ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಗ 4: ಕುಲಕರ್ಣಿಯವ್ರು ಆಸ್ಪತ್ರಿಗೆ ಹೋಗ್ಯಾರ!

By ರಘುನಂದನ ಶರ್ಮ
|
Google Oneindia Kannada News

ರಾತ್ರಿ ಇಡೀ ಎಚ್ಚರವಾಗಿಯೇ ಇದ್ದು 24ಗಂಟೆಗಳು ಮುಗಿದು ಮರುನಿಮಿಷಕ್ಕೇ ಒಂದಾದ ಮೇಲೆ ಒಂದರಂತೆ ಡ್ರಾಫ್ಟನ್ನು ತೆಗೆದು ಸೆಂಡ್.. ಸೆಂಡ್... ಸೆಂಡ್ ಅನ್ನುತ್ತಾ ಸೆಂಡ್ ಬಟನ್ ಮೇಲೆ ಟ್ಯಾಪ್ ಮಾಡುತ್ತಾ ಕುಳಿತಳು. ಈ ಮೇಲ್ ಕಳುಹಿಸಲಿಕ್ಕೆಯೇ ಸುಮಾರು 20 ನಿಮಿಷಗಳನ್ನು ತೆಗೆದುಕೊಂಡಳು.

ಆದರೆ, ಆಕೆ ಕಣ್ಣಲ್ಲಿ ನೀರು ತುಂಬಲು ಪ್ರಾರಂಭಿಸಿದ್ದು ಒಂದಕ್ಕಾದರೂ ಉತ್ತರ ಬಾರದಿದ್ದಾಗ. ಅವಳ ತಾಯಿ ಸುಧಾಬಾಯಿಗೆ ಮಗಳ ಈ ಸೆನ್ಸೆಟಿವ್ ಗುಣ ಚೆನ್ನಾಗಿ ಪರಿಚಯವಿತ್ತು. ಹಾಗಾಗಿ ಅಷ್ಟಾಗಿ ಲಕ್ಷ್ಯಕ್ಕೆ ತಂದುಕೊಳ್ಳದೆ ತಮ್ಮ ಬೆಳಗಿನ ಕಾರ್ಯಗಳನ್ನು ಸಾಂಗವಾಗಿ ನಡೆಸಿದ್ದರು.

ಆದರೆ, ಯಾವಾಗ ಮಗಳ ಕೋಣೆಯಿಂದ ಮಗಳು ಸುಡ್ರ್ ಸುಡ್ರ್ ಎಂದು ಗಟ್ಟಿಯಾಗಿ ಮೂಗು ಏರಿಸಿಕೊಳ್ಳುವ ಸದ್ದು ಕೇಳಿಬಂತೋ ಆಗ ಒಳಗೆ ಬಂದು

"ಯಾಕs? ಏನಾತುs? ಯಾಕ ಅಳ್ಳೀಕತ್ತೀ? ಎಂದು ಅಕ್ಕರೆಯಿಂದ ಮಗಳನ್ನು ಸಮೀಪಿಸಿದ್ದೇ ತಡ ಸುಜಾತೆಯ ಸಹನೆಯ ಕಟ್ಟೆ ಒಡೆದು ಅಮ್ಮನನ್ನು ಅಪ್ಪಿಕೊಂಡು "ಈ ರಮೇಶ ಯಂಥಾ ಕೆಟ್ಟಂವ ಇದ್ದಾನ ನೋಡು, ಈ ಅಡ್ನಾಡಿ ಚಾಲೇಂಜು ಹಾಕಿದ್ದೂ ಅಲ್ಲದಂಗ ಈಗ ಒಂದಕ್ಕರೆ ರಿಪ್ಲೈ ಮಾಡವಲ್ಲ, ರಿಫ್ರೆಶ್ ಮಾಡಿ ಮಾಡಿ ಸಾಕಾತು ನಂಗನಕೂ" ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದಳು.

ಸುಧಾ ಬಾಯಿಯ ಅಮಾಯಕ ಮನಸ್ಸಿಗೆ ಈ ರಿಪ್ಲೈ ಮತ್ತು ರಿಫ್ರೆಶ್ ಅನ್ನುವ ಎರಡು ಶಬ್ದಗಳೇ ಮಗಳ ದುಃಖಕ್ಕೆ ಕಾರಣವಾಗಿವೆ ಎಂದು ತೋರಿದವು. ಆದರೆ ಅದಕ್ಕೆ ಪರಿಹಾರ ತಿಳಿಯದ ಆಕೆ ತನ್ನ ಯಜಮಾನರನ್ನು ಕರೆದು ವಿಷಯವನ್ನು ತಿಳಿದುಕೊಳ್ಳಲು ಹೇಳಿದರು. ಮೂರೂ ಜನರ ಮಾತು ಕತೆಯಾದಾಗ ಈ ಚಾಲೇಂಜಿನ ವಿಷಯ ಹೊರಗೆ ಬಂತು.

"ಸಾಕಾಗೇದವ ಈಗಿನ ಹುಡುಗೂರs ಕಾಲಾಗs. ನಾವರs ಎಷ್ಟು ಸಲ ಹೇಳೋಣು? ಬ್ಯಾಡ್ರ್ಯಪಾ ಇಷ್ಟೊಂದು ಮೊಬೈಲುದ್ದು ಹುಚ್ಚು, ಒಂಚೂರು ಆರಾಮs ಇರ್ರಿ ಅಂದ್ರs ಕೇಳವಲ್ವು. ಇಕಾ, ಇಲ್ನೋಡು, ಅಳಬ್ಯಾಡ, ರಮೇಶನ ನಂಬರ ಕೊಡು" ಎಂದರು ದೇಶಪಾಂಡೆ ಅವರು.

Reservation kills a Love

"ಅದು ಸ್ವಿಚ್ ಆನ್ ಇತ್ತು ಅಂದ್ರ ನಾನ್ಯಾಕ ಅತಗೋತ ಕೂಡ್ತಿದ್ದೆ" ಎಂದು ಮಗಳು ಮತ್ತೆ ಸುರ್ ಸುರ್ ಮಾಡಿದಳು.

"ರಾಮರಾಮಾ! ನಿಮ್ಮ ಸಹವಾಸ ಭಾಳ ಲಟಿಪಿಟಿ ಅದನವಾ!" ಎನ್ನುತ್ತ ಮಗಳತ್ತ ನಸುನಗುತ್ತಲೇ ನೋಡಿ ರಮೇಶನ ಮನೆಗೆ ಫೋನಾಯಿಸಿದರೆ ಅದು ರಿಂಗಾಗುತ್ತಿತ್ತು ಅಷ್ಟೆ. ಯಾರೂ ಮಾತನಾಡಲಿಲ್ಲ.

"ಯಾರೂ ಯತ್ತವಲ್ರು, ಪಾಣ್ಯಾನ ಫೋನ್ ಸೈತ ಔಟ್ ಆಫ್ ಕವರೇಜ್ ಅನ್ಲಿಕತ್ತದ, ಏನಾಗ್ಯದೋ ಏನೋ? ನಡೀ ಏಳು ಮಾರೀ ತೊಳಕೋ, ಹೋಗೇ ಬರೋಣಂತ ಅಲ್ಲಿಗೆ" ಎಂದು ಮಗಳಿಗೆ ಹೇಳಿ ತಾವು ಸ್ಕೂಟರನ್ನು ಹೊರತೆಗೆದರು.

ರಾಜನಗರದಲ್ಲಿದ್ದ "ಕೋರವಾರೇಶ ಕೃಪಾ" ಮುಂದೆ ನಿಂತಾಗ ಮನೆ ಬೀಗ ಹಾಕಿತ್ತು, ಪುನಃ ಎರಡೂ ಫೋನುಗಳಿಗೆ ಕರೆ ಮಾಡಿದರೆ ವ್ಯಾಪ್ತಿಪ್ರದೇಶದ ಹೊರಗಿದ್ದಾರೆ ಎನ್ನುವ ಉತ್ತರ ಬರತೊಡಗಿತು. ಇವರಿಗೆ ಪರಿಚಯದವರೇ ಆದ ಹಂಚಿನಾಳ ಮಾಸ್ತರು ಪಕ್ಕದ ಸೈಟಿನಲ್ಲಿ ಅರ್ಧಮರ್ಧಕಟ್ಟಿಸಿದ್ದ ತಮ್ಮ ಮನೆಯ ಕ್ಯೂರಿಂಗ್ ಮಾಡಲು ಬಂದಿದ್ದರು.

ಮಾತನಾಡುವ ಸದ್ದು ಕೇಳಿ ಅವರು ಹೊರಗೆ ಬಂದು "ಏನ್ರೀ ದೇಶಪಾಂಡೆ! ಯಾಕ ಬೆಳಿಗ್ಗೆ ಬೆಳಿಗ್ಗೆನ ಕುಲಕರ್ಣಿಯವರು ಮೂರೂ ಮಂದಿ ಅಂಬುಲೆನ್ಸಿನಾಗ ಆಸ್ಪತ್ರಿಗೆ ಹೋಗ್ಯಾರ? ರಮೇಶ ವಾಂತಿ ಮಾಡಿಕೊಳ್ಳೀಕತ್ತಿದ್ದ ಅಂತ ಅಷ್ಟ ಗೊತ್ತಾತು" ಎಂದು ಒಂದು ಬಾಂಬು ಹಾಕಿದರು. ಹೌಹಾರಿದ ತಂದೆ ಮಗಳು ಆಂಬುಲೆನ್ಸಿನ ಮೇಲೆ ಬರೆದಿದ್ದ ಆಸ್ಪತ್ರೆಯ ಹೆಸರನ್ನು ತಿಳಿದುಕೊಂಡು ಇಬ್ಬರೂ ಅಲ್ಲಿಗೆ ದೌಡಾಯಿಸಿದರು.

ಆಸ್ಪತ್ರೆಯ ಹೊರಗೆ ಸ್ಕೂಟರು ನಿಲ್ಲಿಸುತ್ತಿದ್ದಾಗಲೇ ಲಕ್ಷ್ಮೀಬಾಯಿಯ ಎದೆ ಒಡೆಯುವ ರೋದನದ ಸದ್ದು ಕೇಳಿಬಂತು! ಸುಜಾತೆ ಡವಡವ ಎನ್ನುವ ಹೃದಯದೊಂದಿಗೇನೆ ಒಳಗೆ ಓಡಿದಳು.

ಅಲ್ಲಿಯವರೆಗೂ ತುಟಿ ಕಚ್ಚಿ ಹಿಡಿದು, ದಿಕ್ಕು ತಪ್ಪಿದವರಂತೆ ಕುಳಿತಿದ್ದ ಪ್ರಾಣೇಶರಾಯರು ತಮ್ಮ ಅತ್ಯಂತ ಆತ್ಮೀಯ ಸ್ನೇಹಿತ ರಾಘುವನ್ನು ನೋಡುತ್ತಿದ್ದ ಹಾಗೆಯೇ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡು ಗಾಬರಿಯಾಗುವಂತೆ "ಯಂಥಾ ಕೆಲಸ ಮಾಡ್ಯಾನ ನೋಡೋ ನಿನ್ ಅಳಿಯಾ!, ಒದ್ದ್ಯಾಡಕೋತ ಇರೋ ನೀನs ಒಬ್ಬಾತನs ಅಂತಂದು ಈ ಮುದುಕ ಸೊಳೇಮಗನ್ನ ಬಿಟ್ಟು ಹೋಗಿಬಿಟ್ನಲ್ಲೋ" ಎಂದು ಅಳುತ್ತ ಅಳುತ್ತ ನೆಲಕ್ಕೆ ಕುಸಿದರು.

English summary
Short Story: Reservation in jobs, education system has claimed a aspiring youth belonging to General Category. Though suicide is not the solution to the crisis but it has sent a message to his lover and fellow friend about the failure in the system of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X