ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಾವಾಸ್ಯೆ ರಾತ್ರಿ ಅಂದುಕೊಂಡದ್ದು ಕಾಡುಗಳ್ಳ ಸಾಧಿಸಿದ್ದು ಹೀಗೆ...

By Prasad
|
Google Oneindia Kannada News

Rajkumar
ಬೆಂಗಳೂರು, ಜು. 31, 2010 : 'ಎನ್ನೈ ಯಾರ್‌ ತೆರಿಯುತಾ?" ಮಳೆಯಲ್ಲಿ ತೊಯ್ದಿದ್ದ ತಿರುಚು ಮೀಸೆಯ ವ್ಯಕ್ತಿ ರಾತ್ರಿ ಒಂಬತ್ತೂವರೆ ಗಂಟೆಯಲ್ಲಿ ಅಗಲ ಕುಂಕುಮ ಇಟ್ಟಿದ್ದ ಹೆಂಗಸನ್ನು ಕೇಳಿದ. ಆತಂಕದ ಛಾಯೆ ಹೊತ್ತ ಆಕೆ ಹೌದೆಂಬಂತೆ ತಲೆಯಾಡಿಸಿದರು. ಆಕೆಯೇ ಪಾರ್ವತಮ್ಮ ರಾಜ್‌ಕುಮಾರ್‌. ಪ್ರಶ್ನೆ ಕೇಳಿದ್ದು ನರಹಂತಕ ವೀರಪ್ಪನ್‌.

ಆಗತಾನೆ ಊಟ ಮುಗಿಸಿದ್ದ ರಾಜ್‌ ಟೀವಿ ನೋಡುತ್ತಿದ್ದರು. ಮಳೆಯಲ್ಲಿ ತೊಯ್ದಿದ್ದ ಹನ್ನೆರಡು ಅಪರಿಚಿತ ದೇಹಗಳು ಕೈಯಲ್ಲಿ ಬಂದೂಕುಗಳನ್ನು ಹಿಡಿದು ಗಾಜನೂರಿನ ಎಸ್ಟೇಟಿನ ಮನೆಗೆ ನುಗ್ಗಿದರು. ಅಮಾವಾಸ್ಯೆಯ ಕತ್ತಲು, ಸುರಿಯುತ್ತಿದ್ದ ಮಳೆ ಅವರ ನೆರವಿಗೆ ಬಂದಿತ್ತು. ಹನ್ನೆರಡು ಜನರಲ್ಲಿ ಮುಂದಿದ್ದವ ವೀರಪ್ಪನ್‌. ರಾಜ್‌ಕುಮಾರ್‌ ಎಲ್ಲಿ ಎನ್ನುತ್ತಲೇ ಒಳಗೆ ನುಗ್ಗಿದ ಈತನ ಕಣ್ಣಿಗೆ ಮೊದಲು ಬಿದ್ದದ್ದು ಪಾರ್ವತಮ್ಮ ರಾಜ್‌ ಕುಮಾರ್‌. ಕೇಳಿದ್ದು 'ನಾ ಯಾರು ತಿಳಿಯಿತೆ" ಎಂಬ ಪ್ರಶ್ನೆ. ಭಯದಿಂದಲೇ ಈಕೆ ಗೊತ್ತು ಎನ್ನುವಂತೆ ತಲೆಯಾಡಿಸಿದ ಸ್ವಲ್ಪ ಹೊತ್ತಿಗೇ ರಾಜ್‌ ಚೇರಿನಿಂದ ಎದ್ದು ನೇರವಾಗಿ ವೀರಪ್ಪನ್‌ನತ್ತ ಬಂದರು.

ಅದಕ್ಕೆ ಮುನ್ನ, ಹಳೆ ಮನೆಯಲ್ಲಿ ಇದ್ದ ರಾಜ್‌ ಅಳಿಯ ಗೋವಿಂದರಾಜ್‌, ನಾಗಪ್ಪ ಹಾಗೂ ನಾಗೇಶ್‌ ಅವರನ್ನು ವೀರಪ್ಪನ್‌ ತನ್ನ ವಶಕ್ಕೆ ತೆಗೆದುಕೊಂಡಾಗಿತ್ತು. ರಾಜ್‌ ವೀರಪ್ಪನ್‌ಗೆ ಹೇಳಿದ್ದು ಹೀಗೆ- ನಡಿಯಿರಿ ಹೋಗೋಣ. ಆದರೆ ಯಾರಿಗೂ ತೊಂದರೆ ಕೊಡಬೇಡಿ. ರಾಜ್‌ ಅವರ ಕಾರ್‌ ಚಾಲಕ ರವಿ ಕೂಡ ಅವರ ಜತೆ ಹೊರಡಲನುವಾದಾಗ, ವೀರಪ್ಪನ್‌ 'ನೀನು ಬೇಡ" ಎಂದ. ಅವನು ಅಪಹರಿಸಬೇಕಾದ ವ್ಯಕ್ತಿಗಳನ್ನು ಆರಿಸಿಕೊಂಡಿದ್ದ.

ಹೊರಡುವ ಮುನ್ನ ಆಡಿಯೋ ಕ್ಯಾಸೆಟ್ಟೊಂದನ್ನು ಪಾರ್ವತಮ್ಮ ರಾಜ್‌ಕುಮಾರ್‌ ಕೈಗಿತ್ತು, 'ಇದನ್ನು ನಿಮ್ಮ ಮುಖ್ಯಮಂತ್ರಿಗೆ ಕೊಡಬೇಕು. ಪೊಲೀಸ್‌ಗೇನಾದರೂ ದೂರು ಕೊಟ್ಟರೆ ನಮ್ಮ ಬಳಿ ಇರುವ ನಿಮ್ಮವರಾರೂ ಉಳಿಯೋದಿಲ್ಲ" ಎಂದು ವೀರಪ್ಪನ್‌ ತಾಕೀತು ಮಾಡಿದ. ಕೇವಲ 10 ನಿಮಿಷಗಳಲ್ಲಿ ಇಷ್ಟೆಲ್ಲಾ ನಡೆದುಹೋಯಿತು.

ಏನು ನಡೆಯಿತು ಎಂದು ಚಾಲಕ ರವಿ ಹೇಳಿದ್ದು ಹೀಗೆ- 'ಗವ್ವಂತಿದ್ದ ಕತ್ತಲು. ಎಸ್ಟೇಟ್‌ನ ಹಳೆ ಮನೆ ಕಡೆಗೆ ನಾನು, ಗೋವಿಂದಪ್ಪ, ನಾಗಪ್ಪ , ನಾಗೇಶ್‌ ಮತ್ತೆ ನಾಗರಾಜು ಹೋದುತ್ತಿದ್ದೆವು. ಹಿಂದೆ ಬರುತ್ತಿದ್ದ ನಾಗರಾಜು ನಮ್ಮ ಮೇಲೆ ಬಿದ್ದರು. ಯಾರೆ ಹೀಗೆ ಬಿದ್ದಿರಿ ಅಂತ ಕೇಳಿದೆವು. ಯಾರೋ ಚುಚ್ಚಿದಂಗಾಯ್ತು ಅಂದರು. ಸ್ವಲ್ಪ ಹೊತ್ತಲ್ಲೇ ತಿರುಗಿ ಅದೇ ರೀತಿ ಬಿದ್ದರು. ಹಿಂದೆ ನೋಡಿದರೆ ವೀರಪ್ಪನ್‌ ನಿಂತಿದ್ದರು. ನಮ್ಮನ್ನೆಲ್ಲಾ ಸುಮ್ಮನೆ ಕೂತುಕೊಳ್ಳೋಕೆ ಹೇಳಿ, ಹೊಸ ಮನೆಗೆ ಹೋಗಿ ಅಣ್ಣಾವ್ರನ್ನು ಕರೆದುಕೊಂಡು ಬಂದರು. ನನ್ನನ್ನ ಅವರ ಜೊತೆ ಕರೆದುಕೊಂಡು ಹೋಗದೆ, ಪಾರ್ವತಮ್ಮಾವ್ರನ್ನ ಬೇಗ ಬೆಂಗಳೂರಿಗೆ ಕರೆದುಕೊಂಡು ಹೋಗಿ ಕ್ಯಾಸೆಟ್ಟನ್ನು ಸಿಎಂಗೆ ಕೊಡೋಕೆ ಹೇಳಿದರು".

ವೀರಪ್ಪನ್ ನಿಂದ ರಾಜ್ ಅಪಹರಣ ಆಗಿದ್ದು ಹೀಗೆ...

English summary
How veerappan kidnapped rajkumar on bhimana amavasya night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X