keyboard_backspace

ಶಾಲಾ ಕಾಲೇಜು ಅಗ್ನಿ ಮತ್ತು ಕಟ್ಟಡ ಸುರಕ್ಷತೆ ಕುರಿತು ಸಂಕನೂರ ಸಮಿತಿ ಶಿಫಾರಸುಗಳು

Google Oneindia Kannada News

ಬೆಂಗಳೂರು, ಸೆ. 01: ರಾಜ್ಯದಲ್ಲಿ ಶಾಲೆಗಳ ಕಟ್ಟಡ ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಗುಣಮಟ್ಟ ಪಾಲನೆ ಕುರಿತು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ನೇತೃತ್ವದ ಪರಿಶೀಲನಾ ಸಮಿತಿ ಮಂಗಳವಾರ ಶಿಕ್ಷಣ ಸಚಿವರಿಗೆ ವರದಿಯನ್ನು ಸಲ್ಲಿಸಿದೆ. ಹದಿನೈದು ಮೀಟರ್ ಗಿಂತಲೂ ಹೆಚ್ಚು ಎತ್ತರ ಇರುವ ಶಾಲಾ ಕಾಲೇಜು ಕಟ್ಟಡಗಳು ಅಗ್ನಿ ಸುರಕ್ಷತಾ ಹಾಗೂ ಕಟ್ಟಡ ಸ್ಥಿರತೆ ಕುರಿತು ಕಡ್ಡಾಯವಾಗಿ ನಿರಪೇಕ್ಷಣಾ ಪತ್ರ ಪಡೆಯಬೇಕು ಎಂಬ ಶಿಫಾರಸು ಮಾಡಿದೆ. ಎಸ್.ವಿ. ಸಂಕನೂರ ಅವರ ಅಧ್ಯಕ್ಷತೆಯ ಪರಿಶೀಲನಾ ಸಮಿತಿ ಶಿಫಾರಸುಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ. ಸಮಿತಿಯ ಶಿಫಾರಸು ಜಾರಿ ಮಾಡಲು ಸಾಧ್ಯವಿಲ್ಲ ಎಂಬ ವಾದವನ್ನು ಮಂಡಿಸಿವೆ.

ತಮಿಳುನಾಡಿನ ಕುಂಭಕೋಣಂ ಸಮೀಪದ ಶ್ರೀ ಕೃಷ್ಣ ಮಿಡ್ಲಿಸ್ಕೂಲ್‌ನಲ್ಲಿ 2004 ರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 94 ವಿದ್ಯಾರ್ಥಿಗಳು ಅಗ್ನಿ ಅವಘಡಕ್ಕೆ ಬಲಿಯಾಗಿದ್ದರು. 134 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಶಾಲೆಗಳಲ್ಲಿ ಅಗ್ನಿ ಸುರಕ್ಷತೆ ಕುರಿತು ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಲಾಗಿತ್ತು. ಶಾಲೆಗಳ ಕಟ್ಟಡ ಸ್ಥಿರತೆ ( ಗುಣಮಟ್ಟ ) ಮತ್ತು ಅಗ್ನಿ ಸುರಕ್ಷತೆ ಕಡ್ಡಾಯವಾಗಿ ಎಲ್ಲಾ ಶಾಲೆಗಳಲ್ಲಿ ಇರಬೇಕು ಎಂಬ ಆದೇಶವನ್ನು ಸುಪ್ರೀಂಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ 2009 ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರಾಜ್ಯದಲ್ಲಿ ಮಕ್ಕಳ ಸುರಕ್ಷತಾ ನೀತಿ 2016 ನ್ನು ಜಾರಿಗೆ ತಂದಿತ್ತು. ಶಾಲಾ ಕಟ್ಟಡಗಳ ಅಗ್ನಿ ಸುರಕ್ಷತೆ ಮತ್ತು ಸ್ಥಿರತೆ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿದ ನಿರ್ದೇಶನಗಳನ್ನು ಒಳಗೊಂಡಂತೆ ಕರ್ನಾಟಕ ರಾಜ್ಯ ಮಕ್ಕಳ ಸುರಕ್ಷಾ ನೀತಿಗೆ 2017 ರಲ್ಲಿ ತಿದ್ದುಪಡಿ ತರಲಾಗಿತ್ತು.

ಶಾಲಾ ಕಟ್ಟಡ ಅಗ್ನಿ ಸುರಕ್ಷತೆ ಕಾನೂನು ಸಮರ ಹಿನ್ನೆಲೆ

ಶಾಲಾ ಕಟ್ಟಡ ಅಗ್ನಿ ಸುರಕ್ಷತೆ ಕಾನೂನು ಸಮರ ಹಿನ್ನೆಲೆ

ರಾಜ್ಯದ ಮಕ್ಕಳ ಸುರಕ್ಷಾ ನೀತಿಯಲ್ಲಿ ವಿಧಿಸಿದ್ದ ಕಟ್ಟಡ ಸುರಕ್ಷತಾ ನಿಯಮಗಳು 2016 ಕ್ಕಿಂತಲೂ ಮೊದಲು ಆರಂಭವಾಗಿರುವ ಶಾಲೆಗಳಿಗೆ ಸಂಬಂಧಸಿದಂತೆ ಸಡಿಲುಗೊಳಿಸುವಂತೆ ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಶಿಕ್ಷಣ ಸಂಸ್ಥೆಗಳು, ಸಂಘಟನೆಗಳು ಶಿಕ್ಷಣ ಮಂತ್ರಿಗೆ ಮನವಿ ನೀಡಿದ್ದವು. ಮಾತ್ರವಲ್ಲದೇ ಅವೈಜ್ಞಾನಿಕವಾಗಿ ರಾಜ್ಯದಲ್ಲಿ ಶಾಲೆಗಳ ಕಟ್ಟಡ ಸುರಕ್ಷತಾ ನೀತಿ ಪ್ರಶ್ನಿಸಿ ಶಾಲಾ ಆಡಳಿತ ಮಂಡಳಿಗಳು ನ್ಯಾಯಾಲಯದಲ್ಲಿ ದಾವೆ ಹೂಡಿದವು. ಮಕ್ಕಳ ರಕ್ಷಣಾ ನೀತಿ ಜಾರಿಗೂ ಮುನ್ನ ಆರಂಭವಾಗಿರುವ ಶಾಲೆಗಳಿಗೆ ನಿಯಮಗಳನ್ನು ಸಡಿಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ಹೈಕೋರ್ಟ್, ಈ ಕುರಿತು ನಿಯಮ ರೂಪಿಸುವಂತೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಕ್ಕಳ ಸುರಕ್ಷತೆ ವಿಚಾರ ಗಮನದಲ್ಲಿಟ್ಟುಕೊಂಡು ವಿಧಾನ ಪರಿಷತ್ ಸದಸ್ಯರು, ಅಧಿಕಾರಿಗಳು ಒಳಗೊಂಡಂತೆ ರಾಜ್ಯದಲ್ಲಿ ಶಾಲಾ ಕಾಲೇಜುಗಳ ಕಟ್ಟಡಗಳ ಅಗ್ನಿ ಸುರಕ್ಷತೆ ಮತ್ತು ಸ್ಥಿರತೆ ಕುರಿತು ಪರಿಶೀಲಿಸಿ ವರದಿ ನೀಡಲು ವಿಧಾನ ಪರಿಷತ್ ಸದಸ್ಯ ಸಂಕನೂರ ಅವರ ನೇತೃತ್ವದಲ್ಲಿ ಪರಿಶೀಲನಾ ಸಮಿತಿ ರಚನೆ ಮಾಡಿತ್ತು. ಸಮಿತಿ ಮಂಗಳವಾರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ವರದಿಯನ್ನು ನೀಡಿದೆ. ವರದಿಯಲ್ಲಿ ಕೆಲವು ಪ್ರಮುಖ ಶಿಫಾರಸುಗಳನ್ನು ಮಾಡಲಾಗಿದೆ.

ಹದಿನಾಲ್ಕು ಶಿಫರಸು ಸಮಗ್ರ ವಿಶ್ಲೇಷಣೆ

ಹದಿನಾಲ್ಕು ಶಿಫರಸು ಸಮಗ್ರ ವಿಶ್ಲೇಷಣೆ

ಶಾಲಾ ಕಾಲೇಜುಗಳ ಮಾನ್ಯತೆ ನವೀಕರಣ, ಹೊಸ ಕೊಟ್ಟಣ ನಿರ್ಮಾಣ, ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಹೊಸ ಕೋರ್ಸ್ ಗಳನ್ನು ಸಮೀಕರಣಗೊಳಿಸಿದಾಗ ಅನುದಾನಿತ, ಅನುದಾನ ರಹಿತ ಹಾಗೂ ಖಾಸಗಿ ಶಾಲಾ ಕಾಲೇಜುಗಳು ಕಡ್ಡಾಯವಾಗಿ ಆಯಾ ಜಿಲ್ಲಾ ಅಗ್ನಿ ಸುರಕ್ಷತಾ ಅಧಿಕಾರಿಂದ ನಿರಪೇಕ್ಷಣಾ ಪತ್ರ ಪಡೆಯಬೇಕು. ಈ ನಿಟ್ಟಿನಲ್ಲಿ ಎನ್ಒಸಿ ನೀಡುವ ಅಧಿಕಾರವನ್ನು ಆಯಾ ಜಿಲ್ಲಾ ಅಗ್ನಿ ಸುರಕ್ಷತಾ ಅಧಿಕಾರಿಗೆ ವರ್ಗಾವಣೆ ಮಾಡಲು ಶಿಫಾರಸು ಮಾಡಿದೆ. ನೆಲ ಮಹಡಿಯಿಂದ ಐದು ಮೀಟರ್ ಒಳಗೆ ಎತ್ತರ ಇರುವ ಶಾಲಾ ಕಾಲೇಜುಗಳಿಗೆ ನಿರಪೇಕ್ಷಣಾ ಪತ್ರ ಪಡೆಯುವುದಕ್ಕೆ ವಿನಾಯಿತಿ ನೀಡಲಾಗಿದೆ. ಅಂದರೆ ಇದರ ಪ್ರಕಾರ ಕೇವಲ ಒಂದು ಮಹಡಿ ಇರುವ ಶಾಲೆಗಳಿಗೆ ಅಗ್ನಿ ಸುರಕ್ಷತೆ ಕುರಿತು ನಿರಪೇಕ್ಷಣಾ ಪ್ರಮಾಣ ಪತ್ರ ಪಡೆಯುವ ಅಗತ್ಯತೆ ಇರುವುದಿಲ್ಲ. ಆದರೆ ಹದಿನೈದು ಅಡಿಗಿಂತಲೂ ಎತ್ತರ ಇರುವ ಕಡ್ಡಗಳು 2016 ಕ್ಕಿಂತ ಮೊದಲು ಆರಂಭಗೊಂಡಿರುವ ಶಾಲೆಗಳು, ಹೊಸದಾಗಿ ನಿರ್ಮಾಣ ವಾಗುತ್ತಿರುವ ಶಾಲಾ ಕಾಲೇಜುಗಳು ಕಡ್ಡಾಯವಾಗಿ ಅಗ್ನಿ ಸುರಕ್ಷತಾ ನಿರಪೇಕ್ಷಣಾ ಪತ್ರ ಪಡೆಯಬೇಕು. ನೆಲಮಹಡಿ ಹೊಂದಿರುವ ಶಾಲೆಗಳ ಮೇಲಿನ ನೀರಿನ ಓವರ್ ಹೆಡ್ ಟ್ಯಾಂಕಿನ ಸಾಮರ್ಥವ್ಯನ್ನು ಕಡಿಮೆ ಗೊಳಿಸುವುದು. ಹತ್ತು ಸಾವಿರ ಲೀಟರ್ ಬದಲಿಗೆ ಐದು ಸಾವಿರ ಅಥವಾ ಎರಡು ಸಾವಿರ ಲೀಟರ್ ಗೆ ಇಳಿಸುವುದು ಎಂದು ಶಿಫಾರಸು ಮಾಡಲಾಗಿದೆ.

ಭ್ರಷ್ಟಾಚಾರಕ್ಕೆ ಹೊಸದೊಂದು ದಾರಿ

ಭ್ರಷ್ಟಾಚಾರಕ್ಕೆ ಹೊಸದೊಂದು ದಾರಿ

ಶಾಲಾ ಕಾಲೇಜುಗಳ ಕಟ್ಟಡ ಗುಣಮಟ್ಟ ಕುರಿತು ತಪಾಸಣೆ ನಡೆಸಿ ನಿರಪೇಕ್ಷಣಾ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಅಧಿಕಾರ ಹಸ್ತಾಂತರಿಸಲು ಶಿಫಾರಸು ಮಾಡಲಾಗಿದೆ. ಹದಿನೈದು ಮೀಟರ್ ಗಿಂತಲೂ ಕಡಿಮೆ ಎತ್ತರ ಇರುವ ಕಟ್ಟಡಗಳಿಗೆ ಕಾರ್ಯ ಪಾಲಕ ಇಂಜಿನಿಯರ್ ಬದಲಿಗೆ ಸಹಾಯಕ ಕಾರ್ಯಪಾಲಕ ಅಭಿಯಂತರ ನೀಡಬಹುದು ಎಂದು ಹೇಳಲಾಗಿದೆ. ಸುವರ್ಣ ಮಹೋತ್ಸವ ವಜ್ರ ಮಹೋತ್ಸವ ಆಚರಿಸಿಕೊಂಡಿರುವ ಶಾಲಾ ಕಾಲೇಜುಗಳಿಗೆ ಕಟ್ಟಡದ ನೀಲಿ ನಕ್ಷೆ, ಮಂಜೂರಾತಿ ದಾಖಲೆ, ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವುದಕ್ಕೆ ವಿನಾಯಿತಿ ನೀಡಲಾಗಿದೆ. ಅಂದರೆ ಐವತ್ತು ವರ್ಷಕ್ಕೂ ಮೇಲ್ಪಟ್ಟ ಶಾಲಾ ಸಂಸ್ಥೆಗಳು ನಿಯಮ ಮೂರು ರ ಅಡಿ ನೀಡುವ ದಾಖಲೆಗಳಿಗೆ ವಿನಾಯಿತಿ ನೀಡಬಹುದು ಎಂದು ಹೇಳಲಾಗಿದೆ. ಆದರೆ, ಲೋಕೋಪಯೋಗಿ ಇಲಾಖೆಗೆ ಅಧಿಕಾರ ನೀಡಿರುವುದು ಶಾಲೆಗಳಿಂದಲೂ ಹಣ ವಸೂಲಿ ಭ್ರಷ್ಟಾಚಾರಕ್ಕೆ ನಾಂದಿ ಹಾಡಲಿದೆ ಎಂಬ ಮಾತು ಕೇಳಿ ಬರುತ್ತಿವೆ.

ಕಟ್ಟಡ ಸುರಕ್ಷತಾ ನವೀಕರಣ ಅವಧಿ ಫಿಕ್ಸ್

ಕಟ್ಟಡ ಸುರಕ್ಷತಾ ನವೀಕರಣ ಅವಧಿ ಫಿಕ್ಸ್

ನಿರ್ಮಾಣಗೊಂಡು 30 ವರ್ಷಕ್ಕಿಂತಲೂ ಕಡಿಮೆ ಅವಧಿಯ ಶಾಲಾ ಕಾಲೇಜು ಕಟ್ಟಡಗಳ ಸ್ಥಿರತೆ ಕುರಿತು ನವೀಕರಿಸುವ ಅವಧಿಯನ್ನು ಹತ್ತು ವರ್ಷಕ್ಕೆ ನಿಗದಿ ಮಾಡುವುದು. ಮೂವತ್ತು ವರ್ಷ ಅವಧಿ ಮುಗಿದ ಬಳಿಕ ಪ್ರತಿ ಐದು ವರ್ಷಕ್ಕೊಮ್ಮೆ ಕಟ್ಟಡವನ್ನು ಪರಿಶೀಲನೆ ಮಾಡಿ ಕಡ್ಡಾಯವಾಗಿ ನವೀಕರಣ ಮಾಡಿಸಬೇಕು. ಕಟ್ಟಡಗಳ ಅಗ್ನಿ ಸುರಕ್ಷತೆ ಮತ್ತು ಸ್ಥಿರತೆ ಕುರಿತು ನಿರಪೇಕ್ಷಣಾ ಪ್ರಮಾಣ ಪತ್ರಗಳನ್ನು ಶಾಲೆಯ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಿದ ಮೂರು ತಿಂಗಳ ಒಳಗಾಗಿ ಪಡೆಯಬೇಕು. ಇಲ್ಲದಿದ್ದರೆ ಶಾಲಾ ಮಾನ್ಯತೆ ನವೀಕರಣ ಮಾಡುವುದಿಲ್ಲ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಅಗ್ನಿ ಸುರಕ್ಷತಾ ನಿಯಮ ಪಾಲನೆ ಕಡ್ಡಾಯ ಅಸ್ತ್ರ

ಪ್ರಸಕ್ತ ಸಾಲಿನಲ್ಲಿ ಅಗ್ನಿ ಸುರಕ್ಷತಾ ನಿಯಮ ಪಾಲನೆ ಕಡ್ಡಾಯ ಅಸ್ತ್ರ

ಕೊರೊನಾ ಸಂಕಷ್ಟಕ್ಕೆ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ಒಳಗಾಗಿವೆ. ಹೀಗಾಗಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕಟ್ಟಡ ಸುರಕ್ಷತೆ ಮತ್ತು ಅಗ್ನಿ ಸುರಕ್ಷತೆ ಕುರಿತು ಸರ್ಕಾರ ಆದೇಶ ಹೊರಡಿಸಿದ ದಿನಾಂಕದಿಂದ ಆರು ತಿಂಗಳ ಒಳಗೆ ನಿರಪೇಕ್ಷಣಾ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬೇಕು. ಇಲ್ಲದಿದ್ದರೆ , ಸಂಬಂಧಪಟ್ಟ ಶಾಲೆಗಳ ಮಾನ್ಯತೆ ರದ್ದು ಮಾಡಲಾಗುತ್ತದೆ. ಈ ವಿಶೇಷ ರಿಯಾಯಿತಿ ಕೇವಲ 2021-22 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಕಡ್ಡಾಯವಾಗಿ ಶಾಲಾ ಕಾಲೇಜುಗೆ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಿದ ಮೂರು ತಿಂಗಳಲ್ಲಿ ನಿರಪೇಕ್ಷಣಾ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.

ಸರ್ಕಾರಿ ಶಾಲೆಗಳಿಗೆ ವಿನಾಯಿತಿ

ಸರ್ಕಾರಿ ಶಾಲೆಗಳಿಗೆ ವಿನಾಯಿತಿ

ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಗುಣಮಟ್ಟ ಸುರಕ್ಷತೆ ನಿಯಮಗಳನ್ನು ಸರ್ಕಾರಿ ಶಾಲಾ ಮತ್ತು ಕಾಲೇಜುಗಳು ಕೂಡ ಕಡ್ಡಾಯವಾಗಿ ಪಾಲಿಸಬೇಕು. ಆದರೆ, ಮುಂದಿನ ಬಜೆಟ್‌ನಲ್ಲಿ ಹಣ ಮೀಸಲಿಟ್ಟ ಬಳಿಕ ಈ ಸುರಕ್ಷತಾ ನಿಯಮ ಪಾಲನೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಖಾಸಗಿ ಶಾಲಾ ಆಡಳಿತ ಮಂಡಳಿಗಳು ಈ ಆದೇಶ ಹೊರ ಬಿದ್ದ ಆರು ತಿಂಗಳ ಅವಧಿಯಲ್ಲಿ ನಿರಪೇಕ್ಷಣಾ ಪ್ರಮಾಣ ಪತ್ರಗಳನ್ನು ಪಡೆಯಬೇಕಿದೆ.

ಅಗ್ನಿ ಸುರಕ್ಷತಾ ಶುಲ್ಕ ಕಡಿಮೆಗೆ ಶಿಫಾರಸು

ಗ್ರಾಮ,ಹೋಬಳಿ ತಾಲೂಕು ಮಟ್ಟದ ಗ್ರಾಮೀಣ ಶಾಲೆಗಳಿಗೆ ಅಗ್ನಿ ಸುರಕ್ಷತಾ ನಿರಪೇಕ್ಷಣಾ ಪ್ರಮಾಣ ಪತ್ರ ನೀಡುವ ಸರ್ಕಾರಿ ಶುಲ್ಕವನ್ನು 20 ಸಾವಿರ ಬದಲಿಗೆ ಐದು ಸಾವಿರಕ್ಕೆ ಇಳಿಸಲು ಶಿಫಾರಸು ಮಾಡಲಾಗಿದೆ. ನಗರ ಪ್ರದೇಶದ ಶಾಲೆಗಳಿಗೆ ಕನಿಷ್ಠ 10 ಸಾವಿರ ಶುಲ್ಕ ನಿಗದಿಗೆ ಶಿಫಾರಸು ಮಾಡಲಾಗಿದೆ. ನೂತನವಾಗಿ ನಿರ್ಮಾಣವಾಗುವ ಕಟ್ಟಡಗಳ ಗುಣಮಟ್ಟ ಪರಿಶೀಲಿಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಿರತೆ ಕುರಿತು ನಿರಪೇಕ್ಷಣಾ ಪ್ರಮಾಣ ಪತ್ರವನ್ನು ನೀಡುವುದು.

ಕಾಲಮಿತಿಯಲ್ಲಿ ನೀಡದಿದ್ದರೆ ಪ್ರಮಾಣ ಪತ್ರ ನೀಡಿದಂತೆ

ಕಾಲಮಿತಿಯಲ್ಲಿ ನೀಡದಿದ್ದರೆ ಪ್ರಮಾಣ ಪತ್ರ ನೀಡಿದಂತೆ

ಇನ್ನು ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಸ್ಥಿರತೆ ಕುರಿತು ಲೋಕೋಪಯೋಗಿ ಇಲಾಖೆ ಹಾಗೂ ಅಗ್ನಿ ಶಾಮಕ ಇಲಾಖೆಗಳು ಅರ್ಜಿ ಸ್ವೀಕರಿಸಿದ 45 ದಿನದಲ್ಲಿ ಅವನ್ನು ವಿಲೇವಾರಿ ಮಾಡಬೇಕು. ಅರ್ಹತೆ ಇದ್ದರೆ ನಿರಪೇಕ್ಷಣಾ ಪ್ರಮಾಣ ಪತ್ರ ನೀಡಬೇಕು. ಇಲ್ಲದಿದ್ದರೆ, ಪ್ರಸ್ತಾವನೆ ತಿರಸ್ಕರಿಸಿ ಅಧಿಕೃತ ಆದೇಶ ಪ್ರಮಾಣ ಪತ್ರವನ್ನು ಶಾಲಾ ಆಡಳಿತ ಮಂಡಳಿಗೆ ನೀಡಬೇಕು. ನೀಡದಿದ್ದರೆ ಪ್ರಮಾಣ ಪತ್ರ ನೀಡಲಾಗಿದೆ ಎಂದು ಭಾವಿಸಿ ಕ್ರಮ ಜರುಗಿಸಲಾಗುತ್ತದೆ.

2017 ರಿಂದ ಆರಂಭವಾದ ಶಾಲೆಗಳಿಗೆ ಹೊಸ ನಿಯಮ

2017 ರಿಂದ ಆರಂಭವಾದ ಶಾಲೆಗಳಿಗೆ ಹೊಸ ನಿಯಮ

ಇನ್ನ ರಾಜ್ಯದಲ್ಲಿ 2017 ರಿಂದ ಈಚೆಗೆ ಪ್ರಾರಂಭವಾಗಿರುವ ಶಾಲಾ ಕಾಲೇಜುಗಳು ಅಗ್ನಿ ಸುರಕ್ಷತೆ ಹಾಗೂ ಸ್ಥಿರತೆ ಸುರಕ್ಷತೆ ಕುರಿತು ಪ್ರತ್ಯೇಕ ನಿಯಮಗಳ ಕಿರು ಪುಸ್ತಕವನ್ನು ಇಲಾಖೆ ಪ್ರಕಟಿಸಿ ಸಂಬಂಧ ಪಟ್ಟ ಶಾಲೆಗಳಿಗೆ ಅರಿವು ಮೂಡಿಸುವುದು. 2017 ಕ್ಕೂ ಪೂರ್ವದಲ್ಲಿ ಪ್ರಾರಂಭವಾಗಿರುವ ಶಾಲೆಗಳು ಪಾಲಿಸಬೇಕಾದ ನಿಯಮಗಳ ಬಗ್ಗೆ ಪ್ರತ್ಯೇಕ ಕಿರು ಹೊತ್ತಿಗೆ ಪ್ರಕಟಿಸಿ ಶಾಲಾ ಆಡಳಿತ ಮಂಡಳಿಗಳಿಗೆ ತಿಳಿಸುವುದು.

ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಸಮಿತಿಗಳ ರಚನೆ

ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಸಮಿತಿಗಳ ರಚನೆ

ಇನ್ನು ಶಾಲೆಗಳಲ್ಲಿ ಮಕ್ಕಳ ಸುರಕ್ಷತಾ ನಿಯಮ ಪಾಲನೆ, ಉಲ್ಲಂಘನೆ ಕುರಿತು ಬರುವ ಸಾರ್ವಜನಿಕ ದೂರುಗಳನ್ನು ಇತ್ಯರ್ಥ ಪಡಿಸಲು ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ ಮಾಡಲು ಶಿಫಾರಸು ಮಾಡಲಾಗಿದೆ. ಶಾಲಾ ಕಟ್ಟಡ ಸುರಕ್ಷತೆ ನಿಯಮ ಪಾಲಿಸದ ಶಾಲೆಗಳ ಬಗ್ಗೆ ಬರುವ ದೂರುಗಳನ್ನು ಈ ಸಮಿತಿ ಇತ್ಯರ್ಥ ಮಾಡಲಿವೆ. ಈ ಮೂಲಕ ಶಾಲೆಗಳ ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಸುರಕ್ಷತೆ ನಿಯಮ ಉಲ್ಲಂಘನೆ ಮಾಡುವ ಶಾಲೆಗಳ ವಿರುದ್ಧ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ.

ಖಾಸಗಿ ಶಾಲೆಗಳ ಪಾಲಿಗೆ ಮರಣ ಶಾಸನ

ಖಾಸಗಿ ಶಾಲೆಗಳ ಪಾಲಿಗೆ ಮರಣ ಶಾಸನ

ರಾಜ್ಯದಲ್ಲಿ ಈಗಾಗಲೇ ಕೊರೊನಾ ಸಂಕಷ್ಟದಿಂದ ಶಾಲೆಗಳು ಮುಚ್ಚುವ ಹಂತ ತಲುಪಿವೆ. ರಾಜ್ಯದಲ್ಲಿ ಶಾಲಾ ಕಾಲೇಜುಗಳ ಮಕ್ಕಳ ಸುರಕ್ಷತೆ ಕುರಿತು ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರೂಪಿಸಿರುವ ನೀತಿ ಜಾರಿಯಲ್ಲಿದೆ. ರಾಜ್ಯದಲ್ಲಿ ಕೆಳ ಹಾಗೂ ಮಧ್ಯಮ ವರ್ಗದ ಖಾಸಗಿ ಶಾಲೆಗಳನ್ನು ನಿರ್ನಾಮ ಮಾಡಲು ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಸುರಕ್ಷತೆ ನಿಯಮ ಹೆಸರಿನಲ್ಲಿ ಮಾಡಿರುವ ಶಿಫಾರಸುಗಳು ಖಾಸಗಿ ಶಾಲೆಗಳ ಪಾಲಿಗೆ ಮರಣ ಶಾಸನವಾಗಿದೆ. ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಸ್ಥಿರತೆ ಕುರಿತು ಸಂಕನೂರ್ ನೇತೃತ್ವದ ಸಮಿತಿ ನೀಡಿರುವ ಶಿಫಾರಸುಗಳ ಬಗ್ಗೆ ನಮಗೆ ಅಸಮಾಧಾನವಿದೆ. ಹಳೇ ಶಾಲೆಗಳಿಗೆ ಕನಿಷ್ಠ ಮೂಲಭೌತ ಸೌಕರ್ಯ ಇರುವ ಬಗ್ಗೆ ನಿಯಮಗಳನ್ನು ಮರೆ ಮಾಚಲಾಗಿದೆ. ಒಂದು ಹಂತಸ್ತು ಬಿಟ್ಟು ಎರಡು ಹಂತಸ್ತು ಇರುವ ಕಟ್ಟಡಗಳು ಕಡ್ಡಾಯವಾಗಿ ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಸುರಕ್ಷತೆ ನಿಯಮ ಪಾಲನೆ ಸರ್ಕಾರಿ ಶಾಲೆಗಳು ಪಾಲನೆ ಮಾಡಲು ಸಾಧ್ಯವಿಲ್ಲ. ಖಾಸಗಿ ಶಾಲೆಗಳು ಪಾಲನೆ ಮಾಡಲು ಸಾಧ್ಯವಿಲ್ಲ. ಈ ನಿಯಮಗಳನ್ನು ಪಾಲಿಸಬೇಕಾದರೆ 20 ರಿಂದ 30 ಲಕ್ಷ ರೂ. ಹೊರೆ ಬೀಳಲಿದೆ. ಈ ವೆಚ್ಚದ ಮೂಲವನ್ನು ಈಗಿನ ಪರಿಸ್ಥಿತಿಯಲ್ಲಿ ಮಕ್ಕಳ ಮೇಲೆ ಹೊರೆ ಹಾಕಲು ಸಾಧ್ಯವೇ? ಈ ಶಿಫಾರಸುಗಳ ಬಗ್ಗೆ ಖಾಸಗಿ ಶಾಲಾ ಆಡಳಿತ ಸಂಸ್ಥೆಗಳಿಗೆ ಸಮಾಧಾನ ತಂದಿಲ್ಲ. ಸುಪ್ರೀಂಕೋರ್ಟ್ ನ ಅನೇಕ ತೀರ್ಪುಗಳನ್ನು ಮರೆ ಮಾಚಲಾಗಿದೆ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Recommendations of Sankanoor committee about The schools fire safety and building safety. New rules for the destruction of middle-class private schools in the name of fire and building safety. Government New Rules t to Close Private School! know more
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X