ರಾಜ್ಯ ಹಣಕಾಸು ನಿರ್ವಹಣೆಗೆ ಆಡಿಟರ್ ಜನರಲ್ ಟೀಕೆ
ಬೆಂಗಳೂರು : ರಾಜ್ಯ ಸರಕಾರದ ಹಣಕಾಸು ನಿರ್ವಹಣೆಯನ್ನು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ತಮ್ಮ ವಾರ್ಷಿಕ ವರದಿಯಲ್ಲಿ ಆಕ್ಷೇಪಿಸಿದ್ದಾರೆ. ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ನೀಡಿದ 1999ರ ವಾರ್ಷಿಕ ವರದಿಯನ್ನು ಬುಧವಾರ ವಿಧಾನ ಮಂಡಲದ ಎರಡೂ ಸದನದಲ್ಲಿ ಮಂಡಿಸಲಾಯಿತು.
ರಾಜ್ಯಕ್ಕೆ ಮಂಜೂರಾದ ಆಹಾರ ಧಾನ್ಯಗಳನ್ನು ಪಡಿತರ ವ್ಯವಸ್ಥೆಯ ಮೂಲಕ ವಿತರಿಸುವ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಅಲ್ಲದೆ ರಾಜ್ಯದ ಸಾರ್ವಜನಿಕ ವಿತರಣಾ ವ್ಯವಸ್ಥೆಯೂ ತೃಪ್ತಿಕರವಾಗಿಲ್ಲ ಎಂದು ವರದಿಯು ರಾಜ್ಯದ 1998-- 99ರ ಸಾಲಿ-ನ ಹಣಕಾಸು ನಿರ್ವಹಣೆಯನ್ನು ಟೀಕಿಸಿದೆ.
1996ರಲ್ಲೇ ಪೂರ್ಣವಾಗಬೇಕಿದ್ದ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಯಲ್ಲಿ ಆದ ವಿಳಂಬ ಮತ್ತು ಕಳಪೆ ಕಾಮಗಾರಿಗಳಿಂದಾಗಿ ಸರಕಾರದ ಬೊಕ್ಕಸಕ್ಕೆ 116 ಕೋಟಿ ನಷ್ಟವಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಇರುವ ವಿಶೇಷ ಘಟಕ ಯೋಜನೆಗೆ ಮಂಜೂರಾದ 77.51 ಕೋಟಿ ರೂಪಾಯಿಯ ಬಳಕೆಯೇ ಆಗಿಲ್ಲ. ಇದರ ಜವಾಬ್ದಾರಿ ಹೊತ್ತ ಸಮಾಜ ಕಲ್ಯಾಣ ಇಲಾಖೆ ಕೇವಲ 7.39 ಕೋಟಿ ಖರ್ಚು ಮಾಡುವಲ್ಲಿಯೂ ಸೋತಿದೆ ಎಂದು ವರದಿ ವಿವರಿಸಿದೆ. ಹೀಗೆ ಅಂಬೇಡ್ಕರ್ ವಸತಿ ಯೋಜನೆಗೆ ಮಂಜೂರಾಗಿರುವ 5.38 ಕೋಟಿ ರೂಪಾಯಿಗಳಲ್ಲಿ 13980 ಮನೆಗಳ ನಿರ್ಮಾಣವಾಗಬೇಕಿತ್ತು. ಆದರೆ ಹಣ ಮಂಜೂರಾಗಿ ಐದು ವರ್ಷವಾದರೂ ಕೆಲಸ ಪೂರ್ತಿಯಾಗಿಲ್ಲ .
ಸರಕಾರಿ ನೌಕರರಿಗೆ ವೇತನಾ ಆಯೋಗದ ಅಂಶಗಳನ್ನು ಅನ್ವಯಿಸಿರುವುದರಿಂದ ರಾಜಸ್ವ ಕೊರತೆಯೂ ಉಂಟಾಗಿದೆ . ರಾಜಸ್ವ ಕೊರತೆಯು 1215 ಕೋಟಿ ರೂಪಾಯಿಗಳಷ್ಟಾಗಿದ್ದು ರಾಜಸ್ವ ವೆಚ್ಚಕ್ಕಾಗಿಯೇ ಹೆಚ್ಚಿನ ಬಡ್ಡಿ ಕೊಟ್ಟು ಹೊರಗಿನಿಂದ ಸಾಲ ತರಬೇಕಾಯಿತು. 1997-98ರ ಸಾಲಿಗಿಂತ ಕಳೆದ ಸಾಲಿನ ರಾಜಸ್ವ ಕೊರತೆಯ ಪ್ರಮಾಣವು ಶೇ 339ರಷ್ಟು ಹೆಚ್ಚಾಗಿದೆ.
ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ ತೆರಿಗೆ, ಸುಂಕ ಮತ್ತು ಅನುದಾನ ರೂಪದಲ್ಲಿ 2817 ಕೋಟಿ ರೂಪಾಯಿ ದೊರೆತಿದ್ದರೂ ಯೋಜನಾ ರಾಜಸ್ವ ವೆಚ್ಚವು ಹಿಂದಿನ ಸಾಲಿಗಿಂತ 244 ಕೋಟಿ ರೂಪಾಯಿ ಹೆಚ್ಚಾಗಿದೆ. ಅಲ್ಲ್ಲದೆ ಯೋಜನೇತರ ವೆಚ್ಚವು 1997-98ರಲ್ಲಿ 8593 ಕೋಟಿ ರೂಪಾಯಿ ಇದ್ದರೆ 1997-98ರಲ್ಲಿ 9905 ಕೋಟಿ ರೂಪಾಯಿಗೇರಿದೆ ಎಂದು ವರದಿ ತಿಳಿಸಿದೆ.