್ಚು ಅಣ್ಣಾವ್ರನ್ನು ನೋಡಿದಾಗ ಆಗುತ್ತದೆ ಎಂದು ಕನ್ನಡ - ತಮಿಳು ಎಂಬ ಬೇಧವಿಲ್ಲದೆ ನಾಡು ಕಾಯುತ್ತಿದೆ.

ಆಲಮಟ್ಟಿ ತುಂಬಿದೆ. ಘಟಪ್ರಭಾ ಹುಚ್ಚೆದ್ದು ಹರಿಯುತ್ತಿದ್ದಾಳೆ. ದಂಡೆಯಲ್ಲಿ ವಾಸ ಮಾಡುವ ಬಾಗಲಕೋಟೆಯ ಮಂದಿಯನ್ನೆಲ್ಲಾ ಎತ್ತರದ ಜಾಗಗಳಿಗೆ ಪಾತ್ರೆ ಪಗಡಿ ಹಿಡಿದುಕೊಂಡು ಹೋಗುವಂತೆ ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಬಾಗಲ ಕೋಟೆಯ ಜಂಗಮ ಪೇಟೆಯ ಮನೆಗಳ ಅಂಗಳದಲ್ಲೆಲ್ಲಾ ನೀರು... ಕೃಷ್ಣೆ ರಾಜಾರೋಷವಾಗಿ ಬಾಗಲಕೋಟೆಯಾಳಗೆ ನಡೆದಾಡುತ್ತಿದ್ದಾಳೆ.

ಮಂಗಳೂರಿನ ಬಂದರು ಪಣಂಬೂರು ಮತ್ತು ಬೆಂಗಳೂರಿನ ವಿಮಾನ ನಿಲ್ದಾಣಗಳಲ್ಲಿ ಗಿಡ ಮರಗಳು ಒದ್ದೆಯಾಗುವಷ್ಟು ಮಳೆಯಾಗಿದೆ. ಒಂದು ಸೆಂಟಿ ಮೀಟರಿಗೆ ಮೋಸವಿಲ್ಲ. ಕರಾವಳಿಯಲ್ಲಿ ಇಂದು(ಶನಿವಾರ) ನಾಳೆ ಗುಡುಗಿನ ಹಿನ್ನೆಲೆಯಲ್ಲಿ ಮಳೆಯ ಒಡ್ಡೋಲಗವಾಗಬಹುದು ಅಂತ ಹವಾಮಾನ ಇಲಾಖೆಯವರು ಫೋನಾಯಿಸಿದ್ದಾರೆ. ಬೆಂಗಳೂರಿನಲ್ಲಿ ಹೇಗೆ ಮಾರಾಯರೆ... ಅಂತ ಕೇಳಿದಾಗ ಹಗಲು ಬರೀ ಮೋಡ ಸ್ವಾಮಿ, ರಾತ್ರಿಯೇನಾದರೂ ಮಳೆ ಹನಿಯಬಹುದು, ಮನೆ ಹೊರಗೆ ಬಟ್ಟೆ ಗಿಟ್ಟೆ ಒಣ ಹಾಕಬೇಡಿ ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X