ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ ಸುಟ್ಟರೂ ಮನಸ್ಸು ಸುಡಲಿಲ್ಲ: ಆಸಿಡ್ ದಾಳಿ ಸಂತ್ರಸ್ತೆಯ ಸ್ಫೂರ್ತಿದಾಯಕ ಕತೆ

|
Google Oneindia Kannada News

'ಚಪಾಕ್' ಸಿನಿಮಾದ ಪೋಸ್ಟರ್‌ನಲ್ಲಿ ಕನ್ನಡಿಯ ಬಿಂಬಿದೊಂದಿಗೆ ಕಾಣುವ ದೀಪಿಕಾ ಪಡುಕೋಣೆಯ ಚಿತ್ರ ಎಷ್ಟೊಂದು ಜನರನ್ನು ಕಾಡಿಲ್ಲ? ಸುಂದರವಾದ ಮುಖ ಇಷ್ಟೊಂದು 'ಕುರೂಪಿ'ಯಾಗುತ್ತದೆಯೇ? ಚಿಕ್ಕದೊಂದು ಬರೆ ನಮ್ಮ ಚರ್ಮವನ್ನು ಸುಟ್ಟು ಕಪ್ಪಾಗಿಸಿದಾಗ ಉಂಟಾಗುವ ವೇದನೆ, ಈ ರೀತಿ ಸುಟ್ಟು ಕರಕಲಾಗುವ ಮುಖದ ಮುಂದೆ ಲೆಕ್ಕವೇ?

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇಲ್ಲಿ ಸುಡುವುದು ಚರ್ಮ ಮಾತ್ರವಲ್ಲ, ಮನಸ್ಸು ಮತ್ತು ಆತ್ಮವಿಶ್ವಾಸ ಕೂಡ. ಯಾರೊಂದಿಗೂ ಹೇಳಿಕೊಳ್ಳಲಾಗದ, ಹೇಳಿಕೊಂಡರೂ ಅರ್ಥಮಾಡಿಸಲಾಗದ ಸ್ಥಿತಿಯಲ್ಲಿನ ಬದುಕು ಅದು. 'ಆಸಿಡ್ ದಾಳಿ' ಎಂಬ ಪರಮ ವಿಕೃತ, ಕ್ರೌರ್ಯಕ್ಕೆ ತಡೆಯೆಲ್ಲಿದೆ? ಅದಕ್ಕೆ ಕಡಿವಾಣ ಹಾಕುವುದಾದರೂ ಹೇಗೆ? ಯಾರೋ ಕ್ರೂರಿಯ ಕೃತ್ಯಕ್ಕೆ ಬಲಿಯಾಗುವ ಹೆಣ್ಣುಮಕ್ಕಳನ್ನು ಸಂತೈಸುವವರು ಯಾರು? ಅವರಲ್ಲಿನ ಮಾನಸಿಕ ತೊಳಲಾಟಕ್ಕೆ ಪರಿಹಾರ ನೀಡುವವರು ಯಾರು? ಇತ್ಯಾದಿ ಪ್ರಶ್ನೆಗಳ ಸರಮಾಲೆಯೇ ಹುಟ್ಟುತ್ತದೆ.

ಇವುಗಳ ನಡುವೆ ದೀಪಿಕಾ ನಟಿಸುತ್ತಿರುವ ಆಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮಿ ಅಗರವಾಲ್ ಅವರ ಕುರಿತಾದ ಚಿತ್ರ 'ಚಪಾಕ್' ಒಂದಷ್ಟರ ಮಟ್ಟಿಗೆ ಜಾಗೃತಿ, ತಿಳಿವಳಿಕೆಯನ್ನು ಮೂಡಿಸಬಲ್ಲದು ಎಂಬ ನಿರೀಕ್ಷೆ ಮೂಡಿಸಿದೆ. 'ರಾಝಿ'ಯಂತಹ ಸೂಕ್ಷ್ಮ ಸಂವೇದನಾಶೀಲ ಸಿನಿಮಾವನ್ನು ನಿರ್ದೇಶಿಸಿದ್ದ ಮೇಘನಾ ಗುಲ್ಜಾರ್ 'ಚಪಾಕ್'ನ ಸೃಷ್ಟಿಕರ್ತೆ. ಈ ಸಿನಿಮಾ ನಮ್ಮ ನಡುವಿನ ನೂರಾರು ಲಕ್ಷ್ಮಿಯರ ಬದುಕಿಗೆ ಆತ್ಮವಿಶ್ವಾಸ ತುಂಬಬಹುದೆಂಬ ಆಶಯವೂ ಇದೆ.

ಹಣ ಕೊಡಲಿಲ್ಲ ಎಂದು ಗೆಳತಿಗೆ ಆ್ಯಸಿಡ್ ಎರಚಿ ದಾಳಿ ಮಾಡಿದ ಸ್ನೇಹಿತೆ ಹಣ ಕೊಡಲಿಲ್ಲ ಎಂದು ಗೆಳತಿಗೆ ಆ್ಯಸಿಡ್ ಎರಚಿ ದಾಳಿ ಮಾಡಿದ ಸ್ನೇಹಿತೆ

ಇಷ್ಟಕ್ಕೂ ಈ ಮಹತ್ವದ ಸಿನಿಮಾಕ್ಕೆ ಸ್ಫೂರ್ತಿಯಾಗಿರುವ ಲಕ್ಷ್ಮಿ ಅಗರವಾಲ್ ಯಾರು? ಅವರಿಂದಲೇ ಸ್ಫೂರ್ತಿ ಪಡೆದು ಸಿನಿಮಾ ಹುಟ್ಟಿಕೊಂಡಿದ್ದು ಹೇಗೆ?

ಕನಸು ಕಟ್ಟುವ ವಯಸ್ಸು

ಕನಸು ಕಟ್ಟುವ ವಯಸ್ಸು

ಲಕ್ಷ್ಮಿ ಅಗರವಾಲ್ ಹುಟ್ಟಿದ್ದು ದೆಹಲಿಯ ಮಧ್ಯಮವರ್ಗದ ಕುಟುಂಬದಲ್ಲಿ. ರಾಜಧಾನಿಯ ನಗರಿಯಲ್ಲಿ ಬೆಳೆದ ಲಕ್ಷ್ಮಿ ತನ್ನ ಬದುಕಿನ ಕುರಿತು ಕನಸು ಕಟ್ಟಿಕೊಳ್ಳುತ್ತಿದ್ದ ತಾರುಣ್ಯದ ದಿನಗಳವು. ಹದಿನೈದು ವರ್ಷದ ಅವರಲ್ಲಿ ಮುಂದೆ ತಾನೊಬ್ಬ ಗಾಯಕಿಯಾಗಬೇಕೆಂಬ ಆಸೆಯಿತ್ತು.

ಸೌಂದರ್ಯದ ರಾಶಿ ಹೊತ್ತ ಲಕ್ಷ್ಮಿಯ ಕನಸುಗಳು ಸುಟ್ಟು ಹೋಗಿದ್ದು 2005ರಲ್ಲಿ. ಈ ವಯಸ್ಸಿನಲ್ಲಿ ಪ್ರೀತಿಯೆಂಬುದು ಎಳೆಬಿಸಿಲಿನ ಪುಳಕಕ್ಕೆ ಅರಳುವ ಮೊಗ್ಗಿನಂತಾಗಬೇಕಿತ್ತು. ಆದರೆ, ಮೊಗ್ಗು ಅರಳುವ ಮೊದಲೇ ಪ್ರೀತಿಯೆಂಬುದು ಕ್ರೌರ್ಯದ ರೂಪದಲ್ಲಿ ಎರಗಿತು.

ದಿನವೂ ಲಕ್ಷ್ಮಿಯನ್ನು ಗಮನಿಸುತ್ತಿದ್ದ 32 ವರ್ಷದ ನಯೀಮ್ ಖಾನ್ ಎಂಬಾತ ತನ್ನನ್ನು ಮದುವೆಯಾಗುವಂತೆ ಆಕೆಯನ್ನು ಪೀಡಿಸತೊಡಗಿದ. ಆದರೆ, ಲಕ್ಷ್ಮಿ ಅದನ್ನು ತಿರಸ್ಕರಿಸಿದರು. ಒಂದೆರಡು ಬಾರಿಯಲ್ಲ, ಪದೇ ಪದೇ ಆಕೆಯನ್ನು ಅಡ್ಡಗಟ್ಟಿ ನಯೀಮ್ ಕಾಡತೊಡಗಿದ. ಆದರೆ, ಆತನ ಪ್ರೀತಿಯಲ್ಲಿ ಬೀಳುವ ಯಾವ ಆಸಕ್ತಿಯೂ ಇಲ್ಲದ ಲಕ್ಷ್ಮಿ ನಿರಾಕರಿಸುತ್ತಲೇ ಇದ್ದರು.

ಬಾಡಿಗೆ ತಾಯ್ತನದಿಂದ ಹಣ ಗಣಿಸುವ ಆಸೆಗೆ ತಣ್ಣೀರು, ಪತ್ನಿ ಮೇಲೆ ಆ್ಯಸಿಡ್ ದಾಳಿ ಬಾಡಿಗೆ ತಾಯ್ತನದಿಂದ ಹಣ ಗಣಿಸುವ ಆಸೆಗೆ ತಣ್ಣೀರು, ಪತ್ನಿ ಮೇಲೆ ಆ್ಯಸಿಡ್ ದಾಳಿ

ಅಂದು ನಡೆಯಿತು ದಾಳಿ

ಆ ದುರ್ದಿನ ಇಂತಹದ್ದೊಂದು ಘಟನೆ ನಡೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಖಾನ್ ಮಾರುಕಟ್ಟೆಯಲ್ಲಿ ಪುಸ್ತಕದಂಗಡಿಗೆಂದು ಲಕ್ಷ್ಮಿ ಹೋಗುತ್ತಿದ್ದರು. ಮಾಮೂಲಿಯಂತೆ ಅಡ್ಡಗಟ್ಟಿದ ನಯೀಮ್ ಪ್ರೇಮ ನಿವೇದನೆ ಮಾಡಿಕೊಂಡ. ಲಕ್ಷ್ಮಿಯದು ಅದೇ ಉತ್ತರವಾಗಿತ್ತು. ಆದರೆ, ಎಂದಿನಂತೆ ನಯೀಮ್ ಈ ಬಾರಿ ಸುಮ್ಮನೆ ಹೋಗಲಿಲ್ಲ. ಅತನಲ್ಲಿನ ಮೃಗತ್ವ ಅಂದು ಹೊರಬಂದಿತ್ತು. ತಾನು ತಂದಿದ್ದ ಬಾಟಲಿಯೊಳಗಿನಿಂದ ದ್ರವವನ್ನು ಆಕೆಯ ಮುಖದ ಮೇಲೆ ಎಸೆದ. ಕ್ಷಣಮಾತ್ರದಲ್ಲಿ ಏನಾಯಿತೆಂದು ಯಾರಿಗೂ ಅರಿವಾಗಲಿಲ್ಲ. ಆಸಿಡ್ ಎಂಬ ಮಾರಕ ದ್ರವ ಆಕೆಯ ಸುಂದರ ಮುಖವನ್ನು ಸುಟ್ಟುಹಾಕಿತ್ತು. ರಸ್ತೆಯ ಮೇಲೆ ಬಿದ್ದು ನೋವು, ಉರಿಯಿಂದ ಹೊರಳಾಡುತ್ತಿದ್ದ ಲಕ್ಷ್ಮಿಯ ರಕ್ಷಣೆಗೆ ಯಾರೂ ಧಾವಿಸಲಿಲ್ಲ. ಕೊನೆಗೆ ಟ್ಯಾಕ್ಸಿ ಚಾಲಕನೊಬ್ಬ ಮುಂದೆ ಬಂದು ಆಕೆಯನ್ನು ಸಮೀಪದ ಸಫ್ದಾರ್ ಜಂಗ್ ಆಸ್ಪತ್ರೆಗೆ ದಾಖಲಿಸಿದ.

ಆಕೆಗೆ ಸತತ ಮೂರು ತಿಂಗಳು ಆಸ್ಪತ್ರೆಯಲ್ಲಿ ಅನೇಕ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಯಿತು. ತನ್ನ ಮುಖ ಹಿಂದಿನಂತೆ ಆಗುವುದಿಲ್ಲ ಎಂಬ ದುಃಖದ ಮಧ್ಯೆಯೇ ಲಕ್ಷ್ಮಿ ಆತ್ಮವಿಶ್ವಾಸ ಬೆಳೆಸಿಕೊಂಡರು. ಅವರು ತೆಗೆದುಕೊಂಡ ಹೆಜ್ಜೆ ತನ್ನೊಬ್ಬರ ಸಲುವಾಗಿ ಆಗಿರಲಿಲ್ಲ. ತನ್ನಂತೆ ಆಸಿಡ್ ದಾಳಿಗೆ ಒಳಗಾದ, ಒಳಗಾಗಬಹುದಾದ ಅಮಾಯಕ ಹೆಣ್ಣುಮಕ್ಕಳಿಗಾಗಿ.

ಉ.ಪ್ರ:ದೂರು ಹಿಂಪಡೆಯುವಂತೆ ಬೆದರಿಸಿ, ಯುವತಿ ಮೇಲೆ ಆಸಿಡ್ ದಾಳಿ ಉ.ಪ್ರ:ದೂರು ಹಿಂಪಡೆಯುವಂತೆ ಬೆದರಿಸಿ, ಯುವತಿ ಮೇಲೆ ಆಸಿಡ್ ದಾಳಿ

ಚರ್ಮ ಹನಿಯಾಗಿ ಇಳಿಯುತ್ತಿತ್ತು

ಆದರೆ, ಆಸಿಡ್ ದಾಳಿಯಿಂದ ಮುಖ ಸುಟ್ಟು ಹೋದ ಸಂದರ್ಭದಲ್ಲಿ ಅನುಭವಿಸಿದ ನರಕಯಾತನೆಯನ್ನು ಇಂದಿಗೂ ಮರೆಯಲಾಗದು ಎನ್ನುತ್ತಾರೆ ಲಕ್ಷ್ಮಿ. 'ನನ್ನ ಇಡೀ ದೇಹವನ್ನು ಯಾರೋ ಬೆಂಕಿಗೆ ಹಾಕಿದ ಅನುಭವವಾಗುತ್ತಿತ್ತು. ನನ್ನ ಕೈ ಮತ್ತು ಮುಖದಿಂದ ಚರ್ಮ ಹನಿಹನಿಯಂತೆ ಕಿತ್ತು ಜಾರಿ ಬರುತ್ತಿದ್ದವು' ಎಂದು ಅದರ ಭೀಕರ ಅನುಭವವನ್ನು ಅವರು ನೆನಪಿಸಿಕೊಳ್ಳುತ್ತಾರೆ.

'ನಾನು ಆಸ್ಪತ್ರೆಯಲ್ಲಿ ಇದ್ದ ವಾರ್ಡ್‌ನಲ್ಲಿ ಕನ್ನಡಿ ಕೂಡ ಇರಲಿಲ್ಲ. ಪ್ರತಿ ದಿನ ಬೆಳಿಗ್ಗೆ ಮುಖ ತೊಳೆದುಕೊಳ್ಳಲು ನರ್ಸ್ ಬಟ್ಟಲಿನಲ್ಲಿ ನೀರು ತಂದುಕೊಡುತ್ತಿದ್ದರು. ಆ ನೀರಿನಲ್ಲಿ ನನ್ನ ಮುಖದ ಬಿಂಬ ಎಲ್ಲಿಯಾದರೂ ಕಾಣಿಸುತ್ತದೆಯೇ ಎಂದು ಹುಡುಕಲು ಪ್ರಯತ್ನಿಸುತ್ತಿದ್ದೆ. ನನಗೆ ಅಲ್ಲಿ ಕಾಣಿಸುತ್ತಿದ್ದದ್ದು ಬ್ಯಾಂಡೇಜ್ ಸುತ್ತಿದ್ದ ಮುಖ ಮಾತ್ರ. ಬ್ಯಾಂಡೇಜ್ ಬಿಚ್ಚಿದ ಬಳಿಕ ನನ್ನ ಮುಖವನ್ನು ಮೊದಲ ಬಾರಿಗೆ ನೋಡಿಕೊಂಡಾಗ ಜಗತ್ತೇ ಕುಸಿದುಹೋದಂತೆನಿಸಿತು. ಮಾತನಾಡಲು ನನ್ನಲ್ಲಿ ಮುಖವೇ ಇರಲಿಲ್ಲ' ಎನ್ನುವಾಗ ಲಕ್ಷ್ಮಿ ಅನುಭವಿಸಿದ ಸಂಕಟದ ದೃಶ್ಯ ಕಣ್ಣಮುಂದೆ ಬರುತ್ತದೆ.

ಆಸಿಡ್ ವಿರುದ್ಧ ಹೋರಾಟ

ತನ್ನ ಮೇಲಿನ ದಾಳಿಯನ್ನು ಸವಾಲಾಗಿ ಸ್ವೀಕರಿಸಿದರು ಲಕ್ಷ್ಮಿ. 2006ರಲ್ಲಿ ಅವರು ಆಸಿಡ್ ಮಾರಾಟದ ಮೇಲೆ ಸಂಪೂರ್ಣ ನಿಷೇಧ ಹೇರುವಂತೆ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. 2013ರಲ್ಲಿ ಕೊನೆಗೂ ಸುಪ್ರೀಂಕೋರ್ಟ್ ಅವರ ಪರವಾಗಿ ತೀರ್ಪು ನೀಡಿತು. ಆಸಿಡ್ ಮಾರಾಟದ ಮೇಲೆ ನಿರ್ಬಂಧ ವಿಧಿಸಿತು. ಅದೇ ವರ್ಷ ಅವರು ಅಲೋಕ್ ದೀಕ್ಷಿತ್ ಮತ್ತು ಆಶಿಶ್ ಶುಕ್ಲಾ ಅವರು ಸ್ಥಾಪಿಸಿದ 'ಆಸಿಡ್ ದಾಳಿಗಳನ್ನು ನಿಲ್ಲಿಸಿ' ಆಂದೋಲನದಲ್ಲಿ ಭಾಗವಹಿಸಿದರು.

ಆಸಿಡ್ ಸಂತ್ರಸ್ತರ ಧ್ವನಿಯಾಗಿ ಬೆಳೆದ ಲಕ್ಷ್ಮಿಗೆ ಅಂತಾರಾಷ್ಟ್ರೀಯ ಧೈರ್ಯಶಾಲಿ ಮಹಿಳಾ ಪ್ರಶಸ್ತಿಯ ಗೌರವ ಲಭಿಸಿತು. ಇದನ್ನು ಪ್ರದಾನ ಮಾಡಿದವರು ಅಮೆರಿಕದ ಮಾಜಿ ಅಧ್ಯಕ್ ಬರಾಕ್ ಒಬಾಮ ಅವರ ಪತ್ನಿ ಮಿಶೆಲ್ ಒಬಾಮ. ಇದು ಲಕ್ಷ್ಮಿ ನ್ಯಾಯ ಮತ್ತು ಮಾನವ ಹಕ್ಕುಗಳಿಗಾಗಿ ಧೈರ್ಯ ಹಾಗೂ ನಿಸ್ವಾರ್ಥದಿಂದ ನಡೆಸಿದ ಹೋರಾಟಕ್ಕೆ ಸಂದ ಗೌರವ.

ಚಳವಳಿಯ ನಡುವೆ ಚಿಗುರಿದ ಪ್ರೇಮ

ಆಸಿಡ್ ವಿರೋಧಿ ಆಂದೋಲನ ಆರಂಭಿಸಿದ ಅಲೋಕ್ ಜತೆ ಲಕ್ಷ್ಮಿಯ ಪ್ರೇಮ ಬೆಳೆಯಿತು. ಆದರೆ ಈ ಜೋಡಿ ಮದುವೆಯಾಗಲಿಲ್ಲ. ಬದಲಾಗಿ ಸಹಬಾಳ್ವೆಯಲ್ಲಿ ನೆಲೆಸಲು ನಿರ್ಧರಿಸಿತು. 'ನಾವು ಮದುವೆಯಾಗದೆ ಸಮಾಜಕ್ಕೆ ಸವಾಲು ಹಾಕುತ್ತಿದ್ದೇವೆ. ನಮ್ಮ ಮದುವೆಗೆ ಜನರು ಬಂದು ನಮ್ಮ ಮುಖದ ಕುರಿತು ಮಾತನಾಡುವುದನ್ನು ನಾವು ಬಯಸುವುದಿಲ್ಲ' ಎಂದು ಲಕ್ಷ್ಮಿ ಒಮ್ಮೆ ಹೇಳಿದ್ದರು.

ಹಾಗೆಂದು ಅವರ ವೈಯಕ್ತಿಕ ಬದುಕು ಸರಿ ದಾರಿಗೆ ಬಂದಿತು ಎಂಬ ನೆಮ್ಮದಿ ಉಳಿಯಲಿಲ್ಲ. 2015ರಲ್ಲಿ ಅವರಿಬ್ಬರಿಗೂ 'ಪಿಹು' ಎಂಬ ಮುದ್ದಾದ ಹೆಣ್ಣುಮಗಳ ಜನನವಾಯಿತು. ಅಲ್ಲಿಂದ ಅವರ ನಡುವೆ ಭಿನ್ನಾಭಿಪ್ರಾಯಗಳೂ ಹುಟ್ಟಿಕೊಂಡವು. ಇಬ್ಬರೂ ದೂರವಾದರು. ಬಳಿಕ ಲಕ್ಷ್ಮಿ ಮನೆ, ಮಗುವನ್ನು ನೋಡಿಕೊಳ್ಳುವುದರ ಜತೆಗೆ ಕೆಲಸ ಹುಡುಕುವ ಸಂಕಷ್ಟಕ್ಕೆ ಸಿಲುಕಿದರು.

ಹೋರಾಟ ಚಿಕ್ಕದಲ್ಲ

ಹೋರಾಟ ಚಿಕ್ಕದಲ್ಲ

'ನನ್ನ ಕುರಿತಾದ ಸುದ್ದಿಗಳನ್ನು ಓದಿ ಅನೇಕರು ನನಗೆ ಉದ್ಯೋಗ ನೀಡಲು ಮುಂದಾದರು. ಅವರೆಲ್ಲರಿಗೆ ನಾನು ಕೃತಜ್ಞೆ. ಸುದ್ದಿಗಳಿಗೆ ಇರುವ ಜೀವಿತಾವಧಿ ಅತ್ಯಲ್ಪ. ಕೆಲವು ಸಮಯದ ಬಳಿಕ ಅದಕ್ಕೆ ಮೌಲ್ಯ ಇರುವುದಿಲ್ಲ. ಆದರೆ, ನಾನು ನನ್ನ ತಾಯಿ ಮತ್ತು ಮಗಳಿಗೆ ಆಧಾರವಾಗಬೇಕಿರುವುದರಿಂದ ನನಗೆ ಸರ್ಕಾರಿ ಉದ್ಯೋಗ ಬೇಕು' ಎಂದು ಹೇಳಿಕೊಂಡಿದ್ದರು.

ಲಕ್ಷ್ಮಿ ಸಾವಿರಾರು ನೊಂದ ಜನರ ಪಾಲಿಗೆ ಆಶಾಕಿರಣವಾದರು. ಊರುಗಳಿಗೆ ಹೋಗಿ ನೊಂದವರಲ್ಲಿ ಆತ್ಮವಿಶ್ವಾಸ ಬೆಳೆಸಿದರು. ತನ್ನ ಮುಖ ಕುರೂಪವಾಗಿದೆ ಎಂದು ಅವರು ಕುಗ್ಗಲಿಲ್ಲ. ಬದಲಿಗೆ ಅದನ್ನು ಹೋರಾಟದ ವೇದಿಕೆಯನ್ನಾಗಿ ಬೆಳೆಸಿಕೊಂಡರು. ಮುಕ್ತ ಮಾರುಕಟ್ಟೆಯಲ್ಲಿ ಆಸಿಡ್ ಮಾರಾಟದ ಮೇಲೆ ನಿರ್ಬಂಧ ವಿಧಿಸುವಂತೆ ಮಾಡಿದ ಅವರ ಹೋರಾಟ ಸಣ್ಣದ್ದೇನಲ್ಲ. ಅದರ ಫಲಿತಾಂಶ ಕೂಡ ಅಷ್ಟೇ ಮಹತ್ವದ್ದು.

ಅನುಕಂಪ ಬೇಡ, ಬೆಂಬಲ ನೀಡಿ

''ನಮ್ಮ ಸಮಾಜದಲ್ಲಿ ಇಂತಹ ದಾಳಿಗಳು ನಡೆದಾಗ ಜನರು ಸಂತ್ರಸ್ತರನ್ನು ಇನ್ನಷ್ಟು ಗಾಸಿಗೊಳ್ಳುವಂತೆ ಮಾಡುತ್ತಾರೆ. ಅದೃಷ್ಟಹೀನರೆಂಬ ಹಣೆಪಟ್ಟಿಕಟ್ಟುತ್ತಾರೆ. ಹೀಗಾದಾಗ ಜನರಲ್ಲಿ ಮೊದಲು ಮೂಡುವ ಪ್ರಶ್ನೆ, 'ಪಾಪ ಈ ಹುಡುಗಿಯನ್ನು ಯಾರು ಮದುವೆಯಾಗುತ್ತಾರೆ?' ಎಂದು'' ಎಂಬುದಾಗಿ ಲಕ್ಷ್ಮಿ ಬೇಸರದಿಂದ ಹೇಳುತ್ತಾರೆ.

ಆಸಿಡ್ ಸಂತ್ರಸ್ತರಿಗೆ ಅನುಕಂಪ ಬೇಡ, ಆತ್ಮಸ್ಥೈರ್ಯ ಬೇಕು. ಅವರ ಬದುಕನ್ನು ಬದಲಿಸಲು, ಅವರಿಗೆ ಉದ್ಯೋಗ ನೀಡಬೇಕೇ ವಿನಾ ಕರುಣೆಯನ್ನಲ್ಲ. ಅವರನ್ನು ಬ್ಯುಸಿಯಾಗಿರಿಸುವಂತಹ ಮತ್ತು ಅದರ ಕಹಿಯನ್ನು ತಗ್ಗಿಸುವಂತಹ ಕೆಲಸ ಬೇಕಿರುತ್ತದೆ. ಉದ್ಯೋಗ ಅವರಿಗೆ ಸಂತೃಪ್ತಿಯ ಮಾರ್ಗವೂ ಹೌದು ಎನ್ನುತ್ತಾರೆ.

'ನಾನು ಆಸಿಡ್ ದಾಳಿಗೆ ತುತ್ತಾದಾಗ ನನಗೆ ಸ್ಫೂರ್ತಿ ನೀಡುವ ಏಕೈಕ ಮೂಲವೆಂದರೆ ಅದು ನನ್ನ ತಾಯಿ ಮಾತ್ರ. ಆ ಗಾಯದಿಂದ ಹೊರಬರಲು ಅವರು ನೆರವಾದರು. ಈಗಲೂ ನನ್ನಲ್ಲಿ ಅವರು ಆತ್ಮವಿಶ್ವಾಸ ತುಂಬುತ್ತಿದ್ದಾರೆ. ಈ ಘಟನೆಯಲ್ಲಿ ನನಗಿಂತಲೂ ಹೆಚ್ಚು ಸಂಕಷ್ಟ ಅನುಭವಿಸಿದವರು ಅವರು' ಎನ್ನುತ್ತಾರೆ ಅವರು.

ಸಿನಿಮಾ ಎಂಬ ಖುಷಿಯ ಸಂಗತಿ

ತಮ್ಮ ಬದುಕು ಸಿನಿಮಾ ರೂಪ ಪಡೆದುಕೊಳ್ಳುತ್ತಿರುವುದು ಅವರಲ್ಲಿ ಖುಷಿ ಉಂಟುಮಾಡಿದೆ. ಅದರಲ್ಲಿಯೂ ದೀಪಿಕಾ ಪಡುಕೋಣೆ ತಮ್ಮ ಪಾತ್ರದಲ್ಲಿ ನಟಿಸುತ್ತಿರುವುದು ಅವರಲ್ಲಿ ಕಾತರ ಹೆಚ್ಚಿಸಿದೆ.

ಇಂತಹ ಸೂಕ್ಷ್ಮ ವಿಚಾರವನ್ನು ಪ್ರೇಕ್ಷಕರ ಬಳಿಗೆ ಕೊಂಡೊಯ್ಯುವ ನಿರ್ಧಾರ ಮಾಡಿರುವುದಕ್ಕೆ ಸಂತಸವಾಗುತ್ತಿದೆ ಎಂದು ನಿರ್ದೇಶಕಿ ಮೇಘನಾರನ್ನು ಅಭಿನಂದಿಸಿದ್ದಾರೆ.

ಈ ಸಿನಿಮಾದಲ್ಲಿ ಲಕ್ಷ್ಮಿ ಕೂಡ ಭಾಗವಾಗಿದ್ದಾರೆ. ನನ್ನ ಬದುಕನ್ನು ಅರ್ಥ ಮಾಡಿಕೊಳ್ಳಲು ಮೇಘನಾ ನನ್ನ ಜತೆ ಸಾಕಷ್ಟು ಸಮಯ ಕಳೆದಿದ್ದಾರೆ. ನನ್ನ ಇಡೀ ಇತಿಹಾಸ ಅವರಿಗೆ ತಿಳಿದಿದೆ. ನನ್ನ ಬದುಕು ಹೇಗಿತ್ತೋ ಹಾಗೆಯೇ ಸಿನಿಮಾ ಅದನ್ನು ಬಿಂಬಿಸುತ್ತದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ ಲಕ್ಷ್ಮಿ.

ಲಕ್ಷ್ಮಿ ಕಥೆಯ ಮೂಲಕ ಸಂತ್ರಸ್ತರ ಚಿತ್ರಣ

'ನಾನು ಲಕ್ಷ್ಮಿ ಅಗರವಾಲ್ ಅವರ ಕಥೆ ತೆಗೆದುಕೊಳ್ಳಲು ಅವರು ಆಸಿಡ್ ವಿರುದ್ಧ ಹೋರಾಟದಲ್ಲಿ ಜನಪ್ರಿಯರಾದವರು. ಜತೆಗೆ ಅವರ ಪ್ರಕರಣ ಮತ್ತು ಅವರ ಕಥೆ ಆಸಿಡ್ ಹಿಂಸಾಚಾರದ ಕಾನೂನು, ವೈದ್ಯಕೀಯ ಪ್ರಗತಿ, ಸಂತ್ರಸ್ತರಿಗೆ ಪರಿಹಾರ ಮುಂತಾದವುಗಳ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಸೂಕ್ತವಾಗಿವೆ' ಎನ್ನುತ್ತಾರೆ ನಿರ್ದೇಶಕಿ ಮೇಘನಾ ಗುಲ್ಜಾರ್.

ದೇಶದಲ್ಲಿ ಆಸಿಡ್ ನಿಷೇಧವಾಗಿದ್ದರೂ ದಾಳಿ ನಡೆಯುವುದು ನಿಂತಿಲ್ಲ. ಕೋರ್ಟ್ ಆದೇಶ ಹೊರಡಿಸಿ ಐದು ವರ್ಷಗಳಾದರೂ ಇಂದಿಗೂ ಕಿರಾಣಿ ಅಂಗಡಿಗಳಲ್ಲಿ ಸುಲಭವಾಗಿ ಸಿಗುತ್ತಿವೆ. ಲಕ್ಷ್ಮಿಯ ಪ್ರಕರಣದಲ್ಲಿ ಇಡೀ ಸಮಾಜೋ-ವೈದ್ಯಕೀಯ ಮತ್ತು ಕಾನೂನಾತ್ಮಕ ಪರಿಣಾಮದ ಚಿತ್ರಣವಿದೆ. ಭಾರತದಲ್ಲಿನ ಆಸಿಡ್ ಹಿಂಸಾಚಾರದ ಕುರಿತಾದ ದೊಡ್ಡ ಕಥೆಯನ್ನು ಆಕೆಯನ್ನು ಮಸೂರವಾಗಿ ಬಳಸಿಕೊಂಡು ಹೇಳುತ್ತಿದ್ದೇನೆ ಎಂದು ವಿವರಿಸಿದ್ದಾರೆ.

English summary
In Chhapaak movie directed by Meghna Gulzar, Deepika Padukone playing role of Laxmi Agarwal an acid victim. Who is Laxmi Agarwal? Here is her brief and motivational story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X