ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಥೆ : ಟಪ್ ಟಪ್ ಬುದ್ಧಿಸ್ಟ್ ಸೆಂಟರ್ (ಭಾಗ 5)

By ಮಾಧವ ವೆಂಕಟೇಶ್
|
Google Oneindia Kannada News

(ಕಥೆಯ ಮುಂದಿನ ಭಾಗ) ಕರ್ಣ ಕಂಪ್ಯೂಟರ್ ಸ್ಕ್ರೀನ್ ಅನ್ನು ನಿರಾಸಕ್ತಿಯಿಂದ ನೋಡಿದ. ಇದ್ದಕ್ಕಿದ್ದಂತೆ ಅದರಲ್ಲಿ ಅವಳ ಸುಂದರ ಮುಖ ಕಂಡುಬಂತು. ಕರ್ಣನಿಗೆ ತಡೆಯಲಾರದಷ್ಟು ಕೋಪ, ದುಃಖ ಮನಸ್ಸಿನಿಂದ ಉಕ್ಕಿ ಹರಿಯಿತು. ಮುಷ್ಟಿಯಿಂದ ಡೆಸ್ಕ್ ಅನ್ನು ಶಕ್ತಿಮೀರಿ ಗುದ್ದಿದ. ಹೊಡೆದ ರಭಸಕ್ಕೆ ಕ್ಯೂಬಿಕಲ್ ಅಲ್ಲಾಡಿತು. ಪಕ್ಕದ ಕ್ಯೂಬಿಕಲ್ ಅಲ್ಲಿ ಕೂತಿದ್ದ ಸಹೋದ್ಯೋಗಿ ಆತಂಕದಿಂದ ಎದ್ದು ನಿಂತು ತನ್ನ ಕ್ಯೂಬಿಕಲ್ ಮೇಲಿಂದ ಇಣುಕಿ, "Hey dude! Everything ok?" ಎಂದು ಕೇಳಿದ.

"Yes. Sorry for the disturbance dude" ಎಂದು ಉತ್ತರಿಸಿದ ಕರ್ಣ. ಸಹೋದ್ಯೋಗಿ ಕರ್ಣನನ್ನು ಒಂದು ಕ್ಷಣ ಗಮನಿಸಿದ. ಕರ್ಣನ ಒಣಗಿ ಹೋದ ದೇಹ, ಕಣ್ಣ ಕೆಳಗಿನ ಕಪ್ಪು ರೇಖೆಗಳು, ದಟ್ಟ ಗಡ್ಡವನ್ನು ನೋಡಿ, ಇವನಿಗೆ ಯಾವುದೋ ಖಾಯಿಲೆ ಇರಬೇಕೇನೋ ಪಾಪ, ಎಂದುಕೊಂಡು ತಲೆ ಆಡಿಸಿ, ತುಸ್ಸ್ ಎಂದು ತನ್ನ ಸೀಟಿನಲ್ಲಿ ವಾಪಸ್ಸು ಕೂತನು. ಕರ್ಣ ಏಟಾದ ಕೈಯನ್ನು ಉಫ್ ಉಫ್ ಎಂದು ಊದಿಕೊಂಡು ಕಂಪ್ಯೂಟರ್ ನ ಗಡಿಯಾರದ ಕಡೆ ನೋಡಿದ. 5:39 pm ಎಂದು ತೋರಿಸುತ್ತಿತ್ತು. ಮಧ್ಯಾಹ್ನದ ಊಟಕ್ಕೆ ಅಂತ ತಂದಿದ್ದ ಇಡ್ಲಿ ಪ್ಯಾಕೆಟ್ ಅನ್ನು ಬ್ಯಾಗಿನಲ್ಲಿ ಹಾಕಿಕೊಂಡು ಆಫೀಸ್ ನ ಹೊರದ್ವಾರದ ಕಡೆ ನಡೆದ.

ತನ್ನ ಬಾಡಿಗೆ ರೂಮಿಗೆ ಮರಳಿದ ಕರ್ಣ, ಉಟ್ಟ ಆಫೀಸ್ ಬಟ್ಟೆಯಲ್ಲೇ ದಬ್ ಎಂದು ಮಂಚದ ಮೇಲೆ ಬಿದ್ದುಕೊಂಡ. ಮೇಲೆ ಫ್ಯಾನ್ ಕರ್ ಕರ್ ಎಂದು ಸದ್ದು ಮಾಡುತ್ತಾ ಸುತ್ತುತ್ತಿತ್ತು. "ಫ್ಯಾನ್ ಎಷ್ಟು ಎತ್ತರದಲ್ಲಿದೆ?" ಕರ್ಣ ಯೋಚಿಸಿದ. ಆದರೆ ಯೋಚಿಸಲು ತಲೆ ಓಡಲಿಲ್ಲ. ಹಾಲಿನ ಪಕ್ಕದಲ್ಲೇ ಇದ್ದ ಅಡುಗೆಮನೆಯ ಕಡೆ ನೋಡಿದ. ಕೌಂಟರ್ ಕೆಳಗೆ ಗ್ಯಾಸ್ ಸಿಲಿಂಡರ್ ಇತ್ತು. ಸ್ಟವ್ ಪಕ್ಕದಲ್ಲಿ ಒಂದು ಕಡ್ಡಿ ಪೆಟ್ಟಿಗೆ ಇತ್ತು. ಎದ್ದು ನಿಂತು ನಿಧಾನವಾಗಿ ಅದರ ಕಡೆ ನಡೆದ.

Tup Tup Buddhist Center

"ಓ ಹಂಸಿನಿ.... ಮೇರಿ ಹಂಸಿನಿ... ಕಹಾನ್ ಉಡ್ ಚಲೀ" ಇದ್ದಕ್ಕಿದ್ದಂತೆ ಹಿಂದಿ ಗೀತೆ ಹಾಡಲು ಶುರುವಾಯಿತು. ಕರ್ಣ ಬೆಚ್ಚಿಬಿದ್ದ. ಅವನ ಜೇಬಿನಲ್ಲಿ ರಿಂಗ್ ಆಗುತ್ತಿದ್ದ ಮೊಬೈಲನ್ನು ತೆಗೆದು ನೋಡಿದ. ಪಮ್ಮಿ ಕಾಲ್ ಮಾಡುತ್ತಿದ್ದ. ಕಾಲ್ ಅನ್ನು ಕಟ್ ಮಾಡಿ ಹೊರಗೆ ನೋಡಿದ. ಚಳಿಗಾಲದ ಸೂರ್ಯ ದಿನದ ಕೆಲಸ ಮುಗಿಸಿ ಬೇಗನೆ ಮನೆಗೆ ತೆರಳುತ್ತಿದ್ದ. ಆ ಸೂರ್ಯನ ಸೌಂದರ್ಯ ಯಾಕೋ ಕರ್ಣನನ್ನು ಸೆಳೆಯಿತು. ರೂಮಿನ ಹೊರಗೆ ಬಂದು, ಮೆಟ್ಟಲಿಳಿದು, ಗೇಟಿನ್ನತ್ತ ನಿಂತ. ಮುಂದೆಯೇ ಇದ್ದ ರಂಗಶಂಕರದ ವಾತಾವರಣವನ್ನು ಗಮನಿಸಿದ. ಯಾವುದೋ ನಾಟಕ ಇದ್ದಿದ್ದರಿಂದ ಜನ ಕಿಕ್ಕಿರಿದು ಬರುತ್ತಿದ್ದರು. ಕೆಲವು ನಾಟಕಗಾರರು ವೇಷಭೂಷಣಗಳನ್ನು ಧರಿಸಿ ಮುಂದಿನ ನಾಟಕದ ಕರಪತ್ರವನ್ನು ಹಂಚುತ್ತಿದ್ದರು. ಕರ್ಣ ವ್ಯಂಗ್ಯವಾಗಿ ನಕ್ಕ. ಗೇಟಿನ ಹೊರಗೆ ಬಂದು ಸುಮ್ಮನೆ ರಸ್ತೆಯಲ್ಲಿ ನಡೆಯ ತೊಡಗಿದ. ಮೇನ್ ರೋಡಿನಲ್ಲೇ ಸ್ವಲ್ಪ ದೂರ ನಡೆದು, ಬಲಗಡೆಯಲ್ಲಿದ್ದ ಒಂದು ಅಡ್ಡ ರಸ್ತೆಯ ಕಡೆ ತಿರುಗಿದ. ಮೇನ್ ರೋಡಿನ ಗಲಾಟೆ, ಗದ್ದಲ, ಧೂಳಿನ ವಾತಾವರಣಕ್ಕೂ, ಈ ರಸ್ತೆಯ ಸ್ವಚ್ಛ, ಶಾಂತ, ಹಸಿರು ವಾತಾವರಣಕ್ಕೂ ಎಂತಹ ವ್ಯತ್ಯಾಸ!

ಈ ಡೆಡ್ ಎಂಡ್ ರಸ್ತೆಯ ಎರಡೂ ಕಡೆಗಳಲ್ಲೂ ಹಳೆ ಕಾಲದ ಬಂಗಲೆಗಳಿದ್ದವು. ಸರಿ ಮಧ್ಯದಲ್ಲಿ ಎರಡು ಮಹಡಿಯ ಒಂದು ಕಟ್ಟಡ. ಕರ್ಣ ಆ ಕಟ್ಟಡದ ಕಾಂಪೌಂಡ್ ಒಳಗೆ ಹೋಗಿ, ಬಾಗಿಲ ಮೇಲಿದ್ದ ಬೋರ್ಡ್ ಅನ್ನು ಓದಿದ. "ಟಪ್ ಟಪ್ ಬುದ್ಧಿಸ್ಟ್ ಸೆಂಟರ್" ಎಂದಷ್ಟೇ ಬರೆದಿತ್ತು. "ಎಂತ ಹೆಸ್ರಪ್ಪ ಇದು" ಅಂದುಕೊಂಡ ಕರ್ಣ. ಮುಂದಿನ ಬಾಗಿಲಿಗೆ ಪುರಾತನ ಕಾಲದ ಒಂದು ಬೀಗ ಹಾಕಲಾಗಿತ್ತು. ಕಟ್ಟಡದ ಹಿಂದಿನ ಭಾಗಕ್ಕೆ ನಡೆದ. ಸೋಡಿಯಂ ದೀಪದಿಂದ ಬೆಳಗಿಸಲಾಗಿದ್ದ ಹಿಂದಿನ ಭಾಗ, ಗಲ್ಲಿ ಕ್ರಿಕೆಟ್ ಆಡುವಷ್ಟು ಅಗಲವಿತ್ತು. ಮೂಲೆಯಲ್ಲಿ ಒಂದು ಹಳೆಯ ಬಾವಿ. ಕರ್ಣ ಅಸಡ್ಡೆಯಿಂದ ಇದನ್ನು ಗಮನಿಸಿ ಕಟ್ಟಡದ ಹಿಂದಿನ ಬಾಗಿಲಿನ ಮೆಟ್ಟಲಿನ ಮೇಲೆ ಕುಳಿತ. ಒಮ್ಮೆ ಕರ್ಕಶವಾಗಿ ನಕ್ಕು, ಬಾವಿಯ ಕಡೆ ನೋಡಿ, ಎದ್ದು ನಿಂತ. ಧಡ್! ಕರ್ಣನ ಬೆನ್ನಿಗೆ ತೆಗೆದ ಬಾಗಿಲು ಹೊಡೆಯಿತು. ಮುಂದೆ ಎಡವಿ, ತಕ್ಷಣ ಹಿಂದೆ ತಿರುಗಿ ನೋಡಿದ. ಟಿಬೆಟಿಯನ್ ಸನ್ಯಾಸಿಯೊಬ್ಬರು ಪಿಳಿ ಪಿಳಿ ಕಣ್ಣು ಮಿಟುಕಿಸುತ್ತಾ ಕರ್ಣನನ್ನು ನೋಡುತ್ತಿದ್ದರು. ಇಬ್ಬರೂ ಸ್ವಲ್ಪ ಹೊತ್ತು ಒಬ್ಬರನ್ನೊಬ್ಬರು ಗಮನಿಸುತ್ತಾ ನಿಂತರು.

English summary
Karna was madly in love with most beautiful Hasmsini. One fine day he proposed her too. Did she accept his proposal? Did he get what he wanted? Who was that monk who changed the direction of Karna? Long story by Madhava Venkatesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X