• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೇಜಸ್ವಿನಿ ಹೆಗಡೆ ಸಣ್ಣಕಥೆ : ಜೀವತಂತು (ಭಾಗ 6)

By ತೇಜಸ್ವಿನಿ ಹೆಗಡೆ, ಬೆಂಗಳೂರು
|

(ಕಥೆ ಮುಂದುವರಿದಿದೆ...)

ಎರಡೂ ಕೈಗಳನ್ನೂ ಬೆಂಚಿನ ತುದಿಯಲ್ಲಿ ಬಿಗಿಯಾಗಿ ಒತ್ತಿ ಹಿಡಿದಿದ್ದ ಶುಭಾ ಬಾಯ್ತೆರೆದು ನಿಃಶಬ್ದವಾಗಿ ಅಳುವುದನ್ನು ಕಂಡು ಮಾನಸಳಿಗೂ ತುಂಬಾ ದುಃಖವುಕ್ಕಿತು. ಹಾಗೇ ಅವಳನ್ನಪ್ಪಿಬಿಟ್ಟಳು. ಸುಮತಿಯವರ ಕಣ್ಗಳೂ ಕೊಳಗಳಾಗಿದ್ದವು. "ಸಾಕು ಸುಮ್ನಿರು ಶುಭಾ... ನೀನೇ ಏನೇನೋ ಕಲ್ಪಿಸ್ಕೊಳ್ಬೇಡ... ನಿನ್ನ ಮನಃಸ್ಥಿತಿ, ಪರಿಸ್ಥಿತಿ ಅರಿವಾಗುತ್ತೆ ನಂಗೂ... ಪ್ಲೀಸ್ ಸುಮ್ನಿದ್ಬಿಡು" ಗೆಳತಿಯ ಕರುಣಾಜನಕ ಸ್ಥಿತಿ ನೋಡಿ ವಿಪರೀತ ಹಿಂಸೆಯಾಗತೊಡಗಿತ್ತು ಅವಳಿಗೆ.

"ಮಾನು, ಆ ಎಳೇ ಜೀವ ಇನ್ನೂ ಉಸಿರಾಡ್ತಿರೋದನ್ನ ನೋಡಿದ್ದೇ, ಅವುಚಿಕೊಂಡು, ನನ್ನ ಸೆರಗನ್ನೇ ಅದಕ್ಕೆ ಹೊದೆಸಿ, ಸಿಕ್ಕ ಆಟೋ ಹತ್ತಿ ಈ ಆಸ್ಪತ್ರೆಗೆ ಬಂದಿದ್ದು. ಪಾಪ ಒಳ್ಳೇ ಡ್ರೈವರ್ ಆಗಿದ್ದ ಆತ, ನನ್ನ ಸ್ಥಿತಿ ನೋಡಿ ಹೆಲ್ಪ್ ಮಾಡಿದ. ದುಡ್ಡೂ ಕೇಳಲಿಲ್ಲ. ಆ ಕ್ಷಣಕ್ಕೆ ನಂಗೆ ನೆನ್ಪಾಗಿದ್ದು ಅಲ್ಲೇ ಹತ್ತಿರದ ಹಾಸ್ಟೆಲ್‌ನಲ್ಲಿದ್ದ ಸುಮತಿ ಮೇಡಮ್. ತಕ್ಷಣ ಬಂದ ಅವ್ರೇ ಅಣ್ಣಂಗೂ ವಿಷ್ಯ ತಿಳ್ಸಿದ್ದು. ಡಾಕ್ಟರ್ ಕೇಳಿದ ಪ್ರಶ್ನೆಗಳಿಗೂ ಅವ್ರೇ ಉತ್ತರ ಕೊಟ್ಟು ನಿಭಾಯ್ಸಿದ್ರು. ಅಣ್ಣ ತುಂಬಾ ಕೂಗಾಡ್ದ. ನಮ್ಮ ಮರ್ಯಾದೆ ತೆಗ್ಯೋಕೆ ಇಂಥಾ ಕೆಲ್ಸ ಮಾಡ್ತೀಯಾ... ಮತ್ತೆ ಬರ್ಬೇಡ ನಮ್ಮನೆಗೆ ಅಂತೆಲ್ಲಾ ಹಾರಾಡಿ ಹೋಗ್ಬಿಟ್ಟ. ಮೇಡಮ್ ಜೊತೆಗೀರೋದ್ರಿಂದ ಇನ್ನೂ ಬದ್ಕಿದ್ದೀನಿ. ಮಾನಸ, ಈ ಪುಟ್ಟ ಕೂಸು ಭೂಮಿಗೆ ಬಂದು ನೆಟ್ಟಗೆ ತಿಂಗಳೂ ಆಗಿಲ್ಲ. ಆದ್ರೂ ತನ್ನ ಪ್ರಾಣಕ್ಕಾಗಿ, ಅಸ್ತಿತ್ವಕ್ಕಾಗಿ ರಾತ್ರಿಯಿಡೀ ಹೋರಾಡ್ತು ನೊಡು! ಥತ್... ನಾನು ನೋಡಿದ್ರೆ ಸಾಯೋಕೆ, ಸಾಯ್ಸೋಕೆ ಹೊರಟಿದ್ದೆನಲ್ಲಾ!"

"ಥೂ, ನಂದೂಂದು ಜನ್ಮಾನಾ ಅಂತನ್ನಿಸಿಬಿಡ್ತು ಕಣೆ. ಅದ್ಕೇ ಹಿಂದೆಮುಂದೆ ಯೋಚನೆ ಮಾಡ್ದೇ ಮಗು ಉಳ್ಸಿಕೊಂಡ್ರೆ ಸಾಕು ಅಂತ ಓಡ್ಬಂದೆ. ಊಹೂಂ... ಇನ್ಮುಂದೆ ಏನೇ ಆಗ್ಲಿ, ಇನ್ಯಾರೇ ಬಿಟ್ಟೋಗ್ಲಿ, ಈ ಮಗು ನಂದು. ಇದ್ನ ಜೋಪಾನ್ವಾಗಿ ಸಾಕೋದು ನನ್ನ ಕರ್ತವ್ಯ. ನನ್ನ ಪಾಪಕಾರ್ಯಕ್ಕೆ ಪ್ರಾಯಶ್ವಿತ್ತ ಮಾಡ್ಕೊಳೋದು ನನ್ನ ಗುರಿ. ಮುಂದೊಂದು ದಿನ ನನ್ನ ಮಗ್ಳಿಗೆ ನಾನೇ ಸತ್ಯ ಹೇಳ್ತೀನಿ... ಆಕೆ ನನಗೆ ಏನೇ ಶಿಕ್ಷೆ ಕೊಟ್ರೂ ಅನುಭವಿಸ್ತೀನಿ. ಅಂದೇ ನಂಗೆ ಮುಕ್ತಿ ನೋಡು... ಇವತ್ತಿಂದ ಅವ್ಳು ನಂಗೆ ತಾಯಿ. ನಾನು ಅದ್ರ ಮಗು. ನಾನೂ ಬದುಕ್ತೀನಿ; ಅವ್ಳಿಗಾಗಿ... ಇನ್ನೇನಿದ್ರೂ ಎಲ್ಲಾ ನನ್ನ ಮಗಳಿಗಾಗಿ..." ಬಡಬಡಿಸುತ್ತಾ ಹಾಗೇ ಐಸಿಯೂ ಬಾಗಿಲನತ್ತ ಹೋಗಿ, ಕಿಂಡಿಯಲ್ಲೇ ಮಗುವನ್ನು ಕಣ್ತುಂಬಿಕೊಳ್ಳತೊಡಗಿದಳು ಶುಭಾ.

"ಮೇಡಮ್ ಮೆಡಿಸಿನ್ ಪೇಮೆಂಟ್ ಕಟ್ಟಿಲ್ಲ..." ಸಿಸ್ಟರ್ ಅನುಮಾನದಲ್ಲೇ ಬಿಲ್ ಕೊಡಲು, ಮಾನಸ ಕಟ್ಟಲು ಹೊರಟಳು. ತಕ್ಷಣ ಅವಳನ್ನು ತಡೆದ ಶುಭಾ ತನ್ನ ಕತ್ತಿನಲ್ಲಿದ್ದ ಚಿನ್ನದ ಮಂಗಳಸೂತ್ರ, ಕೈಬಳೆಗಳನ್ನು ತೆಗೆದು ಅವಳ ಕೈಗಿತ್ತಳು. ಗೆಳತಿಯನ್ನು ಮತ್ತಷ್ಟು ನೋಯಿಸಲು ಇಚ್ಛಿಸದ ಮಾನಸ ಅವಳ ಚಿನ್ನವನ್ನು ಹಾಗೇ ತನ್ನ ಪರ್ಸಿನಲ್ಲಿಟ್ಟು, ತನ್ನ ಕ್ರೆಡಿಟ್ ಕಾರ್ಡ್‌ನಿಂದಲೇ ಹಣ ಪಾವತಿಸಿದಳು. ಸುಮತಿ ಮೇಡಮ್ ತಮ್ಮ ಪರಿಚಿತರಿಗೆಲ್ಲಾ ಕಾಲ್ ಮಾಡಿ, ತಾಯಿ ಮಗುವಿಗೆ ಉಳಿಯಲು ವ್ಯವಸ್ಥೆ ಮಾಡುವುದರಲ್ಲಿ ಮಗ್ನರಾಗಿದ್ದು ಕಂಡು ಅವರ ಮೇಲೆ ಗೌರವ ದುಪ್ಪಟ್ಟಾಯಿತು ಮಾನಸಳಿಗೆ.

ನಿಂತು ಸುಸ್ತಾಗಿ, ಕಾಲೆಳೆಯುತ್ತಾ ಮತ್ತೆ ಬೆಂಚಿಗೆ ಬಂದೊರಗಿದ ಶುಭಾಳ ಬಳಿ ಕುಳಿತು ಅವಳ ಬಲಗೈಯನ್ನು ಭದ್ರವಾಗಿ ತನ್ನ ಕೈಯೊಳಗೆ ಬೆಸೆದುಕೊಂಡಳು. "ಶುಭಾ, ಪುಟ್ಟಿಗೊಂದು ಚೆಂದದ ಹೆಸ್ರಿಡ್ಬೇಕಲ್ವಾ? ನೀ ಏನಾದ್ರೂ ಯೋಚ್ಸಿದ್ದೀಯಾ? "ವಿಭಾ" ಹೆಸ್ರು ಹೇಂಗಿದೆ? ವಿಭಾ ಅಂದ್ರೆ ಬೆಳಕು...! ನಂಗಂತೂ ಈ ಹೆಸ್ರು ತುಂಬಾ ಇಷ್ಟ. ನೀ ಏನಂತೀಯಾ?" ಮಾನಸಳ ಮಾತಿಗೆ ಮೆಲ್ಲನೆ ತಲೆಯೆತ್ತಿದ ಶುಭಾಳ ಕಣ್ಗಳಲ್ಲಿ ಕಂಡೂ ಕಾಣದ ನಸುನಗೆಯ ಬೆಳಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jeevatantu, a Kannada short story by writer Tejaswini Hegde on pleasure of motherhood, problems faced by mother when a girl child is born etc. There is always light at the end of dark tunnel. The short story is from collection Samhita.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more