ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಮೇಶ್ ಹೇಳಿದ ಪಾಳುಬಿದ್ದ ಇಟ್ಟಿಗೆ ಗೂಡಿನ ನಿಗೂಢ ಕಥೆ!

By ಜೋಗಿ
|
Google Oneindia Kannada News

ನೀವು ಬೆಂಗಳೂರಿನಿಂದ ಮಂಗಳೂರಿಗೆ ಹೊರಟರೆ, ನಿಮಗಿರುವುದು ಎರಡೂ ಮತ್ತೊಂದು ದಾರಿ. ಹಾಸನದಿಂದ ಬೇಲೂರು, ಮೂಡಿಗೆರೆ ಮಾರ್ಗವಾಗಿ ಚಾರ್ಮುಡಿ ಘಾಟಿಯ ಮೂಲಕ ಹೋಗುವುದು ಒಂದು. ಹಾಸನದಿಂದ ನೇರವಾಗಿ ಹೋಗಿ ಶಿರಾಡಿ ಘಾಟಿ ಇಳಿದು ಹೋಗುವುದು ಇನ್ನೊಂದು. ತೀರ ತಲೆಕೆಟ್ಟರೆ ಬಿಸಲೆ ಘಾಟಿ ಹಾದು, ಸುಬ್ರಹ್ಮಣ್ಯದ ಹತ್ತಿರ ಮತ್ತೆ ಮರಳಿ ಗುಂಡ್ಯಕ್ಕೆ ಬಂದು ಉಪ್ಪಿನಂಗಡಿ ಸೇರುವುದಕ್ಕೆ ಅಡ್ಡಿಯಿಲ್ಲ.

ಶಿರಾಡಿ ಘಾಟಿ ಇಳಿದು ನೆಲ್ಯಾಡಿಗೆ ಕಾಲಿಡುವ ಮೊದಲು ಅತ್ತಿತ್ತ ತಿರುಗಾಡಿದರೆ ನಿಮಗೆ ಸಿಕ್ಕುವ ಅರಸಿನಮಕ್ಕಿ, ವಳಾಲು, ಕೊಕ್ಕಡ ಮುಂತಾದ ಊರುಗಳ ಆಸುಪಾಸಿನಲ್ಲಿ ಕೇರಳದಿಂದ ಬಂದ ಕೊಚ್ಚಿ ಕ್ರಿಶ್ಚಿಯನ್ನರು ರಬ್ಬರ್ ತೋಟ ಮಾಡಿಕೊಂಡಿದ್ದಾರೆ. ಜೊತೆಗೇ ಟಾಪಿಯೋಕಾ ಎಂದು ಬೆಂಗಳೂರಿನ ಮಂದಿ ಕರೆಯುವ ಮರಗೆಣಸು ಬೆಳೆಯುತ್ತಾರೆ.

ಸಣ್ಣಕಥೆ: ಮೀಸಲಾತಿಗೆ ಬಲಿಯಾದ ಒಂದು ಛೊಲೋ ಪ್ರೀತಿ!ಸಣ್ಣಕಥೆ: ಮೀಸಲಾತಿಗೆ ಬಲಿಯಾದ ಒಂದು ಛೊಲೋ ಪ್ರೀತಿ!

ನೆಲ್ಯಾಡಿಯಿಂದ ಸುಮಾರು ನಲುವತ್ತು ಮೈಲಿ ಮುಂದಕ್ಕೆ ಮಂಗಳೂರಿಗೆ ಹೋಗುವ ದಾರಿಯಲ್ಲಿ ಸಾಗಿದರೆ ರಸ್ತೆಯ ಎರಡೂ ಬದಿಯಲ್ಲಿ ನೀವು ಇಟ್ಟಿಗೆ ಗೂಡುಗಳನ್ನು ಕಾಣಬಹುದು. ಅಲ್ಲೆಲ್ಲಾ ಜೇಡಿಮಣ್ಣು ವಿಪುಲವಾಗಿ ಸಿಕ್ಕುತ್ತಿದ್ದುದರಿಂದಲೂ ಮುರಕಲ್ಲುಗಳಿಗೆ ವಿಪರೀತ ಬೆಲೆ ಇದ್ದುದರಿಂದಲೂ ಇಟ್ಟಿಗೆಗಳಿಗೆ ಅಪಾರ ಬೇಡಿಕೆಯಿತ್ತು. ಹೀಗಾಗಿ ಹೆಜ್ಜೆಗೊಂದರಂತೆ ಇಟ್ಟಿಗೆ ಗೂಡುಗಳು ಹುಟ್ಟಿಕೊಂಡಿದ್ದವು.

The love was blossoming until the entry of that person

ನಾನೊಮ್ಮೆ ಮಂಗಳೂರಿಗೆ ಹೋಗುವ ದಾರಿಯಲ್ಲಿ ಅಡ್ಯಾರಿನ ಬಳಿ ಇಂಥ ಇಟ್ಟಿಗೆ ಗೂಡುಗಳನ್ನು ನೋಡಿ ಅವುಗಳ ಫೊಟೋ ತೆಗೆಯಲೆಂದು ಕಾರು ನಿಲ್ಲಿಸಿದೆ. ಅಷ್ಟು ಹೊತ್ತಿಗಾಗಲೇ ಹಾಲೋ ಬ್ಲಾಕ್ ಎಂಬ ಹೊಸ ಥರದ ಸಿಮೆಂಟು ಇಟ್ಟಿಗೆ ಪ್ರಸಿದ್ಧವಾಗಿತ್ತು. ಬಹಳಟ್ಟು ಇಟ್ಟಿಗೆ ಗೂಡುಗಳು ಪಾಳುಬಿದ್ದಿದ್ದವು. ಅವು ಮಳೆಗಾಳಿಬಿಸಿಲಿಗೆ ಸಿಕ್ಕಿ ವಿಚಿತ್ರ ಬಣ್ಣಕ್ಕೆ ತಿರುಗಿದ್ದವು. ಫೋಟೋಗ್ರಾಫರನ ಸ್ವರ್ಗ ಎನ್ನಬಹುದಾದ ಜಾಗ ಅದು.

ಅಲ್ಲಿ ತಿರುಗಾಡುವಾಗಲೇ ನನಗೆ ಆಗ ಅಗಾಧವಾದ ಇಟ್ಟಿಗೆ ಗೂಡು ಕಂಡಿದ್ದು.ಅದು ಒಂದು ದೊಡ್ಡ ಮನೆಯಷ್ಟಿತ್ತು. ಮೇಲ್ಗಡೆ ಮಂಗಳೂರು ಹೆಂಚು ಹೊದಿಸಿದ್ದ ಒಂದು ಹೆಂಚಿನ ಗೂಡೂ ಅಲ್ಲಿತ್ತು.

ಅಲ್ಲಿ ಶಿವಣ್ಣ ಹೆಂಚು ತಯಾರಿಸುತ್ತಿದ್ದ ಅಂತ ಆಮೆಲೆ ಗೊತ್ತಾಯಿತು.ಪಕ್ಕದಲ್ಲೇ ಇದ್ದ ಮತ್ತೊಂದು ಅಗಾಧ ಗಾತ್ರದ ಇಟ್ಟಿಗೆ ಗೂಡಿನೊಳಗೆ ಒಣಗಿ ಕಪ್ಪಾದ, ಸುಟ್ಟು ಕರಕಲಾದ ಇಟ್ಟಿಗೆಗಳು ಅಡ್ಡಾದಿಡ್ಡಿಯಾಗಿ ಬಿದ್ದಿದ್ದವು. ಅದು ಅದನ್ನು ಯಾಕೆ ಹೇಗೆ ಪಾಳುಬಿಟ್ಟಿದ್ದಾರೆ ಅನ್ನುವುದು ಗೊತ್ತಾಗಲಿಲ್ಲ. ಅದನ್ನೇಕೆ ಪಾಳು ಬಿಟ್ಟಿದ್ದಾರೆ. ಅಲ್ಲಿರುವ ಇಟ್ಟಿಗೆಗಳ್ನನೇಕೆ ಯಾರೂ ಬಳಸುತ್ತಿಲ್ಲ ಎಂದು ವಿಚಾರಿಸಿದಾಗಲೇ ಅಲ್ಲಿರುವ ಕೆಲವರು ನನಗೆ ರಮೇಶನ ಹೆಸರು ಹೇಳಿದ್ದು. ಅವನ ಮನೆಯ ವಿಳಾಸ ಕೊಟ್ಟದ್ದು.

ಆ ವಿಳಾಸ ತೆಗೆದುಕೊಂಡು ನಾನು ರಮೇಶನ ಮನೆಗೆ ಹೋದೆ. ಆತ ಕುಳ್ಳಗಿನ ತೆಳ್ಳಗಿನ ಹುಡುಗ. ಆಗಷ್ಟೇ ಮದುವೆಯಾಗಿದ್ದ. ಅರಸೀಕೆರೆಯವನಾಗಿದ್ದರೂ ಅಡ್ಯಾರಿನಲ್ಲೇ ಸೆಟ್ಲಾಗಿದ್ದ. ಅವನೇ ನನಗೆ ಈ ಕತೆ ಹೇಳಿದ್ದು.

The love was blossoming until the entry of that person

ರಮೇಶ ಹೇಳಿದ ಕತೆ

ನಾನು ಮನೆಬಿಟ್ಟು ಓಡಿಬಂದದ್ದು ಯಾವುದಾದರೂ ಹೊಟೆಲ್ನಲ್ಲಿ ಕೆಲಸ ಮಾಡುವುದಕ್ಕೆಂದು. ಆದರೆ ನನ್ನ ಅದೃಷ್ಟ ಚೆನ್ನಾಗಿತ್ತು. ಬಂದವನಿಗೆ ಸಿಕ್ಕಿದ್ದು ಶಿವಣ್ಣ. ಒಂದು ಸಾರಿ ಹೊಟೆಲಿಗೆ ಚಾ ಕುಡಿಯಲು ಬಂದಿದ್ದವನು, ಆ ಹೊಟೆಲ್ ಮಾಲಿಕರ ಹತ್ತಿರ ನಾನು ಕೆಲಸಕ್ಕಾಗಿ ಅಂಗಲಾಚುತ್ತಿರುವುದನ್ನು ನೋಡಿದ. ನನ್ನನ್ನು ಕರೆದು ತನ್ನ ಜೊತೆಗೆ ಕರೆದೊಯ್ದ. ಆವತ್ತಿನಿಂದ ನನ್ನನ್ನು ತಮ್ಮನ ಹಾಗೆ ನೋಡಿಕೊಂಡ. ಅವನನ್ನು ನಾನು ಶಿವಣ್ಣ ಎಂದೇ ಕರೆಯುತ್ತಿದ್ದೆ.ಆತ ನನ್ನನ್ನು ತಮ್ಮಾ ಎನ್ನುತ್ತಿದ್ದ.

ಶಿವಣ್ಣನ ಇಟ್ಟಿಗ ಗೂಡಿನಲ್ಲಿ ನಲುವತ್ತೋ ಐವತ್ತೋ ಮಂದಿ ಕೆಲಸ ಮಾಡಿಕೊಂಡಿದ್ದರು. ಅವರೆಲ್ಲ ದಿನಗೂಲಿ ನೌಕರರು. ವಾರಕ್ಕೊಂದು ರಜಾ ಹಾಕಿ, ಕೊಟ್ಟ ಸಂಬಳವನ್ನು ಕುಡಿದು ಹಾಳುಮಾಡುತ್ತಿದ್ದವರು. ಅವರ ಪೈಕಿ ಯಾರಿಗೂ ಅಕ್ಪರ ಜ್ಞಾನವೂ ಇರಲಿಲ್ಲ. ಅಂಥವರ ನಡುವೆ ನನಗೊಂದು ಗೌರವವಾದ ಸ್ಥಾನವಿತ್ತು. ನಾನು ಎಸ್ಸೆಸ್ಸೆಲ್ಸಿವರೆಗೆ ಓದಿದ್ದರಿಂದ ಶಿವಣ್ಣ ಅವರ ಲೆಕ್ಕ ಬರೆಯುವ ಜವಾಬ್ದಾರಿಯನ್ನು ನನಗೆ ವಹಿಸಿದ್ದ.

ಇಟ್ಟಿಗೆ ಗೂಡಿಗೆ ಕೆಲಸಕ್ಕೆ ಬರುತ್ತಿದ್ದವರ ಪೈಕಿ ಐತಪ್ಪ ಎನ್ನುವ ಮುದುಕನೊಬ್ಬನಿದ್ದ. ಅವನು ಶಿವಣ್ಣನ ಅಪ್ಪನ ಕಾಲದಿಂದಲೇ ಕೆಲಸಕ್ಕಿದ್ದವನಂತೆ. ಸದ್ಯಕ್ಕೆ ಕೆಲಸ ಮಾಡುವ ತಾಕತ್ತಿಲ್ಲದಿದ್ದರೂ ಬಂದು ಹೋಗುತ್ತಿದ್ದ. ಶಿವಣ್ಣನೂ ಕರುಣೆಯಿಂದ ಅವನಿಗೆ ಸಂಬಳ ಕೊಡುತ್ತಿದ್ದ. ಶಿವಣ್ಣ ಸಂಬಳ ಕೊಡುತ್ತಿದ್ದದ್ದು ಐತಪ್ಪನ ಮೇಲಿನ ಕರುಣೆಯಿಂದ ಅಲ್ಲ, ಅವನ ಮಗಳು ಚಂಪಾಳ ಮೇಲಿನ ಪ್ರೀತಿಯಿಂದ ಅನ್ನೋದು ನನಗೆ ಆಮೇಲೆ ಗೊತ್ತಾಯಿತು.

ಶಿವಣ್ಣ ಆಕೆಯನ್ನು ಮನಸಾರೆ ಪ್ರೀತಿಸುತ್ತಿದ್ದ.

ಆ ಪ್ರೇಮಕತೆಗೆ ಸಾಕ್ಪಿಯಾಗಿದ್ದವನು ನಾನೊಬ್ಬನೇ. ಆರಂಭದಲ್ಲಿ ಒಬ್ಬನೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದ ಶಿವಣ್ಣ ಕ್ರಮೇಣ ಚಂಪಾಳ ಮನೆಗೆ ಊಟಕ್ಕೆ ಹೋಗತೊಡಗಿದ. ಐತಪ್ಪನಿಗೆ ಆಗೀಗ ಕರೆದು ಭಕ್ಪೀಸು ಕೊಡುತ್ತಿದ್ದ. ಚಂಪಾಳೇನಾದರೂ ಅತ್ತಿತ್ತ ಸುಳಿದರೆ ಪುಲಕಿತನಾಗುತ್ತಿದ್ದ. ಅವಳಿಂದ ಅದೆಂಥದೋ ಒಂದು ಸಂತೋಷವನ್ನು ಆತ ಪಡೆಯುತ್ತಿದ್ದ. ಚಿಕ್ಕವನಾದ ನನಗೆ ಅದೇನು ಅನ್ನೋದು ಗೊತ್ತಿರಲಿಲ್ಲ. ಅದು ಗೊತ್ತಾದದ್ದು ಆ ಊರಿಗೆ ಮ್ಯಾಥ್ಯೂ ಬಂದ ನಂತರ.

ಮ್ಯಾಥ್ಯೂ ಕೇರಳದವನು. ಗೋವಾಕ್ಕೂ ಹೋಗಿ ಬಂದಿದ್ದನಂತೆ. ನಿರರ್ಗಳವಾಗಿ ಇಂಗ್ಲೀಷು ಮಾತಾಡುತ್ತಿದ್ದ. ತುಂಬ ದಿವಿನಾಗಿ ಸಿಂಗರಿಸಿಕೊಳ್ಳುತ್ತಿದ್ದ. ಅವನು ಪಕ್ಕ ಸುಳಿದರೆ ಅದೆಂಥದ್ದೋ ಪರಿಮಳ ಘಮ್ಮೆನುತ್ತಿತ್ತು. ಅದಕ್ಕಿಂತ ಹೆಚ್ಚಾಗಿ ಆತ ಎಲ್ಲರಂತೆ ಬೀಡಿ ಸೇದುತ್ತಿರಲಿಲ್ಲ. ಇಷ್ಟುದ್ದದ ಕಪ್ಪು ಸಿಗರೇಟು ಸೇದುತ್ತಿದ್ದ. ಅದಿಲ್ಲದೇ ಹೋದರೆ ಪೈಪ್ ಸೇದುತ್ತಿದ್ದ. ಅಡ್ಯಾರಿನ ಉರಿಬಿಸಿಲಿಗೂ ಜಗ್ಗದೆ ಕಲ್ಲು ಕಟ್ಟೆಯ ಮೇಲೆ ಕುಳಿತುಕೊಂಡು ಆತ ಪೈ್ ಸೇದುತ್ತಾ ಚಹಾ ಕುಡಿಯುವುದನ್ನು ನಾನೂ ಅನೇಕ ಸಲ ಬೆರಗಿನಿಂದ ನೋಡಿದ್ದೆ.

ಆತ ಆ ಊರಿಗೆ ಬಂದದ್ದು ಒಂದು ತೋಟದ ಮಾಲಿಕನಾಗಿ. ಅಲ್ಲೇ ಪಕ್ಕದಲ್ಲಿದ್ದ ತೋಟವೊಂದನ್ನು ಆತ ದುಬಾರಿ ಬೆಲೆ ಕೊಟ್ಟು ಕೊಂಡುಕೊಂಡಿದ್ದನಂತೆ. ಆ ತೋಟಕ್ಕೆ ಹೋಗಬೇಕಾದರೆ ನಮ್ಮ ಇಟ್ಟಿಗೆ ಗೂಡಿನ ಮೇಲೆ ಹಾದು ಹೋಗಬೇಕಾಗಿತ್ತು. ಹಾಗೆ ಹಾದು ಹೋಗುವಾಗಲೆಲ್ಲ ಆತ ಕಣ್ಣಿಗೆ ಬೀಳುತ್ತಿದ್ದ. ಆರಂಭದಲ್ಲಿ ನಡೆದುಕೊಂಡು ಹೋಗುತ್ತಿದ್ದವನು ಸ್ವಲ್ಪೇ ದಿನಕ್ಕೆ ಒಂದು ಬುಲೆಟ್ ಕೊಂಡುಕೊಂಡ. ಅದರ ಮೇಲೆ ಅವನ ಸವಾರಿ ಹೋಗುವುದನ್ನು ನಾವು ಸಖೇದಾಶ್ಚರ್ಯದಿಂದ ನೋಡುತ್ತಾ ನಿಂತಿರುತ್ತಿದ್ದೆವು.

ಈ ನಡುವೆ ಯಾಕೋ ಶಿವಣ್ಣ ಮಂಕಾಗತೊಡಗಿದ. ಅವನ ಸಮಸ್ಯೆಯೇನೆಂಬುದು ಸ್ವತಃ ನನಗೂ ತಿಳಿಯುತ್ತಿರಲಿಲ್ಲ. ಕೆಲಸದಲ್ಲಿ ಮೊದಲಿನಂತೆ ಆಸಕ್ತಿಯಿರಲಿಲ್ಲ. ನಾನು ಲೆಕ್ಕದ ಪುಸ್ತಕ ಮುಂದಿಟ್ಟರೆ ಮಂಕಾಗಿ ಅದನ್ನೇ ನೋಡುತ್ತಿದ್ದು ಸರಿ ಎನ್ನುತ್ತಿದ್ದ. ಮೊದಲಿನ ಹಾಗೆ ಪ್ರಶ್ನೆಗಳನ್ನು ಕೇಳುತ್ತಿರಲಿಲ್ಲ. ಬಹುಶಃ ಆತನಿಗೆ ನನ್ನ ಮೇಲೆ ಸಿಟ್ಟು ಬಂದಿರಬಹುದು, ಅಥವಾ ನಾನು ಹಣ ನುಂಗಿದ್ದೇನೆ ಎಂಬ ಗುಮಾನಿ ಇರಬಹುದು ಎಂಬ ಅನುಮಾನ ನನಗೆ ಬಂತು. ಯಾಕೆಂದರೆ ಕೆಲವರು ನನ್ನ ಹತ್ತಿರ ಹಾಗೆ ಮಾತಾಡಿದ್ದರು. ಒಳ್ಳೆ ಲಾಭ ಬರೋ ಕೆಲಸಾನೇ ಹಿಡಿದಿದ್ದಿ ಎನ್ನುತ್ತಿದ್ದರು. ನನಗಿಂತ ಮೊದಲು ಕೆಲಸಕ್ಕಿದ್ದವನು ಕೆಲಸಕ್ಕೆ ಬಾರದವರ ಹೆಸರೆಲ್ಲ ಸೇರಿಸಿ ಹಣ ಹೊಡೆಯುತ್ತಿದ್ದನಂತೆ. ಆತನಿಗೆ ನನ್ನ ಮೇಲೆ ಅಸಮಾಧಾನವಿದ್ದರೆ ಒಂದು ಬಾರಿ ಅವನೊಡನೆ ಅದನ್ನು ಇತ್ಯರ್ಥ ಮಾಡಿಕೊಳ್ಳಬೇಕು ಎಂದುಕೊಂಡೆ. ಆದರೆ ಶಿವಣ್ಣ ನನಗೆ ಒಂಟಿಯಾಗಿ ಸಿಗಲೇ ಇಲ್ಲ. ಇಟ್ಟಿಗೆ ಗೂಡಿಗೆ ಬರುವುದನ್ನೂ ಕಮ್ಮಿ ಮಾಡಿದ್ದ. ಹೊಸ ಆರ್ಡರುಗಳನ್ನೂ ನಾನೇ ನಿಭಾಯಿಸಬೇಕಾಗಿತ್ತು.

ಈ ಮಧ್ಯೆ ನಾನು ಒಂದೆರಡು ಬಾರಿ ಚಂಪಾಳನ್ನು ಮ್ಯಾಥ್ಯೂ ತನ್ನ ಬುಲೆಟ್ನಲ್ಲಿ ಕೂರಿಸಿಕೊಂಡು ಹೋಗುವುದನ್ನು ನೋಡಿದ್ದೆ. ಶಿವಣ್ಣನಿಗೆ ಇದರಿಂದ ಅಸಮಾಧಾನವಾಗಿರಬಹುದು ಎಂದುಕೊಂಡೂ ಇದ್ದೆ. ಹೀಗೇ ಒಂದು ಮಧ್ಯಾಹ್ನ ನಾನು ಚಂಪಾ ಮತ್ತು ಮ್ಯಾಥ್ಯೂ ಅಂಟಿಕೊಂಡು ಹೋಗುತ್ತಿರುವುದನ್ನು ನೋಡುತ್ತಿದ್ದಂತೆ ಹೆಗಲ ಮೇಲೆ ಯಾರೋ ಕೈಯಿಟ್ಟಂತಾಯಿತು. ತಿರುಗಿದರೆ ಶಿವಣ್ಣ ನಿಂತಿದ್ದ.ಗಂಭೀರವಾಗಿದ್ದ. ನಾನು ಏನೋ ಹೇಳಬೇಕು ಅನ್ನುವಷ್ಟರಲ್ಲಿ ಅಲ್ಲಿಂದ ಹೊರಟೇಹೋದ.

ಆ ರಾತ್ರಿ ನಾನು ಹೇಗಾದರೂ ಮಾಡಿ ಶಿವಣ್ಣನ ಜೊತೆ ಮಾತಾಡಬೇಕೆಂದು ಅವನ ರೂಮಿಗೆ ಹೋದೆ. ಬೀಗ ಹಾಕಿತ್ತು. ಐತಪ್ಪನ ಮನೆಗೆ ಊಟಕ್ಕೆ ಹೋಗಿರಬಹುದು ಎಂದು ಪಕ್ಕದ ರೂಮಿನಾತ ಹೇಳಿದ. ಐತಪ್ಪನ ಮನೆ ಸಮೀಪಿಸುತ್ತಿದ್ದಂತೆ ಹೊರಗಡೆ ನಿಲ್ಲಿಸಿದ್ದ ಬುಲೆಟ್ ಕಣ್ಣಿಗೆ ಬಿತ್ತು. ಮನೆಯೊಳಗಡೆ ಮಂದಬೆಳಕಿತ್ತು. ನಾನು ಒಂದು ಕ್ಪಣ ಆ ಕತ್ತಲಲ್ಲಿ ಅಲ್ಲೆ ನಿಂತೆ. ಒಳಗೆ ಹೋಗಲೋ ಬೇಡವೋ ಎಂಬ ಅನುಮಾನದಲ್ಲಿ ಕಾದೆ. ಅಷ್ಟು ಹೊತ್ತಿಗೆ ಬಾಗಿಲು ತೆರೆಯಿತು. ಒಳಗಿನಿಂದ ಮ್ಯಾಥ್ಯೂ ಹೊರಬಂದ. ಅವನನ್ನು ತಬ್ಬಿಕೊಂಡಂತೆ ಚಂಪಾ ನಿಂತಿದ್ದಳು. ನಾನು ಒಂದು ಕ್ಪಣ ಅದುರಿಹೋದೆ. ಇದನ್ನು ಶಿವಣ್ಣ ನೋಡಿದರೆ ಎಂದು ಭಯವಾಯ್ತು.

ಚಂಪಾ ಆತನನ್ನು ಬೀಳ್ಕೊಟ್ಟು ಒಳಗೆ ಹೋದಳು. ನಾನು ಅಲ್ಲೇ ಗರಬಡಿದವನಂತೆ ನಿಂತಿದ್ದೆ. ಅಷ್ಟರಲ್ಲಿ ಯಾರೋ ನನ್ನನ್ನು ಜೋರಾಗಿ ಅಲುಗಾಡಿಸಿದಂತಾಯಿತು. ಬೆಚ್ಚಿಬಿದ್ದು ಹಿಂತಿರುಗಿದರೆ ಕತ್ತಲಲ್ಲೊಂದು ಆಕೃತಿ ಪಿಸುಗುಟ್ಟಿತು "ಯಾರು ನೀನು'. ಆ ಕತ್ತಲಲ್ಲೂ ಆ ಉಡುಗಿದ ದನಿ ಶಿವಣ್ಣನದು ಅನ್ನೋದು ನನಗೆ ಗೊತ್ತಾಯಿತು. ನಾನು ರಮೇಶ ಅಂದೆ. ಶಿವಣ್ಣ ಮರುಮಾತಾಡದೆ ನನ್ನ ಕೈ ಹಿಡಿದು ಅಲ್ಲಿಂದ ದರದರ ಎಳೆದುಕೊಂಡು ಹೋದ. ಕತ್ತಲಲ್ಲಿ ಎಡವುತ್ತಾ ಅವನ ಹಿಂದೆ ಸಾಗಿದೆ. ಸುಮಾರು ಅರ್ಧ ಮೈಲಿ ಹಾಗೆ ನಡೆದಿರಬಹುದು. ಅಲ್ಲೊಂದು ಕಡೆ ಶಿವಣ್ಣ ಕುಸಿದು ಕುಳಿತ. ನಾನೂ ಕುಳಿತೆ. ಶಿವಣ್ಣ ಮಾತಾಡದೇ ಬಿಕ್ಕಿ ಬಿಕ್ಕಿ ಅಳತೊಡಗಿದ. ತನ್ನ ಪ್ರೇಮದ ಕತೆಯನ್ನು ಬಿಕ್ಕುತ್ತಲೇ ಹೇಳಿದ. ಚಂಪಾ ಒಳ್ಳೆಯವಳೆಂದೂ ಆ ಮ್ಯಾಥ್ಯೂ ಆಕೆಯನ್ನು ಬುಟ್ಟಿಗೆ ಹಾಕಿಕೊಂಡಿದ್ದಾನೆಂದೂ ಹಲುಬಿದ. ಆತ ಅಳುತ್ತಿರುವುದನ್ನು ನೋಡಿದ ನನಗೆ ಮ್ಯಾಥ್ಯುವನ್ನು ಸಾಯಿಸಬೇಕೆನ್ನುವಷ್ಟು ಸಿಟ್ಟು ಬಂತು. ನಾನೂ ದೊಡ್ಡವನಾಗಿರಬೇಕಿತ್ತು ಅಂದುಕೊಂಡೆ.

ಅತ್ತು ಅತ್ತು ಸಮಾಧಾನವಾದ ನಂತರ ಶಿವಣ್ಣ ಎದ್ದು ನಿಂತ. ಇನ್ನೊಂದು ವಾರ ನಾನು ಯಾರಿಗೂ ಕಾಣಿಸಿಕೊಳ್ಳುವುದಿಲ್ಲವೆಂದೂ ಇಟ್ಟಿಗೆ ಗೂಡು ಮತ್ತು ಹೆಂಚಿನ ಮನೆಯ ಜವಾಬ್ದಾರಿ ನನ್ನದೆಂದೂ ಹೇಳಿದ. ಆತನ ಮನಸ್ಸಲ್ಲಿ ಯಾವುದೋ ಯೋಜನೆ ರೂಪುಗೊಳ್ಳುತ್ತಿದ್ದಂತಿತ್ತು.

ಅದಾದ ಮೂರನೆಯ ದಿನಕ್ಕೆ ನಾನು ಒಬ್ಬನೇ ಲೆಕ್ಕ ಬರೆಯುತ್ತಾ ಹೆಂಚುಗೂಡಿನ ಪಕ್ಕದಲ್ಲಿರುವ ಕೋಣೆಯಲ್ಲಿ ಕುಳಿತಿದ್ದೆ. ಶಿವಣ್ಣ ರಾತ್ರಿಯೆಲ್ಲ ಕೆಲಸವಿದ್ದಾಗ ಮಲಗುತ್ತಿದ್ದ ಕೋಣೆ ಅದು. ಇದ್ದಕ್ಕಿದ್ದಂತೆ ನನ್ನ ಮುಂದೆ ಯಾರೋ ನಿಂತಂತಾಯಿತು. ತಲೆಯೆತ್ತಿ ನೋಡಿದರೆ ಶಿವಣ್ಣ. ನಾನು ತಲೆಯೆತ್ತಿ ನೋಡುತ್ತಿದ್ದಂತೆ ಆತ ಅಲ್ಲಿಂದ ತಿರುಗಿ ಹೋದ. ನಾನು ಲೆಕ್ಕದ ಪುಸ್ತಕ ಬದಿಗಿಟ್ಟೆ. ಶಿವಣ್ಣ ಆ ಅಪರಾತ್ರಿ ಯಾಕೆ ಬಂದ? ಬಂದವನು ಯಾಕೆ ಮಾತಾಡದೇ ಹೊರಟುಹೋದ? ಆತ ನನಗೇನಾದರೂ ಹೇಳುವುದಿತ್ತೇ? ಒಂದೂ ತೋಚದೇ ಆತನನ್ನೇ ಹಿಂಬಾಲಿಸಿದೆ. ಶಿವಣ್ಣ ತಿರುಗಿಯೂ ನೋಡದೇ ಮುಂದೆ ಮುಂದೆ ಹೋಗುತ್ತಿದ್ದ. ನಾನು ಅಚ್ಚರಿಯಿಂದ ಹಿಂಬಾಲಿಸಿದೆ. ಆತ ಕತ್ತಲಲ್ಲಿ ನಡೆಯುತ್ತಿದ್ದವನು ನನ್ನ ಕಣ್ಣಮುಂದಿನಿಂದ ಇದ್ದಕ್ಕಿದ್ದಂತೆ ಮಾಯವಾದ. ನಾನೂ ಅವಸರದಲ್ಲಿ ಕೈಯಲ್ಲಿ ಟಾರ್ಚ್ ಇಲ್ಲದೆ ಹೊರಟಿದ್ದೆ. ಶಿವಣ್ಣ ಎಲ್ಲಿಗೆ ಹೋದ ಅನ್ನುವುದೂ ತಿಳಿಯಲಿಲ್ಲ. ಇದ್ದಕ್ಕಿದ್ದಂತೆ ನನ್ನ ಸುತ್ತಲೂ ದಟ್ಟ ಕತ್ತಲೆ ಕವಿದಂತಾಯಿತು. ನಾನು ಗಾಬರಿಯಲ್ಲಿ ಓಡೋಡಿ ನನ್ನ ಕೋಣೆ ತಲುಪಿದೆ.

ಆವತ್ತಿಡೀ ನನಗೆ ನಿದ್ದೆ ಬರಲಿಲ್ಲ. ಬೆಳಗ್ಗೆ ಎದ್ದವನೇ ಶಿವಣ್ಣನ ರೂಮಿಗೆ ಹೋದೆ. ಆತ ಅಲ್ಲಿರಲಿಲ್ಲ. ಮತ್ತೊಂದೆರಡು ಬಾರಿ ಹೋದಾಗಲೂ ಶಿವಣ್ಣ ಸಿಗಲಿಲ್ಲ. ಕೊನೆಗೊಂದು ದಿನ ಚಂಪಾಳ ಮನೆಗೂ ಹುಡುಕಿಕೊಂಡು ಹೋದೆ. ಆಕೆ ಯಾವ ಶಿವಣ್ಣ ಎಂದು ಸಿಟ್ಟಾಗಿ ಕೇಳಿ ಬಾಗಿಲು ಮುಚ್ಚಿಕೊಂಡಳು. ಆ ರಾತ್ರಿ ನಾನು ಮತ್ತೆ ಹೆಂಚಿನ ಗೂಡಿಗೆ ಹೋದೆ. ಅಲ್ಲಿ ಒಂಟಿಯಾಗಿ ಕೂತಿದ್ದೆ. ಗೂಡು ಧಗಧಗ ಉರಿಯುತ್ತಿತ್ತು. ಅಲ್ಲಿ ಸ್ವಲ್ಪ ಹೊತ್ತಿದ್ದು ಲೆಕ್ಕ ಬರೆಯುವ ರೂಮಿಗೆ ಬಂದೆ.

ಆ ರಾತ್ರಿ ಮತ್ತೆ ಶಿವಣ್ಣ ಕಾಣಿಸಿಕೊಂಡ. ಹಿಂದಿನ ದಿನದಂತೆಯೇ. ಇವತ್ತು ಬಿಡಬಾರದು ಎಂದುಕೊಂಡು ಅವನನ್ನೇ ಹಿಂಬಾಲಿಸಿದೆ. ಆತ ಹಿಂದಿನ ದಿನದಂತೆಯೇ ಮುಂದೆ ಮುಂದೆ ಹೋದ. ನಾನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದೆ. ನೋಡನೋಡುತ್ತಿದ್ದಂತೆಯೇ ಆತ ಹೆಂಚಿನ ಗೂಡಿನ ಬೆಂಕಿಯೆದುರು ನಿಂತ. ಅವನ ಮೈ ಎಷ್ಟು ಪಾರದರ್ಶಕವಾಗಿತ್ತೆಂದರೆ ಅದರೊಳಗಿಂತ ಬೆಂಕಿ ಕಾಣಿಸುತ್ತಿತ್ತು. ನಾನು ಇನ್ನೇನು ಚೀರಿಕೊಳ್ಳಬೇಕೆನ್ನುವಷ್ಟರಲ್ಲಿ ಆತ ಬೆಂಕಿಯ ಒಳಗೇ ಹೊರಟುಹೋದ. ನಾನು ಕುಸಿದುಬಿದ್ದೆ.

2

ಅಷ್ಟು ಹೇಳಿ ರಮೇಶ ಕತೆ ನಿಲ್ಲಿಸಿದ. ಆ ಘಟನೆಯ ನಂತರ ಆತ ಒಂದು ತಿಂಗಳು ಹಾಸಿಗೆ ಹಿಡಿದಿದ್ದನಂತೆ. ಬೆಂಕಿ ನೋಡಿದಾಗಲೆಲ್ಲ ಅದರೊಳಗೆ ಯಾರೋ ಹೊಕ್ಕಿದಂತೆ ಕಾಣಿಸುತ್ತಿತ್ತಂತೆ. ಶಿವಣ್ಣ ಬೆಂಕಿಯೊಳಗೆ ಹೋದ ಎಂದು ಆತ ಹೇಳುವುದನ್ನು ಯಾರೂ ಸೀರಿಯಸ್ಸಾಗಿ ತೆಗೆದುಕೊಳ್ಳಲಿಲ್ಲ. ಆದರೆ ಆ ಊರಿಗೆ ಹೊಸದಾಗಿ ಬಂದಿದ್ದ ಪೊಲೀಸ್ ಪೇದೆಯೊಬ್ಬ ಶಿವಣ್ಣ ಮಾಯವಾದದ್ದಕ್ಕೂ ರಮೇಶನ ಮಾತಿಗೂ ಸಂಬಂಧ ಇರಬಹುದು ಅಂದುಕೊಂಡು ಆತ ರಮೇಶನಿಗೆ ಕಾಣಿಸಿಕೊಂಡ ಹೆಂಚಿನ ಗೂಡನ್ನು ಕೆದಕಿನೋಡಿದಾಗ ಅರೆಸುಟ್ಟ ಮನುಷ್ಯರ ಎಲುಬುಗಳು ಸಿಕ್ಕವಂತೆ.

ಮುಂದೆ ಆತ ಇಡೀ ಪ್ರಕರಣದ ಬೆನ್ನುಹತ್ತಿದ. ಮ್ಯಾಥ್ಯು ಆರೋಪಿ ಸ್ಥಾನದಲ್ಲಿ ನಿಂತ. ಅಷ್ಟು ಹೊತ್ತಿಗಾಗಲೇ ಆತ ಆ ಊರು ಬಿಟ್ಟು ಕೇರಳಕ್ಕೆ ಓಡಿ ಹೋಗಿದ್ದ.ಅದಾದ ಕೆಲವು ದಿನಗಳ ನಂತರ ಚಂಪಾ ಒಮ್ಮೆ ಹೆಂಚಿನ ಗೂಡಿನ ಬಳಿ ಕಾಣಿಸಿಕೊಂಡವಳು, ಆ ನಂತರ ಕಾಣೆಯಾದಳು. ಆಕೆಯನ್ನು ಶಿವಣ್ಣನ ದೆವ್ವವೇ ಕೊಂದಿರಬೇಕೆಂದು ಭಾವಿಸಿದ ಊರಿನ ಮಂದಿ ಆ ಇಟ್ಟಿಗೆ ಗೂಡಿನತ್ತ ಸುಳಿಯುವುದನ್ನೂ ಬಿಟ್ಟುಬಿಟ್ಟರು.

ಈಗಲೂ ರಾತ್ರಿ ಹೊತ್ತು ಆ ಇಟ್ಟಿಗೆ ಗೂಡು ತನ್ನಿಂತಾನೇ ಹತ್ತಿ ಉರಿಯುತ್ತದಂತೆ. ಅದರ ಮುಂದೆ ಶಿವಣ್ಣ ಅನಾಥನಂತೆ ನಿಂತಿರುತ್ತಾನಂತೆ. ಯಾರಾದರೂ ನೋಡಿದರೆ ಬೆಂಕಿಯೊಳಗೆ ನಡೆದುಹೋಗುತ್ತಾನಂತೆ. ಒಂದೊಂದು ರಾತ್ರಿ ಅಲ್ಲಿ ಒಂದು ಗಂಡೂ ಒಂದು ಹೆಣ್ಣೂ ಜಗಳವಾಡುವ ಶಬ್ದ ಕೇಳಿಬರುತ್ತದಂತೆ.

ಬೇಕಿದ್ದರೆ ನೀವೇ ನೋಡಿ ಎಂದು ಮಾರನೆ ದಿನ ಬೆಳಗ್ಗೆ ಆ ಪಾಳುಬಿದ್ದ ಇಟ್ಟಿಗೆ ಗೂಡಿನ ಬಳಿಗೆ ನನ್ನನ್ನು ಕರೆದೊಯ್ದ ರಮೇಶ, ಆಗಷ್ಟೇ ಆರಿದಂತಿದ್ದ ಕೆಂಡವನ್ನೂ ಇನ್ನೂ ನವಿರಾಗಿರುವ ಬೂದಿಯನ್ನೂ ತೋರಿಸಿದ. ಗೂಡು ಮುಟ್ಟಿನೋಡಿ ಅಂದ. ಮುಟ್ಟಿದೆ. ಆ ಮಂಜು ಬೀಳುತ್ತಿರುವ ಮುಂಜಾನೆಯಲ್ಲೂ ಆಗಷ್ಟೇ ಉರಿದು ಆರಿದ ಅಗ್ನಿಕುಂಡದ ಥರ ಗೂಡು ಬೆಚ್ಚಗಿತ್ತು. ನನಗೆ ಯಾಕೋ ಭಯವಾಯಿತು.

(ಈ ಕತೆ ನನಗೆ ಎಲ್ಲಿ ಸಿಕ್ಕಿತೋ ಗೊತ್ತಿಲ್ಲ. ಒಂದು ಅಪರಾತ್ರಿಯಲ್ಲಿ ನಾನು ಮತ್ತು ದಟ್ಸ್ ಕನ್ನಡದ ಶಾಮಸುಂದರ್ ಜೊತೆಗೆ ಕೂತುಕೊಂಡಿದ್ದಾಗ ನೆನಪಿಗೆ ಬಂತು. ಅದನ್ನು ಶಾಮ್ ಒತ್ತಾಯಿಸಿ ಬರೆಸಿಕೊಂಡರು. ಹೀಗಾಗಿ ಇದು ಶಾಮ್ ಗೆ ಅರ್ಪಣೆ)

English summary
This is neither true story nor fictitious love story. This story is associated with lifestyle of people involved in manufacturing bricks. There is humanity, love, betrayal and tragedy too. Hope this lively story by Girish Rao (Jogi) triggers the passion of reading this kind of lovely stories.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X