ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದರೆ, ನನ್ನ ಜೀವನವಿದ್ದಿದ್ದೇ ಅಂಜನಾದ್ರಿ ಬೆಟ್ಟದಲ್ಲಿ!

By ಪ್ರಕಾಶ್ ಹೇಮಾವತಿ, ನೇಪರ್‌ವಿಲ್
|
Google Oneindia Kannada News

ಮುಳುಗುತ್ತಿರುವ ಸೂರ್ಯನ ಹೊಂಬಣ್ಣದ ಕಿರಣಗಳು ಆಂಜನಾದ್ರಿಯ ಬೆಟ್ಟದ ಮೇಲಿನ ಬಂಡೆಗಳನ್ನು ಇನ್ನಷ್ಟು ಬಾದಾಮಿ ಬಣ್ಣಕ್ಕೆ ತಿರುಗಿಸಿದ್ದವು. ಸೂರ್ಯನ ಸುತ್ತಲೂ ಹರಡಿದ್ದ ಕೆಂಬಣ್ಣದ ಬಾನು ಸೂರ್ಯನ ಪ್ರಖರತೆಯನ್ನು ಮತ್ತಷ್ಟು ತೀಕ್ಷ್ಣಗೊಳಿಸಿ ಆತನ ಮಹತ್ವವನ್ನು ಇಡೀ ಜಗತ್ತಿಗೆ ಮನದಟ್ಟು ಮಾಡುತ್ತಿತ್ತು.

ಹಿತವಾಗಿ ಬೀಸುತ್ತಿದ್ದ ಸಂಜೆಯ ಬೆಚ್ಚನೆಯ ಗಾಳಿಗೆ ಮರಗಿಡಗಳು ನಯವಾಗಿ ತಲೆತೂಗುತ್ತಿದ್ದವು. ಇಡೀ ನಭೋಮಂಡಲವೇ ಸೂರ್ಯನಿಗೆ ವಿದಾಯ ಹೇಳಲು ಭುವಿಯೆಡೆಗೆ ಬಾಗುತ್ತಿರುವಂತೆ ತೋರುತ್ತಿತ್ತು. ಪಕ್ಷಿ ಸಂಕುಲಗಳೆಲ್ಲಾ ಗೂಡುಗಳನ್ನು ಸೇರಿ ತಮ್ಮ ಮಧುರ ಕಂಠಗಳಲ್ಲಿ ಚಿಲಿಪಿಲಿಗುಟ್ಟುತ್ತಾ ಅಂದಿನ ವಿಶ್ರಾಮಕ್ಕೆ ಅಣಿಯಾಗುತ್ತಿದ್ದವು. ಹಕ್ಕಿಗಳ ಮನೋಹರ ಗಾನಗಳ ಹಿನ್ನೆಲೆಯಲ್ಲಿ ಸೂರ್ಯಾಸ್ತಮಾನದ ಈ ದಿವ್ಯ ಭವ್ಯ ದೃಶ್ಯ ಮನದಲ್ಲಿ ನಾನಾ ಬಗೆಯ ಮಧುರ ಸ್ಮೃತಿಗಳನ್ನು ನವಿರಾಗಿ ರಮಿಸಿ ಏಳಿಸುತ್ತಿತ್ತು.

Soliloquy of Hanuman after Ram reaches Ayodhya

ಕಾಂತೇಶ, ಭ್ರಾಂತೇಶ, ಶಾಂತೇಶ : ಯಾರಿವರು?ಕಾಂತೇಶ, ಭ್ರಾಂತೇಶ, ಶಾಂತೇಶ : ಯಾರಿವರು?

ಈ ದಿನದ ಸ್ಮೃತಿಪಟಲಕ್ಕೆ ಬಂದದ್ದು ಆಯೋಧ್ಯೆಯ ಆ ದಿನ. ಎಷ್ಟು ಯುಗಗಳು ಸಂದಿತೋ ಏನೋ ಆ ದಿನ ಕಳೆದು. ಅದೇನು ಅದ್ದೂರಿ, ವೈಭವ, ಸಂಭ್ರಮ ಆ ದಿನದಂದು. ಇಡೀ ಅಯೋಧ್ಯೆ ನಗರವೇ ತಳಿರು ತೋರಣ ದೀಪಗಳಿಂದ ಅಲಂಕೃತಗೊಂಡು ಕಣ್ಮನಗಳನ್ನು ತುಂಬಿಕೊಳ್ಳುವಂತೆ ಕಂಗೊಳಿಸುತ್ತಿತ್ತು. ಲಂಕೆಯ ವೈಭವವನ್ನು ನೋಡಿಯೇ ದಿಗ್ಮೂಢನಾಗಿದ್ದ ನನಗೆ ಅಯೋಧ್ಯೆಯ ವೈಭವವನ್ನು ಸ್ವಂತ ಕಣ್ಣಿಂದ ನೋಡಿಯೂ ನಂಬಲು ಕಷ್ಟವಾಗಿತ್ತು.

Soliloquy of Hanuman after Ram reaches Ayodhya

ಎಲ್ಲರ ನಲ್ಮೆಯ ಯುವರಾಜನಾಗಿ ರಾಜ್ಯವನ್ನು ತ್ಯಜಿಸಿದ್ದ ರಾಮಚಂದ್ರ ಅಂದು ಆದರ್ಶ ಪುರುಷನೂ, ಪೌರುಷವಂತನೂ, ಏಕ ಪತ್ನಿ ವ್ರತಸ್ಥನೂ, ಪಿತೃ ವಾಕ್ಯ ಪರಿಪಾಲಕನೂ, ಪರಮ ಪುರುಷೋತ್ತಮನೂ ಆಗಿ ಹಿಂತಿರುಗುತ್ತಲಿದ್ದ. ಆತನ ದರುಶನಕ್ಕೆ ಇಡೀ ನಗರ ಕಾತರಿಸುತ್ತಿತ್ತು. ಬಹುಶಃ ಆತನ ಅಗಲಿಕೆಯೇ ಆತನ ಆದರ್ಶ, ವ್ಯಕ್ತಿತ್ವಗಳು ಜನರಲ್ಲಿ ಆಳವಾಗಿ ನೆಲೆಯೂರುವಂತೆ ಮಾಡಿರಬೇಕು ಎಂದೇ ಎನಿಸುತ್ತದೆ.

ತಂದೆ ಕೊಟ್ಟ ಮಾತನ್ನು ಉಳಿಸಲು ಹದಿನಾಲ್ಕು ವರುಷ ವನವಾಸ ಕೈಗೊಳ್ಳಲು ಸಾಮಾನ್ಯರಿಗೆ ಅಸಾಧ್ಯದ ಸಂಗತಿ. ಆತನ ಆದರ್ಶ, ನಿಷ್ಠೆ, ವೈಯಕ್ತಿಕ ಜವಾಬ್ದಾರಿ, ಹಿರಿಯರ ಬಗೆಗಿನ ಗೌರವ, ಏಕ ಪತ್ನಿತ್ವ ಜನರಲ್ಲಿ ಆಗಲೇ ಆಳವಾಗಿ ಬೇರೂರಿತ್ತು. ಬಹು ಪತ್ನಿತ್ವದ ಪದ್ಧತಿ ಆಗಲೇ ನಶಿಸತೊಡಗಿತ್ತು. ಕೇವಲ ಒಬ್ಬ ತನ್ನ ಆದರ್ಶದಿಂದ ಇಡೀ ಒಂದು ಜನಾಂಗದ ಜೀವನದ ಅರ್ಥ, ಮೌಲ್ಯ, ಪದ್ಧತಿ, ಶೈಲಿಗಳನ್ನೇ ಬದಲಿಸಿದ್ದಾನೆಂದರೆ ಅಂತಹವನೊಬ್ಬ ಸಾಮಾನ್ಯ ಮನುಷ್ಯ ಎಂದು ಹೇಗೆ ನಂಬಲು ಸಾಧ್ಯ? ಏನು ಅನುಬಂಧವೋ ಏನೋ ಅಂತಹವನೊಬ್ಬನ ಸಾಂಗತ್ಯ ನನಗೆ ದೊರೆತದ್ದು. ಹಾಗೆ ಆತನ ಪರಿಚಯವಾದದ್ದೂ ಒಂದು ಅಕಸ್ಮಿಕವೇ ಸರಿ.

ಶನಿದೇವರಿಗೇಕೆ ಎಳ್ಳೆಣ್ಣೆ ಅಭಿಷೇಕ? ಇಲ್ಲಿದೆ ಪೌರಾಣಿಕ ಕಥೆಶನಿದೇವರಿಗೇಕೆ ಎಳ್ಳೆಣ್ಣೆ ಅಭಿಷೇಕ? ಇಲ್ಲಿದೆ ಪೌರಾಣಿಕ ಕಥೆ

Soliloquy of Hanuman after Ram reaches Ayodhya

ಆ ದಿನಗಳು ನಮಗೆ ಕಷ್ಟದ, ಬವಣೆಯ ದಿನಗಳು. ನಿಲ್ಲಲು ನೆಲೆಯಿಲ್ಲದೆ ತಲೆ ತಪ್ಪಿಸಿಕೊಂಡು ಬಾಳುತ್ತಿದ್ದೆವು. ಗೆಳೆಯ ಸುಗ್ರೀವನ ಅವಸ್ಥೆಯನ್ನು ನೋಡಲಾಗದೆ ಎಲ್ಲವನ್ನೂ ತ್ಯಜಿಸಿ ಆತನೊಂದಿಗೆ ನನ್ನ ಜನ್ಮಸ್ಥಳವಾದ ಆಂಜನಾದ್ರಿಯಲ್ಲಿ ಜೀವಿಸುತ್ತಿದ್ದೆವು. ಸುಗ್ರೀವನ ಸಣ್ಣ ತಪ್ಪನ್ನು ವಾಲಿ ಸಹಿಸಿಕೊಳ್ಳಲಿಲ್ಲ. ರಾಜ್ಯದ ನಗರ ಆನೆಗೊಂದಿಯಿಂದ ಹೊರಹಾಕಿದ. ಪುಣ್ಯಕ್ಕೆ ನಮ್ಮ ಪಾಡಿಗೆ ನಾವಿರಲು ಬಿಟ್ಟಿದ್ದಾನೆ. ಇಲ್ಲಿಗೂ ಬಂದು ಕಿರುಕುಳ ಕೊಡುತ್ತಿಲ್ಲ. ಆದರೆ ಎಷ್ಟು ದಿನವೆಂದು ನಾವು ಹೀಗೆಯೇ ಇರುವುದು ಎನ್ನುವ ಯೋಚನೆ ನನ್ನನ್ನು ಸದಾ ಕಾಡುತ್ತಲೇ ಇದ್ದಿತು.

ಈ ಆಂಜನಾದ್ರಿ, ಇಲ್ಲಿಯೇ ನಾನು ಹುಟ್ಟಿದ್ದೆಂದು ತಾಯಿ ಅಂಜನಾದೇವಿ ಆಗಾಗ ನನ್ನನ್ನು ಇಲ್ಲಿಗೆ ಕರೆದುಕೊಂಡು ಬರುತ್ತಿದ್ದಳು. ಹಾಗಾಗಿ ಚಿಕ್ಕಂದಿನಿಂದಲೂ ನನಗೆ ಈ ಜಾಗವೆಂದರೆ ಬಲು ಅಕ್ಕರೆಯಿದ್ದಿತು. ಭವ್ಯವಾದ ಪರ್ವತ, ವಿವಿಧ ಗಾತ್ರದ, ಆಕಾರದ ಬಂಡೆಗಳಿಂದ ಅವೃತವಾಗಿತ್ತು. ಸಾಮಾನ್ಯರಿಗೆ ಈ ಪರ್ವತವನ್ನು ಹತ್ತುವುದು ಕಷ್ಟವಿತ್ತು. ಬಂಡೆಗಳ ಸಂದುಗೊಂದುಗಳಲ್ಲಿ ಬಣ್ಣ ಬಣ್ಣದ ಹೂ ಎಲೆ ಹಣ್ಣುಗಳ ಮರ ಗಿಡಗಳು ಬೆಳೆದಿದ್ದವು. ದೂರದಿಂದ ನೋಡುವವರಿಗೆ ಇಡೀ ಪರ್ವತ ಹೂವು ಎಲೆಗಳಿಂದ ಅಲಂಕೃತಗೊಂಡ ಶಿವಲಿಂಗದಂತೆಯೇ ತೋರುತ್ತಿತ್ತು. ಇನ್ನು ವರ್ಷಧಾರೆಯಾದರಂತೂ ಶಿವಲಿಂಗಕ್ಕೆ ಆಭಿಷೇಕವಾದಂತೆಯೇ ಕಾಣಿಸುತ್ತಿತ್ತು. ನೋಡಿದಲಿಂದಲೇ ಕೈಮುಗಿದುಬಿಡುತ್ತಿದ್ದೆ.

Soliloquy of Hanuman after Ram reaches Ayodhya

ಪ್ರಭು ಶ್ರೀರಾಮ, ನೆಟ್ಟ ಬಾಣವನ್ನು ಮಾತ್ರ ಹಿಂತೆಗೆಯಬೇಡಪ್ರಭು ಶ್ರೀರಾಮ, ನೆಟ್ಟ ಬಾಣವನ್ನು ಮಾತ್ರ ಹಿಂತೆಗೆಯಬೇಡ

ಆದರೆ ಎಲ್ಲವನ್ನೂ ತೊರೆದು ಬಂದು ಆಗ ಅಲ್ಲಿಯೇ ನೆಲೆಸಿರುವಾಗ ಪ್ರಕೃತಿಯ ಆ ಭವ್ಯತೆಯನ್ನು ಅನುಭವಿಸಿ ಆನಂದಿಸುವ ಸೈರಣೆಯಿರಲಿಲ್ಲ. ಭವಿಷ್ಯದ ಚಿಂತೆ ಸದಾ ಕಾಡುತ್ತಲೇ ಇರುತ್ತಿತ್ತು. ಒಮ್ಮೊಮ್ಮೆ ಏನು ಮಾಡುವುದು ಎಂದು ಆಲೋಚಿಸುತ್ತಾ ಒಬ್ಬನೇ ಅಲೆದಾಡುತ್ತಿರುತ್ತಿದ್ದೆ. ಹಾಗೆಯೇ ಒಂದು ದಿನ ಅಲೆದಾಟದಿಂದ ಬಳಲಿ ವಿಶ್ರಮಿಸಿಕೊಳ್ಳಲು ಒಂದು ದೊಡ್ಡ ಬಂಡೆಯನ್ನೇರಿ ಕುಳಿತಿದ್ದೆ. ಸ್ವಲ್ಪ ಸಮಯದಲ್ಲೇ ಅನತಿ ದೂರದಲ್ಲಿ ಯಾರೋ ಮಾತನಾಡಿಕೊಂಡು ಬರುತ್ತಿರುವ ಸದ್ದಾಯಿತು.

Soliloquy of Hanuman after Ram reaches Ayodhya

ಕೂತೂಹಲದಿಂದ ಆಲಿಸಿದಾಗ ಆ ಮಾತುಗಳು ನಮ್ಮವರದಲ್ಲಾ ಎಂದು ತಿಳಿದು ಅವರು ಯಾರಿರಬಹುದೆಂದು ನೋಡಲು ಎದ್ದು ನಿಂತೆ. ಅಷ್ಟರಲ್ಲಿ ಅವರು ನನ್ನ ಎದುರಿಗೇ ಬಂದರು. ನನ್ನನ್ನು ನೋಡಿ ಒಂದು ಕ್ಷಣ ಬೆಚ್ಚಿಬಿದ್ದವರು ಕೂಡಲೇ ಸಾವರಿಸಿಕೊಂಡು ಹೆಗಲಲ್ಲಿದ್ದ ಬಿಲ್ಲುಗಳನ್ನು ಕೈಗೆತ್ತಿಕೊಂಡು ಬಾಣ ಹೂಡಲು ಸಿದ್ದರಾದರು. ನಾನು ಬರಿಗೈಯಲ್ಲಿದ್ದೆ. ಗಧೆಯೂ ನನ್ನ ಬಳಿ ಇರಲಿಲ್ಲ. ನಾವು ಆಯುಧಗಳನ್ನು ಅಷ್ಟಾಗಿ ಅವಲಂಬಿಸಿದವರಲ್ಲ. ನಮ್ಮ ದೈಹಿಕ ಬಲ, ಮಾನಸಿಕ ಚಾಕಚಕ್ಯತೆಗಳನ್ನೇ ಹೆಚ್ಚು ನಂಬಿದವರು.

ಅವರ ಮುಂದಿನ ಪ್ರತಿಕ್ರಿಯೆಯನ್ನು ಕಾಯುತ್ತಾ ಸುಮ್ಮನೆ ನಿಂತೆ. ಹೀಗೆಯೇ ಒಬ್ಬರನ್ನೊಬ್ಬರು ಹಲವು ಕ್ಷಣ ದಿಟ್ಟಿಸುತ್ತಾ ನಿಂತೆವು. ಅವರ ಮುಖಚರ್ಯೆ ಕ್ರಮೇಣವಾಗಿ ಬದಲಾಗುತ್ತಿದ್ದುದು ಗಮನಕ್ಕೆ ಬರುತ್ತಿತ್ತು. ನಾನು ಸುಮ್ಮನೆ ನಿಂತಿದ್ದನ್ನು ನೋಡಿ ಅವರಿಗೂ ಪರಿಸ್ಥಿತಿ ಅಂತಹ ಆತಂಕದ್ದೇನೂ ಅಲ್ಲ ಎನಿಸಿರಬೇಕು. ಇಬ್ಬರ ಮುಖದಲ್ಲಿಯೂ ಇದ್ದ ಆತಂಕ ನಿಧಾನವಾಗಿ ಮರೆಯಾಗಿ ಆಶ್ಚರ್ಯ, ಕೌತುಕ ತುಂಬಿಕೊಳ್ಳುತ್ತಿತ್ತು. ನನ್ನನ್ನೊಮ್ಮೆ ಹಾಗೂ ನಾನು ನಿಂತಿದ್ದ ಬಂಡೆಯನ್ನೊಮ್ಮೆ ನೋಡತೊಡಗಿದರು. ನನಗೆ ಹೋಲಿಸಿದರೆ ಅವರ ದೇಹದ ಆಕೃತಿ ಚಿಕ್ಕದ್ದೆಂದೇ ಹೇಳಬಹುದು. ಹಾಗು ನಾನು ನಿಂತಿದ್ದ ಬಂಡೆಯೂ ಬೃಹುದಾಕಾರವಾಗಿದ್ದು ಸಾಮಾನ್ಯ ಜನರಿಗೆ ಹತ್ತುವುದಕ್ಕೆ ಸಾಧ್ಯವೇ ಇರಲಿಲ್ಲ.

ನನ್ನ ಅಜಾನುಬಾಹು ಶರೀರ ಹಾಗೂ ನಾನು ಹೇಗೆ ಆ ದೈತ್ಯ ಬಂಡೆಯ ಮೇಲೆ ಹೋದೆ ಎನ್ನುವ ಸಂಗತಿ ಅವರಿಗೆ ಆಶ್ಚರ್ಯ ಬರಿಸುತ್ತಿತ್ತೆಂದು ತೋರುತ್ತದೆ. ಈ ಸಂಗತಿಯ ಅರಿವಾದಾಗ ನನ್ನಲ್ಲಿಯೂ ನಗೆ ಮೂಡದೆ ಇರಲಿಲ್ಲ. ಅವರಿಬ್ಬರಲ್ಲಿಯೂ ಬಿಲ್ಲು ಬಾಣಗಳಿದ್ದರೂ ಆ ಬಾಣಗಳ ಗುರಿಗೆ ಸಿಲುಕದೆ ಪಾರಾಗುವ ಚಾಕಚಕ್ಯತೆ ನನ್ನಲ್ಲಿತ್ತು. ಮತ್ತೆ ಹಾಗೆ ಆಶ್ಚರ್ಯದಿಂದ ನೋಡುತ್ತಾ ನಿಂತವರಿಂದ ಅಪಾಯಕ್ಕೆ ಆಸ್ಪದವಿಲ್ಲ ಎನ್ನುವ ಧೈರ್ಯದಲ್ಲಿ ನಿಧಾನವಾಗಿ ಬಂಡೆಯಿಳಿದು ಅವರಲ್ಲಿಗೆ ಹೋಗಿ ವಂದಿಸಿದೆ. ಅವರೂ ಪ್ರತಿ ವಂದಿಸಿದರು. ಅವರನ್ನು ನಮ್ಮವರಲ್ಲಿಗೆ ಕರೆದುಕೊಂಡು ಹೋದೆ.

Soliloquy of Hanuman after Ram reaches Ayodhya

ಎಲ್ಲರ ಸಮ್ಮುಖದಲ್ಲಿ ನಡೆದ, ಒಬ್ಬರಿಗೊಬ್ಬರು ನೆರವಾಗುವ ಒಪ್ಪಂದಕ್ಕೆ ರಾಮ ಲಕ್ಷ್ಮಣರು ಕೂಡಲೇ ಒಪ್ಪಿದರು. ಅವರು ಯಾರು, ಅವರ ಹಿನ್ನೆಲೆ ಏನು ಎಂದು ತಿಳಿದ ನಂತರ ಅವರ ಸಾಮರ್ಥ್ಯದ ಬಗೆಗೆ ನಮಗೆ ಯಾವುದೇ ಅನುಮಾನವಿರಲಿಲ್ಲ. ಅವರ ವಿಷಯ ಇಡೀ ಭರತಭುವಿಯಲ್ಲಿ ಆಗಾಗಲೇ ಮನೆಮಾತಾಗಿತ್ತು. ಹಾಗಾಗಿ ಸುಗ್ರೀವನಿಗೆ ರಾಜ್ಯ ದೊರಕಿಸಿ ಕೊಡಲು ಅವರು ನೆರವಾಗಬೇಕು. ಅದಕ್ಕೆ ಪ್ರತಿಯಾಗಿ ನಾವು ರಾಮನ ಪತ್ನಿ ಸೀತೆಯನ್ನು ಹುಡುಕುವುದಕ್ಕೆ ಸಹಾಯ ಮಾಡುವುದಾಗಿ ಒಪ್ಪಂದವಾಯಿತು. ಹಾಗೆ ಅವರಿಗೂ ನಮ್ಮವರ ಶಕ್ತಿಯ ಬಗೆಗೆ ಯಾವುದೇ ಅನುಮಾನವಿರಲಿಲ್ಲ. ನಮ್ಮವರ ದೇಹದಾರ್ಢ್ಯವೇ ಹಾಗಿತ್ತು.

ಗುಡ್ಡಗಾಡಿನ ಜನ ನಾವು, ದಿನ ನಿತ್ಯದ ಜೀವನವೇ ಬೆಟ್ಟ ಗುಡ್ಡ ಮರಗಳನ್ನು ಹತ್ತಿ ಇಳಿಯುವ ಬದುಕು. ಸಮತಟ್ಟಾದ ನೆಲದಲ್ಲಿ ಮನೆ ಕಟ್ಟಿಕೊಂಡು ಜೀವಿಸುವ ಕೂತೂಹಲವೇ ನಮ್ಮವರಲ್ಲಿ ಬೆಳೆಯಲಿಲ್ಲ. ಅದು ನೀರಸ ಬದುಕೆಂದೇ ತೋರುತ್ತಿತ್ತು. ಋಷ್ಯಮೂಕ ಪರ್ವತ, ಪಂಪಾ ಸರೋವರಗಳೇ ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿಬಿಟ್ಟಿದ್ದವು. ಅವುಗಳಿಲ್ಲದ ಜೀವನ ಅನಾಥ ಜೀವನವೆಂದೇ ತೋರುತ್ತಿತ್ತು.

ಸಣ್ಣವರಿದ್ದಾಗ ಬಂಡೆಗಳನ್ನು ಹತ್ತಿ ಇಳಿಯುತ್ತಿದ್ದೆವು. ಬೆಳೆದಂತೆ, ಮೈಬಲ ಮೂಡಿದಂತೆ ಹತ್ತಿ ಇಳಿಯುವ ಉಸಾಬರಿ ಏಕೆಂದು ಬಂಡೆಯಿಂದ ಬಂಡೆಗೆ ನೆಗೆದುಬಿಡುತ್ತಿದ್ದೆವು. ನೋಡಿದವರಿಗೆ ನಾವು ಬಂಡೆಯಿಂದ ಬಂಡೆಗೆ ಹಾರುತ್ತಿದ್ದೇವೆಂದೇ ತೋರುತ್ತಿತ್ತು. ಅತೀ ದೊಡ್ಡ ಬಂಡೆಗಳನ್ನೂ ಸಹ ಉಡಗಳಂತೆ ಹತ್ತಿಬಿಡುತ್ತಿದ್ದೆವು. ಮರಗಳನ್ನು ಕಪಿಗಳಂತೆ ಸರಸರನೆ ಹತ್ತಿ, ಕೊಂಬೆಯಿಂದ ಕೊಂಬೆಗೆ ಜೋತಾಡುತ್ತಿದ್ದೆವು. ನೂರಾರು ವರುಷಗಳಿಂದ ನಮ್ಮವರು ಹೀಗೆಯೇ ಬಾಳುತ್ತಿದ್ದುದರಿಂದ ಈ ಸಂಗತಿಗಳು ನಮಗೆ ಅಂತಹ ಮಹತ್ವದ್ದೆಂದು ಅನಿಸುತ್ತಿರಲಿಲ್ಲ.

Soliloquy of Hanuman after Ram reaches Ayodhya

ದೈವದತ್ತ ಪ್ರಕೃತಿಯೊಂದಿಗಿನ ನಮ್ಮ ಒಡನಾಟ ನಮ್ಮ ದೈಹಿಕ ಬಲವನ್ನು ವೃದ್ಧಿಗೊಳಿಸುತ್ತಲೇ ಇದ್ದಿತು. ಒಬ್ಬರಿಗಿಂತ ಒಬ್ಬರು ಬಲಶಾಲಿಗಳಾಗಿದ್ದರು. ಆದರೂ ಹಾಗೆ ನೋಡಿದರೆ ನಾನು ಎಲ್ಲಾ ವಿಧದಲ್ಲಿಯೂ ಉಳಿದವರಿಗಿಂತ ಹೆಚ್ಚಿನ ಬಲಶಾಲಿಯೂ ಬುದ್ಧಿಶಾಲಿಯೂ ಆಗಿದ್ದೆ. ಜೊತೆಗೆ ತಾಯಿಯವರಿಂದ ಬಳುವಳಿಯಾಗಿ ಬಂದಿದ್ದ ಆಧ್ಯಾತ್ಮಿಕತೆಯ ಪ್ರಭಾವದಿಂದಾಗಿ ನನ್ನಲ್ಲಿ ಅತೀವ ಸಹನೆ, ಸೈರಣೆಗಳ ಶಕ್ತಿಯೂ ಒಂದುಗೂಡಿತ್ತು. ನಮ್ಮ ವಂಶ, ಪರಂಪರೆ, ನಿಚ್ಚಳ ಬದುಕು, ಸಂಸ್ಕೃತಿಗಳಿಂದ ಮೈಗೂಡಿದ್ದ ಸಾತ್ವಿಕ ಧೈರ್ಯ ನನ್ನನ್ನು ಯಾವುದಕ್ಕೂ ಹೆದರದಂತೆ ಮಾಡಿದ್ದವು. ಸತ್ಯವಂತಿಕೆಯಿಂದ ಹುಟ್ಟುವ ಧೈರ್ಯವೂ ನನ್ನಲ್ಲಿ ಮನೆಮಾಡಿತ್ತು.

ತಂದೆ ಕೇಸರಿಯವರೂ ಸಹ ಮಹಾ ಬಲಶಾಲಿಯಾಗಿದ್ದರಂತೆ. ಆದ್ದರಿಂದಲೇ ಸೇನಾನಿಯೂ ಆಗಿದ್ದರು. ಆದರೆ ದೈಹಿಕ ಶಕ್ತಿಯಲ್ಲಿ ನಿನ್ನ ತಂದೆಯವರನ್ನೂ ಮೀರಿಸುತ್ತಿಯಾ ಎಂದೇ ಎಲ್ಲಾ ಹಿರಿಯರೂ ನನಗೆ ಹೇಳುತ್ತಿದ್ದರು. ನಮ್ಮ ದೈಹಿಕ ಬಲವೇ ಬಹುಶಃ ಯಾರೂ ನಮ್ಮ ಗೊಡವೆಗೆ ಬಾರದಂತೆ ತಡೆದಿತ್ತು. ಅದರಿಂದಾಗಿಯೇ ನಮಗೆ ಶತ್ರುಗಳು ಹೆಚ್ಚು ಇರಲಿಲ್ಲ. ನಮ್ಮ ಸುತ್ತ ಮುತ್ತಲಿನ ಜನರಿಗೆ ನಮ್ಮ ಶಕ್ತಿಯ ಬಗೆಗೆ ಚೆನ್ನಾಗಿಯೇ ತಿಳಿದಿತ್ತು. ಹಾಗೆ ನಾವೂ ಸಹ ಕಾರಣವಿಲ್ಲದೆ ಯಾರ ತಂಟೆಗೂ ಹೋಗುತ್ತಿರಲಿಲ್ಲ. ನಮ್ಮಲ್ಲಿ ಆಯುಧಗಳಿದ್ದರೂ ನಮಗೆ ಆಯುಧಗಳ ಅಗತ್ಯವಿರಲಿಲ್ಲ. ಮುಷ್ಠಿ ಯುದ್ಧದಲ್ಲಿ ನಮಗೆ ಸರಿಸಮಾನರು ಯಾರೂ ಇರಲಿಲ್ಲ.

ನನ್ನ ವಿಷಯವಿರಲಿ, ಅಂಗದ, ನೀಲ, ಜಾಂಬವಂತ ಇವರನ್ನು ಎದುರಿಸುವವರು ಯಾರಿದ್ದರು? ಕರಡಿಯಂತೆಯೇ ಹೋರಾಡುತ್ತಿದ್ದ ಜಾಂಬವಂತನ ಬಿಗಿ ಹಿಡಿತದಿಂದ ತಪ್ಪಿಸಿಕೊಳ್ಳಲು ಯರಿಗೆ ಸಾಧ್ಯವಿತ್ತು? ಸಿಕ್ಕ ಬಂಡೆಗಳನ್ನೇ ಎತ್ತಿ, ರೆಂಬೆ ಕೊಂಬೆಗಳನ್ನು ಮುರಿದುಕೊಂಡು ಹೊಡೆದಾಡಿಬಿಡುತ್ತಿದ್ದೆವು. ಹೊಡೆದಾಟದಲ್ಲಿನ ನಮ್ಮ ಅವೇಷವನ್ನು ನೋಡಿಯೇ ಎದುರಾಳಿಗಳು ಹೆದರಿಬಿಡುತ್ತಿದ್ದರು. ನಮ್ಮ ಬಗೆಗಾಗಲೇ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಆಗಾಗಲೇ ಅನೇಕ ದಂತ ಕಥೆಗಳು ಹರಡಿಕೊಂಡಿದ್ದವು. ಕಪಿಗಳಂತೆ ಮರ ಏರುತ್ತಾರೆ, ಹಕ್ಕಿಗಳಂತೆ ಬಂಡೆಯಿಂದ ಬಂಡೆಗೆ ಹಾರುತ್ತಾರೆ, ಕಾಲುವೆಗಳನ್ನೇ ಜಿಗಿದು ದಾಟಿಬಿಡುತ್ತಾರೆ, ಅವರನ್ನು ಎದುರಿಸಲು ಯಾರಿಗೂ ಸಾಧ್ಯವಿಲ್ಲ. ಗುಡ್ಡಗಳಲ್ಲಿ ಜೀವಿಸುವ ಕಪಿಮಾನವರು. ಏನೆಲ್ಲಾ ಕಥೆಗಳು!

Soliloquy of Hanuman after Ram reaches Ayodhya

ನಮ್ಮ ದೈನಂದಿನ ಸಾಮಾನ್ಯ ಸಂಗತಿಗಳು ಹೊರಗಿನವರಿಗೆ ಆಶ್ಚರ್ಯಕರವಾದ, ನಂಬಲಸಾಧ್ಯವಾದ, ಬೆರಗುಗೊಳಿಸುವ ಚಮತ್ಕಾರಗಳಾಗಿದ್ದವು. ಇನ್ನು ನಮ್ಮಂತಹವರನ್ನು ತಮ್ಮ ಇಡೀ ಜೀವನದಲ್ಲಿ ನೋಡೇ ಇರದ ಉತ್ತರ ಭರತಭುವಿಯ ರಾಮ ಲಕ್ಷ್ಮಣರಿಗೆ ನಮ್ಮನ್ನು ನೋಡಿ ಹೇಗೆ ಅನಿಸಿರಬೇಕು. ಅಜಾನುಬಾಹುಗಳಾದ ನಮ್ಮೆಲ್ಲರನ್ನು ನೋಡಿಯೇ ಮೂಕವಿಸ್ಮಿತರಾಗಿದ್ದರು. ಪ್ರಕೃತಿಯೊಂದಿಗಿನ ನಮ್ಮ ಒಡನಾಟ ಎಲ್ಲಾ ವಿಧದಲ್ಲೂ ನಮ್ಮ ಹಿತವನ್ನು ಸದಾ ಕಾಯುತ್ತಲಿತ್ತು.

ಆಹಾರವನ್ನು ಬೇಯಿಸಿ ತಿನ್ನುವ ತಿಳಿವಳಿಕೆಯಿದ್ದರೂ ನಮಗೆಲ್ಲಾ ಪ್ರಕೃತಿಯ ಮಡಿಲಲ್ಲಿ ದೊರೆಯುವ ಹಣ್ಣು ಕಾಯಿ ಗೆಡ್ಡೆ ಗೆಣಸುಗಳೇ ಅತ್ಯಂತ ಆಹ್ಲಾದಕರವಾಗಿದ್ದವು. ನಮ್ಮ ಹಿರಿಯರಂತೂ ಇಂತಹ ಅಹಾರಗಳನ್ನೇ ಅವಲಂಬಿಸಿದ್ದರು. ಇದರಿಂದಲೆ ಇರಬೇಕು ನಮ್ಮ ದವಡೆಗಳೂ ಸಹ ಅತೀ ಬಲಿಷ್ಠವಾಗಿದ್ದು, ಮುಖದಲ್ಲಿ ಪ್ರಧಾನವಾಗಿ ಎದ್ದು ಕಾಣುವುದು. ಪ್ರಕೃತಿಯೊಂದಿಗಿನ ನಮ್ಮ ಜೀವನ, ನಮ್ಮ ಪರಿಸರಕ್ಕೆ, ಜೀವನ ಶೈಲಿಗೆ ತಕ್ಕಂತೆ ಮಾರ್ಪಾಡಾಗುತ್ತಿತ್ತು.

ಆ ಸಮಯಗಳಲ್ಲಿ ನನಗನಿಸುತ್ತಿದ್ದ ಇನ್ನೊಂದು ಸಂಗತಿಯೆಂದರೆ, ಪ್ರಕೃತಿಯ ಕರುಣೆ ನಮ್ಮನ್ನು ಹೇಗೆ ದೈಹಿಕವಾಗಿ ಆರೋಗ್ಯವಂತರನ್ನಾಗಿ, ಬಲಿಷ್ಠರನ್ನಾಗಿ ಇಡಲು ಸಹಕರಿಸಿದೆಯೋ ಅದಕ್ಕಿಂತಲೂ ಮಿಗಿಲಾಗಿ ನಮ್ಮನ್ನು ಹೆಚ್ಚು ಮಾನಸಿಕವಾಗಿ ಆರೋಗ್ಯವಂತರನ್ನಾಗಿ, ಸ್ವಚ್ಛ ಮನಸ್ಸಿನವರನ್ನಾಗಿ ಇಟ್ಟಿದೆ. ನಮ್ಮಲ್ಲಿ ಯಾರಿಗೂ ಅಹಂಕಾರವೇ ಇರಲಿಲ್ಲ. ಬೆಟ್ಟ ಗುಡ್ಡ ನದಿ ಸರೋವರಗಳ ಮಡಿಲಲ್ಲಿ ಅವುಗಳ ಕೃಪೆಯೊಂದಿಗೆ ಬೆಳೆದವರಿಗೆ ಅಹಂಕಾರ ಬರುವುದಾದರೂ ಹೇಗೆ ಸಾಧ್ಯ?

Soliloquy of Hanuman after Ram reaches Ayodhya

ಬೆಟ್ಟದ ಭವ್ಯತೆ, ಸರೋವರದ ತನ್ಮಯತೆ, ಇವುಗಳಲ್ಲೇ ಅಡಗಿರುವ ಅಗಾಧ ಶಕ್ತಿ ಹಾಗೂ ಹೂ ಹಣ್ಣು ಗಿಡ ಮರ ಹಕ್ಕಿ ಕೀಟ ಪ್ರಾಣಿಗಳ ವಿಸ್ಮಯಕರ ಸೃಷ್ಟಿ! ಇವುಗಳೊಂದಿಗೇ ಜೀವಿಸುತ್ತಿರುವಾಗ, ಇವುಗಳ ಮುಂದೆ ಏನೆಂದು ಬೀಗುವುದು? ನಾವು ಅವುಗಳಿಗಿಂತ ಹೆಚ್ಚು ಎಂದು ಹೇಗೆ ತಿಳಿಯಲು ಸಾಧ್ಯ? ಪ್ರತೀದಿನ ಪ್ರಕೃತಿಗೆ ಮುಖಾಮುಖಿಗಳಾಗಿರುವಾಗ ಬಿರುಗಾಳಿಯನ್ನು ತಡೆಯುತ್ತೇವೆ ಎನ್ನುವ ಅಹಂ ಬರಲು ಸಾಧ್ಯವೇ? ಮಳೆ ಚಂಡಮಾರುತಗಳನ್ನು ತಡೆಯಬಲ್ಲೆವೇ? ಬೆಟ್ಟವನ್ನು ಕಿತ್ತಿಡಲು ಸಾಧ್ಯವೇ?

ನಾವು ನರಪ್ರಾಣಿಗಳಷ್ಟೇ. ಭಗವಂತನ ಕರುಣೆಯಿಂದ ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಶಕ್ತಿ, ಸಂವಹನ ಶಕ್ತಿ, ಯೋಚನಾ ಶಕ್ತಿ ಪಡೆದಿದ್ದೇವಷ್ಟೆ. ಭಗವಂತನ ಕರುಣೆಯೇ ಪ್ರಕೃತಿ ರೂಪದಲ್ಲಿ ನಮ್ಮನ್ನು ಸಲಹುತ್ತಿದೆ. ಪ್ರಕೃತಿಯ ಅಗಾಧತೆ ನಮ್ಮನ್ನು ಸದಾ ವಿನೀತರನ್ನಾಗಿರಿಸಿದೆ. ಪ್ರಕೃತಿಯಿಂದಲೇ ಜೀವ, ಆತ್ಮ, ಪರಮಾತ್ಮ, ಸೃಷ್ಟಿ, ಉಳಿವು, ಅಳಿವು ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿದೆ. ಪ್ರಕೃತಿಯ ಬಗೆಗಿನ ಚಿಂತನೆಯೇ ನಮ್ಮ ಅಸ್ತಿತ್ವ, ನಮ್ಮ ನೆಲೆ, ನಮ್ಮ ಮಿತಿಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿವೆ. ಹಾಗೆ ನಮ್ಮ ನೆಲೆಯನ್ನು ಅರ್ಥಮಾಡಿಕೊಂಡು, ಅಹಂಕಾರವನ್ನು ನಿಗ್ರಹಿಸಿಕೊಂಡು, ಮನ ನಿಷ್ಕಲ್ಮಷವಾದಾಗಲಷ್ಟೆ ಅಲ್ಲವೇ ನಾವು ಪರಿಪೂರ್ಣ ಜೀವಿಗಳಾಗುವುದು. ನಮ್ಮ ಆತ್ಮ ಪರಮಾತ್ಮನ ಅನಂತತೆಯನ್ನು ಅನುಭೂತಿಗೊಳಿಸಿಕೊಳ್ಳಲು ಸಾಧ್ಯವಾಗುವುದು. ಬಹುಶಃ ಇಂತಹ ತಿಳಿವಳಿಕೆಯಿಂದಲೇ ಬದುಕಿನ ಕೈವಲ್ಯ ಸಾದಿಸಲು ಸಾಧ್ಯ.

Soliloquy of Hanuman after Ram reaches Ayodhya

ನಾನು ಇಂತಹ ಮನಸ್ಥಿತಿಯಲ್ಲಿದ್ದಾಗಲೇ ರಾಮನ ಭೇಟಿಯಾಗಿದ್ದು. ಮೊದಲ ನೋಟಕ್ಕೆ ದುಃಖದಲ್ಲಿದ್ದಂತೆ ಕಂಡುಬಂದರೂ ಆತನ ಮುಖದ ಓಜಸ್ಸು ಹಳಿದಿರಲಿಲ್ಲ. ಆತನ ಮನದ ನಿಷ್ಕಲ್ಮಷತೆ ತೆರೆದ ಆಲಯದಂತೆ ಸ್ಪಷ್ಟವಾಗಿ ಕಂಡು ಬರುತ್ತಿತ್ತು. ನನ್ನಲ್ಲಾಗಲೇ ಆತನ ಮನದೊಂದಿಗೆ ಸ್ಪಂದಿಸುವ ಮನೋತರಂಗಗಳು ಪುಟಿದೇಳುತ್ತಿದ್ದವು. ಆ ಸ್ಪಂದನೆಗೆ ಮೀಟಿದಂತೆ ಆತನ ಮುಖದಲ್ಲಿ ಸ್ನೇಹ ಸೌಹಾರ್ದತೆಗಳು ಮೂಡುತ್ತಿದ್ದವು. ನಮ್ಮಿಬ್ಬರನ್ನು ಯಾವುದೋ ಬಲವಾದ ಅಲೌಕಿಕ ಶಕ್ತಿ ಒಂದುಗೂಡಿಸುತ್ತಿರುವಂತೆ ಭಾಸವಾಗುತ್ತಿತ್ತು. ಆತನಲ್ಲಿಯೂ ಈ ಎಲ್ಲಾ ಬದಲಾವಣೆಗಳಾಗುತ್ತಿರುವುದು ಸ್ವಷ್ಟವಾಗಿ ಗೋಚರವಾಗುತ್ತಿತ್ತು. ನಮ್ಮಿಬ್ಬರಲ್ಲೂ ಏಳುತ್ತಿದ್ದ ಈ ಏಕತಾನದ ಮನೋತರಂಗಗಳ ಪರಸ್ಪರ ಸ್ಪಂದನೆಗಳೇ ನಮ್ಮ ಮುಂದಿನ ಸಂಬಂಧಕ್ಕೆ ಭದ್ರ ಭುನಾದಿಯನ್ನು ರೂಪಿಸಿತ್ತು.

ಮತ್ತೆ ಏನೆಲ್ಲಾ ಘಟನೆಗಳು ನಡೆದು ಹೋದವು. ವಾಲಿಯ ಹತ್ಯೆ ನೆನೆಸಿಕೊಂಡಾಗ ಈಗಲೂ ಮನ ಮುದುಡುತ್ತದೆ. ಎಂತಹ ಪರಾಕ್ರಮಿ! ಏನು ಎದೆಗಾರಿಕೆ! ಎಂತಹ ವ್ಯಕ್ತಿತ್ವ ಅವನದು! ಅಂತಹವನನ್ನು ಕೊನೆಗಾಣಿಸುವ ಅಗತ್ಯ ಇರಲಿಲ್ಲ ಎನಿಸುತ್ತದೆ. ಆದರೆ ಅವನಿಗೂ ಸುಗ್ರೀವನಿಗೂ ಒಮ್ಮತ ಮೂಡುವ ಸಾಧ್ಯತೆಯೇ ಇರಲಿಲ್ಲ. ನಂತರ ರಾವಣ, ಕುಂಭಕೋಣರ ಹತ್ಯೆ, ವಿಭೀಷಣನಿಗೆ ಲಂಕೆಯ ಅಧಿಕಾರ. ಕೊನೆಗೂ ಸೀತಾಮಾತೆಯನ್ನು ಸುರಕ್ಷಿತವಾಗಿ ಭರತಭುವಿಗೆ ಮರಳಿ ಕರೆತಂದೆವು.

ರಾಮನ ಬಯಕೆಯಂತೆ ನಾನೂ ಸಹ ಅವರೊಂದಿಗೆ ಅಯೋಧ್ಯೆಗೆ ತೆರಳಿದೆ. ಎಂತಹ ವೈಭವದ ಪಟ್ಟಾಭಿಷೇಕ! ನನ್ನನ್ನು ಅಯೋಧ್ಯೆಯಿಂದ ಹಿಂದೆ ಕಳುಹಿಸಲು ಅವರ್‍ಯಾರಿಗೂ ಇಷ್ಟವಿರಲಿಲ್ಲ. ಆದರೆ ನನ್ನ ಜೀವನವಿದ್ದದ್ದು ಆನೆಗೊಂದಿಯಲ್ಲಿ, ಋಷ್ಯಮೂಕ ಪರ್ವತದಲ್ಲಿ, ಪಂಪಾ ಸರೋವರದ ಮಡಿಲಲ್ಲಿ, ಆಂಜನಾದ್ರಿಯ ಬಂಡೆಗಳಲ್ಲಿ.

Soliloquy of Hanuman after Ram reaches Ayodhya

ನನ್ನ ಜೀವನದ ಸಾಫಲ್ಯತೆ ನನಗಾಗಲೇ ಮನದಟ್ಟಾಗಿತ್ತು. ನಾನು ಹಿಂತಿರುಗಿ ಬರಲೇಬೇಕಾಯಿತು. ಆದರೆ ಆಯೋಧ್ಯೆಯಲ್ಲಿ ಇದ್ದಷ್ಟು ದಿನ ನನ್ನ ಸುತ್ತಲೂ ಜನಜಂಗುಳಿಯೇ ಸೇರುತ್ತಿತ್ತು. ಜನರಿಗೆ ನನ್ನನ್ನು ನೋಡಿದಷ್ಟೂ ತೃಪ್ತಿಯಿಲ್ಲ. ನಮ್ಮವರ ಸಾಹಸಗಳ ಬಗೆಗೆ ಮಾತನಾಡಿದಷ್ಟೂ ದಣಿವಿರಲಿಲ್ಲ. ನಮ್ಮಗಳ ಬಗೆಗೆ ಮಾತನಾಡಿದಷ್ಟೂ ಅವರ ಉತ್ಪ್ರೇಕ್ಷೆಗಳು ಹೆಚ್ಚಾಗುತ್ತಲೇ ಇದ್ದವು.

ಆಗಲೇ ಆನೆಗೊಂದಿಯನ್ನು ಕಿಷ್ಕಿಂದೆ ಎಂದು ಕರೆಯತೊಡಗಿದ್ದರು. ಅಂಜನಾದ್ರಿ ಬೆಟ್ಟ ಋಷ್ಯಮೂಕ ಪರ್ವತವಾಗಿತ್ತು. ಜನರ ಮಾತು, ಕಥೆಗಳು ಹೀಗೆಯೇ ಮುಂದುವರೆದರೆ ಇನ್ನು ಸಾವಿರ ಎರಡು ಸಾವಿರ ವರುಷಗಳಲ್ಲಿ ನಮ್ಮ ಸಾಹಸಗಳು ಯಾವ ನೆಲೆಯನ್ನು ತಲುಪಬಹುದು, ಮುಂದಿನ ಪೀಳಿಗೆಯವರಲ್ಲಿ ನಾವೂ ಸಹ ಒಂದು ಕಾಲದಲ್ಲಿ ಮಾನವರಾಗಿಯೇ ಇದ್ದೆವು ಎನ್ನುವ ಸಂಗತಿಯಾದರೂ ಉಳಿಯಬಹುದೇ ಎನಿಸುತ್ತಿತ್ತು.

English summary
Soliloquy of Hanuman after Ram reaches Ayodhya after defeating Ravan with the help of vanara sena. Hanuman says, he had to come back to Anjanadri as his life was in Rushyamuka parvata, but not in Ayodhya. A short story by Prakash Hemavati.\
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X