ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೀತಾ ಜಯಂತಿ ಸ್ಮರಣೆಯಲಿ ಲೌಕಿಕ ಸಾಗರದಲ್ಲಿ ಭಗವದ್ಗೀತೆ ಮಂಥನ

By ತೇಜಶಂಕರ ಸೋಮಯಾಜಿ
|
Google Oneindia Kannada News

ಸರ್ವೋಪನಿಷದೋ ಗಾವೋ

ದೋಗ್ಧಾ ಗೋಪಾಲನಂದನಃ |

ಪಾರ್ಥೋ ವತ್ಸಃ ಸುಧೀರ್ಭೋಕ್ತಾ

ದುಗ್ಧಂ ಗೀತಾಮೃತಂ ಮಹತ್ ||

ಭಾರತೀಯ ಸಂಸ್ಕೃತಿಯನ್ನು ಪ್ರತಿಪಾದಿಸುವಂತಹ ಈ ಸಂಸ್ಕೃತಿಯ ಮೂಲಾಧಾರವಾದ ಎಲ್ಲಾ ವೇದ-ಶಾಸ್ತ್ರ-ಪುರಾಣೋಪನಿಷತ್ತುಗಳೇ ಒಂದು ಹಸುವಿದ್ದಂತೆ. ಹಾಲು ಕರೆಯುವವನು ಆ ಪುರಾಣಪುರುಷ ಪರಮಾತ್ಮನಾದ ಶ್ರೀಕೃಷ್ಣ. ಮುದ್ದಾದ ಕರುವಂತೆ ಹಾಲು ಕರೆಯಲು ನಿಮಿತ್ತವಾದವನು ಪಾಂಡವನಾದ ಅರ್ಜುನ.

ಒಳ್ಳೆಯ ಬುದ್ಧಿಗಾಗಿ ಹಪಹಪಿಸುವವನೇ ಹಾಲು ಕುಡಿಯುವವನು. ಆ ಪರಮಪವಿತ್ರವಾದ ಜೀವಾಮೃತವಾದ ಹಾಲು ಶ್ರೀಮದ್ಭಗವದ್ಗೀತೆ. ಇದು ಮೇಲಿನ ಶ್ಲೋಕದ ತಾತ್ಪರ್ಯಾರ್ಥವಾಗಿದೆ.

ಭಗವದ್ಗೀತೆಗೆ ಬೇರೆಯದೇ ಅರ್ಥ ನೀಡಿದ್ದಾರೆ ಮೋದಿ: ರಾಹುಲ್ ಲೇವಡಿ!ಭಗವದ್ಗೀತೆಗೆ ಬೇರೆಯದೇ ಅರ್ಥ ನೀಡಿದ್ದಾರೆ ಮೋದಿ: ರಾಹುಲ್ ಲೇವಡಿ!

ಪಾಂಡವರೆಂಬ ನ್ಯಾಯಪರರೂ ಕೌರವರೆಂಬ ಅನ್ಯಾಯಿಗಳಿಗೂ ನಡುವೆ ನಡೆದ ಯುದ್ಧದಲ್ಲಿ ಧರ್ಮಾಧರ್ಮಗಳ ವ್ಯತ್ಯಾಸವನ್ನು ತಿಳಿಯದೆ ಮೋಹಾವಿಷ್ಟನಾದ ಅರ್ಜುನನ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಾ ಪರಮಾತ್ಮ ಧರ್ಮವನ್ನು ಸಾರಿದ ಆ ಮಾತುಗಳೇ ಭಗವದ್ಗೀತೆ. ಅರ್ಜುನ ಇಲ್ಲಿ ನಿಮಿತ್ತ ಮಾತ್ರ. ಎಲ್ಲ ಜೀವಿಗಳೂ ಇದಕ್ಕೆ ಭಾಜನರು.

Special article about Bhagavad Gita on Geeta Jayanti

ಮಾರ್ಗಶೀರ್ಷ ಮಾಸದ ಶುಕ್ಲಪಕ್ಷದ ಏಕಾದಶಿಯಂದು ಈ ವಚನಾಮೃತಗಳು ಹೇಳಲಾಯಿತು. ಹಾಗಾಗಿಈ ದಿನ ಗೀತಾ ಜಯಂತಿಯನ್ನು ಆಚರಿಸುತ್ತೇವೆ.

ಇಪ್ಪತ್ತೊಂದನೆ ಶತಮಾನದಲ್ಲಿ ಯಾರು ಬಿಲ್ಲು- ಬಾಣ ಹಿಡಿದು ಯುದ್ಧವನ್ನು ಮಾಡುತ್ತಾರೆ? ಮಾಡುವುದಾದರೂ ಯಾರು ತಾನೇ ಅಲ್ಲಿ ಲಾಭದ ಹೊರತಾಗಿ ಧರ್ಮವನ್ನು ಯೋಚಿಸಿಯಾರು? ಶ್ರೀಕೃಷ್ಣ ಹೇಳಿದನೆಂದು ಯಾರೋ ಹೇಳಿ ಬರೆದ ನಾಲ್ಕಾರು ಮಾತುಗಳೇ ಅಲ್ಲವೇ ಭಗವದ್ಗೀತೆ!

ಬಿಜೆಪಿ ಸೋಲಿಸೋದಕ್ಕೆ ರಾಹುಲ್ ಗಾಂಧಿ ಭಗವದ್ಗೀತೆ ಓದ್ತಿದ್ದಾರಂತೆ!ಬಿಜೆಪಿ ಸೋಲಿಸೋದಕ್ಕೆ ರಾಹುಲ್ ಗಾಂಧಿ ಭಗವದ್ಗೀತೆ ಓದ್ತಿದ್ದಾರಂತೆ!

ನಿಜವಾಗಲೂ ಅದರ ಪ್ರಸ್ತುತತೆ ಇಂದೂ ಇದೆಯೇ?

'ಹಿಂ'ಸೆಯಿಂದ 'ದೂ'ರವಿರುವವನು "ಹಿಂದೂ" ಎಂದು ಹೇಳಿಕೊಳ್ಳುವ ಧರ್ಮದ ಹೆಸರಿನ ಅಂಧ ಅನುಯಾಯಿಗಳಿಗಷ್ಟೇ. ಇದು ಮಹಾನ್ ಗ್ರಂಥವಲ್ಲವೇ? 'ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಕೃತನಿಶ್ಚಯಃ' ಎಂದು ಯುದ್ಧ ಮಾಡಲು ಪ್ರೇರಣೆ ನೀಡುವ ಇದು ನಿಜವಾದ ಧರ್ಮಗ್ರಂಥವಾದೀತೆ?

ವರ್ಣಾಶ್ರಮಗಳನ್ನು ಪ್ರತಿಪಾದಿಸುವ ಈ ಗ್ರಂಥ ಸಮಾನತೆಗೆ ಸುತ್ತಿರುವ ಸರಪಳಿಯಲ್ಲವೇ? ಇನ್ನೊಂದು ಜನ್ಮವನ್ನು ಯಾರೂ ಕಾಣದಿರುವಾಗ ಜನ್ಮ-ಜನ್ಮಗಳ ಪಾಪ-ಪುಣ್ಯದ ಬಗ್ಗೆ ವಿಧವಿಧವಾಗಿ ಹೇಳುವ ಈ ಗೀತೆಯಲ್ಲಿ ವೈಚಾರಿಕತೆ ಏನಾದರೂ ಇದೆಯೇ? ಹೀಗೆ ಒಂದೇ ಎರಡೇ... ಅದೆಷ್ಟೋ ಪ್ರಶ್ನೆಗಳು ಒಂದರ ಹಿಂದೆ ಒಂದರಂತೆ ಬರುತ್ತಿದೆ.

ಆದರೆ, ನಿಜವಾಗಿಯೂ ಹೇಳುತ್ತೇನೆ ಕಣ್ಣಿಗೆ ಕಪ್ಪು ಕನ್ನಡಕ ತೊಟ್ಟು ಪ್ರಪಂಚವೇ ಕಪ್ಪು ಎನ್ನುವಂತಾಗುತ್ತದೆ ಹೀಗೆ ಹೇಳುವ ಪೃಚ್ಛಕರ ಪರಿಸ್ಥಿತಿ. ತಾಯಿಯ ಎದೆಹಾಲಿನ ಮೊದಲ ಹನಿ ಹೀರುವುದಕ್ಕೆ ಬೇಕಾದ ಒಂದು ಜ್ಞಾನ ಬರುವುದು ಸಂಸ್ಕಾರದಿಂದ. ಅಂತಹ ಸಂಸ್ಕಾರವು ಜನ್ಮಜನ್ಮಾಂತರದಿಂದಲ್ಲವೇ ಬರುವುದು?

ಜನ್ಮಾಂತರವಿರುವುದಾದರೆ ಮಾಡಿದ ಪಾಪ-ಪುಣ್ಯಗಳ ಫಲವಾಗಿ ಜನ್ಮವಿರಬಾರದೇಕೆ ? ಹೀಗೆ ಜನ್ಮ , ಹುಟ್ಟು - ಸಾವು , ಪಾಪ - ಪುಣ್ಯಗಳಿರುವುದಾದರೆ ಅದು ಪ್ರತಿಯೊಬ್ಬನಿಗೂ ಇರುವುದರಿಂದ ಮತ್ತು ಅದು ಪ್ರತಿ ಜೀವಿಯ ಜನ್ಮಕ್ಕೆ ಮೂಲ ಕಾರಣವಾದ್ದರಿಂದ ಅದರ ಜ್ಞಾನ ನೀಡುವ ಗೀತೆಯ ಮಹತ್ವ ಇಂದಿಗೂ ಇದೆಯಲ್ಲವೇ!

ಸಮಾನತೆ ಎನ್ನುವುದು ಮನದಲ್ಲಿರಬೇಕಾದದ್ದು. ಬಾಹ್ಯವಾಗಿರುವುದಲ್ಲ. ಎಲ್ಲವೂ ಒಂದೇ ಬಣ್ಣ, ಒಂದೇ ಗಾತ್ರದಲ್ಲಿದ್ದರೆ ಈ ಪ್ರಕೃತಿಗೂ ಸೌಂದರ್ಯವಿರುತ್ತಿರಲಿಲ್ಲ. ಅವರವರ ಕೆಲಸಗಳಿಗೆ ಅನುಗುಣವಾಗಿ ಇರುವ ಹೆಸರುಗಳು ಅವರವರ ವೃತ್ತಿಯಲ್ಲಿ ಅವರಿಗಿರುವ ಶ್ರೇಷ್ಠತೆಯನ್ನು ಸಾರುತ್ತದೆ. ಅದನ್ನೇ ವಿವರಿಸಿದರೆ ಗೀತೆಯು ಸಮಾನತೆಯನ್ನು ಸಾರುವುದಿಲ್ಲವೆಂದಲ್ಲ .

'ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ ' ಎಂದು ಎಲ್ಲವನ್ನು ಸಮಾನವಾಗಿ ಕಾಣಬೇಕೆಂಬುದನ್ನು ಪ್ರತಿಪಾದಿಸುವ ಗೀತೆಗಿಂತ ಶ್ರೇಷ್ಠ ಗ್ರಂಥ ಬೇರೆಯಾವುದಾದರೂ ಇದೆಯೇ!

ಜೀವಿಸಲು ಪ್ರತಿಯೊಂದು ಜೀವಿಯೂ ಹೋರಾಡುತ್ತದೆ. ಅಲ್ಲದಿದ್ದರೆ ಕತ್ತರಿಸಿದ ಗಿಡ ಮತ್ತೆ ಚಿಗುರುವುದೇ? ಜೀವಿಸಲು ಹೋರಾಟವೆನ್ನುವುದು ಅನಿವಾರ್ಯವಾದರೆ ಆ ಹೋರಾಟ ತಪ್ಪು ಹೇಗಾದೀತು? ಅನ್ಯಾಯಗಳಿಗೆ ತಿರುಗಿ ನಿಲ್ಲದೆ ತಪ್ಪುಗಳನ್ನು ತಡೆಯುವುದಿಲ್ಲ, ಶಿಕ್ಷಿಸುವುದಿಲ್ಲ ಎಂದಾದರೆ ಪೋಲೀಸ್ ವ್ಯವಸ್ಥೆ, ಗಡಿ ಕಾಯಲು ಸೈನ್ಯದ ವ್ಯವಸ್ಥೆಯೂ ಹಿಂಸಾಚಾರವೇ ತಾನೆ!

ಬೇರೆಬೇರೆ ಆಸೆಗಳ ಬಿಟ್ಟು ನ್ಯಾಯಕ್ಕೆ ಮಾನವತ್ವಕ್ಕೆ ಧರ್ಮಕ್ಕಾಗಿ ಹೋರಾಡು ಎನ್ನುವುದನ್ನು ಹೇಳಿದ ಗೀತೆ ಹಿಂಸಾಚಾರವನ್ನು ಹತ್ತಿಕ್ಕಲು ಪ್ರೇರಣೆ ನೀಡಿ, ತನ್ನ ಧರ್ಮ- ದೇಶ - ರಾಜ್ಯಕ್ಕಾಗಿ ಹೋರಾಡಲು ತಾನೆ ಹೇಳುತ್ತದೆ!

ಇಪ್ಪತ್ತೊಂದನೆ ಶತಮಾನದಲ್ಲಿ ಬಿಲ್ಲು ಬಾಣಗಳ ಅಗತ್ಯ ಇಲ್ಲ. ಯುದ್ಧ ದೇಶಗಳೊಡನೆ ನಡೆಯುವುದು ಮೊದಲಿನಂತಿಲ್ಲ. ಪ್ರಪಂಚವೇ ಇಬ್ಬಾಗವಾಗಿ ನಿಲ್ಲುತ್ತದೆ. ಅದನ್ನು ಊಹಿಸುವುದೇ ಬೇಡ. ಆದರೆ ನೆಮ್ಮದಿಯ ಬದುಕಿಲ್ಲದ ಪ್ರತಿಯೊಬ್ಬರ ಮನವೂ ಇಂದು ಕುರುಕ್ಷೇತ್ರವಾಗಿಲ್ಲವೇ?

ಕಾಮ ಲೋಭ ಮದಾದಿಗಳೆಂಬ ವೈರಿಗಳು, ಎದುರಿರುವವರ ಮುಂದೆ ನಾನೇ ಎಲ್ಲ ಎಂದು ಬೀಗಬೇಕೆಂಬ ಅಹಂಕಾರವೇ ಮೊದಲಾದ ಶತ್ರುಗಳು - ಆಸ್ತಿ ಅಂತಸ್ತುಗಳ ಹಿಂದೆ ಓಡುವ ಆಸೆ ಆಕಾಂಕ್ಷೆಗಳು ಎದುರಾಳಿ ಸೈನ್ಯ ಇದೆಲ್ಲವಿದ್ದರೂ ಹೋರಾಡುವ ರಥಿಕ ನಾನೊಬ್ಬನೆಂದು ತಿಳಿದು ಅಸಹನೆ ಅನಾರೋಗ್ಯ ಪರಾವಲಂಬನೆಗಳಿಗೆ ಹೆದರಿ ಬದುಕುವುದು ಜೀವನಯುದ್ಧವೇ ತಾನೇ?

ಇದೆಲ್ಲಕ್ಕೂ ಉತ್ತರ ಶ್ರೀಮದ್ಭಗವದ್ಗೀತೆ. ಇಲ್ಲಿ ಪ್ರತಿಯೊಂದಕ್ಕೂ ಸಮಾಧಾನವಿದೆ. ಮನವನ್ನು ಹಿಡಿಯುವುದೇ ಮೊದಲ ಗುರಿ. ಇದೇ ಸಾಮಾನ್ಯರಿಗೆ ಅಸಾಮಾನ್ಯವಾದುದು. ಅದೇ ಪ್ರಶ್ನೆ ಅರ್ಜುನ ಕೇಳಿದಾಗ ಭಗವಂತ "ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ " ಎಂದು ಅಭ್ಯಾಸದಿಂದ ಮನವನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು ಎಂದು ಹೇಳಿದ್ದಾನೆ.

ಆಹಾರದಲ್ಲಿ ಸಾತ್ವಿಕ ರಾಜಸ ತಾಮಸ ಗಳೆಂದು ಇರುವ ಭೇದವನ್ನು ತಿಳಿಸಿದ್ದಾನೆ. ನಿಷ್ಕಲ್ಮಷವಾದ ಕರ್ಮಗಳ ಬಗ್ಗೆ, ಯೋಗಗಳ ಬಗ್ಗೆ, ಆತ್ಮಗಳ ಬಗ್ಗೆ ವಿವರಿಸುವ ಗ್ರಂಥ ಈ ಗೀತೆ. ಪ್ರೀತಿ, ವಿಶ್ವಾಸ, ಸಹನೆ, ಸಂಬಂಧ ಇವುಗಳಿಗೆಲ್ಲ ಇಂದು ಮೊಬೈಲ್ ಫೋನ್ ಗಳಿಗಿರುವ ಬೆಲೆಯೂ ಇಲ್ಲ.

ಸಿಹಿಗಾಗಿ ಕಲ್ಲುಸಕ್ಕರೆ ತಿನ್ನುತ್ತೇವೆ. ಕಲ್ಲುಸಕ್ಕರೆ ಇದ್ದ ಮಾತ್ರಕ್ಕೆ ನಮಗೆ ಸಿಹಿಯ ಅನುಭವ ಆಗಲಾರದು. ಬದಲಾಗಿ ಬಾಯಲ್ಲಿಟ್ಟು ಅನುಭವಿಸಬೇಕು. ಹಾಗೆಯೇ ಗೀತೆಯ ಅರ್ಥ, ಅದರ ಪಾಠ ನಮಗೆ ಅವಶ್ಯವಾದುದು. ಬೇರೆಲ್ಲ ಪ್ರಮಾಣ ಗ್ರಂಥಗಳಂತಲ್ಲದೆ ಗೀತೆಯು ವಿಶೇಷವಾದುದು. ಅದು ಭಗವಂತನೇ ಸ್ವತಃ ಉಚ್ಚರಿಸಿದ ಉಪದೇಶಗಳು.

ಅದರ ಪುಸ್ತಕ ಮನೆಯಲ್ಲಿದ್ದರೆ ಅದರ ಫಲ ಸಿಗಲಾರದು. ಬದಲಾಗಿ ಮನದಲ್ಲಿ ಗೀತೆ ಇರಬೇಕು. ನಿತ್ಯ ಬೆಳಕಿನ ಆ ಗೀತೆ ಎಲ್ಲರನ್ನು ಬೆಳಗಿಸಲಿ.‌‌..

English summary
Hindu religion holy book Bhagavad Gita Importance and significance explain by Tejashankar Somayaji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X