keyboard_backspace

ಎಸ್. ಅರ್. ಬೊಮ್ಮಾಯಿಗೆ ಸಿಕ್ಕಿದ ಅನಿರೀಕ್ಷಿತ ದಾರಿಯಲ್ಲೇ ಪುತ್ರನಿಗೂ ಸಿಕ್ತು ಸಿಎಂ ಪಟ್ಟ!

Google Oneindia Kannada News

ಬೆಂಗಳೂರು, ಜು. 27: ಮಾನವತಾವಾದಿ, ಹುಟ್ಟು ಹೋರಾಟಗಾರ ರಾಜ್ಯ ಕಂಡ ಧೀಮಂತ ನಾಯಕ ಎಸ್. ಆರ್. ಬೊಮ್ಮಾಯಿ. ಬಾಲ್ಯದಿಂದಲೇ ರೈತ ಪರ ಧ್ವನಿಯೆತ್ತಿದವರು. ಸೈದ್ಧಾಂತಿಕ ರಾಜಕಾರಣ, ಅಭಿವೃದ್ಧಿ ರಾಜಕಾರಣಿಯಾಗಿ ಸೋಮಪ್ಪ ರಾಯಪ್ಪ ಬೊಮ್ಮಾಯಿ ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಅಜರಾಮರರಾಗಿ ಉಳಿದಿದ್ದಾರೆ. ಅವರ ಪುತ್ರ ಬಸವರಾಜ ಬೊಮ್ಮಾಯಿ ಅನಿರೀಕ್ಷಿತ ಬೆಳವಣಿಗೆಯಿಂದ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅಪ್ಪನ ಹಾದಿಯಲ್ಲಿ ಬಸವರಾಜ ಬೊಮ್ಮಾಯಿ ಹೆಜ್ಜೆ ಹಾಕಲಿದ್ದಾರಾ? ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್ ಬೊಮ್ಮಾಯಿ ಅವರ ಮಾನವತಾ ರಾಜಕಾರಣದ ವಿವರ ಇಲ್ಲಿದೆ.

ವಿದ್ಯಾರ್ಥಿ ದೆಸೆಯಿಂದಲೇ ಹೋರಾಟ: ಕಮೊಡಳ್ಳಿ ಪ್ರದೇಶದಲ್ಲಿ ರೈತರು ಭೀಕರ ಬರಗಾಲಕ್ಕೆ ತುತ್ತಾಗಿದ್ದರು. ಕಂದಾಯ ಕಡಿಮೆ ಮಾಡಿ ಅಂತ ಜಮಖಂಡಿಯ ರಾಜನಿಗೆ ಮನವಿ ಸಲ್ಲಿಸಬೇಕಿತ್ತು. ಮನವಿಯನ್ನು ರಾಜನ ಎದುರು ಓದುವ ಧೈರ್ಯ ಯಾರೂ ತೋರಿರಲಿಲ್ಲ. ಆಗ ರಾಜನ ಎದುರು ರೈತರ ಮನವಿಯನ್ನು ಓದಿ ಕಂದಾಯವನ್ನು ಮನ್ನಾ ಮಾಡಿಸಿದ್ದು ಪುಟ್ಟ ಬಾಲಕ. ಆತ ಬೇರೆ ಯಾರೂ ಅಲ್ಲ. ರಾಜ್ಯ ಕಂಡ ಅಪರೂಪದ ರಾಜಕಾರಣಿ ಎಸ್.ಆರ್. ಬೊಮ್ಮಾಯಿ. ಅವರ ಬಾಲ್ಯದ ಘಟನೆಯಿದು ಇವತ್ತಿನ ರಾಜಕಾರಣ ನೋಡಿದಿದ್ದರೆ ಬಹುಶಃ ದೂರ ಸರಿಯುತ್ತಿದ್ದರೋ ಏನೋ? ಎಸ್. ಆರ್. ಬೊಮ್ಮಾಯಿ ಮಾಡಿದ್ದು ಅಪ್ಪಟ ಜನಸೇವಾ ರಾಜಕಾರಣ. ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಮೂಲಕ ರೂಪಗೊಂಡ ನಾಯಕ. ಧಾರವಾಡ ಕರ್ನಾಟಕ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೇ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಧಾರವಾಡಕ್ಕೆ ಆಹ್ವಾನಿಸಿ ಸಭೆ ಆಯೋಜಿಸಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದರು. ವೈದ್ಯನಾಗಬೇಕೆಂಬುದು ಎಸ್.ಆರ್. ಬೊಮ್ಮಾಯಿ ಅವರ ತಂದೆಯ ಆಪೇಕ್ಷೆ. ಆದರೆ ಎಸ್. ಆರ್ ಬೊಮ್ಮಾಯಿ ವಕೀಲಿಕೆ ಆಯ್ಕೆ ಮಾಡಿಕೊಂಡು ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪಾಲ್ಗೊಂಡರು. ಅವಿಭಜಿತ ಧಾರವಾಡ ಜಿಲ್ಲೆಯ ಮುಂಚೂಣಿ ನಾಯಕ. 1953 ರಲ್ಲಿ ಪೊಟ್ಟಿ ಶ್ರೀರಾಮುಲು ಕರ್ನಾಟಕ ಏಕೀಕರಣಕ್ಕಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡ ವೇಳೆ ಅವರ ಬೆಂಬಲಕ್ಕೆ ನಿಂತವರು ಎಸ್.ಆರ್. ಬೊಮ್ಮಾಯಿ. ಇದು ಅವರ ಬಾಲ್ಯದ ಜೀವನ. ಮುಂದೆ ಓದಿ...

'ಸೈನಿಕ'ನಿಗೆ ಖುಷಿ ಕೊಡಲಿಲ್ಲವೇ ಬಸವರಾಜ ಬೊಮ್ಮಾಯಿ ಆಯ್ಕೆ!?'ಸೈನಿಕ'ನಿಗೆ ಖುಷಿ ಕೊಡಲಿಲ್ಲವೇ ಬಸವರಾಜ ಬೊಮ್ಮಾಯಿ ಆಯ್ಕೆ!?

ರಾಯಪ್ಪನ ನಾಲ್ಕು ಮಕ್ಕಳಲ್ಲಿ ಒಬ್ಬ ಬಸವರಾಜ ಬೊಮ್ಮಾಯಿ

ರಾಯಪ್ಪನ ನಾಲ್ಕು ಮಕ್ಕಳಲ್ಲಿ ಒಬ್ಬ ಬಸವರಾಜ ಬೊಮ್ಮಾಯಿ

ಭೂಮಿ ಉಳುವವನೇ ಅದರ ಒಡೆಯ ಭೂ ಸುಧಾರಣೆ ಕಾಯ್ದೆ ಜಾರಿಗೆ ತರುವ ಮುನ್ನವೇ ಬಡ ಗೇಣಿದಾರರ ಪರ ಟೊಂಕ ಕಟ್ಟಿ ಕಾನೂನು ಸಮರ ಸಾರಿದ್ದರು. ನ್ಯಾಯಾಲಯದ ಮೆಟ್ಟಿಲೇರಿ ನ್ಯಾಯ ದೊರಕಿಸಿ ಮಾನವೀಯತೆ ಮೆರೆದಿದ್ದರು. ಹೀಗೆ ಬಾಲ್ಯದಿಂದಲೇ ಹೋರಾಟದ ಹಾದಿಯಿಂದ ಬಂದಿದ್ದು ಎಸ್.ಆರ್. ಬೊಮ್ಮಾಯಿ. ಮಹಾ ಮಾನವತಾವಾದಿ ಎಂ.ಎನ್. ರಾಯ್ , ಶಾಂತವೇರಿ ಗೋಪಾಲಗೌಡರ ಚಿಂತನೆಗಳಿಗೆ ಒಳಗಾದವರು. ಅದೇ ಕುಟುಂಬದ ಕುಡಿ ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ. ಎಸ್.ಆರ್. ಬೊಮ್ಮಾಯಿ ಧಾರವಾಡ ಜಿಲ್ಲೆಯ ಸವಣೂರು ತಾಲೂಕಿನ ಕಾರಡಗಿ ಗ್ರಾಮದಲ್ಲಿ ರಾಯನಗೌಡ- ಶಿವಮ್ಮ ದಂಪತಿಯ ಎರಡನೇ ಮಗ. ಪ್ರಾಥಮಿಕ ಶಿಕ್ಷಣವನ್ನು ಕುಂದಗೋಳ ಕಮಡೊಳ್ಳಿಯಲ್ಲಿ ಮುಗಿಸಿದ್ದವರು. ಸೋದರ ಮಾವನ ಮಗಳು ಗಂಗಮ್ಮ ಅವರನ್ನು ಮದುವೆಯಾದರು. ಅಪ್ಪನ ಬಯಕೆಯಂತೆ ಎಸ್.ಆರ್. ಬೊಮ್ಮಾಯಿ ವೈದ್ಯರಾಗಬೇಕಿತ್ತು. ಆದ್ರೆ ಆಯ್ಕೆ ಕಾನೂನು ಆಯ್ಕೆ ಮಾಡಿಕೊಂಡು ಬೆಳಗಾವಿಯ ರಾಜಾ ಲಕಮನಗೌಡ ಕಾಲೇಜಿನಲ್ಲಿ ಪದವಿ ಮುಗಿಸಿದರು. ಬೊಮ್ಮಾಯಿ ಅವರಿಗೆ ನಾಲ್ಕು ಮಕ್ಕಳು. ಇಬ್ಬರು ಪುತ್ರರು, ಇಬ್ಬರು ಪುತ್ರಿಯರು. ಅವರಲ್ಲಿ ಒಬ್ಬರು ಬಸವರಾಜ ಬೊಮ್ಮಾಯಿ.

ಸ್ವಾತಂತ್ರ್ಯ ಅಭ್ಯರ್ಥಿಯಾಗಿ ರಾಜಕೀಯ ರಂಗ ಪ್ರವೇಶ

ಸ್ವಾತಂತ್ರ್ಯ ಅಭ್ಯರ್ಥಿಯಾಗಿ ರಾಜಕೀಯ ರಂಗ ಪ್ರವೇಶ

ಎಂ.ಎನ್. ರಾಯ್ ವಿಚಾರಧಾರೆಗೆ ಮನ ಸೋತಿದ್ದ ಎಸ್.ಆರ್.ಬೊಮ್ಮಾಯಿ ಜನಪರ ವಿಚಾರಧಾರೆ ಮೈಗೂಡಿಸಿಕೊಂಡವರು. ರೈತರು, ಸ್ನೇಹಿತರ ಒತ್ತಾಸೆ ಮೇರೆಗೆ 1962 ರಲ್ಲಿ ಸ್ವಾತಂತ್ರ್ಯ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿ ಸೋತಿದ್ದರು. ಸೋತ ಮರು ದಿನವೇ ವಕೀಲಿಕೆ ಕೆಲಸ ಆರಂಭಿಸಿದ್ದರು. ಅನ್ಯಾಯದ ವಿರುದ್ಧ ಸಿಡಿದೆದ್ದಿದದ್ದರು. 1967 ರಲ್ಲಿ ಕುಂದಗೋಳ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಗಳಿಸಿ ರಾಜಕೀಯ ರಂಗಕ್ಕೆ ಪ್ರವೇಶಿಸಿದರು. ಹೀಗೆ ಆರಂಭವಾದ ರಾಜಕೀಯ ಜೀವನ ನಾಲ್ಕು ದಶಕಗಳ ಕಾಲ ನಡೆಯಿತು. ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಅವರ ಒಡನಾಟದೊಂದಿಗೆ ತನ್ನ ಚಾಪು ಮೂಡಿಸಿದ್ದ ಎಸ್.ಆರ್. ಬೊಮ್ಮಾಯಿಗೆ ವೀರೇಂದ್ರ ಪಾಟೀಲರ ನಿಕಟ ಸಂಪರ್ಕ ವಾಗಿತ್ತು. ಅವರ ಒತ್ತಾಸೆ ಮೇರೆಗೆ ಸಂಸ್ಥಾ ಕಾಂಗ್ರೆಸ್ ಸೇರಿದ್ದರು. ಆದರೆ ಚುನಾವಣೆಯಲ್ಲಿ ಸೋತು ಜನರ ಒತ್ತಾಸೆ ಮೇರೆಗೆ ವಿಧಾನ ಪರಿಷತ್‌ಗೆ ಆಯ್ಕೆಯಾದರು. ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯ ವಿರುದ್ಧ ಧ್ವನಿಯೆತ್ತಿದರು. ಇಂದಿರಾಗಾಂಧಿ ವಿರುದ್ಧವಾಗಿ ಜಯ ಪ್ರಕಾಶ್ ನಾರಾಯಣ್ ಆಂದೋಲನ ಭಾಗವಾಗಿ ಹೋರಾಟ ನಡೆಸಿ ಜನತಾ ಪಕ್ಷ ಸೇರಿದರು. ರಾಮಕೃಷ್ಣಹೆಗಡೆ ನಿಕಟವರ್ತಿಯಾಗಿ ಬೆಳೆದರು.

ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಹೆಚ್ ಡಿ ಕುಮಾರಸ್ವಾಮಿ ನೀಡಿದ ಸಂದೇಶವೇನು?ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಹೆಚ್ ಡಿ ಕುಮಾರಸ್ವಾಮಿ ನೀಡಿದ ಸಂದೇಶವೇನು?

ಬೊಮ್ಮಾಯಿ ಬಡವರ ಪರ ಯೋಜನೆಗಳು

ಬೊಮ್ಮಾಯಿ ಬಡವರ ಪರ ಯೋಜನೆಗಳು

ಬೊಮ್ಮಾಯಿ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿ 1978 ರಲ್ಲಿ ಜನತಾ ಪಕ್ಷದಿಂದ 59 ಮಂದಿ ವಿಧಾನ ಸಭೆ ಪ್ರವೇಶ ಮಾಡುವಂತೆ ಮಾಡಿದ್ದರು. ಹುಬ್ಬಳ್ಳಿ ಗ್ರಾಮಾಂತರ ಕ್ಷೇತ್ರ ಪ್ರತಿನಿಧಿಸಿದ್ದ ಬೊಮ್ಮಾಯಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು. 1983 ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ವೇಳೆ ಕೈಗಾರಿಕಾ ಸಚಿವರಾಗಿದ್ದರು. ಅವರ ಕಾಳಜಿಯೇ ಇವತ್ತಿನ ಏಷ್ಯಾದ ಅತಿದೊಡ್ಡ ಪೀಣ್ಯಾ ಕೈಗಾರಿಕಾ ಪ್ರದೇಶ ಸ್ಥಾಪನೆ ಎಂಬ ಕೀರ್ತಿ ಎಸ್. ಆರ್. ಬೊಮ್ಮಾಯಿ ಅವರದ್ದು. ಹಣಕಾಸು ಖಾತೆಯನ್ನು ಹೆಚ್ಚುವರಿಯಾಗಿ ವಹಿಸಿಕೊಂಡಿದ್ದ ಬೊಮ್ಮಾಯಿ ಅವರು ಅದಾಗಲೇ ಬಡವರಿಗೆ ಎರಡು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ, ಗೋಧಿ, ಧೋತಿಯನ್ನು ನೀಡಿ ಬಡವರ ಬಂಧು ಎನಿಸಿಕೊಂಡಿದ್ದರು ಎನ್ನುತ್ತಾರೆ ಅವರ ಸಮಕಾಲೀನ ರಾಜಕಾರಣಿಗಳು. ಅವರ ಪ್ರಾಮಾಣಿಕತೆ, ದಕ್ಷತೆ, ಜನ ಪರ ಕಾಳಜಿ, ಕಾನೂನು ತಿಳುವಳಿಕೆ ನೆನಪಿಸಿಕೊಂಡು ಸಂತಸ ವ್ಯಕ್ತಪಡಿಸುತ್ತಾರೆ.

ಎಸ್.ಆರ್. ಬೊಮ್ಮಾಯಿಗೆ ಅನಿರೀಕ್ಷಿತ ಸಿಎಂ ಪಟ್ಟ

ಎಸ್.ಆರ್. ಬೊಮ್ಮಾಯಿಗೆ ಅನಿರೀಕ್ಷಿತ ಸಿಎಂ ಪಟ್ಟ

ಬಿಜೆಪಿಯಲ್ಲಿ ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಹುದ್ದೆಗೆ ಬಸವರಾಜ ಬೊಮ್ಮಾಯಿ ಆಯ್ಕೆಯಾದದರು. ಇದೇ ರೀತಿಯ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಿಂದ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್. ಬೊಮ್ಮಾಯಿ ಜೀವನದಲ್ಲಿ ಘಟಿಸಿತ್ತು. ಟೆಲಿಪೋನ್ ಕದ್ದಾಲಿಕೆ ಪ್ರಕರಣದಲ್ಲಿ ರಾಮಕೃಷ್ಣ ಹೆಗಡೆ ರಾಜೀನಾಮೆ ಕೊಡುವ ಪ್ರಸಂಗ ಎದುರಾಗಿತ್ತು. ಅವಾಗ, ಮಾಜಿ ಪ್ರಧಾನಿ ದೇವೇಗೌಡ, ನಜೀರ್ ಸಾಬ್ ಹಾಗೂ ಎಸ್.ಆರ್. ಬೊಮ್ಮಾಯಿ, ರಾಚಯ್ಯ, ಜೆ.ಎಚ್. ಪಟೇಲ್ ಹೆಸರು ಸಿಎಂ ಹುದ್ದೆಗೆ ಮುಂಚೂಣಿಯಲ್ಲಿ ಕೇಳಿ ಬಂದಿತ್ತು. ಆದರೆ ಆಡಳಿತ ರೂಢ ರಾಮಕೃಷ್ಣ ಹೆಗ್ಗಡೆ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಎಸ್.ಆರ್ ಬೊಮ್ಮಾಯಿ ಅವರೇ ಸಿಎಂ ಎಂದು ಎಲ್ಲರೂ ಭಾವಿಸಿದ್ದರು. ಈ ವೇಳೆ ನಾಯಕರಲ್ಲಿ ಮನಸ್ತಾಪ ಉಂಟಾಗಿ ಕೇಂದ್ರ ದಿಂದ ವೀಕ್ಷಕರಾಗಿ ಬಂದಿದ್ದ ಚಿಮನ್ ಬಾಯ್ ಪಟೇಲ್ ಹಾಗೂ ಇತರರು ಶಾಸಕಾಂಗ ಪಕ್ಷದ ಸಭೆ ಕರೆದು ಚರ್ಚಿಸಿದರು. ಅಂತಿಮವಾಗಿ ಎಸ್.ಆರ್. ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ 1988 ರಲ್ಲಿ ಆಯ್ಕೆ ಮಾಡಿ, 17 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ವಿಪರ್ಯಾಸವೆಂದರೆ, ಬಸವರಾಜ ಬೊಮ್ಮಾಯಿ ಕೂಡ ಇದೇ ರೀತಿ ಯಡಿಯೂರಪ್ಪ ಅವರ ರಾಜೀನಾಮೆಯಿಂದ ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಹುದ್ದೆಗೆ ನೇಮಕಗೊಂಡಿದ್ದು, ಅಪ್ಪನಂತೆ ಚುಕ್ಕಾಣಿ ಹಿಡಿದಿದ್ದಾರೆ.

ಅಪ್ಪನಂತೆ ಚಾಣಾಕ್ಷ ಹೆಜ್ಜೆ ಇಡ್ತಾರಾ ಬಸವರಾಜ್ ಬೊಮ್ಮಾಯಿ

ಅಪ್ಪನಂತೆ ಚಾಣಾಕ್ಷ ಹೆಜ್ಜೆ ಇಡ್ತಾರಾ ಬಸವರಾಜ್ ಬೊಮ್ಮಾಯಿ

ಎಸ್.ಆರ್. ಬೊಮ್ಮಾಯಿ ಹೆಸರು ಕೇಳದ ರಾಜಕಾರಣಿ ಭಾರತದಲ್ಲಿ ಇಲ್ಲ ಎಂದರೆ ತಪ್ಪಾಗಲಾರದು. ಪಕ್ಷದಲ್ಲಿ ಮೂಡಿದ ಆಂತರಿಕ ಭಿನ್ನಮತದಿಂದ 1989 ರಲ್ಲಿ 17 ಮಂದಿ ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸು ಪಡೆಯುತ್ತಿರುವುದಾಗಿ ರಾಜ್ಯಪಾಲರಿಗೆ ಮನವಿ ನೀಡಿದ್ದರು. ಸಚಿವ ಸಂಪುಟ ಸಭೆ ಕರೆದು ಬಹುಮತ ಸಾಬೀತು ಮಾಡಲು ಅವಕಾಶ ನೀಡದೆ ಸರ್ಕಾರವನ್ನು ವಜಾ ಮಾಡಿ ಅಂದಿನ ರಾಜ್ಯಪಾಲ ವೆಂಕಟಸುಬ್ಬಯ್ಯ ಆದೇಶ ಮಾಡಿ ರಾಷ್ಟ್ರಪತಿ ಆಡಳಿತವನ್ನು ಹೇರಿದ್ದರು. ಈ ನಿರ್ಣಯದ ವಿರುದ್ಧ ಎಸ್.ಆರ್. ಬೊಮ್ಮಾಯಿ ಹೈಕೋರ್ಟ್ ನಲ್ಲಿ ಹೋರಾಟ ನಡೆಸಿ ವಿಫಲರಾದರು. ಅಂತಿಮವಾಗಿ ಸುಪ್ರೀಂಕೋರ್ಟ್ ಮೊರೆ ಹೋದರು. ಅಲ್ಲಿ ಎಸ್.ಆರ್. ಬೊಮ್ಮಾಯಿಗೆ ಜಯ ಲಭಿಸಿತು. ಜನತೆಯಿಂದ ಆಯ್ಕೆಯಾದ ಸರ್ಕಾರದ ಬಹುಮತವನ್ನು ವಿಧಾನಸಭೆಯಲ್ಲಿ ಪರೀಕ್ಷೆಗೆ ಒಳಪಡಿಸಬೇಕು. ರಾಜ್ಯಪಾಲರ ಇಚ್ಛಾನುಸಾರ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಇದು ಎಸ್.ಆರ್. ಬೊಮ್ಮಾಯಿ ಕೇಸ್ ಅಂತಲೇ ಖ್ಯಾತಿ ಪಡೆದಿದೆ. ಉರುಳಿ ಬೀಳುತ್ತಿದ್ದ ಎಷ್ಟೋ ಸರ್ಕಾರಗಳ ಉಳಿವಿಗೆ ಈ ಪ್ರಕರಣ ಬುನಾದಿ ಹಾಕಿತು ಎಂದರೂ ತಪ್ಪಾಗಲಾರದು. ಇದು ಎಸ್.ಆರ್. ಬೊಮ್ಮಾಯಿ ಅವರ ನಡೆ. ಇದೇ ರೀತಿ ಬಸವರಾಜ ಬೊಮ್ಮಾಯಿ ಕೂಡ ರಾಜ್ಯದ ಮಾನವತಾವಾದಿ ರಾಜಕಾರಣಿಯಾಗಿ ಹೊರಹೊಮ್ಮಲು ಈ ಅವಕಾಶ ಬಳಸಿಕೊಳ್ಳುತ್ತಾರಾ ಕಾದು ನೋಡಬೇಕು.

English summary
S.R. Bommai was elected to the post of CM of Karnataka due to an unexpected change in politics in 1988. His son, Basavaraja Bommai, has also been nominated CM of Karnataka due to unexpected developments in 2021.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X