ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಥಾ ಸರಪಳಿ: ಭಾಗ 1- 'ಪ್ರೇಮದ ಮಿಂಚು '

By ಸುಮಾ ಹೆಗಡೆ, ಶಿಂಗ್ನಳ್ಳಿ
|
Google Oneindia Kannada News

ಕಥೆ ಅಂದ್ರೆ ಹಾಗೇ... ವಸ್ತು ಒಂದೇ ಆದ್ರೂ ಅದನ್ನು ಹೆಣೆಯೋ ರೀತಿ ಬೇರೆ, ಬರೆಯೋ ಶೈಲಿ ಬೇರೆ, ನಿರೂಪಣೆಯ ಓಘ ಬೇರೆ... ಮುಗಿದೇ ಹೋಯ್ತು ಅನ್ನಿಸುವ ಒಂದು ಕಥೆಯ ಪೂರ್ಣವಿರಾಮವೇ, ಮತ್ತೊಂದು ಕಥೆಗೆ ಮುನ್ನುಡಿಯಾದೀತು...

ಒಂದು ಕಥೆಯ ಕೊನೆಯ ಸಾಲೇ ಮುಂದಿನ ಕಥೆಗೆ ನಾಂದಿ ಹಾಡೀತು, ಬರೆಯುವವನಿಗೆ ಕಥೆ ಮುಗಿದಂತೆನ್ನಿಸಿದರೂ, ಓದುಗನಿಗೆ ಇನ್ನೂ ಬೇಕೆನ್ನಿಸಬಹುದು. ಹೀಗೆ ಒಬ್ಬೊಬ್ಬರ ಮನಸ್ಸಲ್ಲಿ ಒಂದೊಂದು ವ್ಯಾಖ್ಯಾನ ಪಡೆದ ಕಥೆಯ ವಿಭಿನ್ನ ಸರಪಳಿಯೊಂದನ್ನು 'ಒನ್ ಇಂಡಿಯಾ ಕನ್ನಡ' ಪರಿಚಯಿಸುತ್ತಿದೆ. ಅದರ ಮೊದಲ ಭಾಗವಾಗಿ "ಪ್ರೇಮದ ಮಿಂಚು" ಕಥೆಯನ್ನು ಪ್ರಕಟಿಸಿದೆ.

ಈ ಕಥಾ ಸರಪಳಿ ಇಂದಿಗೇ ಕೊನೆಯಲ್ಲ, ಸರಪಳಿಯ ಕೊಂಡಿಗಳನ್ನು ಓದುಗರೇ ಜೋಡಿಸುತ್ತ ಹೋಗಬಹುದು! ಈ ಕಥೆಯನ್ನು ನಿಮ್ಮದೇ ಶೈಲಿಯಲ್ಲಿ, ನಿಮ್ಮದೇ ಕಲ್ಪನೆಯಲ್ಲಿ ಮುಂದುವರಿಸಬಹುದು. ನೀವು ಕಳಿಸುವ ಕಥೆ 500 ಪದಗಳ ಮಿತಿಯಲ್ಲಿರಲಿ. ಈ ಕಥೆಯ ಮುಂದಿನ ಭಾಗವನ್ನು ಆಯ್ಕೆ ಮಾಡಿ 'ಒನ್ ಇಂಡಿಯಾ ಕನ್ನಡ' ಪ್ರಕಟಿಸಲಿದೆ. ಸಂಪಾದಕರ ಆಯ್ಕೆಯೇ ಅಂತಿಮ. ಕಥೆ ಕಳಿಸವವರು ಕಥೆಯೊಂದಿಗೆ ನಿಮ್ಮ ಹೆಸರು, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಲಗತ್ತಿಸಬೇಕು."Short Story Continuation" ಎಂಬ ಸಬ್ಜೆಕ್ಟ್ ಲೈನ್ ಜೊತೆ ಇ ಮೇಲ್ ಮಾಡಿ. ಓದುಗರು ಕಥೆ ಕಳಿಸಬೇಕಾದ ಇಮೇಲ್ ಐಡಿಯನ್ನು ಕಥೆಯ ಕೊನೆಯಲ್ಲಿ ಉಲ್ಲೇಖಿಸಲಾಗಿದೆ.

****

'ಪ್ರೇಮದ ಮಿಂಚು '

"ನಾನು ಮಾಡಿದ್ದು ತಪ್ಪಾ ಸರಿನಾ? ಇದನ್ನು ಬೇರೇ ರೀತಿಯಲ್ಲೂ ಮಾಡಬಹುದಿತ್ತ?" ಬೆಳಗ್ಗೆ ಆಫೀಸಿಗೆಂದು ಬಸ್ಸು ಹತ್ತುವಾಗ ನಾಗೇಶ ಸಾವಿರದ ಹತ್ತನೇ ಸಲ ತನ್ನನ್ನು ತಾನು ಪ್ರಶ್ನೆ ಮಾಡಿಕೊಂಡಿದ್ದ. ಅವಳ ಸುಂದವಾದ ಮುಖ ನೆನಪಿಗೆ ಬಂತು. . .ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ ಮರೆತು ಹೋಯ್ತು. . .ಮತ್ತೆ ವಾಸ್ತವ. . .ಅವಳು ಏನು ಅಂದುಕೊಂಡಳೋ ಏನೋ. . .

ನಿನ್ನೆಯಿಂದ ಹೀಗೆ, ಸಂಜೆ ಆಫೀಸು ಬಿಟ್ಟಾಗಿನಿಂದಲೂ ನಾಗೇಶನ ಮನಸ್ಸು ವಾಸ್ತವ-ಕಲ್ಪನೆ ಮಧ್ಯೆ ಹೊಯ್ದಾಡುತ್ತಿತ್ತು. ನೀನು ಮಾಡಿದ್ದು ಸರಿ ಕಣೋ ಅಂತ ಮನಸು ಹೇಳ್ತಾ ಇದ್ರೆ, ಪರಿಸ್ಥಿತಿ ಬಗ್ಗೆ ಬುದ್ಧಿ ಎಚ್ಚರಿಕೆ ನೀಡುತ್ತಿತ್ತು.

ಝೆನ್ ಕಥೆ: ಬದುಕಿನ ಅರ್ಥ ಕಂಡುಕೊಳ್ಳುವ ಮಾರ್ಗ ಯಾವುದು?ಝೆನ್ ಕಥೆ: ಬದುಕಿನ ಅರ್ಥ ಕಂಡುಕೊಳ್ಳುವ ಮಾರ್ಗ ಯಾವುದು?

ಆಫೀಸು ಮೆಟ್ಟಿಲು ಏರುತ್ತಿದ್ದಂತೆ ತಳಮಳ ಹೆಚ್ಚುತ್ತಾ ಹೋಗುತ್ತಿತ್ತು. ಬೆವರುವ ಕೈಯಿಂದ ಕಾರ್ಡ್ ಪಂಚ್ ಮಾಡಿ ಬಾಗಿಲು ನೂಕಿ ಒಳ ಬಂದ ಅಷ್ಟೆ.. ಎಲ್ಲರೂ ತನ್ನನ್ನೇ ನೋಡುತ್ತಿದ್ದಾರೆ ಎನಿಸುತ್ತಿತ್ತು ನಾಗೇಶನಿಗೆ.. ಆ ಮೂಲೆಯಲ್ಲಿ ಕೂರುವ ಕವಿತ.. ಯಾವತ್ತೂ ಯಾರ ಜೊತೆಯೂ ಬೆರೆಯದೆ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ಇರುತ್ತಿದ್ದ ಅವಳೂ ಇವತ್ತು ತನ್ನನ್ನೇ ನೋಡುತ್ತಿದ್ದಾಳೆ..ಹಾಗಿದ್ರೆ ಎಲ್ಲರಿಗೂ ಗೊತ್ತಾಗಿಹೋಯ್ತೆ? ಕಿವಿ ಎಲ್ಲ ಬಿಸಿ ಆದಹಾಗಾಯ್ತು..ಇವತ್ತು ಗ್ಯಾರಂಟಿ ಏನೋ ಆಗತ್ತೆ.. ಅರಲು ಗುಂಡಿಯಲ್ಲಿ ವಾಲುವ ಕಂಬದಂತೆ ಜರಿದು ಬೀಳುತ್ತಿದ್ದ ಅವನ ಧೈರ್ಯಕ್ಕೆ ಏನೇನೋ ಹೇಳಿ ನೆಟ್ಟಗೆ ನಿಲ್ಲಿಸುವ ಪ್ರಯತ್ನ ಮಾಡುತ್ತ ತನ್ನ ಜಾಗಕ್ಕೆ ಬಂದು ಕೂತ.

Kannada Short Story series Oneindia Kannada

ಎಲ್ಲರ ಚುಚ್ಚುವ ದೃಷ್ಟಿಯಿಂದ ಬಚಾವ್ ಮಾಡಿ ಕ್ಯಾಬಿನ್ ಅವನಿಗೆ ತಾತ್ಕಾಲಿಕ ನೆಮ್ಮದಿ ನೀಡಿತ್ತು. ಕ್ಷಣ ನೆಮ್ಮದಿ ಸಿಕ್ಕಿದ್ದೆ ತಡ, ವಿಚಾರ ಮತ್ತೆ ಮುತ್ತಿಕೊಂಡಿತು.

ನಾಗೇಶ ಬಹಳ ಇಷ್ಟಪಟ್ಟು ಸೇರಿಕೊಂಡಿದ್ದ ಕಂಪನಿ ಅದು. ತನ್ನ ಅದೃಷ್ಟ ಕಂಡು ತಾನೇ ಬೀಗಿದ್ದ. ಒಂದಾರು ತಿಂಗಳು ಗಮನಕ್ಕೆ ಬಾರದಂತೆ ಕಳೆದು ಹೋಗಿತ್ತು. ಅದೇ ಆಫೀಸು, ಅದೇ ಕ್ಯಾಬಿನ್ನು, ಅದೇ ಮಾನಿಟರ್, ಅದೇ ಕೀ ಬೋರ್ಡು.. ಯಾವ ಕೋನದಿಂದ ನೋಡಿದರೂ ತನಗಿಂತ ತುಸು ದೊಡ್ಡವರೇ ಎಂದೆನಿಸುವ ಫೀಮೇಲ್ ಕಲೀಗ್‍ಗಳು.. ಹೊಸದನ್ನು ಬಯಸುವ ನಾಗೇಶನಿಗೆ ಬೋರ್ ಹೊಡೆಸತೊಡಗಿದ್ದವು.

‌ಅಮಾವಾಸ್ಯೆ ರಜೆ ಸಿಕ್ಕಿ, ಹೊತ್ತು ಹೋಗದೆ ಬ್ರಹ್ಮ ಕಿರುಬೆರಳಲಿ ಕೆತ್ತಿದ್ದೇ ಮಾತಂಗಿ‌ಅಮಾವಾಸ್ಯೆ ರಜೆ ಸಿಕ್ಕಿ, ಹೊತ್ತು ಹೋಗದೆ ಬ್ರಹ್ಮ ಕಿರುಬೆರಳಲಿ ಕೆತ್ತಿದ್ದೇ ಮಾತಂಗಿ

ಇಂತಿಪ್ಪ ನಾಗೇಶನ ಆಫೀಸಿಗೆ ಸ್ನೇಹ ಎರಡು ತಿಂಗಳ ಹಿಂದೆ ಸೇರಿಕೊಂಡಿದ್ದಳು. ಅವಳು ಬಂದ ಮೊದಲ ದಿನ, ಹೀರೋಯಿನ್ ಸಿನಿಮಾದಲ್ಲಿ ಸ್ಲೋಮೋಷನ್ನಲ್ಲಿ ಎಂಟ್ರಿಕೊಟ್ಟ ಹಾಗೆ ನಾಗೇಶನಿಗೆ ಅನಿಸಿತ್ತು. ಇಷ್ಟು ದಿನ ಬ್ಲ್ಯಾಕ್ ಅಂಡ್ ವೈಟಲ್ಲಿ ಕಾಣಿಸುತ್ತಿದ್ದ ಆಫೀಸು ನಾಗೇಶನಿಗೀಗ ಕಲರ್ ಕಲರ್!

ತಾನು ಕೇಳಿದ್ದು, ನೋಡಿದ್ದು, ಪಡೆದಿದ್ದು(ಸ್ನೇಹಿತರ ಸಲಹೆ) ಎಲ್ಲ ಸೇರಿಸಿ ಒಂದೊಂದೇ ಫಾರ್ಮುಲಾ ತಯಾರು ಮಾಡಿ ಅವಳ ಮೇಲೆ ಪ್ರಯೋಗಿಸತೊಡಗಿದ. ಎಲ್ಲ ಒನ್‍ವೇ ಲವ್‍ಸ್ಟೋರಿಯಲ್ಲಿ ಇರುವಂತೆ ರಿಸಲ್ಟ್ ಕೆಲವು ಆಶಾದಾಯಕ, ಅನೇಕ ನಿರಾಶಾದಾಯಕ. "ಆ ಸ್ನೇಹನ್ನ ಒಂದಿನ ಪಟಾಯಿಸ್ತೀನಿ ಕಣ್ರೋ" ಅಂತ ಸ್ನೇಹಿತರ ಮುಂದೆ ಪಟ್ಟಂಗ ಹೊಡಿತ್ತಿದ್ದ ನಾಗೇಶ "ಪ್ರೀತಿಲಿ ಬಿದ್ಬಿಟಿದಿನಿ ಕಣ್ರೋ'' ಅಂತ ಗೋಳಿಡುವ ತನಕ ತಲುಪಿದ್ದ.

ಏನೇ ಆದರೂ ನಾಗೇಶನಿಗೆ ಅದೃಷ್ಟ ತನ್ನ ಕಡೆಗೇ ಇದೆ ಎನ್ನುವಂತೆ ಭಾಸವಾಗುತ್ತಿತ್ತು. ಹುಡುಗಿ ಕನ್ನಡದವಳೇ.. ಅವಳ ಮೂಲ ತನ್ನ ಊರು ತನ್ನ ಊರಿನ ಹತ್ತಿರವೇ. ಆದ್ರೆ ಅವಳ ಅಪ್ಪ-ಅಮ್ಮ ಅನೇಕ ವರ್ಷಗಳ ಹಿಂದೆಯೇ ಬೇರೆ ರಾಜ್ಯಕ್ಕೆ ವಲಸೆಹೋಗಿದ್ದರಿಂದ ಅವಳ ಪರಿಚಯವಿರುವ ಪ್ರಸಂಗ ಇರಲಿಲ್ಲ ಅಷ್ಟೆ.

ದಿನದಿಂದ ದಿನಕ್ಕೆ ಸ್ನೇಹ ನಾಗೇಶನಿಗೆ ಹತ್ತಿರವಾಗುತ್ತಿದ್ದಳು (ಅಥವ ಹಾಗೆ ನಾಗೇಶನಿಗೆ ಅನಿಸುತ್ತಿತ್ತು). ಕಾಫಿಗೆ ಅವನ ಜೊತೆಯೇ ಹೋಗುತ್ತಿದ್ದಳು. ಯಾವಾಗಲಾದರೂ ಮನೆಯಿಂದ ಊಟ ತಂದಿದ್ದರೆ ಅವನಿಗೂ ಪಾಲು ಕೊಡುತ್ತಿದ್ದಳು. ಇದೆಲ್ಲ ಅವಳಿಗೆ ತನ್ನ ಮೇಲೆ ಇರುವ ಇಷ್ಟದ ಸಂಕೇತವೇ ಅಲ್ಲವೆ? ಇಷ್ಟವಾದ ಮೇಲೆ ಪ್ರಪೋಸ್ ಮಾಡಲು ತಡ ಯಾಕೆ?

ಪ್ರಪೋಸ್ ಮಾಡುವುದೇನೋ ಸರಿ.. ಆದರೆ ಮಾಡುವ ಬಗೆ? ಫೋನ್, ಮೆಸೇಜ್, ಡೈರೆಕ್ಟಾಗಿ ಹೂವು ಕೊಟ್ಟು..ಊಹುಂ ಯಾವುದೂ ಸರಿಬರಲಿಲ್ಲ ನಾಗೇಶನಿಗೆ. ಭಾವಗೀತೆಯ ಸಾಲುಗಳನ್ನೆಲ್ಲ ಸೇರಿಸಿ ಚೆಂದನೆಯ ಒಂದು ಮೈಲ್ ಮಾಡುವುದೇ ಸರಿ ಎನ್ನಿಸಿತು ಅವನಿಗೆ. 'ಪ್ರೇಮ ನಿವೇದನೆ' ಎನ್ನುವ ರೋಮ್ಯಾಂಟಿಕ್ ಐಡಿ ಅವಳಿಗೋಸ್ಕರವೇ ಕ್ರಿಯೇಟ್ ಮಾಡಿ, ಟೈಪ್ ಮಾಡಿದ್ದಕ್ಕಿಂತ ಜಾಸ್ತಿ ಬ್ಯಾಕ್‍ಸ್ಪೇಸ್, ಡಿಲೀಟ್ ಒತ್ತಿ ಅಂತೂ ಇಂತೂ ಕನ್ನಡದಲ್ಲಿ ಒಂದು ಪ್ರೇಮಪತ್ರ ಬರೆದು ಹಿಂದಿನ ದಿನ ಸಂಜೆಯಷ್ಟೇ ಅವಳಿಗೆ ಮೈಲ್ ಕಳಿಸಿದ್ದ.

ಬೆಂಕಿಯನ್ನು ಉಸಿರಾಡುವ ಕಲೆಗಿಂತ ಆರಿಸುವ ಕಲೆ ಮುಖ್ಯಬೆಂಕಿಯನ್ನು ಉಸಿರಾಡುವ ಕಲೆಗಿಂತ ಆರಿಸುವ ಕಲೆ ಮುಖ್ಯ

ಗಡಿಯಾರದ ಕಡೆ ನೋಡಿದ. ಫ್ಲ್ಯಾಷ್‍ಬ್ಯಾಕ್ ವಿಚಾರ ಮಾಡುತ್ತ ಆಗಲೇ ಎರಡೂವರೆ ತಾಸು ಕಳೆದುಬಿಟ್ಟಿದ್ದ. ಇನ್ನೇನು ಹತ್ತು ನಿಮಿಷದಲ್ಲಿ ಸ್ನೇಹ ಕಾಫಿಗೆ ಕರೆಯುವ ಹೊತ್ತು. ಮತ್ತೆ ಹೃದಯ ಹೊಡೆದುಕೊಳ್ಳತೊಡಗಿತ್ತು. ಅವಳ ರಿಯಾಕ್ಷನ್ ಹೇಗಿರಬಹುದು ಎಂದು ಊಹಿಸಿಕೊಳ್ಳಲಾಗದೇ ಚಡಪಡಿಸುತ್ತಿದ್ದ. ಆ ಹತ್ತು ನಿಮಿಷವೂ ಉರುಳಿಹೋಯ್ತು. ಚೇರ್ ಹಿಂದೆ ನೂಕಿ ಸ್ನೇಹ ಏಳುತ್ತಿದ್ದಾಳೆ.. ಈ ಕಡೆನೇ ಬರ್ತಾ ಇದಾಳೆ. ಬೆನ್ನ ಹಿಂದೆ ಹೆಜ್ಜೆಯ ಸಪ್ಪಳವೋ, ತನ್ನ ಎದೆ ಹೊಡೆದುಕೊಳ್ಳುತ್ತಿರುವ ಸಪ್ಪಳವೋ..ಅರ್ಥವಾಗಲಿಲ್ಲ ಅವನಿಗೆ.

"ಹೇ, ನಾಗೇಶ್ ಕಾಫಿ?"ಮಾಮೂಲಾಗೇ ಕೇಳಿದ್ದಳು ಸ್ನೇಹ.

ಏನೂ ಅರ್ಥವಾಗಲಿಲ್ಲ ಅವನಿಗೆ. 'ಓ, ಯಾರಾದರೂ ಏನಾದರೂ ಅಂದುಕೊಂಡುಬಿಟ್ಟರೆ ಅಂತ ಮುಖದಲ್ಲಿ ಏನೂ ರಿಯಾಕ್ಷನ್ ತೋರಿಸುತ್ತಿಲ್ಲ. ಕಾಫಿಗೆಂದು ಹೊರ ಹೋದಮೇಲೆ ಏನಾದರೂ ಹೇಳಬಹುದು' ಎಂದು ಮನಸಿನಲ್ಲಿ ಅಂದುಕೊಂಡು ಪೆದ್ದು ಪೆದ್ದಾಗಿ ನಕ್ಕು "ಹೂಂ, ನಡಿ" ಅಂದ.

ಅಲ್ಲೂ ದಿನದ ಹಾಗೆ ಹರಟುತ್ತ ಇದ್ದಳು. 'ಬಹುಶಃ ಪ್ರೀತಿ ಪ್ರೇಮ ಎಲ್ಲ ಇಷ್ಟವಿಲ್ಲ ಆದರೆ ಸ್ನೇಹ ಮುರಿಯುವ ಮನಸಿಲ್ಲ ಅದಕ್ಕೆ ಹೀಗೆ ಮಾಡುತ್ತಿರಬಹುದು' ಅಂತ ಅಂದುಕೊಂಡು ಸಮಯಕ್ಕಾಗಿ ಕಾದ. ಸ್ನೇಹ ಅದು ಇದು ಅಂತ ಮಾತನಾಡುತ್ತಲೇ ಇದ್ದಳು. ಮಧ್ಯ "ಹೇ, ನಾಗೇಶ್ ಮುಂದಿನ ತಿಂಗಳು ನನ್ನ ಮದುವೆ. ಅರೇಂಜ್ಡ್ ಮ್ಯಾರೆಜ್. ಇನ್ನೂ ಅಫೀಷಿಯಲ್ ಅನೌನ್ಸ್‍ಮೆಂಟ್ ಆಗಿಲ್ಲ"ಅಂತ ನಕ್ಕಳು.

ಅಲ್ಲಿ ಯಾವುದೇ ಬ್ಯಾಂಗ್ ಸೌಂಡ್ ಆಗಲಿಲ್ಲ. ಟೇಬಲ್‍ಗಳೂ ಅಲುಗಾಡಲಿಲ್ಲ. ಎಲ್ಲ ಮಾಮೂಲಿ.. ಆದರೆ

ನಾಗೇಶನ ಮನಸಲ್ಲಿ ಬಾಂಬ್ ಬಿದ್ದಂತಾಗಿತ್ತು. ಎಲ್ಲ ಬದಿಗೊತ್ತಿ ಮಾಮೂಲಾಗುವ ಪ್ರಯತ್ನ ಮಾಡುತ್ತ"ಏನು ಮಾಡುತ್ತಿದ್ದಾರೆ ವುಡ್‍ಬಿ" ಕೇಳಿದ.

ತಾನು ಮಾತನಾಡುತ್ತಿದ್ದೆನೋ ತೊದಲುತ್ತಿದ್ದೆನೋ ಎನ್ನುವ ಅನುಮಾನ ಮೊದಲು ಬಂತು. ಅವಳು ಒಂದು ಶಬ್ದ ಉತ್ತರ ಹೇಳುವಷ್ಟರಲ್ಲಿ ತಲೆಯಲ್ಲಿ ಸಾವಿರ ಅನುಮಾನ ಹಾಯ್ದುಹೋಯ್ತು. 'ಅವಳು ನನ್ನ ಮೇಲ್ ಓದಿಯೇ ಇಲ್ಲವೆ? ಓದಿದರೂ ಈಗ ಪ್ರಯೋಜನ ಇಲ್ಲ ಎಂದು ಏನೂ ರಿಯಾಕ್ಟ್ ಮಾಡುತ್ತಿಲ್ಲವೆ.. ಅದಕ್ಕೆ ಅವಳೇ ಉತ್ತರ ಹೇಳಬೇಕು' ಎಂದು ಡಿಸೈಡ್ ಮಾಡಿ ಕೊನೇ ಪ್ರಯತ್ನ ಎನ್ನುವಂತೆ "ನಿನ್ನೆ ಒಂದುಮೈಲ್ ಕಳಿಸಿದ್ದೆ..'' ಮುಂದೇ ಅವಳೇ ಅರ್ಥ ಮಾಡಿಕೊಳ್ಳಲಿ ಅಂತ ಅರ್ಧೋಕ್ತಿಗೇ ನಿಲ್ಲಿದ. ಅವಳು ಮೇಲ್ಮುಖ ಮಾಡಿ ತಾನು ನಿನ್ನೆ ಚೆಕ್ ಮಾಡಿದ ಮೈಲ್‍ಗಳನ್ನೆಲ್ಲ ನೆನಪಿಸಿಕೊಳ್ಳತೊಡಗಿದಳು.

"ನಾಲ್ಕು ಫೇಸ್ ಬುಕ್ ಫ್ರೆಂಡ್ ರಿಕ್ವೆಸ್ಟ್, ಒಂದೆರಡು ಮಾಮೂಲು ಫಾರ್ವರ್ಡ್ ಮೈಲ್..ಇನ್ನೊಂದು ಏನೋ ಕನ್ನಡದ್ದು...'' ಅಂತ ಕೊನೆಯಲ್ಲಿ ಗೊಣಗಿದಳು.

ನಾಗೇಶನಿಗೆ ಅವಳು ಕನ್ನಡದ್ದು ಅಂದಾಕ್ಷಣ ಒಂದು ಆಸೆಯ ಮಿಂಚು! "ಹೂಂ..ಹುಂ..ಅದೆ. ಓದಿದೆಯಾ?'' ಅಂತ ಕೇಳಿದ.

"ಅಯ್ಯೋ.. ಅದು ನೀನು ಕಳಿಸಿದ್ದ?! ನಂಗೆ ಕನ್ನಡ ಮಾತಾಡೋಕೆ ಬರತ್ತೆ. ಆದ್ರೆ ಕನ್ನಡ ಬಸ್ ಬೋರ್ಡು ಓದುವಷ್ಟೂ ಬರಲ್ಲ..ಡಿಲೀಟ್ ಮಾಡಿದೆ'' ಸಣ್ಣ ಮುಖ ಮಾಡಿ ಹೇಳಿದಳು.

ಅವನ ಆಸೆಯ ಮಿಂಚು ಮಿಂಚಾಗಿಯೇ ಉಳಿಯಿತು. ಬಂದಷ್ಟೇ ಬೇಗ ಮರೆಯಾಯಿತು..

(ಓದುಗರು ತಾವು ಮುಂದುವರಿಸಿದ ಕಥೆಯನ್ನು [email protected] ಇಮೇಲ್ ಗೆ ಕಳುಹಿಸಬಹುದು)

English summary
Kannada Short Story series initiative by Oneindia Kannada. This series is open to all the reader to contribute and continue to chain of story development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X