ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಗುರಿದ ಕನಸು! ಹಳ್ಳಿಯ ಬರದ ಬವಣೆ ನೀಗಿಸಿದ ಎಂಜಿನಿಯರ್ ಯುವಕನ ಯಶೋಗಾಥೆ

|
Google Oneindia Kannada News

ಶಿವರಾಮ ಕಾರಂತರ 'ಚಿಗುರಿದ ಕನಸು' ಕಾದಂಬರಿ ಆಧಾರಿತ ಅದೇ ಹೆಸರಿನ ಸಿನಿಮಾ ನೋಡಿರಬಹುದು. ನಾಗಾಭರಣದ ನಿರ್ದೇಶನದಲ್ಲಿ ಶಿವರಾಜ್ ಕುಮಾರ್ ಅಭಿನಯದ ಈ ಸಿನಿಮಾ ರಾಜ್ಯ ಪ್ರಶಸ್ತಿ ಪಡೆದುಕೊಂಡಿತ್ತು. ನಗರದಲ್ಲಿ ನೆಲೆಸಿದ್ದ ಯುವಕನೊಬ್ಬ ತನ್ನ ವಂಶಜರ ಮೂಲ ನೆಲೆಯನ್ನು ಹುಡುಕಿಕೊಂಡು ಬಂದು ಅಲ್ಲಿಯ ಜನರ ಮೂಲ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಅಲ್ಲಿಯೇ ನೆಲೆಸುವ ಭಾವನಾತ್ಮಕ ನಂಟಿನ ಕಥೆಯಿದು. ಇದೇ ಸಿನಿಮಾ ಹಿಂದಿಯಲ್ಲಿ ಶಾರುಖ್ ಖಾನ್ ನಟನೆಯ 'ಸ್ವದೇಸ್' ಹೆಸರಿನಲ್ಲಿ ಮತ್ತೆ ನಿರ್ಮಾಣವಾಗಿತ್ತು.

ಇದು ಕಾದಂಬರಿ, ಸಿನಿಮಾವಾಯಿತು. ಆದರೆ, ನಿಜದ ಬದುಕಿನಲ್ಲಿಯೂ ಮೂಲ ಊರಿನೆಡೆಗಿನ ಪ್ರೀತಿ ಈ ರೀತಿಯ ಸಾಹಸಗಳಿಗೆ ಪ್ರೇರಣೆ ನೀಡುತ್ತದೆ ಎನ್ನುವುದಕ್ಕೆ ಸಾಕ್ಷಿ ನೆರೆಯ ಮಹಾರಾಷ್ಟ್ರದಲ್ಲಿದೆ.

ಮಹಾರಾಷ್ಟ್ರ ಎಂದರೆ ತುಂಬಾ ದೂರದ್ದೇನಲ್ಲ. ಕರ್ನಾಟಕದ ಗಡಿಗೆ ಅಂಟಿಕೊಂಡಂತೆಯೇ ಕೇವಲ ಆರು ಕಿ.ಮೀ. ದೂರದಲ್ಲಿ ಇರುವ ಲಾತೂರು ಜಿಲ್ಲೆಯ ಹಲ್ಗರಾ ಎಂಬ ಪುಟ್ಟ ಗ್ರಾಮದ ಆದರ್ಶ ವ್ಯಕ್ತಿಯ ಕಥೆಯಿದು.

ಭೂ ತಾಯಿ ಒಡಲಿಗೆ ವಿಷ ತುಂಬಲ್ಲ ಎಂದು ಆಣೆ ಮಾಡಿದಂತೆ ಬದುಕುತ್ತಿರುವ ಯುವಕರಿವರುಭೂ ತಾಯಿ ಒಡಲಿಗೆ ವಿಷ ತುಂಬಲ್ಲ ಎಂದು ಆಣೆ ಮಾಡಿದಂತೆ ಬದುಕುತ್ತಿರುವ ಯುವಕರಿವರು

ಇದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಸಾಂಟಾ ಕ್ಲಾರಾದಲ್ಲಿ ನೆಲೆಸಿರುವ ದತ್ತಾ ಪಾಟೀಲ್ ಎಂಬ ಎಂಜಿನಿಯರ್‌ನ ತವರು ಮನೆಯಿದು.

'ದಿ ಬೆಟರ್ ಇಂಡಿಯಾ' ವೆಬ್‌ತಾಣ ದತ್ತಾ ಪಾಟೀಲ್ ಅವರ ಹೋರಾಟದ ಯಶೋಗಾಥೆಯ ಕುರಿತು ಪ್ರಕಟಿಸಿದ ಬರಹದ ಕನ್ನಡ ಅವತರಣಿಕೆ ಇಲ್ಲಿದೆ.(ಚಿತ್ರ ಕೃಪೆ: ದತ್ತಾ ಪಾಟೀಲ್ ಫೇಸ್‌ಬುಕ್ ಖಾತೆ)

ಅಮೆರಿಕದಲ್ಲಿ ಎಂಜಿನಿಯರ್

ಅಮೆರಿಕದಲ್ಲಿ ಎಂಜಿನಿಯರ್

ಯಾಹೂ ಕಂಪೆನಿಯಲ್ಲಿ ಡೈರೆಕ್ಟರ್ ಆಫ್ ಎಂಜಿನಿಯರಿಂಗ್ ಆಗಿರುವ ದತ್ತಾ ಪಾಟೀಲ್, ವರ್ಷಕ್ಕೆ ಭಾರಿ ಮೊತ್ತದ ವೇತನ ಪಡೆಯುತ್ತಾರೆ. ಹಾಗೆಂದು ಅವರು ಹುಟ್ಟಿದ ಊರನ್ನು ಮರೆತಿಲ್ಲ. ಹಲ್ಗರಾ ಎಂಬ ಪುಟ್ಟ ಗ್ರಾಮ ಅನೇಕ ಕಾರಣಗಳಿಂದ ಅವರ ಹೃದಯಕ್ಕೆ ತೀರಾ ಹತ್ತಿರವಾಗಿದೆ.

ಅದು ಕೇವಲ ಭಾವನಾತ್ಮಕ ನಂಟಲ್ಲ. ದೂರದ ದೇಶದಲ್ಲಿದ್ದರೂ ಅವರ ಮನಸ್ಸು ತಮ್ಮ ಊರಿಗಾಗಿ ಸದಾ ಮಿಡಿಯುತ್ತಿರುತ್ತದೆ. ಹಾಗೆಯೇ ತಾವು ದುಡಿದ ಹಣವನ್ನು ಅವರು ಮಜಾ ಮಾಡಿ ವ್ಯಯಿಸಲು ಬಳಸುತ್ತಿಲ್ಲ. ಬದಲಾಗಿ ಊರಿನ ಜನರ ಸಂಕಟವನ್ನು ನಿವಾರಿಸಲು ಬಳಸುತ್ತಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಆ ಮೂಲಕ 'ಪ್ರತಿಭಾ ಪಲಾಯನ'ದ ನಿದರ್ಶನವೊಂದು ತಮ್ಮ ಖುಷಿ, ಐಷಾರಾಮಿ ಬದುಕಿನ ವ್ಯಾಮೋಹಕ್ಕಾಗಿ ವಿದೇಶಿ ಉದ್ಯೋಗದ ಬೆನ್ನತ್ತುವ ಸಮುದಾಯಕ್ಕೆ ಮಾದರಿಯೂ ಆಗಿದೆ.

ಬರದಿಂದಾಗಿ ಅಂತರ್ಜಲ ಬತ್ತಿ ಹೋಗಿ ಕುಡಿಯುವ ಹನಿ ನೀರಿಗೂ ಒದ್ದಾಡುತ್ತಿದ್ದ ಹಲ್ಗರಾ ಗ್ರಾಮದಲ್ಲಿ ಮೂರು ವರ್ಷದಿಂದ ದತ್ತಾ ಪಾಟೀಲ್ ಮಾಡಿದ ಕಾರ್ಯ ಅಲ್ಲಿನ ಅಂತರ್ಜಲದ ವೃದ್ಧಿಗೆ ಕಾರಣವಾಗಿದೆ.

ಈ ಮೂಲಕ ಹಲ್ಗರಾ ಗ್ರಾಮವನ್ನು ಮಾದರಿ ಹಳ್ಳಿಯನ್ನಾಗಿ ಹೆಸರುವಾಸಿಯಾಗುವಂತೆ ಮಾಡಿದ್ದಾರೆ.

1946 ಲವ್ ಸ್ಟೋರಿ: 90ರ ಅಜ್ಜ, ಪತ್ನಿಯನ್ನು ಮತ್ತೆ ನೋಡಿದ್ದು 72 ವರ್ಷದ ಬಳಿಕ1946 ಲವ್ ಸ್ಟೋರಿ: 90ರ ಅಜ್ಜ, ಪತ್ನಿಯನ್ನು ಮತ್ತೆ ನೋಡಿದ್ದು 72 ವರ್ಷದ ಬಳಿಕ

ಬಡತನದ ಕುಟುಂಬ

ಬಡತನದ ಕುಟುಂಬ

ಹಲ್ಗರಾದ ಸಾಮಾನ್ಯ ಕೃಷಿ ಕುಟುಂಬದ ಮೂವರು ಮಕ್ಕಳಲ್ಲಿ ದತ್ತಾ ಮೊದಲನೆಯವರು. ಸ್ವಂತ ಎರಡು ಎಕರೆ ಜಮೀನಿನಲ್ಲಿ ದುಡಿಯುವುದರ ಜೊತೆಗೆ ಹೆಚ್ಚುವರಿ ಸಂಪಾದನೆಗಾಗಿ ಬೇರೆಯವರ ಹೊಲದಲ್ಲಿಯೂ ಅವರು ಕೆಲಸ ಮಾಡಬೇಕಾದ ಸ್ಥಿತಿ ಇತ್ತು. ಹೀಗೆ ದುಡಿದರೆ ಮಾತ್ರ ಊಟಕ್ಕೆ ಗಿಟ್ಟುವುದು.

ಸಿಗುತ್ತಿದ್ದ ಅಲ್ಪ ಆಹಾರದಲ್ಲಿಯೇ ತೃಪ್ತಿಯಿಂದ ಬದುಕುವ ಬಗೆಯನ್ನು ದತ್ತಾ ಮತ್ತು ಅವರ ಸಹೋದರರಿಗೆ ಪೋಷಕರು ಕಲಿಸಿಕೊಟ್ಟಿದ್ದರು. ಹೀಗಾಗಿ ಅವರು ಎಂದಿಗೂ ಈ ಬಗ್ಗೆ ದೂರಿದವರಲ್ಲ.

'ನನ್ನ ಅಮ್ಮ ನಾಲ್ಕನೆ ಕ್ಲಾಸ್ ಓದಿದ್ದು. ಅವರಿಗೆ ಓದುವುದು ಮತ್ತು ಬರೆಯುವುದು ಬರುವುದಿಲ್ಲ. ಆದರೆ, ನಾನು ಯಾವಾಗಲೂ ಒಳ್ಳೆಯ ಪುಸ್ತಕಗಳನ್ನೇ ಓದಬೇಕು ಎಂದು ಬಯಸುತ್ತಿದ್ದರು. ಹೊಲಗಳಲ್ಲಿ ಕೆಲಸ ಮಾಡುವ ಸಲುವಾಗಿ ನಾವು ಸಹೋದರರು ಎಂದಿಗೂ ಶಾಲೆ ತಪ್ಪಿಸಲು ಅವರು ಬಿಟ್ಟಿರಲಿಲ್ಲ. ತಮ್ಮ ಬಡತನದ ಚಕ್ರದಿಂದ ಹೊರಬರಲು ಶಿಕ್ಷಣವೊಂದೇ ಸಾಧನ ಎಂಬುದನ್ನು ಬಲವಾಗಿ ನಂಬಿದ್ದರು. ಅವರ ನಂಬಿಕೆ ತಪ್ಪಾಗಿರಲಿಲ್ಲ' ಎನ್ನುತ್ತಾರೆ ದತ್ತಾ.

ಸರ್ಕಾರಿ ಶಾಲೆಯೇ ಸಾಕು: ಮಾದರಿಯಾದರು ಈ ಮಹಿಳಾ ಜಿಲ್ಲಾಧಿಕಾರಿಸರ್ಕಾರಿ ಶಾಲೆಯೇ ಸಾಕು: ಮಾದರಿಯಾದರು ಈ ಮಹಿಳಾ ಜಿಲ್ಲಾಧಿಕಾರಿ

ಕಂಪ್ಯೂಟರ್ ಎನ್ನುವುದೇ ಗೊತ್ತಿರಲಿಲ್ಲ

ಕಂಪ್ಯೂಟರ್ ಎನ್ನುವುದೇ ಗೊತ್ತಿರಲಿಲ್ಲ

ಓದಿನಲ್ಲಿ ಬಲು ಬುದ್ಧಿವಂತನಾಗಿದ್ದ ದತ್ತಾ, ಹತ್ತನೇ ತರಗತಿಯಲ್ಲಿ ಶಾಲೆಗೆ ಮೊದಲಿಗರಾಗಿದ್ದರು. 12ನೇ ತರಗತಿಯಲ್ಲಿ ಮೂರನೇ ರ‍್ಯಾಂಕ್ ಪಡೆದು ವಿಜ್ಞಾನ ವಿಭಾಗಕ್ಕೆ ಸೇರಿಕೊಂಡರು. ಎಂಜಿನಿಯರಿಂಗ್ ಬಗ್ಗೆ ಪ್ರಾಥಮಿಕ ಜ್ಞಾನ ಇಲ್ಲದಿದ್ದರೂ ಎನ್‌ಐಟಿ ಸುರತ್ಕಲ್‌ನಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್‌ಗೆ ಸೇರಿಕೊಂಡರು.

ಕಂಪ್ಯೂಟರ್ ಮುಂದೆ ಮೊದಲ ಬಾರಿಗೆ ಕುಳಿತು ನಮ್ಮ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಆಗುವಂತೆ ಸೂಚಿಸಿದಾಗ ಹೇಗೆ ಕೆಲಸ ಮಾಡುವುದು ಎನ್ನುವುದರ ಬಗ್ಗೆ ಏನೂ ತಿಳಿದಿರಲಿಲ್ಲ. ಈ ರೀತಿಯ ಸಾಧನಗಳ ಬಗ್ಗೆ ನನಗೆ ಮಾರ್ಗದರ್ಶನ ನೀಡುವವರು ಇರಲಿಲ್ಲ ಮತ್ತು ನಮ್ಮ ಹಳ್ಳಿಯಲ್ಲಿ ಇಂತಹ ಸೌಲಭ್ಯಗಳು ದೂರದ ಮಾತು. ನನ್ನ ಸುತ್ತಲೂ ಇದ್ದವರು ನಗರದಲ್ಲಿ ಓದಿ ಬಂದ ಬುದ್ಧಿವಂತ ವಿದ್ಯಾರ್ಥಿಗಳು. ನನ್ನ ಪ್ರಾದೇಶಿಕ ಶಾಲಾ ಶಿಕ್ಷಣದ ಹಿನ್ನೆಲೆಯ ಕಾರಣ ತೀರಾ ಕಷ್ಟವಾಯಿತು. ಅದರಲ್ಲಿಯೂ ಇಂಗ್ಲಿಷ್ ಮಾತನಾಡಲು ಬಾರದೆ ಇರುವುದು ದಿಕ್ಕು ತೋಚದಂತಹ ಸ್ಥಿತಿಗೆ ನೂಕಿತ್ತು ಎಂದು ದತ್ತಾ ನೆನಪಿಸಿಕೊಳ್ಳುತ್ತಾರೆ.

ಅಲ್ಲಿಂದ ಎರಡು ಪಟ್ಟು ಕಷ್ಟಪಟ್ಟು ಕಲಿಯತೊಡಗಿದೆ. ಮನೆಯಿಂದ ದೂರ ಬಂದಿದ್ದರಿಂದ ಮತ್ತು ಅಭದ್ರತೆಯ ಭಾವದಿಂದ ಒಂದು ತಿಂಗಳು ಯಾರೊಂದಿಗೂ ಮಾತನಾಡಿರಲಿಲ್ಲ. ಆದರೆ, ಒಮ್ಮೆ ನಮ್ಮ ಶಿಕ್ಷಕರು ಪರೀಕ್ಷೆಯೊಂದರ ಫಲಿತಾಂಶ ಪ್ರಕಟಿಸಿದಾಗ ನಾನು ತರಗತಿಗೇ ಮೊದಲಿಗನಾಗಿದ್ದೆ. ಆಗ ನನ್ನಲ್ಲಿ ನಾನು ಹೇಳಿಕೊಂಡಿದ್ದು, 'ಇನ್ನು ಹಿಂದೆ ತಿರುಗುವ ಪ್ರಮೇಯವಿಲ್ಲ' ಎಂದು.

ಈ ದೃಢನಿರ್ಧಾರ ಮುಂದೆ ಅವರು ಮೈಕ್ರೋಸಾಫ್ಟ್ ಮತ್ತು ಯಾಹೂದಂತಹ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡಲು ನೆರವು ನೀಡಿತು. ಐದು ವರ್ಷಗಳ ಹಿಂದೆ ಅವರು ಅಮೆರಿಕಕ್ಕೆ ಹಾರಿದರು.

ಕಲಕಿದ ಆತ್ಮಹತ್ಯೆ ಪ್ರಕರಣಗಳು

ಕಲಕಿದ ಆತ್ಮಹತ್ಯೆ ಪ್ರಕರಣಗಳು

ಆದರೆ ಅವರು ಹಲ್ಗರಾದ ತಮ್ಮ ಮೂಲವನ್ನು ಮರೆಯಲಿಲ್ಲ. ವರ್ಷಕ್ಕೊಮ್ಮೆ ತವರಿಗೆ ಮರಳಿ ಪೋಷಕರನ್ನು ದೇವಸ್ಥಾನಗಳಿಗೆ ಕರೆದುಕೊಂಡು ಹೋಗುತ್ತಿದ್ದರು. 2016ರ ಒಂದು ಭೇಟಿ ಅವರಲ್ಲಿ ಹಲ್ಗರಾದ ಹೀನಾಯ ಸ್ಥಿತಿಯನ್ನು ಬದಲಿಸಲು ಪ್ರೇರಣೆ ನೀಡಿತು.

'ಅಮೆರಿಕದಲ್ಲಿ ಇದ್ದಾಗ ಭಾರತದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದರ ಬಗ್ಗೆ ಓದುತ್ತಿದ್ದೆ. ಇದು ನನ್ನನ್ನು ಕಲಕಿದರೂ ಗ್ರಾಮೀಣ ಮಹಾರಾಷ್ಟ್ರದ ನೆಲದ ವಾಸ್ತವದ ಬಗ್ಗೆ ಯಾವ ಸಂಪರ್ಕವೂ ಇಲ್ಲದ ಕಾರಣ ಏನು ಮಾಡುವುದು ಎಂದು ತೋಚದಂತಾಯಿತು. 2016ರಲ್ಲಿ ಲಾತೂರು ಜಿಲ್ಲೆಯಲ್ಲಿ ವ್ಯಾಪಕ ಬರ ಆವರಿಸಿದ್ದಾಗ ಹಲ್ಗೂರಿಗೆ ಭೇಟಿ ನೀಡಿದ್ದೆ. ಕುಡಿಯುವ ನೀರಿಗಾಗಿಯೂ ಲಾತೂರು ರೈಲಿನಲ್ಲಿ ಬರುವ ವಾಟರ್ ಟ್ಯಾಂಕರ್‌ಗಳನ್ನು ಅವಲಂಬಿಸಿರುವುದು ರಾಷ್ಟ್ರೀಯ ಪತ್ರಿಕೆಗಳಲ್ಲಿ ವರದಿಯಾಗಿತ್ತು.

15 ದಿನದ ಸ್ವದೇಶ ಭೇಟಿಯಲ್ಲಿ ಪೋಷಕರನ್ನು ಪಂಡರಾಪುರದ ಪುಣ್ಯಕ್ಷೇತ್ರಕ್ಕೆ ಕರೆದುಕೊಂಡು ಹೋಗುವುದು, ಬೆಂಗಳೂರಿನಲ್ಲಿರುವ ಸ್ನೇಹಿತರನ್ನು ಭೇಟಿ ಮಾಡುವುದು ಮತ್ತು ಹೊರಡುವುದು ಎಂದು ಯೋಜನೆ ರೂಪಿಸಿಕೊಂಡು ಬಂದಿದ್ದರು.

ಎಲ್ಲಿಯೂ ಹಸಿರು ಕಾಣಿಸಲಿಲ್ಲ

ಎಲ್ಲಿಯೂ ಹಸಿರು ಕಾಣಿಸಲಿಲ್ಲ

ಆದರೆ, ಪಂಡರಾಪುರದ ಐದು ಗಂಟೆ ಪ್ರಯಾಣ ಅವರ ಯೋಜನೆಯ ದಿಕ್ಕನ್ನೇ ಬದಲಿಸಿತು. ಅಂದು ಬೆಳಿಗ್ಗೆ ಐದು ಗಂಟೆಗೆ ಕಾರಿನಲ್ಲಿ ಎಲ್ಲರೂ ಹೊರಟರು. ಸಾಮಾನ್ಯವಾಗಿ ಹೀಗೆ ಪ್ರಯಾಣ ಹೊರಟಾಗ ದಾರಿ ಮಧ್ಯೆ ನೆರಳು ಸಿಕ್ಕಲ್ಲಿ ಕುಳಿತು ಮನೆಯಿಂದ ತಂದಿದ್ದ ಊಟವನ್ನು ಮಾಡುತ್ತಿದ್ದರು. ಆದರೆ, ಈ ಬಾರಿ ಅವರಿಗೆ ದಾರಿಯುದ್ದಕ್ಕೂ ಎಲ್ಲಿಯೂ ಹಸಿರು ಕಾಣಿಸಲಿಲ್ಲ. ಎಲ್ಲವನ್ನೂ ಬರ ಸುಟ್ಟು ಹಾಕಿತ್ತು. 'ನಮ್ಮ ಗ್ರಾಮದ ರೈತರ ದಾರುಣ ಸ್ಥಿತಿಯನ್ನು ಅಪ್ಪ ಬಿಚ್ಚಿಟ್ಟರು. ಅಲ್ಲಿಂದ ಇಡೀ ಪ್ರಯಾಣದಲ್ಲಿ ನಾನು ಮೌನವಾಗಿ ಕುಳಿತಿದ್ದೆ' ಎನ್ನುತ್ತಾರೆ ಅವರು.

ಕ್ಯಾಲಿಫೋರ್ನಿಯಾಕ್ಕೆ ಮರಳಿದ ಬಳಿಕ ಹಲ್ಗರಾದ ವಾರ್ಷಿಕ ಮಳೆಯ ಪ್ರಮಾಣದ ಬಗ್ಗೆ ಅಧ್ಯಯನ ನಡೆಸಿದರು. ವಿಶೇಷವೆಂದರೆ ಅಮೆರಿಕದಲ್ಲಿಯೂ ಕ್ಯಾಲಿಫೋರ್ನಿಯಾ ಬರಪೀಡಿತ ಎಂದು ಗುರುತಿಸಲ್ಪಟ್ಟಿತ್ತು. ಎರಡನ್ನೂ ಅವರು ತುಲನೆ ಮಾಡಿದರು.

ಅಲ್ಲಿಯೂ ಬರವಿದೆ, ಆದರೆ ನೀರಿದೆ

ಅಲ್ಲಿಯೂ ಬರವಿದೆ, ಆದರೆ ನೀರಿದೆ

'ಕ್ಯಾಲಿಫೋರ್ನಿಯಾ ಕೂಡ ಐದು ವರ್ಷಗಳಿಂದ ಬರಕ್ಕೆ ತುತ್ತಾಗಿದೆ. ಆದರೆ ಎಂದಿಗೂ ನೀರಿನ ಸರಬರಾಜು ಕಡಿತಗೊಂಡಿರಲಿಲ್ಲ. ನೀರಿಗಾಗಿ ಟ್ಯಾಂಕರ್ ಕರೆಸುವ ಅಗತ್ಯ ಬಿದ್ದಿರಲಿಲ್ಲ. ಸುತ್ತಲೂ ಹಸಿರು ಇದ್ದೇ ಇತ್ತು. 2016ರಲ್ಲಿ ಸಾಂಟಾ ಕ್ಲಾರಾದಲ್ಲಿ ಬಂದ ಮಳೆ ಪ್ರಮಾಣ 400 ಎಂಎಂ. ಆದರೆ, ಹಲ್ಗರಾದಲ್ಲಿ 800 ಎಂಎಂ, ಅಂದರೆ ಎರಡು ಪಟ್ಟು ಹೆಚ್ಚು ಮಳೆಯಾಗಿತ್ತು. ಹೀಗಿದ್ದರೂ ಹಲ್ಗರಾದಲ್ಲಿ ಕುಡಿಯುವ ನೀರಿಗೆ ತತ್ವಾರವಿತ್ತು.

ಇನ್ನಷ್ಟು ಅಧ್ಯಯನ ನಡೆಸಿದಾಗ ಅರಿವಾಗಿದ್ದು ಕ್ಯಾಲಿಫೋರ್ನಿಯಾದ ಅಂತರ್ಜಲ ಮಟ್ಟ 70 ಅಡಿ ಇದ್ದರೆ, ಹಲ್ಗರಾದಲ್ಲಿ ಇದ್ದದ್ದು 800 ಅಡಿ ಎಂದು.

ಬರಗಾಲದ ವ್ಯಾಖ್ಯಾನವು ಅಂತರ್ಜಲ ಮಟ್ಟ ಮತ್ತು ಅದರ ಸ್ಥಳಗಳನ್ನು ಆಧರಿಸಿದ್ದು ಎಂಬುದು ಅರ್ಥವಾಯಿತು.

ನೀರಿನ ಶೆಡ್‌ಗಳ ನಿರ್ಮಾಣ

ನೀರಿನ ಶೆಡ್‌ಗಳ ನಿರ್ಮಾಣ

ಹಲ್ಗರಾಕ್ಕೆ ಬಂದ ದತ್ತಾ, ಪೋಷಕರ ಜೊತೆಗೂಡಿ ವಾಟರ್ ಶೆಡ್ ಚಟುವಟಿಕೆಗಳಿಗಾಗಿ ಸುಮಾರು ಮೂರು ಲಕ್ಷ ವ್ಯಯಿಸಿದರು. ತಮ್ಮ ಗ್ರಾಮದಲ್ಲಿ ಬೀಳುವ ಪ್ರತಿ ಮಳೆ ಹನಿಯನ್ನೂ ಸಂರಕ್ಷಿಸಿ ಅಂತರ್ಜಲ ಮಟ್ಟವನ್ನು ವೃದ್ಧಿಸುವುದು ಅವರ ಉದ್ದೇಶವಾಗಿತ್ತು.

ಹಲ್ಗರಾದಲ್ಲಿನ 20 ಕಿ.ಮೀ. ಉದ್ದದ ಕಾಲುವೆಗಳನ್ನು ಸರಿಪಡಿಸುವುದು ಮೊದಲ ಹೆಜ್ಜೆಯಾಗಿತ್ತು. ನೀರಿನ ಹರಿವಿನ ಮೇಲೆ ಆವರಿಸಿದ್ದ ಹೂಳನ್ನು ತೆಗೆದರೆ ಮಾತ್ರ ನೀರು ಮಣ್ಣಿನಾಳಕ್ಕೆ ತಲುಪುವುದು ಸಾಧ್ಯ.

ನದಿಯಿಂದ ಸಮುದ್ರಕ್ಕೆ ಸೇರ್ಪಡೆಯಾಗುವ ನೀರಿನಲ್ಲಿ ಶೇ 30ರಷ್ಟನ್ನು ಭೂಮಿಯೊಳಕ್ಕೆ ಇಳಿಸಿದರೂ ಭಾರತದ ಶೇ 50ರಷ್ಟು ಕೃಷಿ ಭೂಮಿಯನ್ನು ಸುರಕ್ಷಿತ ಜಲ ಪ್ರದೇಶವನ್ನಾಗಿ ಪರಿವರ್ತಿಸಬಹುದು ಎನ್ನುವುದು ಅವರ ಅಭಿಪ್ರಾಯ.

ನೆರವಿನ ಹಸ್ತ ಚಾಚಿದ ಕಂಪೆನಿ

ನೆರವಿನ ಹಸ್ತ ಚಾಚಿದ ಕಂಪೆನಿ

ಇದಕ್ಕೆ ಬಹುದೊಡ್ಡ ಮಟ್ಟದ ಪರಿಶ್ರಮದ ಅಗತ್ಯವಿತ್ತು. ಹಣವೂ ಬೇಕಿತ್ತು. ಗ್ರಾಮಸ್ಥರನ್ನೆಲ್ಲ ಒಂದೆಡೆ ಸೇರಿಸಿ ಸಭೆ ನಡೆಸಿದರು. ಮೊದಲ ಭೇಟಿಯಲ್ಲಿ ಗ್ರಾಮಸ್ಥರೆಲ್ಲ ಸೇರಿ ಐದು ಲಕ್ಷ ಸಂಗ್ರಹಿಸುವುದರ ಬಗ್ಗೆ ನಿರ್ಧರಿಸಿದ್ದು ಮಾತ್ರವಲ್ಲ, ಎರಡು ಗಂಟೆ ಶ್ರಮಾದಾನಕ್ಕೂ ಸಿದ್ಧ ಎಂದರು.

ಈ ಬಗ್ಗೆ ದತ್ತಾ ಅಮೆರಿಕದ ಯಾಹೂ ಅಧಿಕಾರಗಳ ಜೊತೆ ಹಲ್ಗರಾ ಯೋಜನೆ ಬಗ್ಗೆ ವಿಸ್ತೃತ ವಿಷಯ ಮಂಡನೆ ಮಾಡಿದರು. ಕಂಪೆನಿಯ ಸಾಮಾಜಿಕ ಹೊಣೆಗಾರಿಕೆಯ ಘಟಕ ಮುಂದಿನ ಮೂರು ವರ್ಷದ ಯೋಜನೆಗೆ ಒಂದು ಕೋಟಿ ರೂ. ನೀಡಲು ಮುಂದಾಯಿತು. ಈ ಯೋಜನೆಗೆ ಅವರು ವೈಯಕ್ತಿಕವಾಗಿ ವ್ಯಯಿಸಿರುವುದು 22 ಲಕ್ಷ ರೂ.

200 ಕೋಟಿ ಲೀಟರ್ ನೀರು ಉಳಿಯಿತು

200 ಕೋಟಿ ಲೀಟರ್ ನೀರು ಉಳಿಯಿತು

ಕಾಲುವೆಗಳ ಹೂಳು ತೆಗೆಯುವುದರ ಜೊತೆಗೆ ದತ್ತಾ ಅವರ ತಂಡ 26 ಚೆಕ್‌ ಡ್ಯಾಂಗಳನ್ನು ನಿರ್ಮಿಸಿತು. ಮಳೆಗಾಲದಲ್ಲಿ ನೀರು ಸಂಗ್ರಹಿಸಲು ಕೆರೆಗಳನ್ನು ನಿರ್ಮಿಸಿದರು. ಈ ಯೋಜನೆಯ ಯಶಸ್ಸು ಹಲ್ಗರಾಕ್ಕೆ 200 ಕೋಟಿ ಲೀಟರ್ ನೀರು ಉಳಿಯುವಂತೆ ಮಾಡಿತು.

ಈ ಯೋಜನೆಯಿಂದಾಗಿ ಹಲ್ಗರಾದ ಅಂತರ್ಜಲ ಮಟ್ಟ 800 ಅಡಿಯಿಂದ 100 ಅಡಿಗೆ ಏರಿಕೆಯಾಗಿದೆ. ಇತ್ತೀಚಿನ ಎರಡು ವರ್ಷದಿಂದ ಹಲ್ಗರಾದಲ್ಲಿ ಮಳೆಯ ಪ್ರಮಾಣವೂ ಹೆಚ್ಚಾಗಿದೆ.

ದೇವಸ್ಥಾನಗಳಲ್ಲಿ ಹಣ ಸಂಗ್ರಹಿಸಲು, ಮರಾಠಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಜೊತೆ ಮಾತನಾಡಲು ಮಾಲೀಕರಿಂದ ಅನುಮತಿ ಪಡೆಯುವುದು ಹೀಗೆ ದತ್ತಾ ತಮ್ಮ ಗ್ರಾಮಕ್ಕಾಗಿ ಸಾಧ್ಯವಾದದ್ದೆಲ್ಲವನ್ನೂ ಮಾಡಿದರು. ಅಲ್ಲಿ ಎಲ್ಲಿಯೂ ಅವರು ಖಾಲಿ ಕೈಯಿಂದ ಮರಳಲಿಲ್ಲ.

ಜೊತೆಗೆ ತಮ್ಮಂತೆ ಬೇರೆ ಬೇರೆ ಊರುಗಳಿಗೆ ವಲಸೆ ಹೋದ ಯುವಕರನ್ನು ಸಂಪರ್ಕಿಸಿದರು. ಪ್ರತಿದಿನ ತಮ್ಮ ಕೆಲಸದ ಬಳಿಕ ವೈಯಕ್ತಿಕ ಕೆಲಸಗಳನ್ನು ಬಿಟ್ಟು ಮೂರು ಗಂಟೆ ಪರಿಣತರೊಂದಿಗೆ ಚರ್ಚಿಸಿ ತಾಂತ್ರಿಕ ಮಾರ್ಗದರ್ಶನ ಪಡೆದರು.

ಪ್ರಯತ್ನ ಎಂದಿಗೂ ಬಿಡಬೇಡಿ

ಪ್ರಯತ್ನ ಎಂದಿಗೂ ಬಿಡಬೇಡಿ

ಇಂದು ಅಲ್ಲಿನ ರೈತರು ಹಿಂದಿಗಿಂತ ಮುನ್ನೂರು ಪಟ್ಟು ಹೆಚ್ಚು ಸಂಪಾದಿಸುತ್ತಿದ್ದಾರೆ. 'ಸಕಾರಾತ್ಮಕ ಬದಲಾವಣೆ ತರುವುದು ಸುಲಭವಲ್ಲ. ಒಂದು ತಿಂಗಳಿನಲ್ಲಿಯೇ ಇದರ ಸಹವಾಸ ಬೇಡ ಎನ್ನುವಂತಹ ಸಂಕಷ್ಟಗಳು ಎದುರಾಗುತ್ತವೆ. ನಿಮ್ಮ ಪ್ರಯತ್ನ ವ್ಯರ್ಥ ಎಂದು ನಿರಾಶಾವಾದಿಗಳು ಮತ್ತು ಅಡ್ಡಗಾಲು ಹಾಕುವವರು ಇರುತ್ತಾರೆ. ಆದರೆ, ನಿಮ್ಮ ಗುರಿಯ ಮೇಲೆ ನಂಬಿಕೆಯಿದ್ದರೆ ಬಿಡಬೇಡಿ. ಹೋರಾಟಕ್ಕೆ ಅಂಟಿಕೊಳ್ಳಿ ಮತ್ತು ಹಠವಿರಲಿ. ಒಮ್ಮೆ ಅದಕ್ಕೆ ನೆಲಗಟ್ಟು ಸಿದ್ಧವಾದರೆ ಸಹಾಯಗಳು ತಾನಾಗಿಯೇ ಬರತೊಡಗುತ್ತವೆ. ಆದರೆ, ಇವೆಲ್ಲವೂ ನಿರ್ದಿಷ್ಟ ಕಾಲಾವಧಿಯಲ್ಲಿ ಪೂರ್ಣಗೊಳ್ಳಬೇಕು' ಎನ್ನುತ್ತಾರೆ ದತ್ತಾ.

English summary
Datta Patil an engineer from Halgara village of Latur district based in USA turned his drought hit village to a prolific land by his efforts of increasing ground water level. Here is his Motivational story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X