keyboard_backspace

NEP ಜಾರಿಯಾದ್ರೆ 3 ರಿಂದ 6 ವರ್ಷದ ಬಡ ಮಕ್ಕಳ ದಾಖಲಾತಿ ಹೇಗೆ?

Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 12: ಪೂರ್ವ ಪ್ರಾಥಮಿಕ ಹಂತದಿಂದ ಪಿಯುಸಿವರೆಗೆ ರಾಷ್ಟ್ರೀಯ ಶಿಕ್ಷಣ ನೀತಿ- 2020 ಅನುಷ್ಠಾನ ಸಂಬಂಧ ರಾಜ್ಯ ಸರ್ಕಾರ ರಚಿಸಿರುವ ಕಾರ್ಯಪಡೆ ರಚನೆ ಮಾಡುವಲ್ಲಿ ದೊಡ್ಡ ಪ್ರಮಾದ ಎಸಗಿದೆ.

ಪೂರ್ವ ಪ್ರಾಥಮಿಕ ಶಾಲೆ ಹಂತದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವ ಬಗ್ಗೆ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಈವರೆಗೂ ಸರ್ಕಾರಿ ಹಂತದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಬಡ ಮಕ್ಕಳಿಗೆ ಅಂಗನವಾಡಿಗಳ ಮೂಲಕ ನೀಡಲಾಗುತ್ತಿತ್ತು. "ಆಟ- ಪಾಠ- ಜತೆಗೆ ಊಟ'ದ ಕಲ್ಪನೆಯೊಂದಿಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿ 65 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ 1.25 ಲಕ್ಷ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಲಕ್ಷಾಂತರ ಮಕ್ಕಳು ಪೌಷ್ಠಿಕ ಆಹಾರದ ಜತೆಗೆ ಪಾಠವನ್ನು ಕಲಿಯುತ್ತಿದ್ದರು. ಇದೀಗ ನೂತನ ನೀತಿ ಪ್ರಕಾರ ಮೂರು ವರ್ಷದ ಮೇಲ್ಪಟ್ಟ ಮಕ್ಕಳು ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ಪ್ರಾಥಮಿಕ ಶಾಲೆಗೆ ದಾಖಲಾಗಬೇಕಾಗಿದೆ.

ಒಂದು ವೇಳೆ ಅಂಗನವಾಡಿಯಲ್ಲಿ ದಾಖಲಾಗಬೇಕಾಗಿರುವ ಮೂರರಿಂದ ಆರು ವರ್ಷದ ಲಕ್ಷಾಂತರ ಮಕ್ಕಳು ಪ್ರಾಥಮಿಕ ಶಾಲೆಗಳಿಗೆ ದಾಖಲಾದರೆ ಅಂಗನವಾಡಿಗಳ ಬಾಗಿಲು ಮುಚ್ಚಬೇಕು. ಇಂತಹ ಸಂಕಷ್ಟ ಸ್ಥಿತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಂಬಂಧ ಮಾಡಿರುವ ಕಾರ್ಯಪಡೆಯಲ್ಲಿ ಈ ವಿಚಾರವನ್ನೇ ಗಂಭೀರವಾಗಿ ಪರಿಗಣಿಸಿ ಮೂರು ವರ್ಷದಿಂದ ಆರು ವರ್ಷದ ಮಕ್ಕಳಿಗೆ ಶಿಕ್ಷಣ ಅಂಗನವಾಡಿಗಳಲ್ಲೇ ಮುಂದುವರೆಸಬೇಕಾ? ಇಲ್ಲವೇ ಹೊಸ ಪೂರ್ವ ಪ್ರಾಥಮಿಕ ಶಾಲೆಗಳನ್ನು ರಚನೆ ಮಾಡಬೇಕಾ? ಪೂರ್ವ ಪ್ರಾಥಮಿಕ ಶಾಲೆ ಸ್ಥಾಪನೆ ಮಾಡಿದರೆ, ಅಂಗನವಾಡಿಗಳನ್ನು ಏನು ಮಾಡಬೇಕು? ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಕಥೆಯೇನು ಎಂಬುದರ ಬಗ್ಗೆ ಕಾರ್ಯಪಡೆ ಗಂಭೀರ ಚರ್ಚೆ ನಡೆಸಬೇಕು. ಇದರ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಂಗನವಾಡಿ ನೌಕರರ ಪ್ರತಿನಿಧಿಗಳು, ಪುಟಾಣಿ ಮಕ್ಕಳ ತಜ್ಞರು ಈ ಕಾರ್ಯಪಡೆಯಲ್ಲಿ ಇರಬೇಕಿತ್ತು.

ರಾಜ್ಯ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ಮದನ ಗೋಪಾಲ್ ನೇತೃತ್ವದಲ್ಲಿ ರಚನೆ ಮಾಡಿರುವ ಸಮಿತಿಯಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾಗಲೀ, ಪುಟಾಣಿ ತಜ್ಞರಾಗಲೀ ನೌಕರರ ಪ್ರತಿನಿಧಿಯಾಗಲೀ ಯಾರೂ ಸಹ ಕಾರ್ಯಪಡೆಯಲ್ಲಿ ಸ್ಥಾನ ಗಿಟ್ಟಿಸಿಲ್ಲ. ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ನಡುವೆ ಮುಸುಕಿನ ಗುದ್ದಾಟಕ್ಕೆ ನಾಂದಿ ಹಾಡಿದೆ. ಮಾತ್ರವಲ್ಲ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರದಲ್ಲಿ ದೊಡ್ಡ ಗೊಂದಲವೇ ಏರ್ಪಟ್ಟಿದೆ.

 ಸಿಡಿದೇಳಲು ಸಿದ್ಧತೆ

ಸಿಡಿದೇಳಲು ಸಿದ್ಧತೆ

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಿರುವ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ಅಂಗನವಾಡಿಗಳಲ್ಲೇ ಉಳಿಸಿಕೊಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಡಿರುವ ಮನವಿಗೆ ಶಿಕ್ಷಣ ಇಲಾಖೆ ಸೊಪ್ಪು ಹಾಕಿಲ್ಲ. ಈ ನಡೆ ನೋಡಿದರೆ ಬಹುಶಃ ಮುಂದಿನ ವರ್ಷದಿಂದ ಪೂರ್ವ ಪ್ರಾಥಮಿಕ ಹಂತದಿಂದ ಪಿಯುಸಿವರೆಗೆ ಜಾರಿಗೆ ಬರಲಿರುವ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಲಿದೆ. ಆದರೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಶಿಕ್ಷಣ ಇಲಾಖೆಯೇ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಆಲೋಚನೆ ಮಾಡಿದಂತಿದೆ. ಆರ್ಥಿಕ ಹೊರೆ ಜತೆಗೆ ಹೊಸ ಶಿಕ್ಷಕರ ನೇಮಕಾತಿಯ ಅನಿವಾರ್ಯತೆಗೆ ಬೀಳಲಿದ್ದು, ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರ ಭವಿಷ್ಯದ ಮೇಲೆ ಕಾರ್ಮೋಡ ಬೀರಿದೆ. ಇದರಿಂದ ಎಚ್ಚೆತ್ತ ಅಂಗನವಾಡಿ ನೌಕರರು ಅಕ್ಟೋಬರ್ 3ರಂದು ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮೇಲೆ ಬೀರುವ ಪರಿಣಾಮಗಳ ಬಗ್ಗೆ ದೊಡ್ಡ ಸಮಾಲೋಚನಾ ಸಭೆ ಏರ್ಪಡಿಸಿದೆ.

ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಉಳಿಸಿಕೊಳ್ಳುವ ಜತೆಗೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಕುರಿತು ಚರ್ಚೆ ನಡೆಸಲು ತೀರ್ಮಾನಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಸಂಬಂಧ ರಚನೆ ಮಾಡಿರುವ ಕಾರ್ಯಪಡೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಪರಿಗಣಿಸದಿರುವುದರ ಬಗ್ಗೆಯೂ ಸಮಾಲೋಚನೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಇಲ್ಲಿ ಕೈಗೊಳ್ಳುವ ತೀರ್ಮಾನಗಳು ಮುಂದಿನ ದಿನಗಳಲ್ಲಿ ಅಂಗನವಾಡಿಗಳು ಹಾಗೂ ಪ್ರಾಥಮಿಕ ಶಾಲೆಗಳ ನಡುವೆ ತಿಕ್ಕಾಟಕ್ಕೆ ನಾಂದಿ ಹಾಡಬಹುದು.

 ಅಂಕಿ ಅಂಶ ಕಳಿಸಲು ಸೂಚನೆ

ಅಂಕಿ ಅಂಶ ಕಳಿಸಲು ಸೂಚನೆ

ಇನ್ನು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಿನ್ನೆಲೆಯಲ್ಲಿ ಅಂಗನವಾಡಿಗಳಲ್ಲಿ ಮೂರರಿಂದ ಆರು ವರ್ಷ ತುಂಬಿದ ಮಕ್ಕಳ ಅಂಕಿ ಅಂಶಗಳನ್ನು ಕಳುಹಿಸುವಂತೆ ಪ್ರಾಥಮಿಕ ಶಿಕ್ಷಣ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಿದೆ. ರಾಜ್ಯದ ಎಲ್ಲಾ ಅಂಗನವಾಡಿಗಳಲ್ಲಿ ಓದುತ್ತಿರುವ ಮಕ್ಕಳ ಅಂಕಿ ಅಂಶಗಳನ್ನು ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೂ ಸಿದ್ಧತೆ ನಡೆಸಿದೆ. ಇದರ ನಡುವೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಂಗನವಾಡಿ ನೌಕರರು ಕಾರ್ಯತಂತ್ರ ರೂಪಿಸುತ್ತಿದ್ದು, ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

 ಅಪೌಷ್ಠಿಕತೆ ವಿರುದ್ಧ ಅಂಗನವಾಡಿಗಳ ಸಮರ

ಅಪೌಷ್ಠಿಕತೆ ವಿರುದ್ಧ ಅಂಗನವಾಡಿಗಳ ಸಮರ

ದೇಶದಲ್ಲಿ ಬಡ ಮಕ್ಕಳ ಅಪೌಷ್ಠಕತೆ ಹೋಗಲಾಡಿಸುವ ಜತೆಗೆ ಅಕ್ಷರ ಕಲಿಕೆಗೆ ಬುನಾದಿ ಹಾಕಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಅಂಗನವಾಡಿ ಹಾಗೂ ಬಾಲವಾಡಿಗಳನ್ನು ತೆರೆಯಲಾಗಿದೆ. ಕೇಂದ್ರ ಸರ್ಕಾರದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಜನಿಸಿದ ಮಗುವಿಗೆ ಆರಂಭದಿಂದ ಮೂರು ವರ್ಷದವರೆಗೆ ಮಗುವಿನ ತಾಯಿ ಮತ್ತು ಮಗುವಿಗೆ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಮೂರು ವರ್ಷ ತುಂಬಿದ ಕೂಡಲೇ ಅಂಗನವಾಡಿಗೆ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ಅಲ್ಲಿ ಆಟ, ಓಟ ಪಾಠವನ್ನು ಕಲಿಸಲಾಗುತ್ತಿದೆ. ದೇಶದಲ್ಲಿ ಗ್ರಾಮೀಣ ಮಕ್ಕಳ ಅಪೌಷ್ಠಿಕತೆ ಹೋಗಲಾಡಿಸುವ ಜತೆಗೆ ಅಕ್ಷರ ಕಲಿಕೆ ಬುನಾದಿ ಹಾಕುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ವಿಶ್ವಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಗ್ರಾಮೀಣ ಭಾಗದ ಬಹುತೇಕ ಬಡ ಮಕ್ಕಳು ಅಂಗನವಾಡಿ ಶಿಕ್ಷಣ ಕಲಿತ ಕೂಡಲೇ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಗೆ ದಾಖಲಾಗಿ ಶಿಕ್ಷಣ ಕಲಿಯುವ ಪದ್ಧತಿ ಮುಂದುವರೆದಿದೆ. ಆದರೆ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಈ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ದೊಡ್ಡ ಪೆಟ್ಟು ಬೀಳುವ ಸಾಧ್ಯತೆಯಿದೆ. ಇದಕ್ಕೆ ನ್ಯಾಯ ಸಮ್ಮತ ತೀರ್ಮಾನ ಶಿಕ್ಷಣ ಇಲಾಖೆ ತೆಗೆದುಕೊಳ್ಳದಿದ್ದಲ್ಲಿ ದೊಡ್ಡ ಮಟ್ಟದ ಸಮಸ್ಯೆ ಎದುರಾಗಲಿದೆ ಎನ್ನುತ್ತಾರೆ ಶಿಕ್ಷಣ ತಜ್ಞರು.

 ಪೂರ್ವ ಪ್ರಾಥಮಿಕ ಶಿಕ್ಷಣದ ಬಗ್ಗೆ ಗೊಂದಲ

ಪೂರ್ವ ಪ್ರಾಥಮಿಕ ಶಿಕ್ಷಣದ ಬಗ್ಗೆ ಗೊಂದಲ

ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪೂರ್ವ ಪ್ರಾಥಮಿಕ ಶಾಲೆ ಆರಂಭದ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ ಇದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿಗಳಲ್ಲಿ ಆರಂಭಿಸುವ ಬಗ್ಗೆ ಹೊಸ ನೀತಿಯಲ್ಲಿ ಉಲ್ಲೇಖಿಸಿಲ್ಲ. ಕೇವಲ ಖಾಸಗಿ ಶಾಲೆಗಳಿಗೆ ಸೀಮಿತವಾಗಿದ್ದ ಪೂರ್ವ ಪ್ರಾಥಮಿಕ ಶಾಲೆಗಳನ್ನು ಸರ್ಕಾರ ಆರಂಭಿಸುವ ಉದ್ದೇಶ ಸರಿಯಿದೆ. ಆದರೆ ಅದನ್ನು ಅಂಗನವಾಡಿಗಳಲ್ಲಿ ಪ್ರಾರಂಭಿಬೇಕಾ? ಇಲ್ಲವೇ ಪ್ರಾಥಮಿಕ ಶಾಲೆಗಳಲ್ಲಿ ಪ್ರಾರಂಭಿಸಬೇಕಾ ಎಂಬುದರ ಬಗ್ಗೆ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಲ್ಲ. ಇನ್ನು ದೇಶದಲ್ಲಿ ಮೊದಲು ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದ್ದು, ಸರ್ಕಾರ ಈ ಗೊಂದಲವನ್ನು ಯಾವ ರೀತಿ ಪರಿಹರಿಸುತ್ತದೆ ಕಾದು ನೋಡಬೇಕು.

English summary
National Education Policy 2020: The Government not considered women and child welfare department officials in the NEP task force.K now more
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X