ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಗೂಢ ಸುಂದರಿ ಶಗುಫ್ತಾಳ ಚಕ್ರವ್ಯೂಹದಲ್ಲಿ ಸಿಲುಕಿದ ವಿಕರ್ಣ!

By Prasad
|
Google Oneindia Kannada News

ಮೇಘನಾ ಸುಧೀಂದ್ರ ಮತ್ತು ಪ್ರಸಾದ್ ನಾಯ್ಕ್

ಪ್ರತಿಭಾವಂತ ಯುವ ಲೇಖಕರಾಗಿರುವ ಮೇಘನಾ ಸುಧೀಂದ್ರ ಮತ್ತು ಪ್ರಸಾದ್ ನಾಯ್ಕ್ ಅವರು ಜಂಟಿಯಾಗಿ ಸಣ್ಣಕಥೆ ಹೆಣೆಯುವ ಪ್ರಯೋಗಕ್ಕಿಳಿದಿದ್ದಾರೆ. ಕಥೆಯ ವಸ್ತು ಮಾತ್ರವಲ್ಲ, ಉಸಿರು ಬಿಗಿಹಿಡಿದು ಓದುವಂತೆ ಮಾಡುವ ಕಥೆಯ ನಿರೂಪಣೆ, ವಿಲಕ್ಷಣ ಯುವಕ ವಿಕರ್ಣ ಮತ್ತು ಅಪರಿಚಿತ ಸುಂದರಿ ಶಗುಫ್ತಾ ನಡುವೆ ನಡೆಯುವ ರೋಚಕ ಘಟನೆಯೇ ಈ ಕಥೆಯ ಜೀವಾಳ.

***
''ಹೇಳು ಮುಂದಕ್ಕೆ'', ತಣ್ಣನೆಯ ದನಿಯಲ್ಲಿ ನುಡಿದ ಅಧಿಕಾರಿ. ಕೆಂಡದಂತಿದ್ದ ಅವನ ಕಣ್ಣುಗಳು ಹೊಳೆಯುವಂತಿದ್ದವು.

''ಹೇಳೋದನ್ನೆಲ್ಲಾ ಹೇಳಿದೀನಿ. ಇಷ್ಟೇ ನನಗೆ ಗೊತ್ತಿರೋದು'', ನಿಡುಸುಯ್ದ ವಿಕರ್ಣ.

''ನಂಗೆ ಬೇಕಾಗಿರೋದನ್ನೇನೂ ಹೇಳಿಲ್ಲ ನೀನು. ನನಗೆ ಗೊತ್ತಿರುವಷ್ಟನ್ನೇ ಹೇಳಿದೀಯಾ. ಕೊನೇ ಬಾರಿ ಕೇಳ್ತಿದೀನಿ. ಎಷ್ಟು ಜನ ಇದ್ದಾರೆ ನಿಮ್ಮ ಗ್ಯಾಂಗಿನಲ್ಲಿ? ನಿನ್ನೊಂದಿಗಿದ್ದ ಅವಳ್ಯಾರು? ಎಲ್ಲಾ ಬಿಡಿಸಿ ಹೇಳು'', ಮತ್ತಷ್ಟು ಒತ್ತಡ ಹಾಕಿದ ಆ ಅಧಿಕಾರಿ. ವಿಕರ್ಣನ ಮಾತಿನಿಂದ ಅವನಿಗೆ ಸಮಾಧಾನವಾದಂತೆ ಕಂಡಿರಲಿಲ್ಲ.

ಸಾವಿರದ ಗಡಿ ದಾಟಿದ ಚಂದ್ರಮ ಅವರ 'ಪುಟ್ಕಥೆಗಳು'ಸಾವಿರದ ಗಡಿ ದಾಟಿದ ಚಂದ್ರಮ ಅವರ 'ಪುಟ್ಕಥೆಗಳು'

''ಸತ್ಯವಾಗ್ಲೂ ಸಾರ್. ನನಗೂ ಅವಳಿಗೂ ಯಾವ ಸಂಬಂಧವೂ ಇಲ್ಲ. ನೆರವಾಗಲು ಹೋಗಿ ಮೋಸ ಹೋದೆ ನಾನು. ಹಾಳು ಕಲಿಗಾಲ'', ವಿಕರ್ಣನದ್ದೀಗ ಹತಾಶೆಯ ದನಿ.

''ಮೊದಲಿನಿಂದ ಹೇಳು... ಮತ್ತೊಮ್ಮೆ...'', ಅಬ್ಬರಿಸಿದ ಆ ದೃಢಕಾಯಿ ಒರಟ. ಆತನ ದನಿಯ ಗಡುಸಿಗೋ, ಹೇಳಲೇಬೇಕಾದ ಅನಿವಾರ್ಯತೆಗೋ ವಿಲಕ್ಷಣ ಕಥೆಯೊಂದು ಸುರುಳಿ ಅಂದು ಬಿಚ್ಚಲಾರಂಭಿಸಿತು.

Vikarna falls into the trap of beautiful Shagufta

***
ವಿಕರ್ಣ ಹುಟ್ಟಿದ್ದು ಅಮಾವಾಸ್ಯೆಯ ದಿನವಂತೆ. ಮಧ್ಯಪ್ರದೇಶದಲ್ಲಿ ಡಕಾಯಿತನಾಗಿದ್ದ ವಿಕರ್ಣನ ತಾತ ನಂತರ ಹುಬ್ಬಳ್ಳಿಗೆ ಬಂದು ಸೇರಿಕೊಂಡ ದಿನಗಳಲ್ಲೇ ವಿಕರ್ಣ ಜನ್ಮತಾಳಿದ್ದ. ಮೊಮ್ಮಗ ಹುಟ್ಟಿದ ಖುಷಿಗೆ ಗಾಳಿಯಲ್ಲಿ ಗುಂಡುಹಾರಿಸಿ ಸಂಭ್ರಮಿಸಿದ್ದನಂತೆ ಘಾಟಿ ಮುದುಕ. ವಿಷಯ ಕೇಳಿ ಹೌಹಾರಿದ ಸೊಸೆ ನಂತರ ಮಗುವನ್ನು ತಾತನ ಬಳಿ ಬಿಡಲು ಹೆದರಿದ್ದಳು.

ಆದರೆ ವಿಧಿಯಾಟವು ಬೇರೆಯದೇ ಆಗಿತ್ತು. ತಾಯಿ ಕೆಲಸಕ್ಕೆ ಹೋದಾಗ ಮಗುವಿಗೆ ತಾತನೇ ಸಾಥಿ. ಸೊಸೆ ಇಟ್ಟಿದ್ದ 'ಕರ್ಣ' ಎಂಬ ಹೆಸರನ್ನು ತಾತ 'ವಿಕರ್ಣ' ಎಂದು ಬದಲಾಯಿಸಿದ್ದ. ಎಲ್ಲೋ ಪ್ರವಚನವೊಂದಕ್ಕೆ ಹೋಗಿದ್ದ ಸೊಸೆಗೆ ಸ್ವಾಮಿಯೊಬ್ಬರಿಂದ ''ವಿಕರ್ಣ ಕೌರವರಲ್ಲೊಬ್ಬ'' ಎಂದು ತಿಳಿದಾಗ ಸಿಡಿಸಿಡಿಯಾಗಿದ್ದಳು. ನಂತರ ತಾತನೇ ಬಂದು ''ದ್ರೌಪದಿಯ ವಸ್ತ್ರಾಪಹರಣವಾದಾಗ ವಿಕರ್ಣ ಒಬ್ಬನೇ ಪ್ರತಿಭಟಿಸಿದ್ದು. ಹೀಗಾಗಿ ಅವನೂ ಪಾಂಡವರಂತೆಯೇ'', ಎಂದೆಲ್ಲಾ ಹೇಳಿ ಸೊಸೆಯನ್ನು ಒಪ್ಪಿಸಿದ್ದ.

ಹೀಗೆ ವಿಲಕ್ಷಣ ತಾತನ ಸಂಗದಲ್ಲೇ ಬೆಳೆದ ವಿಕರ್ಣ ಮುಂದೆ ಆಕರ್ಷಿತನಾಗಿದ್ದೂ ತಾತನ ಜೀವನಶೈಲಿಗೇ. ಜೀವನವನ್ನು ಹುಚ್ಚುಸಾಹಸವೆಂಬಂತೆ ಕಳೆದ ತಾತ ವಿಕರ್ಣನಲ್ಲಿ ಬಿತ್ತಿದ್ದೂ ಇದನ್ನೇ. ಜಗತ್ತಿನಲ್ಲಿರುವುದೆಲ್ಲಾ ಭೋಗದ ವಸ್ತುಗಳೆಂದೇ ನಂಬಿ ಬೆಳೆದಿತ್ತು ಈ ಜೀವ. ಮುಂದೆ ವಾಮಮಾರ್ಗಗಳ ಮೂಲಕ ಕೊಂಚ ಹೆಚ್ಚೇ ವೇಗದಲ್ಲಿ ಯಶಸ್ಸನ್ನು ಪಡೆದ ವಿಕರ್ಣನಿಗೆ ಜೀವನವು ಒಂದು ರೋಚಕ, ಅಪಾಯಕಾರಿ ಆಟವಷ್ಟೇ ಆಗಿತ್ತು. ಇಂಥದ್ದೊಂದು ಆಟವನ್ನಾಡಿಯೇ ಈ ಬಾರಿ ವಿಕರ್ಣ ಘನಘೋರ ಇಕ್ಕಟ್ಟಿಗೆ ಸಿಲುಕಿದ್ದು. ಸಂಪತ್ತಿನೊಂದಿಗೆ ಸಮಾಜದಲ್ಲೀಗ ಒಳ್ಳೆಯ ಸ್ಥಾನಮಾನವನ್ನೂ ಪಡೆದಿದ್ದ ವಿಕರ್ಣನಿಗೆ ತಾನು ಅದೆಷ್ಟು ದೊಡ್ಡ ಚಕ್ರವ್ಯೂಹದಲ್ಲಿ ಸಿಲುಕಿದ್ದೇನೆ ಎಂಬುದರ ಅರಿವಾಗಿದ್ದು ಠಾಣೆಯ ಬಣ್ಣಗೆಟ್ಟ ಗೋಡೆಗಳ ಮಧ್ಯೆ ಚಳಿಹಿಡಿದವನಂತೆ ಕುಳಿತಾಗಲೇ.

ಭಯವೆಂದರೇನೇ ಗೊತ್ತಿರದ ಕನ್ನಡ ನಾಡಿನ ವೀರೆ ಅಬ್ಬಕ್ಕಭಯವೆಂದರೇನೇ ಗೊತ್ತಿರದ ಕನ್ನಡ ನಾಡಿನ ವೀರೆ ಅಬ್ಬಕ್ಕ

ಹೆಣ್ಣಿನ ಮೋಹ ವಿಕರ್ಣನಿಗೆ ಹೊಸದಲ್ಲ. ಹಾಗೆಯೇ ಅದನ್ನೊಂದು ಪರಾಕ್ರಮವೆಂಬಂತೆ ಭಾವಿಸುವ ಬಗೆಯೂ! ಅಂಥಾ ಹುಚ್ಚುಧೈರ್ಯದಲ್ಲೇ ಆ ಸಂಜೆಯೂ ಕೂಡ ಆಕೆಯನ್ನವನು ತನ್ನ ಹಡಗಿನಂತಹ ಉದ್ದನೆಯ ಕಾರಿನಲ್ಲಿ ನಿಸ್ಸಂಕೋಚವಾಗಿ ಕೂರಿಸಿದ್ದು. ಅಂದು ಚಿಕ್ಕ ಹ್ಯಾಂಡ್-ಬ್ಯಾಗ್ ಮತ್ತು ದೊಡ್ಡದಾದ ಎರಡು ಟ್ರಾಲಿಗಳನ್ನು ಹಿಡಿದಿದ್ದ ಬೆಡಗಿಯೋರ್ವಳು ಸಾಗುತ್ತಿದ್ದ ಖಾಸಗಿ ವಾಹನಗಳತ್ತ ಕೈಯಾಡಿಸುತ್ತಾ ಡ್ರಾಪ್ ಕೇಳುತ್ತಿದ್ದಳು. ಶಿಕಾರಿಯೊಬ್ಬ ತನ್ನ ಬೇಟೆಯನ್ನು ಕಂಡಕೂಡಲೇ ಏಕಾಏಕಿ ಜಾಗೃತನಾಗುವಂತೆ ವಿಕರ್ಣ ಅಂದು ನೆಟ್ಟಗಾಗಿದ್ದ. ಪ್ರಯತ್ನಿಸಿದರೆ ನಷ್ಟವೇನಿಲ್ಲ ಅನ್ನಿಸಿತ್ತು. ತಕ್ಷಣವೇ ತೀರಾ ಅವಳನ್ನು ನೇವರಿಸುವಷ್ಟಿನ ಸಮೀಪಕ್ಕೆ ತನ್ನ ಕಾರನ್ನು ನಿಲ್ಲಿಸಿ ಒಳಬರುವಂತೆ ಆಕೆಯನ್ನು ಆಹ್ವಾನಿಸಿದ್ದ ವಿಕರ್ಣ.

Vikarna falls into the trap of beautiful Shagufta

ತನ್ನೆರಡು ಭಾರದ ಬ್ಯಾಗುಗಳನ್ನು ಡಿಕ್ಕಿಯಲ್ಲಿಟ್ಟು ವಿಕರ್ಣನ ಪಕ್ಕದ ಆಸನದಲ್ಲಿ ಕುಳಿತಳಾಕೆ. ''ಶಗುಫ್ತಾ...'', ಕೈಚಾಚಿ ಲವಲವಿಕೆಯಿಂದ ತನ್ನ ಪರಿಚಯವನ್ನು ಮಾಡಿಕೊಂಡಳು ಹುಡುಗಿ. ರೇಷ್ಮೆಯಷ್ಟು ನುಣುಪಾಗಿದ್ದ ಅವಳ ಕೈಯನ್ನು ಸ್ಪರ್ಶಿಸಿ ಹಾಯೆನಿಸಿತು ವಿಕರ್ಣನಿಗೆ. ಸುಂದರಿಯಾದ ಹೆಣ್ಣೊಬ್ಬಳು ಪಕ್ಕದಲ್ಲಿದ್ದರೆ ಸಮಯವು ಓಡುವಷ್ಟು ವೇಗದಲ್ಲೇ ಅಂದು ಕಾರೂ ಶರವೇಗದಲ್ಲಿ ಸಾಗಿತು.

***
''ನಮ್ಮ ಯಾವ ದಾಖಲೆಗಳಲ್ಲೂ ಈ ಹೆಸರಿನ ಅಪರಾಧಿಗಳಿಲ್ಲ ಸಾರ್'', ಸಹಾಯಕನೊಬ್ಬ ಶಿಸ್ತಿನಿಂದ ಅಧಿಕಾರಿಯ ಬಳಿ ಬಂದು ಉಸುರಿದ. ವಿಕರ್ಣನಿಗೆ ಅದ್ಯಾಕೋ ಈ ಮಾತು ಹಿಡಿಸಲಿಲ್ಲ. ಪೋಲೀಸ್ ರೆಕಾರ್ಡಿನಲ್ಲಿ ಅವಳದ್ದೇನು, ಇವನ ಹೆಸರೂ ಇರಲಿಲ್ಲ. ಆದರೆ ವಿಕರ್ಣನ ವಾದವನ್ನು ಕೇಳುವವರ್ಯಾರು? ಅಧಿಕಾರಿ ಮತ್ತೆ ಏನೇನೋ ಗೊಣಗಿದ. ತರಿಸಿಕೊಂಡ ಚಹಾ ಆತನ ಮೂಡನ್ನು ಸರಿಪಡಿಸುವಂತೆ ಕಾಣಲಿಲ್ಲ. ಇತ್ತ ವಿಕರ್ಣನ ಕಥೆ ಅವನಿಗೆ ತೃಪ್ತಿಯಾಗುವಂತಿರಲಿಲ್ಲ. ಯಾಕೋ ಯಾರ ದಿನವೂ ಅಂದು ಸರಿದಾರಿಯಲ್ಲಿ ಸಾಗುವಂತೆ ಕಾಣಲಿಲ್ಲ.

ಚಂದ್ರಬೆಟ್ಟ ಎಸ್ಟೇಟ್ : ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳುಚಂದ್ರಬೆಟ್ಟ ಎಸ್ಟೇಟ್ : ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು

***
ಆ ಸಂಜೆಗೂ ಅದೇ ಭಯಾನಕ ನೆರಳಿತ್ತು. ಆದರೆ ವಿಕರ್ಣನಿಗೆ ಅದರ ಸುಳಿವಿರಲಿಲ್ಲ ಅಷ್ಟೇ!

ಮಾರ್ಗಮಧ್ಯದಲ್ಲೇ ಆಕೆಗೊಂದು ಕರೆ ಬಂದಿತ್ತು. ಅದೇನೋ ಕಿಡ್ನಾಪಿಂಗ್, ಕ್ಯಾಶು ಅಂತೆಲ್ಲಾ ನಿತ್ಯದ ಮಾತೆಂಬಂತೆ ಅರಳುಹುರಿದಂತೆ ಉಲಿದ ಶಗುಫ್ತಾ ತಾನು ಪೋಲೀಸ್ ಇಲಾಖೆಯಲ್ಲಿದ್ದೇನೆ ಎಂದಾಗಲೇ ವಿಕರ್ಣನಿಗೆ ಅಚ್ಚರಿಯಾಗಿದ್ದು.

''ಹೊಸ ಕಿಡ್ನಾಪಿಂಗ್ ಕೇಸು. ಹತ್ತು ವರ್ಷದ ಮಗು. ಕ್ಯಾಶ್ ತಗಂಡ್ರೂ ಮಗೂನಾ ಬಿಟ್ಟಿಲ್ಲ ಸಾಲಾ ಹರಾಮಿಗಳು. ಎಲ್ಲಾ ಕಳ್ಕೊಂಡು ಗೋಳೋ ಅಂತ ನಮ್ಹತ್ರ ಬಂದ್ಬಿಟ್ರು ನೋಡಿ ಮನೆಯೋರು. ಪೊಲೀಸರು ನೆನಪಾಗೋದೇ ಇಂಥಾ ಕಷ್ಟದ ಟೈಮಲ್ಲಿ'', ಎಂದಳು ಶಗುಫ್ತಾ.

''ಹಾಲಿವುಡ್ಡಿನಲ್ಲಿರಬೇಕಾದವರು ಎಲ್ಲಿ ಶವ, ಕೇಸು, ಫೈಲು ಅಂತ ಅಲೀತಾ ಇದೀರ್ರೀ'', ಅಂತೆಲ್ಲಾ ಡೈಲಾಗು ಹೊಡೆದು ಶಗುಫ್ತಾಳನ್ನು ಸೆಳೆಯುವ ಪ್ರಯತ್ನ ಮಾಡಿದ್ದ ವಿಕರ್ಣ. ಸುಮಾರು ಎರಡು ತಾಸುಗಳ ಪ್ರಯಾಣದ ನಂತರ ಶಗುಫ್ತಾ ವಿಕರ್ಣನ ಕಾರಿನಿಂದ ಇಳಿದುಹೋಗಿದ್ದಳು. ವಿಕರ್ಣನ ವಿಸಿಟಿಂಗ್ ಕಾರ್ಡು ಶಗುಫ್ತಾಳ ಕೈಗೂ, ಮತ್ತೊಮ್ಮೆ ಭೇಟಿಯಾಗುವ ಭರವಸೆಯೊಂದಿಗೆ ಅವನ ಅದೃಷ್ಟಶಾಲಿ ಕೆನ್ನೆಗೆ ಸಿಕ್ಕಿದ್ದ ವಿದಾಯದ ಸಿಹಿಮುತ್ತಿನಿಂದಲೂ ಪಯಣವು ಸಂಪನ್ನಗೊಂಡಿತ್ತು. ವಿಕರ್ಣ ನಿಜಕ್ಕೂ ಹಿರಿಹಿರಿ ಹಿಗ್ಗಿದ್ದ.

Vikarna falls into the trap of beautiful Shagufta

ಇತ್ತ ಶಗುಫ್ತಾ ಇಳಿದುಹೋದ ನಾಲ್ಕೈದು ಕಿಲೋಮೀಟರುಗಳಲ್ಲೇ ಪೋಲೀಸರ ನಾಕಾಬಂದಿಯೊಂದು ಹೆದ್ದಾರಿಯಲ್ಲಿ ಸಾಗಿಬರುತ್ತಿದ್ದ ಪ್ರತೀ ವಾಹನಗಳನ್ನೂ ತಪಾಸಣೆಗೊಳಪಡಿಸಿ ಗೊಂದಲದ ವಾತಾವರಣವನ್ನು ಸೃಷ್ಟಿಸಿತ್ತು. ನಿತ್ಯದ ಭದ್ರತಾ ತಪಾಸಣೆಯಿರಬೇಕು ಎಂದು ಹಾಯಾಗಿ ಪತ್ನಿಗೆ ಫೋನು ಹಚ್ಚಿದರೆ ನಿಮಿಷಾರ್ಧದಲ್ಲಿ ಪೋಲೀಸರು ವಿಕರ್ಣನ ಕಾಲರ್ ಹಿಡಿದಿದ್ದರು. ವಿಕರ್ಣನ ಕಾರಿನ ಡಿಕ್ಕಿಯಲ್ಲಿದ್ದ ದೊಡ್ಡ ಟ್ರಾಲಿ ಬ್ಯಾಗೊಂದರಲ್ಲಿ ಮೂರ್ಛೆತಪ್ಪಿದ್ದ, ಕಣ್ಣಿಗೆ ಬಟ್ಟೆಕಟ್ಟಿದ್ದ ಹತ್ತು ವರ್ಷದ ಮಗುವೊಂದು ಪತ್ತೆಯಾಗಿತ್ತು. ತಕ್ಷಣವೇ ಇದು ಶಗುಫ್ತಾಳ ಬ್ಯಾಗು ಎಂಬುದನ್ನರಿತ ವಿಕರ್ಣ ಈ ಹಿಂದೆ ನಡೆದಿದ್ದ ಆ ಟೆಲಿಫೋನ್ ಕರೆ, ಕಿಡ್ನಾಪಿಂಗ್, ಕ್ಯಾಶು, ತಪ್ಪಿಸಿಕೊಂಡ ಅಪರಾಧಿಗಳು... ಎಲ್ಲವನ್ನೂ ನೆನೆಸಿಕೊಂಡು ಗಾಬರಿಯಾಗಿದ್ದ.

ಶಗುಫ್ತಾ ಸತ್ಯಕಥೆಯೊಂದನ್ನೇ ವಿಕರ್ಣನ ಬಳಿ ಹೇಳಿದ್ದಳು. ಆದರೆ ವಿಪರ್ಯಾಸವೆಂದರೆ ಕಥೆಯ ಅಷ್ಟು ಭಾಗವು ಪೊಲೀಸರಿಗೂ ತಿಳಿದಿತ್ತು. ಹೀಗಾಗಿ ಮುಂದೇನು ಎಂಬುದನ್ನು ವಿಕರ್ಣನಿಂದಲೇ ತಿಳಿಯಲು ಪೊಲೀಸರು ಕಾತರರಾಗಿದ್ದರೆ, ಮುಂದೇನು ಎಂಬುದರ ಕಲ್ಪನೆಯೂ ಇಲ್ಲದ ವಿಕರ್ಣ ಸಂಕೀರ್ಣ ಚಕ್ರವ್ಯೂಹವೊಂದರಲ್ಲಿ ಸಿಲುಕಿದ್ದ. ಒಟ್ಟಿನಲ್ಲಿ ಇದೊಂದು ಆಕಸ್ಮಿಕವೇನಲ್ಲ ಎಂಬುದನ್ನು ಅರ್ಥೈಸಿಕೊಳ್ಳಲು ಅವನಿಗೆ ಹೆಚ್ಚು ಸಮಯವೇನೂ ತಗುಲಲಿಲ್ಲ.

''ಮಗು ಆಘಾತದಲ್ಲಿದೆ. ಆದರೂ ಮಗುವಿನಿಂದ ಸ್ಟೇಟ್ಮೆಂಟ್ ಪಡೆದುಕೊಂಡಿದ್ದೇವೆ. ಈ ಘಟನೆಯುದ್ದಕ್ಕೂ ಅದರ ಕಣ್ಣಿಗೆ ಬಟ್ಟೆಕಟ್ಟಿದ್ದರಿಂದ ಯಾವ ಮುಖ ಪರಿಚಯವೂ ಅದಕ್ಕಿಲ್ಲ. ಆದರೆ ದನಿಗಳನ್ನು ಅದು ಗುರುತು ಹಿಡಿಯುವಂತಿದೆ. ಮಗು ಹೇಳುವ ಪ್ರಕಾರ, ಯಾವ ಹೆಣ್ಣುದನಿಯೂ ಅಲ್ಲಿರಲಿಲ್ಲ. ಅಲ್ಲಿದ್ದಿದ್ದು ಗಂಡುದನಿ ಮಾತ್ರ'', ಎಂದು ದುರುಗುಟ್ಟುತ್ತಾ ಕಣ್ಣಲ್ಲೇ ವಿಕರ್ಣನನ್ನು ಸೀಳುತ್ತಿದ್ದ ಆ ಅಧಿಕಾರಿ.

''ತಾನು ಇಳಿಯುವ ಹೊತ್ತಿಗೆ ಶಗುಫ್ತಾ ಸೌಜನ್ಯಪೂರ್ವಕವಾಗಿ ನನ್ನನ್ನೂ ಇಳಿಯಲು ಬಿಡಲಿಲ್ಲ. ಬ್ಯಾಗಿನ ಸಂಖ್ಯೆಯನ್ನಿಳಿಸಲು ಚಿಕ್ಕದನ್ನು ದೊಡ್ಡ ಟ್ರಾಲಿಯೊಳಗಿಟ್ಟುಬಿಟ್ಟೆ ಎಂದಷ್ಟೇ ಹೇಳಿ ತನ್ನ ಹ್ಯಾಂಡ್-ಬ್ಯಾಗಿನ ಹೊರತಾಗಿ ಒಂದೇ ಟ್ರಾಲಿಯೊಂದಿಗೆ ತೆರಳಿದಳು. ನನಗೂ ಅದ್ಯಾವ ಮಂಕು ಬಡಿದಿತ್ತೋ. ಅವಳ ಇನ್ನೊಂದು ಟ್ರಾಲಿ ಅಲ್ಲೇ ಇತ್ತು ಎಂಬುದು ನನಗೆ ಅರಿವಾಗಿದ್ದು ನೀವು ನನ್ನ ಬಂಧಿಸಿದಾಗಲೇ. ಇನ್ನು ಇದಕ್ಕಿಂತ ಹೆಚ್ಚು ನಾನು ಇನ್ನೇನನ್ನೂ ಹೇಳಲಾರೆ'', ಎಂದು ಸುಮ್ಮನೆ ಶೂನ್ಯವನ್ನೇ ದಿಟ್ಟಿಸುತ್ತಾ ಕುಳಿತುಬಿಟ್ಟ ವಿಕರ್ಣ. ಮುಂದೇನು ಮಾತಾಡುವುದಿದ್ದರೂ ತನ್ನ ವಕೀಲರ ಸಮ್ಮುಖದಲ್ಲಿಯೇ ಎಂದು ಆತ ನಿರ್ಧರಿಸಿಯಾಗಿತ್ತು.

ಜೀವನದುದ್ದಕ್ಕೂ ತನ್ನ ರೋಚಕ ಆಟಾಟೋಪಗಳ ಬಗ್ಗೆ ಜಂಭಕೊಚ್ಚಿಕೊಳ್ಳುತ್ತಿದ್ದ ವಿಕರ್ಣ ಈ ಬಾರಿ ತೀರಾ ಮುಜುಗರಕ್ಕೊಳಗಾಗಿದ್ದ. ಶಗುಫ್ತಾ ವಿಕರ್ಣನ ಗಂಡಸ್ತನದ ದರ್ಪವನ್ನು ಅರ್ಧ ಸೇದಿದ ಸಿಗರೇಟಿನ ಬಟ್ಟಿನಂತೆ ನಿರ್ದಾಕ್ಷಿಣ್ಯವಾಗಿ ಹೊಸಕಿಹಾಕಿದ್ದಳು.

***
ಈ ಇಡೀ ಪ್ರಕರಣದ ಮುಖ್ಯ ಶಂಕಿತ ಆರೋಪಿಯಾಗಿ ವಿಕರ್ಣ ಪೊಲೀಸರ ಕಾಕದೃಷ್ಟಿಯ ಭಯದಲ್ಲಿದ್ದರೂ ಮುಂದೆ ಪ್ರಕರಣವು ನ್ಯಾಯಾಲಯದ ಮೆಟ್ಟಲೇರಿದ ತರುವಾಯ ಸಾಕ್ಷ್ಯಾಧಾರಗಳಿಲ್ಲದೆ ಬಿದ್ದುಹೋಯಿತು. ಆದರೆ ತನಗಿದ್ದ ಹೆಣ್ಣುಬಾಕತನ, ಲಾಂಗ್ ಡ್ರೈವ್ ಸಾಗಲೆಂದೇ ಹೊರಟಿದ್ದ ಆ ದಿನ, ಆ ದಿನವೇ ಸಿಗುವ ಶಗುಫ್ತಾ, ವಂಚನೆಯ ಮುಖವಾಡವನ್ನು ಧರಿಸಿ ಹೇಳಲ್ಪಟ್ಟ ಸತ್ಯಕಥೆ, ಆದಿಗೂ ಅಂತ್ಯಕ್ಕೂ ಸಂಬಂಧವಿಲ್ಲದ ಪ್ರಕರಣವೊಂದು ಇಬ್ಬರು ಆಗಂತುಕರಿಂದ ಬೆಸೆಯುವ ಬಗೆ... ಹೀಗೆ ಶಗುಫ್ತಾ ತನ್ನನ್ನು ದಾಳದಂತೆ ವ್ಯವಸ್ಥಿತವಾಗಿ ಬಳಸಿಕೊಂಡ ಚಾಣಾಕ್ಯ ನಡೆಗಳನ್ನು ನೆನೆಸಿಕೊಂಡಾಗಲೆಲ್ಲಾ ವಿಕರ್ಣ ಇಂದಿಗೂ ಸಣ್ಣಗೆ ನಡುಗುತ್ತಾನೆ. ತನ್ನ ಅಂಜಿಕೆಯ ಬಗ್ಗೆ ಯೋಚಿಸಿದಾಗಲೆಲ್ಲಾ ಒಳಗೊಳಗೇ ಅವನಿಗೆ ನಾಚಿಕೆಯೂ ಆಗುತ್ತದೆ.

ಇತ್ತ ಪೊಲೀಸ್ ದಾಖಲೆಯಲ್ಲೂ ಸೇರಿದಂತೆ ಯಾವ ದಾಖಲೆಯಲ್ಲೂ ಶಗುಫ್ತಾ ಎಂಬ ತರುಣಿಯ ಸುಳಿವಿಲ್ಲ. ಆಕೆಯೇನು ಅಪರಾಧಿಯೋ, ಗ್ಯಾಂಗ್ ಒಂದರ ಸದಸ್ಯೆಯೋ, ವಂಚಕಿಯೋ, ಅಲೆಮಾರಿಯೋ ಎಂಬ ಬಗ್ಗೆಯೂ ಖಚಿತ ಮಾಹಿತಿಗಳಿಲ್ಲ. ವಿಕರ್ಣನ ವಿವರಣೆಯನ್ನಾಧರಿಸಿ ಇಲಾಖೆಯ ಚಿತ್ರಕಾರನೊಬ್ಬ ಸಿದ್ಧಪಡಿಸಿದ ರೇಖಾಚಿತ್ರವೊಂದೇ ಸದ್ಯ ಶಗುಫ್ತಾಳ ಅಸ್ತಿತ್ವಕ್ಕೊಂದು ಸಾಕ್ಷಿ.

ಅದೇನಿದ್ದರೂ ಒಂದಂತೂ ಬದಲಾಗಿದೆ. ವಿಕರ್ಣ ಈಗ ಸಿಕ್ಕಸಿಕ್ಕಲ್ಲೆಲ್ಲಾ ಖೆಡ್ಡಾ ತೋಡುವುದನ್ನು ನಿಲ್ಲಿಸಿದ್ದಾನೆ. ಸೆಳೆಯಲೆಂದು ಸಾಗುವ ಪ್ರತೀ ಹೆಣ್ಣಿನಲ್ಲೂ ಅವನಿಗೀಗ ಶಗುಫ್ತಾಳ ಮುಖವು ಕಂಡು ಅವನನ್ನು ಅಣಕಿಸುವಂತೆ ಭಾಸವಾಗುತ್ತದೆ. ಹೀಗೆ ಮುಗಿದಿದ್ದರೂ ಮುಗಿಯದ ಪ್ರಕರಣವೊಂದು ಅಂತ್ಯವಿಲ್ಲದ ದುಃಸ್ವಪ್ನದಂತೆ ವಿಕರ್ಣನ ಕಾಲಕೆಳಗಿನ ನೆಲವನ್ನು ಆಗಾಗ ಅಲುಗಾಡಿಸಿ ಆತನನ್ನು ಬೆಚ್ಚಿಬೀಳಿಸುತ್ತದೆ.

***
ಲೇಖಕರ ಕಿರುಪರಿಚಯ:

ಮೇಘನಾ ಸುಧೀಂದ್ರ
ಪ್ರಸ್ತುತ ಬೆಂಗಳೂರು ನಿವಾಸಿಯಾಗಿರುವ ಮೇಘನಾ ಒನ್ಇಂಡಿಯಾ ಕನ್ನಡ ಜಾಲತಾಣದ 'ಜಯನಗರದ ಹುಡುಗಿ' ಎಂಬ ಜನಪ್ರಿಯ ಅಂಕಣವನ್ನು ಬರೆಯುತ್ತಿರುವ ಯುವ ಅಂಕಣಕಾರ್ತಿ. ಉನ್ನತ ಶಿಕ್ಷಣಕ್ಕಾಗಿ ಬಾರ್ಸಿಲೋನಾದಲ್ಲಿದ್ದಾಗಲೂ ಬರವಣಿಗೆಯೂ ಸೇರಿದಂತೆ ಇತರ ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದವರು. ಇವರ ಕಥೆ, ಕವನ ಮತ್ತು ಲೇಖನಗಳು ವಿವಿಧ ಆನ್ಲೈನ್ ಮತ್ತು ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಇವರ ಅಂಕಣ ಬರಹಗಳು ಶೀಘ್ರದಲ್ಲೇ ಪುಸ್ತಕರೂಪದಲ್ಲಿ ಬಿಡುಗಡೆಯಾಗಲಿದೆ. ಸಂಗೀತ, ಓದು ಮತ್ತು ಪ್ರವಾಸ ಇವರ ಇತರೆ ಹವ್ಯಾಸಗಳು.

ಪ್ರಸಾದ್ ನಾಯ್ಕ್
ಹವ್ಯಾಸಿ ಬರಹಗಾರ ಮತ್ತು ಅಂಕಣಕಾರರಾಗಿರುವ ಪ್ರಸಾದ್ ನಾಯ್ಕ್ ದಕ್ಷಿಣ ಕನ್ನಡದ ಕಿನ್ನಿಗೋಳಿ ಮೂಲದವರು. ಕಥೆಗಳು ಮತ್ತು ಅನುವಾದಗಳೂ ಸೇರಿದಂತೆ ಇವರ ಹಲವು ಲೇಖನಗಳು ಅಂತರ್ಜಾಲ ಪತ್ರಿಕೆಗಳು, ಮುಖ್ಯವಾಹಿನಿಯ ಪತ್ರಿಕೆಗಳು ಮತ್ತು ಕೆಲ ಸಂಪಾದಿತ ಕೃತಿಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಇವರು ಗುರುಗ್ರಾಮದ ನಿವಾಸಿ.

English summary
Life is a journey with innumerable twists and turns. You will never know what to anticipate at an unexpected curve. So, the young Vikarna had never though he would face such a situation before he met beautiful Shagufta. Read Kannada short story by Meghana Sudhindra and Prasad Naik.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X