ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್‌ ಅಪಹರಣದ ಬಯಲಲ್ಲಿ ಬೆತ್ತಲಾದವರು

By Staff
|
Google Oneindia Kannada News

ರಾಜ್‌ ಅಪಹರಣ ಕುರಿತ ನಾಡಿನ ಸಂಕಟದ ಸಮಯದಲ್ಲಿ, ಗಾಂಧೀನಗರದ ಕೆಲವು ಬಡಗಿಗಳು, ತಮ್ಮನ್ನು ಕೆಲಸವಿಲ್ಲದ ಅಥವಾ ಕಸಿವಿಸಿ ಇಲ್ಲದವರು ಅನ್ನಿಸಿಕೊಳ್ಳಲು ಸುತರಾಂ ತಯಾರಿಲ್ಲ . ಅದಕ್ಕಾಗಿ ಅವರದು ನಿತ್ಯ ಕಸರತ್ತು. ತಮ್ಮ ಅಘೋಷಿತ ಹಿತಾಸಕ್ತಿಗಳನ್ನೆಲ್ಲಾ ಅರಿವಿದ್ದೋ, ಇಲ್ಲದೆಯೋ ಬಹಿರಂಗಗೊಳಿಸಿಕೊಳ್ಳುತ್ತಲೇ ಇದ್ದಾರೆ.

ಕೋಣನಕುಂಟೆಯ ಕೊನೆಯ ಸೆರಗಿನ ಜೋಪಡಿಯ ಹೆಸರೇ ಇಲ್ಲದ ಉದ್ಬವ ಮೂರ್ತಿ(?)ಯ ಪೂಜೆಗೆ ಸಿನಿಮಾ ರಂಗು ಬೇಕೆ ? ಹಾಗಿದ್ದರೆ ಗಾಂಧೀನಗರದಲ್ಲಿ ಒಂದು ಸುತ್ತು ಬನ್ನಿ. ಆದರೆ ಒಂದು ವಿಷಯ ಖಾತ್ರಿಯಾಗಬೇಕು. ಮುಂಚೆ ಆ ಜಾಗಕ್ಕೆ ಪ್ರೆಸ್‌ನವರು ಬರುತ್ತಾರೆ ಎನ್ನುವುದಿತ್ತು , ಈಗ ಟಿವಿ ಯವರು ಬರುತ್ತಾರೆ ಎನ್ನುವುದರ ಬಗ್ಗೆ ಮೊಬೈಲ್‌ ಫೋನ್‌ನಲ್ಲಿ ಕನ್‌ಫರ್ಮ್‌ ಆಗಬೇಕು, ಆಗ ನೋಡಿ . ಜನರನ್ನು ನಿಯಂತ್ರಿಸಲು ಪೊಲೀಸರೇ ಬೇಕು. ಅಂದ ಹಾಗೆ ಭಕ್ತರು ಜಾಸ್ತಿಯಾದರೆ ಯಾರಿಗೆ ಲಾಭ?

ತಾರೆಯರನ್ನು ಕರೆದುಕೊಂಡು ಬರಲು ಹವಾನಿಯಂತ್ರಿತ ಕಾರು, ಬಿಸ್ಲೆರಿ ನೀರು, ಬಿರಿಯಾನಿ ಏನು ಬೇಡ. ಅಣ್ಣಾವ್ರ ಬಿಡುಗಡೆಗೆ ಪೂಜೆ......... ಅನ್ನಿ ಸಾಕು. ಕುಂತಿರಲಿ, ನಿಂತಿರಲಿ ಮಲಗಿರಲಿ ಹಾವು ಕಂಡವರಂತೆ ಏದುಸಿರು ಬಿಡುತ್ತಾ -ಓಡೋಡಿ ಬರುತ್ತಾರೆ. ಪ್ರೆಸ್‌ನೋರು ಇದಾರೆ ಅಂದ್ರೆ, ಅವರನ್ನು ಕರೆತರಲು ನಿಮ್ಮ ಬೀದಿಯಲ್ಲಿ , ಚಿನ್ನಿ-ದಾಂಡು ಆಡೋ ಹುಡುಗ ಸಾಕು.

ಜಗ್ಗೇಶ್‌ ಪ್ರಹಸನ : ಜಗ್ಗೇಶ್‌ ಎಂಬ ನವರಸನಾಯಕರ ಲೇಟೆಸ್ಟ್‌ ಕಿಲಾಡಿ ಆಟ ನೋಡಿ, ಪತ್ರಕರ್ತರು ಮೋಸಹೋದೆವಲ್ಲಾ ಎಂದು ಕೈ ಹಿಚುಕಿಕೊಳ್ಳುತ್ತಿದ್ದಾರೆ. ಜಗ್ಗೇಶ್‌ ಅವರು ಮಹಾಲಕ್ಶ್ಮಿ ಲೇಔಟ್‌ನ ಕರುಮಾರಿಯಮ್ಮನಿಗೆ ಖಡ್ಗ ಒಪ್ಪಿಸಿದ ಪ್ರಚಾರ(?) ಪ್ರಕರಣ ಹೊರತುಹಡಿಸಿ, ಅದರ ಸುಮಾರಿಗೆ ನಡೆದ ಇನ್ನೊಂದು ಸ್ವಾರಸ್ಯಕರ ಸಂಗತಿ ಇಲ್ಲಿದೆ. ಓದಿ.

ತಮ್ಮ ಹೆಂಡತಿಯ ಕಡೆಯಿಂದ ಕ-ರು-ಣಾನಿಧಿಯೋ ಅಥವಾ ಅವರ ಕಡೆಯ ಯಾರೋ ಬಬ್ಬರು ಜಗ್ಗೇಶ್‌ಗೆ ದೂರದ ಸಂಬಂಧಿಯಾಗಬೇಕಂತೆ(?) . ಇದನ್ನು ಉಪಯೋಗಿಸಿಕೊಂಡ ನವರಸ ನಾಯಕರು ಕರುಣಾನಿಧಿಯವರನ್ನು ಭೇಟಿ ಮಾಡಿ ರಾಜ್‌ ಬಿಡುಗಡೆಗೆ ಮನವಿ ಸಲ್ಲಿಸಿ ಫೋಟೋ ಸಮೇತ ಬೆಂಗಳೂರಿಗೆ ವಾಪಸಾದರು. ಮರುದಿನ ಚಿತ್ರರಂಗದ ಇನ್ನೊಂದು ನಿಯೋಗ ರಾಜ್‌ ಬಿಡುಗಡೆಗೆ ಕರುಣಾನಿಧಿಯವರನ್ನು ಒತ್ತಾಯಿಸಿಸಲು ಚನ್ನೈಗೆ ತೆರಳುವ ಬರಸಿಡಿಲಿನ ಸುದ್ದಿ ಜಗ್ಗು ಕಿವಿಗೆ ಬಿದ್ದದ್ದೇ ತಡ ತಮ್ಮ ಕರುಣಾನಿಧಿ ಭೇಟಿಯ ಯಮ ಸಾಹಸ ಎಲ್ಲಿ ವ್ಯರ್ಥವಾಗಿಬಿಡುತ್ತದೋ ಎಂದು ರಾತ್ರೋರಾತ್ರಿ ಮಳೆ, ಗಾಳಿಯೆನ್ನದೆ ಪಿ. ಆರ್‌. ಓ . ಒಬ್ಬರ ಮನೆ ಬಾಗಿಲು ತಟ್ಟಿದ ಜಗ್ಗಣ್ಣ, ಮರುದಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ , ಕರುಣಾನಿಧಿಯವರೊಂದಿಗಿನ ತಮ್ಮ ಫೋಟೊ ಅಚ್ಚಾಕಿಸಿಕೊಳ್ಳುವಲ್ಲಿ ಯಶಸ್ವಿಯಾದರು!

ಬಾಯಿ ಬಿಟ್ಟು ಬಣ್ಣ ಕೆಡಿಸಿಕೊಂಡವರು, ಮತ್ತೆ ನಾಟಕಕ್ಕೆ ಶುರು ಹಚ್ಚಿಕೊಂಡವರು...

ಇದಕ್ಕಿಂತ ಸ್ವಾರಸ್ಯಕರ ಸಂಗತಿ ಎಂದರೆ ಪಂಚಭಾಷಾ ತಾರೆ, ಸಂಸದೆ ಜಯಪ್ರದಾ ಅವರದು. ಪ್ರೆಸ್‌ಕ್ಲಬ್‌ನಲ್ಲಿ ಅಂಬರೀಷ್‌ ಪಕ್ಕ ಕುಳಿತ ಜಯಪ್ರದ, ವೀರಾವೇಶದ ಕಿತ್ತೂರು ಚೆನ್ನಮ್ಮನಂತೆ ಮಾತನಾಡುತ್ತಾ, ಕಾಡಿಗೆ ಹೋಗಿ ವೀರಪ್ಪನ್‌ಗೆ ರಾಖಿ ಕಟ್ಟಿ ರಾಜ್‌ ಬಿಡಿಸುವುದಾಗಿ ಪೂಲನ್‌ದೇವಿ ಧೈರ್ಯ ತೋರಿಸಿದರು.

ಹಾಗಂತ ಹೇಳಿದ ಎರಡೇ ದಿನದೊಳಗೆ ಜಯಪ್ರದಾ, ಮೊನಿಷಾ ಕೊಯಿರಾಲಾಳೊಂದಿಗೆ ಅಮೆರಿಕದ ಕ್ಲಬ್‌ಗಳಲ್ಲಿ ಕುಣಿಯುತ್ತಾ, ಶಾಪಿಂಗ್‌ ಮಾಡುತ್ತಾ ಓಡಾಡುತ್ತಿರುವ ಫೋಟೋಗಳು ಪತ್ರಿಕೆಗಳಲ್ಲಿ ಪ್ರಕಟವಾದವು.

ಈ ನಡುವೆ ಅಂಬರೀಷ್‌ ಮತ್ತು ಜಯಪ್ರದ ಕಾಡಿಗೆ ಹೋಗುವ ಮಾತಿಗೆ ಮುಖ್ಯಮಂತ್ರಿ ಕೃಷ್ಣ ಅಪರೂಪಕ್ಕೊಂದು ಎಂಬಂತೆ ಕಾಡಿಗೆ ಬೇಕಾದರೆ ಹೋಗಲಿ ಆದರೆ ವೀರಪ್ಪನ್‌ ಭೇಟಿ ಮಾಡಲು ಹೋಗುವುದು ಬೇಡ ಎಂದು ಚಟಾಕಿ ಹಾರಿಸಿದ್ದೂ ಆಯಿತು.

ಇನ್ನು ಮಾತನಾಡಲೇಬೇಕಾದ ಪರಿಸ್ಥಿತಿ ಸೃಷ್ಟಿಸಿಕೊಂಡ ಶಶಿಕುಮಾರ ಎಂಬ ನಟ ಕಮ್‌ ಸಂಸದರು, ತಡವಾಗಿಯಾದರೂ ಆತುರಾತುರವಾಗಿ ತಾವೂ ಕಾಡಿಗೆ ಪೋಗಲು ಸಿದ್ಧ ಎಂದು ಹೇಳಿ ತಮ್ಮ ಅಪ್ರಬುದ್ಧತೆ ತೋರಿಸಿದರು. ಹಾಗೆ ಹೇಳಿದ ಇನ್ನೊಬ್ಬ ಹಿರಿಯ ನಟ ವಿಷ್ಣುವರ್ಧನ್‌, ಅಂಬರೀಷ್‌ ಜೊತೆ ಮೈಸೂರಿಗೆ ಓಡಾಡಿದ ಕೆಲವು ಫೋಟೋಗಳು ಪತ್ರಿಕೆಗಳಲ್ಲಿ ಬಂದಿವೆ.

ಕ್ಯಾಮರಾದ ಪರ್ಮನೆಂಟ್‌ ಫ್ರೆಂಡ್‌ ಜಯಂತಿ : ಇನ್ನು ಹಿರಿಯ ನಟಿ ಜಯಂತಿಯವರ ಪಾಡಂತೂ ಹೇಳತೀರದು. ಅವರು ಮುಗಿಯದ ದೇವರಿಲ್ಲ, ಸುತ್ತದ ಕಂಬವಿಲ್ಲ, ಉರುಳದ ದೇವಸ್ಥಾನದ ವಠಾರವಿಲ್ಲ. ಕೊನೆಗೆ ಅವರ ಫೋಟೋ ಬರದ ಪತ್ರಿಕೆ, ಟಿವಿ ಚಾನಲ್ಲುಗಳು ಇಲ್ಲವೇ ಇಲ್ಲ. ಇದೇ ಹಾದಿಯಲ್ಲಿ ಸಾಗಿದ ಚಿಂದೋಡಿ ಲೀಲಾ ಕೂಡಾ , ರಾಜ್‌ ಬರುವವರೆಗೆ ಮುಖಕ್ಕೆ ಬಣ್ಣ ಹಾಕಲ್ಲ ಎಂದು ಪ್ರತಿಜ್ಞೆ ಮಾಡಿ ಅದನ್ನು ಮುರಿದು ಅವರದೇ ಆದ ದಾಖಲೆ ಬರೆದುಕೊಂಡರು. ನೆ. ಲ. ನರೇಂದ್ರಬಾಬು ಎಂಬ ಇನ್ನೊಬ್ಬ ನಟ ಕಮ್‌ ನಗರಪಾಲಿಕೆ ಸದಸ್ಯರು ಪ್ರೆಸ್ನೋರು ಬಂದಿಲ್ಲ ಸ್ವಲ್ಪ ತಡೀರಿ ಪೂಜಾರ್ರೆ, ನಂತರ ಪೂಜೆ ಮಾಡಿದ್ರಾತು ಎಂದು ಅಂಗಲಾಚಿದ ಸುದ್ದಿ ನಿಮಗೆ ನಗು ಅಥವಾ ಅಳು ಅಥವಾ ಎರಡನ್ನೂ ತರಿಸಬಹುದು.

ನಂ-ಜುಂಡೇಗೌಡರ ಕ್ಯಾಮಾರವನ್ನು ಚಿತ್ರೀಕರಣ ಮಾಡುತ್ತಿದ್ದ ಆಪಾದನೆ ಮೇಲೆ ಕಿತ್ತುಕೊಳ್ಳಲಾಗಿದೆ. ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಸುಂದರರಾಜ್‌, ಹೋಮ ನಡೆಸಿ ಒಂದು ಲಕ್ಷ 20 ಸಾವಿರ ರೂಪಾಯಿ ಬಿಲ್‌ನ್ನು ಅಧ್ಯಕ್ಷ ಅಂಬರೀಷ್‌ಗೆ ನೀಡಲು ಹೋಗಿ ನಿರಾಶರಾಗಿ ಹಿಂದಿರುಗಿದ್ದಾರೆ.

ಉಪೇಂದ್ರ, ಶೃತಿ ಹೊರರಾಜ್ಯದಲ್ಲಿ ಚಿತ್ರೀಕರಣದಲ್ಲಿದ್ದರೆ, ನಿರ್ದೇಶಕ ನಾಗತಿಹಳ್ಳಿ ಅಮೆರಿಕದಲ್ಲಿ ತಮ್ಮ ಹೊಸ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ರಮೇಶ್‌ ಕುಟುಂಬದ ಸದಸ್ಯರೊಂದಿಗೆ ಯೂರೋಪ್‌ನಲ್ಲಿ ಜಾಲಿ ಮಾಡುತ್ತಿದ್ದಾರೆ.

ಹೋಮ, ಹವನ, ಯಜ್ಞ, ತಂತ್ರ, ಮಂತ್ರಗಳ ಪೈಪೋಟಿ ನಡದೇ ಇದೆ. ಇದರಲ್ಲಿ ನಿಜ ಯಾವುದು ಶೂಟಿಂಗ್‌ ಯಾವುದು ಎಂಬುದು ಗೊತ್ತಾಗದೆ ಕನ್ನಡ ಜನತೆ ಅಣ್ಣನ ಬರುವಿಕೆಗಾಗಿ ತಲೆಬಾಗಿಲಲ್ಲಿ ಆತಂಕದಿಂದ ಕಾಯುತ್ತಿದ್ದಾರೆ.

ಇನ್ನೊಂದು ಮುಖ್ಯ ವಿಷಯ ಎಂದರೆ ಸದ್ದಿಲ್ಲದೆ ರಾಜ್‌ ಮನೆಗೆ ತಮ್ಮ ಮಗನೊಂದಿಗೆ ಬಂದಿದ್ದ ಹಿರಿಯ ನಟಿ ಲೀಲಾವತಿ ಹತ್ತು ನಿಮಿಷ ಮೌನವಾಗಿ ಕುಳಿತು ಎದ್ದು ಹೋದರಂತೆ.

ಚಿತ್ರಗಳ ಪ್ರದರ್ಶನ ಆರಂಭವಾಗಿದೆ. ಮರೆಯುವ ಮುನ್ನ ಇನ್ನೊಂದು ಮಾತು . ಚಿತ್ರರಂಗ ದುಗುಡದಲ್ಲಿದೆ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X