ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಂಭವಿ ಕಾಫಿ ವರ್ಕ್ಸ್‌ನ ಮಾಲೀಕ ಮಂಜುನಾಥ, ಪತ್ನಿ ಗೋದಾವರಿ ಬಂಧನ

By Staff
|
Google Oneindia Kannada News

ಬೆಂಗಳೂರು: ಕರ್ನಾಟಕ ರಾಜ್ಯದಿಂದ ರಫ್ತಾಗುವ ಕಾಫಿ ಉದ್ಯಮಕ್ಕೀಗ ಗರ ಬಡಿದಿದೆ. ಅದಕ್ಕೆ ಉತ್ಕೃಷ್ಠತೆ ಕಡಿಮೆ ಎಂಬ ಆರೋಪ ಮಾತ್ರವಲ್ಲ, ಮನುಷ್ಯರು ಉಪಯೋಗಿಸಲು ಸಾಧ್ಯವಾಗದಂತ ಕಾಫಿಯನ್ನು ರಫ್ತು ಮಾಡಲಾಗಿದೆ ಎಂಬ ದೂರಿಗೆ ಸಾಕ್ಷಿ ಸಮೇತ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಈ ಸಂಬಂಧ ಶಾಂಭವಿ ಕಾಫಿ ಕ್ಯೂರಿಂಗ್‌ ವರ್ಕ್ಸ್‌ನ ಮಾಲೀಕ ದಾವಣಗೆರೆಯ ಮಂಜುನಾಥ ಹಾಗೂ ಆತನ ಪತ್ನಿ ಗೋದಾವರಿ ಎಂಬುವರನ್ನು ಬೆಂಗಳೂರಿನ ಕಮರ್ಷಿಯಲ್‌ ಸ್ಟ್ರೀಟ್‌ನ ಪೊಲೀಸರು ಕಳೆದ ಸೋಮವಾರ ಬಂಧಿಸಿದ್ದಾರೆ. ಸುಮಾರು 1080 ಟನ್‌ಗಳಷ್ಟು ಕಳಪೆ ಕಾಫಿಯನ್ನು ರಫ್ತು ಮಾಡುವಲ್ಲಿ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿರುವ ಶಾಂಭವಿ ಕಾಫಿ ಕ್ಯೂರಿಂಗ್‌ ವರ್ಕ್ಸ್‌ನ ವಹಿವಾಟು ನೋಡಿಕೊಳ್ಳುವ ಕೆ. ಸಿ. ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಕೆ. ಸಿ. ಸಂತೋಷ್‌ ಕಾಣೆಯಾಗಿದ್ದಾರೆ.

ರಾಜ್ಯ ಸರಕಾರಿ ಸ್ವಾಮ್ಯದ ಕಾಫಿ ಟ್ರೇಡಿಂಗ್‌ ಕಾರ್ಪೋರೇಶನ್‌ ಮೂಲಕ ಈ ಬೃಹತ್‌ ಪ್ರಮಾಣದ ಕಾಫಿ ಹೋಗಿರುವುದು ಫ್ರಾನ್ಸ್‌, ಸ್ವಿಟ್ಜರ್‌ಲ್ಯಾಂಡ್‌, ಸ್ಪೇನ್‌ ಮತ್ತು ಜರ್ಮನಿಗಳಿಗೆ. ದೇಶದ ಶೇಕಡಾ 80ರಷ್ಟು ಕಾಫಿ ಉತ್ಪಾದನೆ ಮಾಡುವ ಹೆಗ್ಗಳಿಕೆ ಪಡೆದಿರುವ ಕರ್ನಾಟಕದ ಕಾಫಿ ರಫ್ತು ಉದ್ಯಮಕ್ಕೆ ಈ ಹಗರಣದಿಂದ ಕೆಟ್ಟ ಹೆಸರು ಅಂಟಿಕೊಂಡಿದೆ.

ಕೆ. ಸಿ. ಗ್ರೂಪ್‌ನ ಕೈವಾಡ : ಕೆ. ಸಿ. ಗ್ರೂಪ್‌ನ ಜೊತೆಗೆ ಕಾಫಿ ಮತ್ತು ಸಾಂಬಾರ ಪದಾರ್ಥ ರಫ್ತು ಮಾಡುವ ಪೂರ್ಣಾ ಎಂಬ ಇನ್ನೊಂದು ಖಾಸಗಿ ಕಂಪನಿ ಸೇರಿ ವಿದೇಶಗಳಿಗೆ ಕಾಫಿ ರಫ್ತು ಮಾಡುವ ಒಪ್ಪಂದಗಳಿಗೆ ಸಹಿ ಹಾಕಿದ್ದವು. ರಾಜ್ಯ ಕಾಫಿ ಟ್ರೇಡಿಂಗ್‌ ಕಾರ್ಪೋರೇಶನ್‌ ಮೂಲಕ ಕಾಫಿ ರಫ್ತು ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದ ಪೂರ್ಣಾ ಕಂಪನಿ, ಕೆ. ಸಿ. ಗ್ರೂಪ್‌ನಿಂದಲೂ ಕಾಫಿಯನ್ನು ಪಡೆದು ರಫ್ತು ಮಾಡುತ್ತಿತ್ತು. ಈ ಅವಕಾಶವನ್ನು ದುರುಪಯೋಗಪಡಿಸಿಕೊಂಡ ಕೆ. ಸಿ. ಗ್ರೂಪ್‌, ಈ ಹಗರಣಕ್ಕೆ ಕಾರಣವಾಯಿತೆಂದು ಹೇಳಲಾಗಿದೆ. ಉತ್ತಮ ಗುಣಮಟ್ಟದ ಕಾಫಿಯ ಬದಲಾಗಿ ಕಪ್ಪು ಬಣ್ಣದ, ತೌಡು ಸೇರಿದ ಕಳಪೆ ಕಾಫಿಯನ್ನು ರಫ್ತು ಮಾಡಲಾಗಿದೆ.

ಬೆಂಗಳೂರಿನಿಂದ ರಫ್ತಾದ ಕಾಫಿಯನ್ನು ಪ್ಯಾರಿಸ್‌ ಮೂಲದ ವಹಿವಾಟುದಾರರು ಸಂಪೂರ್ಣ ತಿರಸ್ಕರಿಸುವುದರೊಂದಿಗೆ ಕಳೆದ ಮೇನಲ್ಲಿ ಈ ಹಗರಣದ ಅನಾವರಣಗೊಳ್ಳಬೇಕಿತ್ತು ಎಂದು ಮೂಲಗಳು ಹೇಳಿವೆ. ಇದಕ್ಕೆ ಕಾರಣರಾದ ಸಂತೋಷ್‌ ಮೇಲೆ ಪೂರ್ಣಾ ಕಾಫಿ ಕಂಪನಿ ಮೊಕದ್ದಮೆ ಹೂಡಿದೆ. ಮೇನಲ್ಲಿ ಬಹಿರಂಗವಾಗಬೇಕಿದ್ದ ಈ ಹಗರಣವನ್ನು ಕೆ. ಸಿ. ಗ್ರೂಪ್‌ನ ಕಂಪನಿ, ವಿದೇಶಿ ವಹಿವಾಟುದಾರರಿಗೆ ಹಣ ನೀಡಿ ತಾತ್ಕಲಿಕ ಉಪಶಮನ ಮಾಡಿತ್ತು.

ಆದರೆ ಇದೇ ಚಾಳಿಯನ್ನು ಮುಂದುವರಿಸಿದ ಕೆ. ಸಿ. ಕಂಪನಿ, ಸ್ವಿಟ್ಜರ್‌ಲ್ಯಾಂಡ್‌ ಮತ್ತು ಯೂರೋಪ್‌ನ ಕೆಲವು ವಹಿವಾಟುದಾರರಿಗೆ 180 ಟನ್‌ನಷ್ಚು ಕಳಪೆ ಕಾಫಿಯನ್ನು ಮತ್ತೆ ರಫ್ತು ಮಾಡಿತು. ಕಾಫಿಯಲ್ಲಿ ತೌಡು ಸೇರಿಸಿ ಕಳಿಸಿರುವುದನ್ನು ಪತ್ತೆ ಹಚ್ಚಿದ ಆಮದುದಾರರು ವಿಷಯವನ್ನು ಪೂರ್ಣಾ ಕಂಪನಿಯ ಗಮನಕ್ಕೆ ತಂದರು. ನಂತರ ಆರೋಪಿಗಳನ್ನು ಹಿಡಿಯಲು ಪೂರ್ಣಾ ಕಂಪನಿಯು ಪೊಲೀಸರ ಮೊರೆ ಹೋಯಿತು.

ಉನ್ನತ ಮಟ್ಟದ ಅಧಿ-ಕಾ-ರಿ-ಗ-ಳ ಕೈವಾಡ : ಹಡಗಿಗೆ ಸಾಗಿಸುವುದಕ್ಕಿಂತ ಮುಂಚೆ ಕಸ್ಟಮ್‌ ಅಧಿಕಾರಿಗಳ ಮುಂದೆ ಚೀಲಗಳನ್ನು ಸೀಲ್‌ ಮಾಡಲಾಗುತ್ತದೆ. ಆದರೆ ಈ ಕ್ರಮವನ್ನು ಕೆ. ಸಿ. ಕಂಪನಿ ಮುರಿಯುವುದರಲ್ಲಿ ಯಶಸ್ವಿಯಾಗಿತ್ತು. ಈ ಸಂಬಂಧ ಹಡಗಿನ ಸರಕು ತಾಣದ ಕೆಲಸಗಾರರು ಮತ್ತು ಸುಂಕದ ಕೆಲವು ಅಧಿಕಾರಿಗಳನ್ನು ಬಂಧಿಸುವುದರೊಂದಿಗೆ ಹೊರಬಿದ್ದಿದೆ. ಪೊಲೀಸರ ಪ್ರಕಾರ ಈ ಹಗರಣದಲ್ಲಿ ಉನ್ನತ ಮಟ್ಟದ ಅಧಿಕಾರಿ ಮತ್ತು ಜನರ ಕೈವಾಡವಿದೆ.

ಹಗರಣದ ಹಿನ್ನಲೆಯಲ್ಲಿ ಆಮದುದಾರರ ಮುಂದೆ ಕಾಫಿಯ ಚೀಲಗಳನ್ನು ಬಿಚ್ಚಬೇಕು ಹಾಗೂ ಸೀಲ್‌ ಮಾಡುವ ಸಂಪೂರ್ಣ ಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಬೇಕು ಎಂದು ಆಮದುದಾರರು ಒತ್ತಾಯ ಮಾಡಿದ್ದಾರೆ.

ಕಳಪೆ ಬೀಜ ರಫ್ತು ಕಂಪನಿಗಳು ಕಪ್ಪು ಪಟ್ಟಿಗೆ : ಕಳಪೆ ಕಾಫಿ ರಫ್ತು ಮಾಡುತ್ತಿರುವ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸುವ ಮೂಲಕ ಕಾಫಿ ಉದ್ಯಮವನ್ನು ರಕ್ಷಿಸಬೇಕೆಂದು ಚಿಕ್ಕಮಗಳೂರು ಕಾಫಿ ಬೆಳೆಗಾರರ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.

ಈ ಸಂಬಂಧ ಸಿ.ಬಿ.ಐ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವ ಎಲ್‌. ಕೆ. ಆಡ್ವಾಣಿ ಹಾಗೂ ವಾಣಿಜ್ಯ ಸಚಿವ ಮುರಸೋಳಿ ಮಾರನ್‌ ಅವರಿಗೆ ಪತ್ರ ಬರೆದು ಒತ್ತಾಯಿಸಿರುವುದಾಗಿ ಸಮಿತಿ ಸಂಚಾಲಕ ಸಿ. ಟಿ. ರವಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಗುರುವಾರ ನಡೆಯಲಿರುವ ಕಾಫಿ ಮಂಡಳಿ ಸಭೆಯಲ್ಲಿ ಈ ಅವ್ಯವಹಾರವನ್ನು ಅಧ್ಯಕ್ಷರ ಗಮನಕ್ಕೆ ತರುವುದಾಗಿ ಕಾಫಿ ಮಂಡಳಿ ಸದಸ್ಯರಾದ ಕೆ. ಆರ್‌. ಕೇಶವ ಮತ್ತು ಬಿ. ಕೆ. ಪೃಥ್ವಿ ಅವರು ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X