ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಗ 3 : ನಿಂಗ ನನ್ನ ಬಿಟ್ಟು ಒಂದು ದಿನ ಸೈತ ಇರ್ಲಿಕ್ಕೆ ಆಗಂಗಿಲ್ಲ

By ರಘುನಂದನ ಶರ್ಮ
|
Google Oneindia Kannada News

ಬಹಳ ಬೇಗ ಕೆಲಸ ಮುಗಿದಿದ್ದರಿಂದ ಇಬ್ಬರೂ ಇಂದಿರಾ ಗಾಜಿನ ಮನೆಯ ಕಡೆಗೆ ಹೆಜ್ಜೆ ಬೆಳೆಸಿದರು. ಅಲ್ಲಿ ಇದ್ದಾಗಲೇ ರಮೇಶನ ಕೈಗಳು ಹುಲ್ಲು ಕಿತ್ತುವ ಘನಕಾರ್ಯದಲ್ಲಿ ತೊಡಗಿದ್ದು ಮತ್ತು ಸುಜಾತೆಗೆ ಪ್ರೇಮದ ಆಳವನ್ನು ಅರಿಯುವ ತವಕ ಶುರುವಾಗಿದ್ದು. ತಾನು ಗಂಡಹೆಂಡತಿ ಎನ್ನುವ ಮಾತನ್ನು ಆಡಿದಾಗ ರಮೇಶನು ನಸುನಗದೇ ಇದ್ದುದು ಸುಜಾತೆಗೆ ಆಘಾತದಂತೆ ಆಗಿಬಿಟ್ಟಿತ್ತು. ಅದಕ್ಕೆಂದೇ ಮತ್ತೆ ಆಕೆ ಆ ಪ್ರಶ್ನೆಯನ್ನು ಮಾಡಿದಳು.

ಅದಕ್ಕೂ ಸರಿಯಾದ ಉತ್ತರ ಬರದೇ ಇದ್ದಾಗ ಆ ತರಳೆಯು " ಈ ಮಹರಾಯ ಚೇಂಜ್ ಆಗಂಗಿಲ್ಲ ಬಿಡು, ಆದರೂ ಸೈತ ಐ ಲವ್ ಹಿಮ್, ಹೀ ಈಸ್ ಮಾಯ್ ಮ್ಯಾನ" ಅಂದುಕೊಂಡಳು. ಮೂಡನ್ನು ಬದಲಾಯಿಸುವ ನಿಟ್ಟಿನಲ್ಲಿ "ಒಂದು ಚಾಲೆಂಜ್ ಅದs ಮಾಡ್ಲಿಕ್ಕೆ ಆಗ್ತದೇನೋ ನಿಂಗs?" ಅಂತ ಕೇಳಿದಳು. ಪ್ರತಿಸಲವೂ ಚಾಲೆಂಜು ಹಾಕಿ ತಾನು ಗೆಲ್ಲುವುದನ್ನೇ ನೋಡಲು ಸುಜಾತೆಯು ಸಂತಸ ಪಡುತ್ತಾಳೆಂದು ರಮೇಶನು ಬಲ್ಲ.

"ಹೇಳು" ಎನ್ನುತ್ತಾನೆಂದು ಸುಜಾತೆಯು ನಿರೀಕ್ಷೆಯಲ್ಲಿದ್ದಳು. ಆದರೆ ನಿಧಾನವಾಗಿ ರಮೇಶ "ಬರೇ ನೀ ಹೇಳಿದ ಚಾಲೆಂಜ್ ನಾನು ಮಾಡೇನಿ ಇಷ್ಟು ದಿನಾ, ಈ ಸಲೆ ನಾ ಒಂದು ಚಾಲೆಂಜು ಹಾಕ್ತೀನಂತ, ಮಾಡ್ಲಿಕ್ಕೆ ಆಗ್ತದೇನು ಹೇಳು?" ಅಂದ. ಸುಜಾತೆಗೆ ವ್ಯಕ್ತಪಡಿಸಲಾರದ ಆನಂದವೊಂದು ಆಯಿತು. "ಅವ್ವಯ್ಯ! ಅಂತೂ ಇಂವ ಓಪನ್ ಅಗ್ಲಿಕತಾನ" ಅಂದುಕೊಂಡು "ಹೇಳು, ಹೇಳು" ಎಂದಳು.

ನೋಡವಾs ದಿನಾ ನಾವಿಬ್ರೂ ಮೆಸೇಜು, ಈಮೇಲು, ಮಾತು ಎಲ್ಲಾ ಮಾಡ್ತೀವಿ, ಖರೆ. ನಿಂಗ ನನ್ನ ಬಿಟ್ಟು ಒಂದು ದಿನ ಸೈತ ಇರ್ಲಿಕ್ಕೆ ಆಗಂಗಿಲ್ಲ ಅಂತೀ, ಖರೆ ಹೌದಲ್ಲೋ? ಆದ್ರ ಈ ಚಾಲೆಂಜು ಹೆಂಗದs ಅಂದ್ರ ನಾಳೆ ಒಂದು ದಿನದ ಮಟ್ಟಿಗೆ ನೀನು ನಂಗs ಕಾಲ್ ಮಾಡಬಾರದು, ಮೆಸೇಜ್ ಮಾಡಬಾರದು, ಈ ಮೇಲ್ ಮಾಡಬಾರದು. 24 ಅವರ್ಸ್ ಚಾಲೆಂಜವಾ. ಮಾಡು ನೋಡೋಣಂತ. ನಂಗೂ ಖುಷಿ ಆಗತದ. ಅಂದ.

ಮೊದಲೇ ಆಘಾತಗೊಂಡಿದ್ದ ಆ ಕೋಮಲೆಯು ಈಗ ಇನ್ನಷ್ಟು ಕ್ಷತಿಗೊಂಡಳು. "ಏ ಏನೋಪಾs ನೀ? ನಾ ಅಂದ್ರ ನಿಂಗ ತ್ರಾಸ ಅಗೇದ ಅಂದ್ರ ಹೇಳು. ಅಯ್ ವಿಲ್ ವಾಕ್ ಅವೇ, ಆದ್ರ ಇಂಥಾ ಮಾತು ಹೇಳಿ ಯಾಕ ಚುಟುಗುಮುಳ್ಳು ಆಡಸ್ಲಿಕತ್ತೀ? ಅಂಥಾದ್ದು ಆಗೇದರ ಏನು ನನ ಕಡಿಂದs" ಎಂದು ಅಲವತ್ತುಗೊಂಡಳು.

"ಅಂಥಾದ್ದು ಏನೂ ಇಲ್ಲೇವಾ!, ಹೇಳೋದು ಕೇಳು. ಇದು ಬರೇ ಒಂದು ಚಾಲೇಂಜ್ ಅದs. ಅಷ್ಟs. ಆದ್ರs ಮಾಡು ಇಲ್ಲಂದ್ರ ಇಲ್ಲs. ಈದರ್ ವೇ ಅಯ್ ಲವ್ ಯೂ, ಆದ್ರ ನೀನು ಇದನ್ನ ಗೆದ್ದೀ ಅಂದ್ರ ನಂಗ ಒಂಚೂರು ಖುಷಿ ಆಗೋದಂತ್ರೂ ಖರೇ ನೋಡವಾ" ಎಂದು ಪ್ರೇಯಸಿಯನ್ನು ಮತ್ತೊಮ್ಮೆ ಗೊಂದಲಕ್ಕೀಡುಮಾಡಿದ.

Short Story

ಆಕೆಗೆ ಇಂಥ ಹೃದಯ ಹಿಂಡುವ ಪಣ ಬೇಕಾಗಿಲ್ಲ. ಆದರೆ, ಇವನನ್ನು ಸಂತೋಷಪಡಿಸುವುದಕ್ಕೆ ಇದೂ ಒಂದು ಪ್ರಯತ್ನವೆಂದು ಭಾವಿಸಿ ಒಪ್ಪಿಕೊಂಡಳು. "ನಾಳೇನs ಮಾಡ್ತೀನಂತ" ಎಂದೂ ತಾನೇ ಅಂದಳು. ಅವಳಿಗೆ ಈ ವಿಷಮಗಳಿಗೆಯು ಆದಷ್ಟು ಬೇಗ ಬಂದು ತೊಲಗಿ ಹೋದರೆ ಸಾಕು ಅನ್ನಿಸಿತ್ತು.

ಪಾರ್ಕಿನಿಂದ ಇಬ್ಬರೂ ಎದ್ದು ನಿಧಾನಕ್ಕೆ ಮನೆಯಕಡೆ ಹೊರಟರು. ಪಂದ್ಯ ಶುರುವಾಗಲು ಇನ್ನೂ ಸಾಕಷ್ಟು ಸಮಯ ಇತ್ತು. ಆದರೆ ಸುಜಾತೆ ನಾಳೆ ನಷ್ಟವಾಗಲಿರುವ ಸಂತಸದ ಕೋಟಾವನ್ನು ಇಂದೇ ಭರ್ತಿ ಮಾಡಿಕೊಂಡಳು. ಎಲ್ಲ ಮೆಸೇಜುಗಳಿಗೂ ರಮೇಶ ರೋಮ್ಯಾಂಟಿಕ್ಕಾಗಿಯೇ ಪ್ರತಿಸ್ಪಂದಿಸಿದನಾದ ಕಾರಣ ಸುಜಾತೆಯ ಹೃದಯ ಚಿಟ್ಟೆಯಂತೆ ಹಾರಾಡಿ, ರಮೇಶನ ಮನೆಗೆ ಹೋಗಿ ಅವನಿಗೆ ಮುತ್ತಿಕ್ಕಿ ಅಲ್ಲಿಂದ ಪ್ರತಿಮುತ್ತೊಂದನ್ನು ತಂದಿತು.

ಪಂದ್ಯ ಶುರುವಾದ ಕ್ಷಣದಿಂದ ಸುಜಾತೆಯು ನಾರ್ಮಲ್ಲಾಗಿಯೇ ಇರಲು ಶತಪ್ರಯತ್ನ ಮಾಡತೊಡಗಿದಳು. ಇದೇ ಸುಸಮಯ ಎಂದು ತಮ್ಮ ಹೊಸ ಕಂಪನಿಗೆ ಬೇಕಾದ ಎಲ್ಲ ದಾಖಲಾತಿಗಳನ್ನು ಒಟ್ಟು ಮಾಡಿ ಇಟ್ಟಳು. ಅದಾದರೂ ಎಷ್ಟು ಹೊತ್ತು? 1 ಗಂಟೆಯಲ್ಲಿ ಮುಗಿದೇ ಹೋಯಿತು. ಸಂಬಂಧಪಟ್ಟ ಇತರರೊಡನೆ ಕೆಲಸಮಯ ಚರ್ಚೆ ಮಾಡಿದಳು. ಅದೂ ಮುಗಿಯಿತು. ತನ್ನ ತಂದೆಯ ಜೊತೆಗೆ ಸ್ವಲ್ಪ ಚರ್ಚೆ ಮಾಡಿ ಕಂಪನಿ ಲಾ ಮತ್ತು ರಿಜಿಸ್ಟ್ರೇಷನ್ ವಿಷಯದಲ್ಲಿ ಸಲಹೆ ಪಡೆದಳು.

ಎಲ್ಲವೂ ಮುಗಿದು ಹೋದವು. ಮುಂದೇನು? ವೆಬ್ಸೈಟು ಮಾಡಬೇಕಲ್ಲ? ಅದಕ್ಕೆ ಬೇಕಾದ ಕಂಟೆಂಟನ್ನು ತಯಾರು ಮಾಡತೊಡಗಿದಳು. ಪುಣ್ಯಕ್ಕೆ ಅದು ಸುಮಾರು ಹೊತ್ತಿನವರೆಗೆ ನಡೆಯಿತು.

" ಚಾಲೇಂಜು ನಂಗ ಅದs, ಆತಗ ಏನೂ ಅಲ್ಲs, ಏನರ ಈ ಮೇಲು ಕಳಿಸ್ಯಾನೇನೋ" ಎಂದು ನೋಡಿದರೆ ಒಂದೂ ಇದ್ದಿಲ್ಲ. ರಿಫ್ರೆಶ್ ಬಟನ್ ಒತ್ತಿ ಒತ್ತಿ ಸಾಕಾಯಿತು, ಆದರೂ ಒಂದೂ ಈ ಮೇಲ್ ಇದ್ದಿಲ್ಲ.

"ಏನಾಗೇದ ಇತಗs? ಒಂದರs ಮೆಸೇಜು ಇಲ್ಲಲ್ಲ? ಮಾಮೀಗೆ ಕಾಲ್ ಮಾಡ್ಯರ ನೋಡ್ಲೇನು?" ಎಂದು ಕೊಂಡಳು, ಆದರೆ ಅದು ಕೂಡ ಪಂದ್ಯದ ವಯೋಲೇಶನ್ ಆದರೆ ಕಷ್ಟ ಎಂದು ಸುಮ್ಮನಾದಳು.

ಹೀಗಾಗಿ ಮಧ್ಯ ಮಧ್ಯ ಅನೇಕ ಮೆಸೇಜುಗಳು, ತನ್ನ ತುಮುಲಗಳಿಗೆ ಸರಿ ಹೊಂದುವ ಇಮೇಜುಗಳು, ಜಿಫ್ಫಿಗಳು ಎಲ್ಲವನ್ನೂ ಬರೆದು ಬರೆದು ಈ ಮೇಲ್ ಡ್ರಾಫ್ಟಿನಲ್ಲಿ ಇಟ್ಟುಕೊಂಡಳು. 24ಗಂಟೆಗಳ ನಂತರ ಎಲ್ಲವನ್ನೂ ಪ್ರವಾಹದೋಪಾದಿಯಲ್ಲಿ ಕಳಿಸುವ ಉಮೇದಿನಲ್ಲಿ ಇದ್ದಳು. ಆಕೆಗೆ ಪಂದ್ಯದಲ್ಲಿ ದೈಹಿಕವಾಗಿ ಗೆದ್ದರೂ ಮಾನಸಿಕವಾಗಿ ತಾನು ಸೋತವಳೇ ಎಂದು ಮುಂದೆಂದೋ ತನ್ನ ಗಂಡನಿಗೆ ತೋರಿಸಬೇಕಾಗಿತ್ತು.

English summary
Short Story: Reservation in jobs, education system has claimed a aspiring youth belonging to General Category. Though suicide is not the solution to the crisis but it has sent a message to his lover and fellow friend about the failure in the system of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X