• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಣ್ಮಣಿ : ಅವಳಿ-ಜವಳಿಗಳ ಹೃದಯಂಗಮ ಕಥೆ

By ರೇಖಾ ರಾಣಿ, ಲೇಖಕಿ, ನಿರ್ಮಾಪಕಿ
|

ಅಪ್ಪಅಮ್ಮನನ್ನು ಕಳೆದುಕೊಂಡರೂ ಅವಿಭಕ್ತ ಕುಟುಂಬವೊಂದರ ಕಣ್ಮಣಿಗಳಾಗಿ ಬೆಳೆದು, ವಿಭಿನ್ನ ವ್ಯಕ್ತಿತ್ವವನ್ನು ಬೆಳೆಸಿಕೊಂಡು, ಪರಿಸ್ಥಿತಿಯ ಕೈಗೊಂಬೆಗಳಾಗಿ ಜೀವನದಲ್ಲಿ ಏಳುಬೀಳುಗಳನ್ನು ಕಂಡರೂ ದಿಟ್ಟವಾಗಿ ಎದುರಿಸಿ ನಿಲ್ಲುವ ಅವಳಿ-ಜವಳಿ ಹೆಣ್ಣುಮಕ್ಕಳಿಬ್ಬರ ಹೃದಯಂಗಮ ಕಥೆಯನ್ನು ಲೇಖಕಿ, ನಿರ್ಮಾಪಕಿ ರೇಖಾ ರಾಣಿ ಹೆಣೆದಿದ್ದಾರೆ. ಕಥೆ ಓಡೋಡುತ್ತಲೇ ವಿಶಿಷ್ಟ ತಿರುಗಳನ್ನು ಪಡೆದು ಕುತೂಹಲವನ್ನು ಹುಟ್ಟುಹಾಕುತ್ತದೆ, ಓದುಗನನ್ನು ಚಿಂತನೆಗೆ ಮತ್ತು ಅಲ್ಲಲ್ಲಿ ಗೊಂದಲಕ್ಕೂ ದೂಡುತ್ತದೆ.

ಈಗ ಇದೇ ಕಥೆ ವಿವಾದದ ಕೇಂದ್ರಬಿಂದುವಾಗಿದೆ. ಇದೇ ಕಥೆಯನ್ನು ಬಳಸಿಕೊಂಡು, ತಮಗೆ ಕ್ರೆಡಿಟ್ಟನ್ನೂ ಕೊಡದೆ ಈಟಿವಿ ಕನ್ನಡ ವಾಹಿನಿಯಲ್ಲಿ ಧಾರಾವಾಹಿ ತಯಾರಿಸಿದ್ದಾರೆ ಎಂಬುದು ರೇಖಾರಾಣಿ ಅವರ ಗಂಭೀರ ಆರೋಪ. ಡಿಸೆಂಬರ್ 2ರಿಂದ 'ಅಕ್ಕ' ಎಂಬ ಹೆಸರಿನಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ಧಾರಾವಾಹಿಯ ನಿರ್ಮಾಪಕರು ರೇಖಾರಾಣಿಯವರ ಕಥೆಯನ್ನೇ ಬಳಸಿದ್ದಾರಾ? ಲೇಖಕಿಗೆ ಸಲ್ಲಬೇಕಾದ ಗೌರವ ಸಲ್ಲಿಸದೆ ಅನ್ಯಾಯ ಮಾಡಲಾಗಿದೆಯಾ? ಎಂಬುದನ್ನು ಓದುಗರು ಈ ಕಥೆಯನ್ನು ಓದಿ, ಧಾರಾವಾಹಿಯನ್ನು ನೋಡಿ ತೀರ್ಮಾನಿಸಬಹುದು - ಸಂಪಾದಕ. [ಅವರ ಧೈರ್ಯಕ್ಕೆ ಯಮನೂ ಹೆದರಿದ್ದ]

***

ಅತ್ಯಂತ ಶ್ರೀಮಂತ ಮನೆಯೊಡತಿ ಅಬ್ಬಕ್ಕ. ಅವಳಿಗೆ ಮೂವರು ಗಂಡು ಮಕ್ಕಳು. ಮೂವರಿಗೂ ಮದುವೆಯಾಗಿದೆ. ಮೊದಲನೆಯ ಮತ್ತು ಎರಡನೆಯ ಮಗಂದಿರಿಗೆ ಮಕ್ಕಳಾಗಲಿಲ್ಲ. ಆದರೆ ಮೂರನೆಯ ಮಗನಿಗೆ 2 ಅವಳಿ-ಜವಳಿ ಮಕ್ಕಳು ಹುಟ್ಟಿದವು. ಪಾರಿಜಾತಾ ಮತ್ತು ಅಪರಾಜಿತಾ!

ಮಕ್ಕಳಿಗೆ 3 ತಿಂಗಳಿರುವಾಗ ಈ ಮಕ್ಕಳ ತಂದೆ-ತಾಯಿ ಅಂದರೆ ಅಬ್ಬಕ್ಕನ ಮೂರನೆಯ ಮಗ ಮತ್ತು ಸೊಸೆ ಪೂಜೆ ಮಾಡಲು ಹೋದಾಗ ತುಂಗಾ ನದಿಯಲ್ಲಿ ಕೊಚ್ಚಿ ಹೋದರು. ಅಬ್ಬಕ್ಕ ತನ್ನ ಎರಡೂ ಗಂಡು ಮಕ್ಕಳಿಗೆ ಒಂದೊಂದು ಮಗುವನ್ನು ಸಾಕಲು ನೀಡುತ್ತಾಳೆ. ಒಂದೇ ಮನೆಯಲ್ಲಿದ್ದರೂ ಅವಳಿ ಜವಳಿ ಹೆಣ್ಣು ಮಕ್ಕಳಾದ ಅಪರಾಜಿತಾ-ಪಾರಿಜಾತಾ ಬೇರೆ ತಾಯಿ ತಂದೆಯರ ಬಳಿ ಬೆಳೆಯುತ್ತಾರೆ.

ಅಬ್ಬಕ್ಕ ಮೊದಲನೆಯ ಮಗ ತಾನಾಯಿತು ತನ್ನ ವ್ಯವಸಾಯವಾಯಿತು ಎನ್ನುವ ಶಾಂತ ಸ್ವಭಾವದವನು. ಅಬ್ಬಕ್ಕಳ ಎರಡನೆಯ ಮಗ ತಲೆಹರಟೆ. ನಾಟಕ ಪ್ರಿಯ. ತಂಡಗಳನ್ನು ಕಟ್ಟಿಕೊಂಡು ತಿಂಗಳಾನುಗಟ್ಟಲೆ ಮನೆಗೆ ಬರದೆ ನಾಟಕವಾಡಿಸುತ್ತಾ ಊರೂರು ಅಲೆಯುತ್ತಿದ್ದಾನೆ. ಮನೆಯ ಕಡೆ ಏನೂ ಜವಾಬ್ದಾರಿಯಿಲ್ಲ. ಎರಡನೆಯ ಮಗನ ಬೇಜವಾಬ್ದಾರಿ ನಡವಳಿಕೆಯಿಂದ ಅಣ್ಣ-ತಮ್ಮಂದಿರು ಹಾಗೂ ಅವರ ಹೆಂಡತಿಯರಿಗೆ ಮನೆಯಲ್ಲಿ ಸದಾ ಜಗಳ.

ನಂತರ ಎರಡನೆಯ ಮಗನ ಹೆಂಡತಿ ತುಂಬು ಗರ್ಭಿಣಿಯಾಗಿರುವಾಗ ಮಗ ಜಗಳವಾಡಿ ಮನೆಬಿಟ್ಟವನು ಇಂದಿಗೂ ಮರಳಿ ಬಂದಿಲ್ಲ. ಇದಾಗಿ 16 ವರ್ಷಗಳು ಕಳೆದಿವೆ. ಮೊದಲೇಯವನ ಮಗ-ಹೆಂಡತಿ ತಮ್ಮ ಮಗಳು ನೀಲಳನ್ನು ಅತ್ಯಂತ ಜೋಪಾನವಾಗಿ, ಕಣ್ಣಲ್ಲಿ ಕಣ್ಣಿಟ್ಟು ಮನೆಯೊಳಗೆ ಇಟ್ಟುಕೊಂಡು ಸಾಕಿದ್ದಾರೆ. ಎಸ್.ಎಸ್.ಎಲ್.ಸಿ ನಂತರ ಶಾಲೆಗೆ ಕಳುಹಿಸುವುದು ಅಪ್ಪ-ಅಮ್ಮನಿಗೆ ಇಷ್ಟವಿಲ್ಲ.

ಪಾರಿಜಾತಾ ಅಪ್ಪ-ಅಮ್ಮನ ಸುರಕ್ಷತೆಯಲ್ಲೇ ಬೆಳೆದವಳಾದ್ದರಿಂದ ಹಳ್ಳಿಯ ವಾತಾವರಣವನ್ನು ಮೈಗೂಡಿಸಿಕೊಂಡು ಅಡುಗೆ, ಹಾಡು, ಹಸೆ ಇಷ್ಟೆ ಜೀವನ ಎಂದುಕೊಂಡಿದ್ದಾಳೆ. ಪಾರಿಜಾತಾ ಸೌಮ್ಯ ಹುಡುಗಿ.

ಅಪರಾಜಿತಾಗೆ ತಾಯಿ ಅತೀ ಸ್ವಾತಂತ್ರ ನೀಡಿ, ಚೆನ್ನಾಗಿ ಓದಿಸುತ್ತಿದ್ದಾಳೆ. ಅಪರಾಜಿತಾ ಟೆನ್ನಿಸ್ ಅಥವಾ ಯಾವುದಾದರೊಂದು ಕ್ರೀಡೆಯಲ್ಲಿ ಮುಂದಿದ್ದಾಳೆ. ಅವಳ ಜೋರುತನಕ್ಕೆ ಸುತ್ತ-ಮುತ್ತ ಹಳ್ಳಿಯಲ್ಲಿ ಯಾರೂ ಎದುರು ಹೇಳದೆ ಆಕೆ ಹೇಳಿದ್ದಕ್ಕೆಲ್ಲ ಸೈ ಎನ್ನುತ್ತಾರೆ. ಅಪರಾಜಿತಾಗೆ ಸ್ವಂತ ತಂಗಿಯೊಬ್ಬಳಿದ್ದಾಳೆ ಕುಂತಿ. ಅಪರಾಜಿತಾ-ಪಾರಿಜಾತಾ-ಕುಂತಿ ಮೂವರೂ ಅಕ್ಕತಂಗಿಯರು ಎನ್ನುವುದರಿಂದ ಜೀವದ ಗೆಳೆತಿಯರಂತೆ ಇದ್ದಾರೆ.

ಪಾರಿಜಾತಾ ತಾಯಿಯ ತಮ್ಮ ಕಿರೀಟಿ, ಊರಲ್ಲಿ ಕಿತಾಪತಿ ಮಾಡುವ, ತಂದಿಟ್ಟು ತಮಾಷೆ ನೋಡುವ ಕುಂಟ ಯುವಕ. ಇಡೀ ಕಥೆಯುದ್ದಕ್ಕೂ ಕಿರೀಟಿ ಬಹಳ ಮುಖ್ಯ ಪಾತ್ರಧಾರಿ.

ಹಳ್ಳಿಯಲ್ಲಿ ಅಪರಾಜಿತಾ ಪಾರಿಜಾತಾ ನಾಟಕ ಕಲಿಯಲು ಹೋದಾಗ ಅಲ್ಲಿಯ ನಾಟಕದ ಮೇಷ್ಟ್ರು ಗಾಂಗೇಯನ ಪರಿಚಯ. ಗಾಂಗೇಯ ಇದ್ದ ಕಡೆ ನಗು ಮತ್ತು ಹಾಸ್ಯದ ಹೊಳೆ ಹರಿಯುತ್ತದೆ. ಊರವರಿಗೆ ಮತ್ತು ಪಾರಿಜಾತಾ -ಅಪರಾಜಿತಾಗೆ ಗಾಂಗೇಯ ಅಚ್ಚು ಮೆಚ್ಚು.

ಅಪರಾಜಿತಾ ಎಂದಿನಂತೆ ಟೆನ್ನಿಸ್ ಆಡಲು ಬೆಂಗಳೂರಿಗೆ ಬಂದಿದ್ದಾಳೆ. ಹಾಗೆಯೇ 16 ವರ್ಷಗಳ ಹಿಂದೆ ಓಡಿಹೋದ ತನ್ನ ಅಪ್ಪ ಈಗ ಯಾವ ರೀತಿ ಕಾಣಿಸಬಹುದೆಂದು ತಿಳಿಯಲು ವಿಶ್ವನಾಥರ ಗ್ರಾಫಿಕ್ಸ್ ಆಫೀಸಿಗೆ ಅಪ್ಪನ ಫೋಟೋ ತೆಗೆದುಕೊಳ್ಳಲು ಬಂದಿದ್ದಾಳೆ.

ವಿಶ್ವನಾಥನ ಮಗ ಹಿಮಾಂಶು ವಿದೇಶದಿಂದ ಹತ್ತು ದಿನಗಳ ರಜೆ ಪಡೆದು, ವಿದೇಶದಲ್ಲಿ ತನ್ನ ಜೊತೆಗೆ ವಾಸಿಸಲು ವಿದ್ಯಾವಂತ, ದಿಟ್ಟ ಹುಡುಗಿಯ ಶೋಧದಲ್ಲಿದ್ದಾನೆ. ಬೆಂಗಳೂರಿನ ರಸ್ತೆ ರಸ್ತೆಗಳಲ್ಲಿ ಅಪರಾಜಿತಾ ಸಿಕ್ಕಿದ್ದನ್ನು ತಿನ್ನುತ್ತಾ, ಚೇಷ್ಟೆ ಮಾಡುತ್ತಾ ಓಡಾಡುತ್ತಿರುವುದು ಹಿಮಾಂಶುವನ್ನು ಆಕರ್ಷಿಸಿ, ಮದುವೆಯಾದರೆ ಈ ಹುಡುಗಿಯನ್ನೇ ಎಂದು ನಿರ್ಧರಿಸುತ್ತಾನೆ. ಹಿಮಾಂಶು ತಂದೆ ವಿಶ್ವನಾಥ ಹಾಗೂ ಸ್ನೇಹಿತನ ಬಳಿ ಆ ಆಕರ್ಷಿತ ಹುಡುಗಿಯ ಬಗ್ಗೆ ಹೇಳಿ, ಆಕೆಯ ಮನೆಯಲ್ಲಿ ಮದುವೆ ಬಗ್ಗೆ ಪ್ರಸ್ತಾಪಿಸಲು ಹೇಳುತ್ತಾನೆ.

ಅಪರಾಜಿತಾಳ ಪೂರ್ವಾಪರ ತಿಳಿಯಲು ಹಿಮಾಂಶುವಿನ ಗೆಳೆಯ ಹಳ್ಳಿಗೆ ಬಂದು ಅಪರಾಜಿತಾ ಮನೆ ಪತ್ತೆ ಹಚ್ಚುತ್ತಾನೆ ಮತ್ತು ಮನೆಯಿಂದ ಹೊರಬಂದ ಪಾರಿಜಾತಾಳನ್ನು ಅಪರಾಜಿತಾ ಎಂದು ಭಾವಿಸಿ, ಅವಳನ್ನು ಹಿಂಬಾಲಿಸಿ, ಈ ಹುಡುಗಿ ಒಳ್ಳೆಯ ಹಾಡುಗಾರ್ತಿ ದೇವಸ್ಥಾನದಲ್ಲಿ ಭಜನೆ ಹಾಡುತ್ತಾಳೆ, ರಂಗವಲ್ಲಿ ಪ್ರಿಯೆ ಇತ್ಯಾದಿ ಇನ್ನಿತರ ಅಂಶಗಳನ್ನು ವರದಿ ಒಪ್ಪಿಸುತ್ತಾನೆ.

ಅಪರಾಜಿತಾ ಈಗ ಟೆನ್ನಿಸ್ ಸ್ಪರ್ಧೆಗಾಗಿ ಮುಂಬೈಗೆ ಹೊರಡಬೇಕಾಗುತ್ತದೆ.

ಅವಳಿ-ಜವಳಿಗಳ ಬಗ್ಗೆ ಏನೂ ತಿಳಿಯಾದ ಹಿಮಾಂಶು ಹೆಣ್ಣು ನೋಡಲು ಪಾರಿಜಾತಾ ಮನೆಗೆ ಬಂದ ಪಾರಿಜಾತಾಳನ್ನು ಒಪ್ಪಿ ಮೂರು ದಿನಗಳಲ್ಲಿ ದೇವಸ್ಥಾನದಲ್ಲಿ ಮದುವೆ ಸರಳವಾಗಿ ಆಗಿಹೋಗುತ್ತದೆ.

ಹಿಮಾಂಶು ತನ್ನ ಮನ ಮೆಚ್ಚಿದ ಮಡದಿಯೊಡನೆ ಮನೆ ಪ್ರವೇಶಿಸುವಾಗ ಅಪರಾಜಿತಾ ತನ್ನನ್ನು ಮದುವೆಗೆ ಕರೆಯದೆ ಇದ್ದುದ್ದಕ್ಕೆ ಗಲಾಟೆ ಮಾಡುತ್ತ ಒಳಬರುತ್ತಾಳೆ. ಆಗ ಹಿಮಾಂಶುವಿಗೆ ತಾನು ಮೆಚ್ಚದವಳೊಡನೆ ಮದುವೆಯಾಗದೆ ಅವಳ ಅವಳಿ ಸಹೋದರಿಯನ್ನು ಮದುವೆಯಾದದ್ದು ತಿಳಿದು ನಿರಾಸೆಯಾಗುತ್ತದೆ. ಆದರೆ ಯಾರೂ ಏನೂ ಮಾಡಲಾಗದ ಪರಿಸ್ಥಿತಿ.

ಪಾರಿಜಾತಾಳ ಮದುವೆಯಾದ್ದರಿಂದ ಅಪರಾಜಿತಾಳ ಮದುವೆಯನ್ನು ತನ್ನ ಜೊತೆ ಮಾಡಿ ಎಂದು ಗಾಂಗೇಯ ಕೇಳುತ್ತಾನೆ. ಒಂದೇ ವರ್ಷದಲ್ಲಿ ಎರಡು ಮದುವೆ ಬೇಡ ಎಂದು ಅಬ್ಬಕ್ಕ ಮದುವೆಯನ್ನು ಮುಂದೂಡುತ್ತಾಳೆ.

ಆರ್ಥಿಕ ಸಂಕಷ್ಟದ ಕಾರಣದಿಂದ ಎರಡೇ ತಿಂಗಳಲ್ಲಿ ಹಿಮಾಂಶು ಬೆಂಗಳೂರಿಗೆ ಮರಳಿ ಬರುತ್ತಾನೆ.

ಚಿಕ್ಕವಳಾಗಿದ್ದಾಗಿಂದಲೂ ತನ್ನ ಸೌಮ್ಯ ಸ್ವಭಾವದಿಂದಾಗಿ ಸದಾ ಸೋಲುತ್ತಿದ್ದ ಪಾರಿಜಾತಾ ತನಗೆ ಅದ್ಭುತ ಗಂಡ, ಉತ್ತಮ ಜೀವನ ಸಿಕ್ಕ ಬಗ್ಗೆ ಹೆಮ್ಮೆ ಪಡುತ್ತಾಳೆ. ಆದರೆ... ಸ್ವಲ್ಪ ದಿನಗಳಲ್ಲಿಯೇ ಪಾರಿಜಾತಾಳಿಗೆ ಹಿಮಾಂಶು ಇಷ್ಟಪಟ್ಟಿದ್ದು ತನ್ನನ್ನಲ್ಲ ಅಪರಾಜಿತಾಳನ್ನು, ತಪ್ಪಿ ತನ್ನನ್ನು ಮದುವೆಯಾಗಿದ್ದಾನೆ ಎಂದಾಗ ತನ್ನ ಬಗ್ಗೆ ಕೀಳರಿಮೆ ಪ್ರಾರಂಭವಾಗಿ ತನ್ನ ಜೀವನದ ಪ್ರತಿ ಹಂತದಲ್ಲೂ ತನ್ನ ತಂಗಿಯೇ ತನಗೆ ಸ್ಪರ್ಧೆ ನೀಡುತ್ತಾಳಲ್ಲ ಎಂದು ರೋಧಿಸುತ್ತಾಳೆ.

ಇದ್ಯಾವುದರ ಅರಿವಿಲ್ಲದ ಅಪರಾಜಿತಾ ತನ್ನ ಪಾಡಿಗೆ ತಾನು ಎಂದಿನಂತೆ ಹಿಮಾಂಶು ಜೊತೆ ನಗುನಗುತ್ತಾ ಇರುತ್ತಾಳೆ. ಬೆಂಗಳೂರಿಗೆ ಬಂದಾಗ ಪಾರಿಜಾತಾ ಮನೆಯಲ್ಲೇ ಉಳಿದುಕೊಳ್ಳುತ್ತಾಳೆ. ಪಾರಿಜಾತಾ ಅಪರಾಜಿತಾ ಹಿಮಾಂಶು ಈ ಮೂವರೂ ಊರಿನಲ್ಲಿ ಒಟ್ಟಿಗಿದ್ದಾಗ ಒಂದು ದಿನ ಪರಿಸ್ಥಿತಿ ವಿಪರೀತಕ್ಕೆ ಹೋಗಿ, ಅಪರಾಜಿತಾ ಊರಿಗೆ ಮರಳಲು ನಿರ್ಧರಿಸಿದಾಗ ಪಾರಿಜಾತಾಳ ಕೊಲೆಯಾಗುತ್ತದೆ. ಬೆಟ್ಟದಿಂದ ಅವಳನ್ನು ಯಾರೋ ಕೆಳಗೆ ತಳ್ಳುತ್ತಾರೆ.

ಪಾರಿಜಾತಾಳ ಕೊಲೆಯಾದದ್ದು ನೋಡಿ ಅಪರಾಜಿತಾ ತನ್ನಿಂದ ಪಾರಿಜಾತಾಳ ಜೀವನ ದುರಂತವಾಯಿತಲ್ಲ ಎಂದು ಗೋಳಾಡಿ, ಮಾನಸಿಕ ಅಸ್ವಸ್ಥಳಾಗುತ್ತಾಳೆ. ಆಸ್ಪತ್ರೆ ಸೇರುತ್ತಾಳೆ. ಬಹಳಷ್ಟು ಜನರ ಮತ್ತು ಅಪರಾಜಿತಾ ಪ್ರಕಾರ ಹಿಮಾಂಶುವೇ ಕೊಲೆಗಾರ. ತನ್ನ ಅಕ್ಕನ ಕೊಲೆಯ ಸೇಡು ತೀರಿಸಿಕೊಳ್ಳುವವರೆಗೂ ತಾನು ಟೆನ್ನಿಸ್ ಆಡೊಲ್ಲ... ಮದುವೆಯಾಗೊಲ್ಲ ಎಂದು ಅಪರಾಜಿತಾ ಆಣೆ ಮಾಡುತ್ತಾಳೆ.

ಅಪರಾಜಿತಾ ಈಗ ತವರಿನಲ್ಲಿದ್ದಾಳೆ. ಹುಚ್ಚಿ ಎಂಬ ಪಟ್ಟದೊಂದಿಗೆ. ಪಾರಿಜಾತಾಳ ಹೆಣಕ್ಕಾಗಿ ಬೆಟ್ಟದ ಮೂಲೆಮೂಲೆಗಳಲ್ಲಿ ಪೋಲಿಸರು ಶೋಧಿಸುತ್ತಿದ್ದಾರೆ. ಹೆಣ ಸಿಕ್ಕಿಲ್ಲ. ಹಿಮಾಂಶುವನ್ನು ಪೋಲಿಸರು ವಿಚಾರಣೆಯ ನೆಪದಲ್ಲಿ ಬಹಳವಾಗಿ ಹಿಂಸಿಸುತ್ತಿದ್ದಾರೆ.

ಈ ಮಧ್ಯೆ ಕಿರೀಟಿ ಅದೇನು ಮೋಡಿ ಮಾಡಿದನೋ, ಅದುವರೆಗೂ ಅವನನ್ನು ಕಂಡರಾಗದ ಕುಂತಿ ಕಿರೀಟಿನನ್ನು ಪ್ರೀತಿಸತೊಡಗಿದ್ದಾಳೆ. ಮನೆಯಲ್ಲಿ ಇದು ಯಾರಿಗೂ ಇಷ್ಟವಿಲ್ಲ.

ಈ ಮಧ್ಯೆ ಬೆಟ್ಟದಿಂದ ಕೆಳಗೆ ಉರುಳಿದ್ದ ಪಾರಿಜಾತಾಳ ದೇಹ ಕಾಡು-ಮೇಡು ಅಲೆಯುತ್ತಿದ್ದ ಒಬ್ಬ ಮುದಿ ಡಾಕ್ಟರನ ಕೈಗೆ ಸಿಕ್ಕಿದೆ. ಆತ ಅರೆಹುಚ್ಚ. ಸತ್ತುಹೋದ ತನ್ನ ಮಗಳ ಕಾರಣದಿಂದಾಗಿ ಹುಚ್ಚನಾಗಿದ್ದಾನೆ. ಪಾರಿಜಾತಾಳನ್ನು ಮನೆಗೆ ಹೊತ್ತು ತಂದು ನನ್ನ ಮಗಳು ನನ್ನ ಮನೆಗೆ ವಾಪಸ್ ಬಂದಳು ಎಂದು ಸಂಭ್ರಮಿಸುತ್ತಿದ್ದಾನೆ. ಡಾಕ್ಟರನ ಮನೆಯವರಿಗೆ ಏನೂ ಹೇಳಲಾರದ ಪರಿಸ್ಥಿತಿ.

ಪಾರಿಜಾತಾಳ ಕಾರಣದಿಂದ ಅರೆ ಹುಚ್ಚ ಡಾಕ್ಟರ್‌ಗೆ ಆರೋಗ್ಯ ವೃದ್ಧಿಯಾಗುತ್ತದೆ. ಕೋಮಾದಲ್ಲಿರುವ ಪಾರಿಜಾತಾಳನ್ನು ಬದುಕಿಸಲು ಪಣ ತೊಟ್ಟಿದ್ದಾನೆ. ಚಚ್ಚಿ ಹೋದ ಅವಳ ಮುಖವನ್ನು ಸರಿಮಾಡಲು, ತನ್ನ ಸತ್ತ ಮಗಳ ಮುಖವನ್ನೆ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದಾನೆ.

ಅಪರಾಜಿತಾಳ ನಡತೆ ನೋಡಿ ಗಾಂಗೇಯನಿಗೆ ಏನೋ ಅನುಮಾನ. ಆಕೆ ಬೇಕೆಂದೇ ತಲೆಕೆಟ್ಟವಳಂತೆ ಆಡುತ್ತಿದ್ದಾಳೆ ಎಂದೇ ಅವನ ಭಾವನೆ. ನಿಧಾನವಾಗಿ ಅವಳನ್ನು ಗಮನಿಸುತ್ತಾ ಹೋದಂತೆ ಅವನಿಗೆ ತಿಳಿಯುತ್ತದೆ ಇವಳು ಅಪರಾಜಿತಾಯಲ್ಲ ಅಪರಾಜಿತಾಯ ಹೆಸರಿನಲ್ಲಿ ಬದುಕುತ್ತಿರುವ ಪಾರಿಜಾತಾ ಎಂದು! ಆದರೆ ಆ ವಿಷಯ ಯಾರಿಗೂ ಹೇಳದೆ ಮುಂದೇನಾಗುತ್ತದೋ ಎಂದು ಕಾದು ಕುಳಿತಿದ್ದಾನೆ.

ಇತ್ತ ಅರೆಹುಚ್ಚ ಡಾಕ್ಟರನ ಮನೆಯಲ್ಲಿ ನಿಜವಾದ ಅಪರಾಜಿತಾ ಕೋಮಾದಿಂದ ಏಳುತ್ತಾಳೆ. ನೋಡಿದರೆ ಆಕೆಯ ಮುಖ ಸಂಪೂರ್ಣವಾಗಿ ಬದಲಾಗಿದೆ ಮತ್ತು ಡಾಕ್ಟರ್ ಅಪರಾಜಿತಾಳನ್ನು ತನ್ನ ಮಗಳೆಂದು ಭಾವಿಸಿ ಅತ್ಯಂತ ಸಂತೋಷವಾಗಿದ್ದಾನೆ. ಡಾಕ್ಟರನ ಮನೆಯವರು ಆತನ ಹುಸಿ ಸಂತೋಷವನ್ನು ಹಾಳು ಮಾಡದಿರಲು ಅಪರಾಜಿತಾಗೆ ಮನವಿ ಮಾಡಿಕೊಳ್ಳುತ್ತಾರೆ.

ಯಾವಾಗ ತನ್ನ ಹಳ್ಳಿಯ ಮನೆಗೆ ಬಂದಿರುವುದು ಅಪರಾಜಿತಾ ಅಲ್ಲ, ಪಾರಿಜಾತಾ ಎಂದು ಗಾಂಗೇಯನಿಗೆ ತಿಳಿಯುತ್ತದೋ, ಗಾಂಗೇಯ ನಿಜವಾದ ಅಪರಾಜಿತಾಳಿಗಾಗಿ ಹುಡುಕಾಟ ಶುರು ಮಾಡಿದ್ದಾನೆ. ತನ್ನನ್ನು ಬೆಟ್ಟದಿಂದ ಯಾರು ತಳ್ಳಿಹರು? ಏಕೆ ತಳ್ಳಿದರು? ಎಂಬ ವಿಷಯ ಅಪರಾಜಿತಾ ತಲೆಯಲ್ಲಿ ಕೊರೆಯಲು ಪ್ರಾರಂಭವಾಗುತ್ತದೆ. ಇದನ್ನು ಕಂಡು ಹಿಡಿಯಲೇಬೇಕೆಂದು ನಿರ್ಧರಿಸುತ್ತಾಳೆ.

ಗಾಂಗೇಯ ಸುತ್ತ ಮುತ್ತಲ ಹಳ್ಳಿಗಳ ಪೋಲಿಸ್ ಠಾಣೆಗಳಲ್ಲಿ ಯಾವುದಾದರೂ ಹುಡುಗಿಯ ದೇಹ ಸಿಕ್ಕಿತಾ? ಎಂದು ಕೇಳಿಕೊಂಡು ತಿರುಗುತ್ತಿದ್ದಾನೆ. ಅಂತಹ ಸಂದರ್ಭದಲ್ಲಿ ಬೇರೆ ಮುಖ ಹೊತ್ತಿರುವ ಅಪರಾಜಿತಾ ಡಾಕ್ಟರನ ಮಗಳೆಂದು ಆತನಿಗೆ ಪರಿಚಯವಾಗುತ್ತಾಳೆ. ತಾನು ಅಪರಾಜಿತಾಳ ಆತ್ಮೀಯ ಗೆಳತಿ. ಬೆಂಗಳೂರಿನಲ್ಲಿ ಅವಳ ಕೆಲವು ವಸ್ತುಗಳಿವೆ ಅವುಗಳನ್ನು ತಾನು ಅಪರಾಜಿತಾಳ ಮನೆಗೆ ತಲುಪಿಸಬೇಕು ಎನ್ನುತ್ತಾಳೆ.

ವಿಶ್ವನಾಥನ ಕಂಪ್ಯೂಟರಿನಲ್ಲಿ ತಯಾರಾಗಿದ್ದ ತನ್ನ ತಂದೆಯ ಪೋಟೋ ಹಾಗೂ ತನ್ನ ಕೆಲವು ವಸ್ತುಗಳನ್ನು ತೆಗೆದುಕೊಂಡು ಅಪರಾಜಿತಾ ಬೇರೆ ಹೆಸರಿನಲ್ಲಿ ತನ್ನ ಮನೆ ಪ್ರವೇಶಿಸುತ್ತಾಳೆ. ಅಪರಾಜಿತಾಳ ಗೆಳತಿ ಬೆಂಗಳೂರಿನಿಂದ ಬಂದಿದ್ದಾಳೆ ಎಂದು ಆ ಮನೆಯವರಿಗೂ ಅಪರಾಜಿತಾಗೆ ಆತ್ಮೀಯ ಸ್ವಾಗತ ನೀಡಿ, ಮನೆಯಲ್ಲಿ ಆಶ್ರಯ ನೀಡುತ್ತಾರೆ.

ಕಿರೀಟಿ ಹಾಗೂ ಕುಂತಿಯ ಪ್ರಣಯ ಜೋರಾಗಿ ನಡೆಯುತ್ತಿದೆ. ಇನ್ನೂ 18 ವರ್ಷಗಳು ತುಂಬಿರದ ಕುಂತಿ ಕಿರೀಟಿನೊಂದಿಗೆ ಮನೆ ಬಿಟ್ಟು ಓಡಿ ಹೋಗುತ್ತಾಳೆ. ಮೈನರ್ ಹುಡುಗಿಯನ್ನು ಕಿಡ್ನಾಪ್ ಮಾಡಿದ ಕೇಸ್ ಕಿರೀಟಿನ ಮೇಲಾಗುತ್ತದೆ.

ಅಪರಾಜಿತಾ ಈಗ ಪಾರಿಜಾತಾ ಹಾಗೂ ಹಿಮಾಂಶು ಬಳಿ ಅಪರಾಜಿತಾ ಹೇಗೆ ಸತ್ತಳು? ಅವಳನ್ನು ತಳ್ಳಿದವರ‍್ಯಾರು? ಎಂದು ನಿರಂತರವಾಗಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ. ಪಾರಿಜಾತಾ ಪ್ರಕಾರ ಹಿಮಾಂಶುವೇ ಅಪರಾಜಿತಾಳ ಕೊಲೆಗಾರ, ಹಿಮಾಂಶು ಪ್ರಕಾರ ಪಾರಿಜಾತಾಳೇ ಕೊಲೆಗಾರಳು.

ಗಾಂಗೇಯ ಹಾಗೂ ಅಪರಾಜಿತಾ ತಮ್ಮದೇ ಆದ ರೀತಿಯಲ್ಲಿ ವಿಷಯಗಳನ್ನು ಕಂಡು ಹಿಡಿಯುತ್ತಾ ಹೋದಂತೆ ಪಾರಿಜಾತಾ ಹಾಗೂ ಹಿಮಾಂಶು ಅಲ್ಲದೆ ಆ ಸಮಯದಲ್ಲಿ ಮತ್ತೊಬ್ಬ ವ್ಯಕ್ತಿ ಇದ್ದ ಎಂಬ ಅಂಶ ಇವರಿಗೆ ತಿಳಿಯುತ್ತದೆ. ಹಾಗಾದರೆ ಅಪರಾಜಿತಾಳನ್ನು ತಳ್ಳಿದ್ದು ಅದೇ ವ್ಯಕ್ತಿಯಾ?

ಇತ್ತ ಕಿರೀಟಿ ಕುಂತಿಯ ಆಸ್ತಿಯ ಮೇಲೆ ಕಣ್ಣಿಟ್ಟಿದ್ದಾನೆ ಎಂಬ ಅಂಶ ಎಲ್ಲರಿಗೂ ತಿಳಿಯುತ್ತದೆ. ಮನೆಯಲ್ಲಿ ಆಸ್ತಿಗಾಗಿ ಗಲಾಟೆ ಮಾಡುತ್ತಾನೆ. ಸಾಕುಮಗಳಿಗೆ ಆಸ್ತಿಯಲ್ಲಿ ಪಾಲಿಲ್ಲ ಎಂದು ಅಬ್ಬಕ್ಕ ಅಬ್ಬರಿಸಿದಾಗ ಎಲ್ಲರಿಗೂ ಆಶ್ಚರ್ಯ, ಕುಂತಿಯ ಈ ಮನೆಯ ಮಗಳಲ್ಲವೇ ಎಂದು!

ಕುಂತಿಯ ಜನ್ಮ ರಹಸ್ಯದ ಕಥೆಯ ಜೊತೆ ಓಡಿಹೋಗಿದ್ದ ಅಬ್ಬಕ್ಕನ ಎರಡನೆಯ ಮಗನ ನಿಜವಾದ ಕಥೆಯೂ ಹೊರಬರುತ್ತದೆ. ಆತ 16 ವರ್ಷಗಳ ಹಿಂದೆಯೇ ಸತ್ತು ಹೋಗಿದ್ದಾನೆ. ಆತ ಸತ್ತನೆಂಬ ವಿಷಯ ಹೊರಜಗತ್ತಿಗೆ ತಿಳಿದರೆ ಅವನ ಹೆಂಡತಿ-ಮಕ್ಕಳಿಗೆ ಜೀವನದಲ್ಲಿ ಭದ್ರತೆ ಇರುವುದಿಲ್ಲ. ಹೀಗಾಗಿ ಅಬ್ಬಕ್ಕ ತನ್ನ ಕೆಲಸದಾಳು ಚೆನ್ನಿಯ ಜೊತೆ ಸೇರಿ, ಎರಡನೆಯ ಮಗನನ್ನು ಯಾರಿಗೂ ತಿಳಿಸದೆ ಮಣ್ಣು ಮಾಡಿದ್ದಾಳೆ.

ಕುಂತಿ ಓಡಿಹೋಗಿರುವುದರಿಂದ, ಅಪರಾಜಿತಾಳ ದೇಹ ಸಿಕ್ಕಿಲ್ಲದೆ ಇರುವುದರಿಂದ, ಅಪರಾಜಿತಾಯೆಂಬ ಪಾರಿಜಾತಾಳ ಹುಚ್ಚು ನಿಧಾನವಾಗಿ ಇಳಿಮುಖವಾಗಿ. ಆಕೆ ಗುಣಮುಖಳಾಗಿ ತನ್ನನ್ನು ಪಾರಿಜಾತಾ ಎಂದು ಗುರುತಿಸಿಕೊಳ್ಳುತ್ತಾಳೆ. ತಾನು ಅಪರಾಜಿತಾಳಲ್ಲ... ಪಾರಿಜಾತಾ ಎಂದು ಸಾರುತ್ತಾಳೆ.

ಈಗ ಇಡೀ ಮನೆಗೆ ಉಳಿದವಳು ಪಾರಿಜಾತಾ ಒಬ್ಬಳೇ. ಹಿರಿಯರ ಮತ್ತು ಮನೆಯ ಜವಾಬ್ದಾರಿ ಅವಳ ಮೇಲಿದೆ. ನಿಧಾನವಾಗಿ ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡು, ಕಳೆದುಹೋದ ಅಪರಾಜಿತಾಗಾಗಿ ಹುಡುಕಾಟ ಶುರು ಮಾಡುತ್ತಾಳೆ. ಹುಡುಕಾಟದಲ್ಲಿ ಅವಳಿಗೆ ತಿಳಿಯುತ್ತದೆ ಅಪರಾಜಿತಾಳನ್ನು ತಳ್ಳಿದು ತಾನೂ ಅಲ್ಲ, ಹಿಮಾಂಶವೂ ಅಲ್ಲ... ಕಿರೀಟಿ ಎಂದು!

ಇತ್ತ ಕುಂತಿಗೆ ನಿಧಾನವಾಗಿ ಅರಿವಾಗುತ್ತದೆ ಕಿರೀಟಿ ಇಷ್ಟಪಟ್ಟಿದ್ದು ತನ್ನನ್ನಲ್ಲ... ತನ್ನ ಆಸ್ತಿಯನ್ನು ಎಂದು. ಹೇಗಾದರೂ ಇದಕ್ಕೆ ಮುಕ್ತಿ ಹಾಕಬೇಕೆಂದು ನಿರ್ಧರಿಸುತ್ತಾಳೆ. ಕಿರೀಟಿ ತನ್ನನ್ನು ಬೆಟ್ಟದಿಂದ ಕೆಳಗೆ ತಳ್ಳಿದ್ದು ಎಂದು ತಿಳಿದೊಡನೆ ಅಪರಾಜಿತಾ ತಾನು ಡಾಕ್ಟರನ ಮಗಳಲ್ಲ... ನಿಜವಾದ ಅಪರಾಜಿತಾಳೇ ಎಂದು ತನ್ನ ನಿಜರೂಪ ಪ್ರಕಟಿಸುತ್ತಾಳೆ.

ಕಿರೀಟಿಯಿಂದ ರೋಸಿಹೋದ ಕುಂತಿ ಉಪಾಯವಾಗಿ ಆತನನ್ನು ತವರಿಗೆ ಕರೆತಂದು, ಆತನಿಂದ ಬಿಡುಗಡೆ ಪಡೆಯಬೇಕೆಂದು ಅಜ್ಜಿ, ತಾಯಿಯ ಸಹಾಯ ಕೇಳುತ್ತಾಳೆ. ಕಿರೀಟಿ ಆಸ್ತಿ ಸಿಗದಿದ್ದಾರೆ ಕುಂತಿಯನ್ನು ಸಾಯಿಸಿ ಇನ್ನೊಂದು ಮದುವೆಯಾಗಲು ಈಗಾಗಲೇ ಶ್ರೀಮಂತ ಹುಡುಗಿಯೊಬ್ಬಳನ್ನು ನೋಡಿ ಬಂದಿದ್ದಾನೆ. ಅಜ್ಜಿ ಅಬ್ಬಕ್ಕ, ಕೆಲಸದಾಳು ಚೆನ್ನಿ ಹಾಗೂ ಕುಂತಿ ಕಿರೀಟಿಯನ್ನು ಉಪಾಯವಾಗಿ ತೋಟದ ಮನೆಗೆ ಕರೆದುಕೊಂಡು ಹೋಗಿ ಆತನ ಕೈಕಾಲು ಕಟ್ಟುತ್ತಾರೆ.

ಆಗ ಅಜ್ಜಿ ಕಿರೀಟಿನಿಗೆ 16 ವರ್ಷಗಳ ಹಿಂದೆ ಇಲ್ಲಿಯೇ... ಹೀಗೇ ಒಂದು ಘಟನೆ ನಡೆದಿತ್ತು. ನನ್ನ ಮಗ ದುಷ್ಟ. ಸೊಸೆಗೆ ಕಿರುಕುಳ ಕೊಟ್ಟಿ, ಸಿಕ್ಕ ಸಿಕ್ಕ ಹುಡುಗಿಯರೊಂದಿಗೆ ಓಡಾಡುತ್ತಿದ್ದ ಒಂದು ಅಮಾಯಕ ಹುಡುಗಿಗೆ ಮೋಸ ಮಾಡಿ ಗರ್ಭಿಣಿ ಮಾಡಿದ್ದ ಮತ್ತು ಆ ಹುಡುಗಿಗೂ ಕೈ ಕೊಟ್ಟು ಓಡಿಹೋಗುವುದರಲ್ಲಿದ್ದಾಗ ಆವೇಶಗೊಂಡ ಆಕೆ ಮಗನನ್ನು ಕಣ್ಣೆದುರಿಗೇ ಕೊಚ್ಚಿ ಹಾಕಿದಳು. ದುಷ್ಟ ಮಗನಾದ್ದರಿಂದ ನಾವು ಅವನಿಗೆ ಸಹಾಯ ಮಾಡಲಿಲ್ಲ. ಆ ಗರ್ಭಿಣಿ ಹೊಡೆದಾಟದಲ್ಲಿ ತಾನೂ ಸತ್ತುಹೋದಳು. ಆ ಗರ್ಭಿಣಿಯ ಮಗಳೇ ಕುಂತಿ. ತಾಯಿಯ ರಕ್ತ ಎಲ್ಲೂ ಹೋಗಿಲ್ಲ... ಅದೇ ಆವೇಶದಿಂದ ನಿನ್ನನ್ನು ನಾಶಮಾಡಲು ಬಂದಿದ್ದಾಳೆ ಎನ್ನುತ್ತಾಳೆ.

ತನ್ನ ಅಕ್ಕನನ್ನು ಬೆಟ್ಟದಿಂದ ಕೆಳಗೆ ತಳ್ಳಿದ, ತನಗೆ ಹಲವಾರು ಬಾರಿ ಸಾಯಿಸಲು ಪ್ರಯತ್ನಿಸಿದ. ನೀನಿನ್ನು ಬದುಕಿರಬಾರದು ನನ್ನ ಕೈಯಿಂದಲೇ ವಿನಾಶವಾಗಬೇಕು ಎಂದು ಕುಂತಿ ಕುಡುಗೋಲನ್ನು ಎತ್ತುತ್ತಾಳೆ. ಇವರೆಲ್ಲರ ರೋಷಾವೇಶದ ಮಾತುಗಳನ್ನು ಕೇಳಿದ ಕಿರೀಟಿ ಹೆದರಿ ಅಲ್ಲಿಯೇ ಹೃದಯಾಘಾತವಾಗಿ ಸಾಯುತ್ತಾನೆ. (ಅಥವಾ ಮೈನರ್ ಹುಡುಗಿಯನ್ನು ಕಿಡ್ನಾಪ್ ಮಾಡಿರುವ ಕೇಸಿಗೆ ಅನುಗುಣವಾಗಿ ಕುಂತಿ ಕಿರೀಟಿನ ವಿರುದ್ಧ ಸಾಕ್ಷ್ಯ ಹೇಳಿ ಅವನು ಜೈಲಿಗೆ ಹೋಗುವಂತೆ ಮಾಡುತ್ತಾಳೆ.)

ಅನ್ಯಾಯ ಮಾಡುವವರಿಗೆ ಈ ಮನೆಯಲ್ಲಿ ಸ್ಥಳವಿಲ್ಲ ಎಂಬ ಘೋಷ ವಾಕ್ಯದೊಂದಿಗೆ ಅಬ್ಬಕ್ಕ ಎಲ್ಲರನ್ನೂ ಹೊರಡಿಸಿಕೊಂಡು ಇದುವರೆಗೂ ಏನೂ ನಡದೇ ಇಲ್ಲವೆಂಬಂತೆ ಮನೆ ಕಡೆ ಹೊರಡುತ್ತಾಳೆ. ಕೊನೆಯಲ್ಲಿ ಅಪರಾಜಿತಾ ಗಾಂಗೇಯನಿಗೆ, ಪಾರಿಜಾತಾ ಹಿಮಾಂಶುವಿಗೆ ಸಿಕ್ಕಿ ಕಥೆ ಸುಖಾಂತವಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kanmani : Story of identical twins by writer, producer Rekha Rani. The story revolves around two sisters who grow up together, but build up different personality, face twists and turns. What happens in their life and how they come out victorious? Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more