• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೇಜಸ್ವಿನಿ ಹೆಗಡೆ ಸಣ್ಣಕಥೆ : ಜೀವತಂತು (ಭಾಗ 3)

By ತೇಜಸ್ವಿನಿ ಹೆಗಡೆ, ಬೆಂಗಳೂರು
|

(ಕಥೆ ಮುಂದುವರಿದಿದೆ...)

‘ಮಾನಸ, ಶುಭಾಳ ಮಗುವಿಗೆ ಸೀರಿಯಸ್... ಅವ್ಳ ಸ್ಥಿತೀನೂ ಚೆನ್ನಾಗಿಲ್ಲ. ತುಂಬಾ ಅಪ್‌ಸೆಟ್ ಆಗಿದ್ದಾಳೆ. ನಿನ್ನ ನೋಡ್ಬೇಕು ಅಂತಿದ್ದಾಳೆ. ಪ್ಲೀಸ್ ಕೂಡ್ಲೇ ಹೊರ್ಟು ಬಾ..." ಎಂದಷ್ಟೇ ಹೇಳಿ ಫೋನ್ ಕಟ್ ಮಾಡಿದ ಸುಮತಿ ಮೇಡಮ್ ಧ್ವನಿಯೊಳಗಿದ್ದ ಆತಂಕ ಅವಳನ್ನು ಅಲುಗಾಡಿಸಿಬಿಟ್ಟಿತು. ಒಂದೇ ಉಸಿರಿಗೆ ಒಳಗೋಡಿದವಳನ್ನು ಅಷ್ಟೇ ಗಾಬರಿಯಿಂದ ಹಿಂಬಾಲಿಸಿದರು ವೆಂಕಜ್ಜಿ.

"ಅಮ್ಮಾ, ಸುಮತಿ ಮೇಡಮ್ ಕಾಲ್ ಇತ್ತು... ಶುಭಾ ಕೂಸಿಗೆ ರಾಶಿ ಹುಶಾರಿಲ್ಯಡ... ಆನು ಈಗ್ಲೇ ಹೊರ್ಡವು... ರಾತ್ರಿ ಒಂಭತ್ಗಂಟೆ ಬಸ್ಸಿಗೆ ಹೋಗ್ತಿ... ಪ್ಲೀಸ್ ನೀ ಎಂತೂ ಅಡ್ಡ ಮಾತಾಡಡ... ಅಪ್ಪಂಗೆ ನಾನೇ ಆಮೇಲೆ ಕಾಲ್ ಮಾಡಿ ಎಲ್ಲಾ ಹೇಳ್ತಿ." ಅಮ್ಮನ ಪ್ರತಿಕ್ರಿಯೆಗೂ ಕಾಯದೆ ತನ್ನಷ್ಟಕ್ಕೇ ಹಲುಬುತ್ತಾ ಸಿಕ್ಕ ನಾಲ್ಕು ಬಟ್ಟೆಗಳನ್ನು ಬ್ಯಾಗಿಗೆ ತುರುಕುತ್ತಿದ್ದಳು ಮಾನಸ. ಮಗಳಿಗೆ ಏನನ್ನೋ ಹೇಳಹೊರಟ ಸೊಸೆ ಸಾವಿತ್ರಿಯನ್ನು ಕಣ್ಸನ್ನೆಯಲ್ಲೇ ತಡೆದ ವೆಂಕಜ್ಜಿ, ಮೊಮ್ಮಗಳ ಬಳಿ ಹೋಗಿ ತಲೆ ಸವರಲು, ಅವರ ಹೆಗಲಿಗೊರಗಿ ಹಾಗೇ ಕಣ್ಮುಚ್ಚಿ ಕುಳಿತಳು.

Jeevatantu, a Kannada short story by Tejaswini Hegde (part 3)

***

ಸೀಟಿಗೊರಗಿ ಕುಳಿತವಳಿಗೆ ಎಷ್ಟೇ ಒದ್ದಾಡಿದರೂ ನಿದ್ದೆ ಬರುತ್ತಿಲ್ಲ. ಅಪ್ಪ, ಅಮ್ಮನ ಮುದ್ದಾಗಿದ್ದ ಶುಭಾಳ ಅಶುಭ ಘಳಿಗೆ ಅವಳ ಕಾಲೇಜು ಮುಗಿಯುತ್ತಲೇ ಶುರುವಾದಂತಿತ್ತು. ಅಪಘಾತದಲ್ಲಿ ಗತಿಸಿದ ಹೆತ್ತವರು, ಸ್ವಭಾವತಃ ಒರಟಾಗಿದ್ದ ಅಣ್ಣನ ಅಂಕೆ, ಅತ್ತಿಗೆಯ ಉದಾಸೀನ, ಬದುಕೇ ಕಡುಗತ್ತಲಂತಾಗಿದ್ದಾಗ ಅಚಾನಕ್ಕಾಗಿ ಬೆಳಕು ತಂದವ ಸೌರಭ್ ಶರ್ಮ. ಬಿಹಾರ್ ಮೂಲದ ಸೌರಭನ ಆಕರ್ಷಕ ವ್ಯಕ್ತಿತ್ವ, ಮಾತಿಗೆ ಮರುಳಾದ ಶುಭ ಅಣ್ಣನ ಆಕ್ಷೇಪಣೆಯ ನಡುವೆಯೂ ಕೈ ಹಿಡಿದಿದ್ದಳು.

ಅವಳ ಸಂತಸಕ್ಕೆ ಮನಃಪೂರ್ತಿ ಸಾಥ್ ನೀಡಿದವರೆಂದರೆ ಆತ್ಮದ ಸಖಿ ಮಾನಸ ಮತ್ತು ಅವರಿಬ್ಬರ ಅಕ್ಕರೆಯ ಪ್ರೊಫೆಸರ್, ಸುಮತಿ ರಾವ್. ಮದುವೆಯಾದ ತಿಂಗಳಿಗೇ ಸೌರಭನಿಗೆ ದೆಹಲಿಗೆ ವರ್ಗವಾಗಲು, ಗೆಳತಿಯರಿಬ್ಬರೂ ಅಗಲಬೇಕಾಯಿತು. ಮೊದಮೊದಲು ವಾರಕ್ಕೊಮ್ಮೆ ಹರಟುತ್ತಿದ್ದ ಗೆಳತಿಯರು ಕ್ರಮೇಣ ತಿಂಗಳಿಗೊಮ್ಮೆ ಮಾತನಾಡುವುದೂ ಅಪರೂಪವಾಗಿಹೋಯ್ತು. ಈಗ ಕೆಲವು ತಿಂಗಳ ಹಿಂದಷ್ಟೇ ಹೆರಿಗೆಗಾಗಿ ಅಣ್ಣನ ಮನೆಗೆ ಬಂದ ಸುದ್ದಿ ತಿಳಿದು, ಓಡಿಬಂದಿದ್ದಳು ಮಾನಸ.

ಸಖಿಯ ಕಂತಿದ ಮೊಗ, ಸೊರಗಿದ ದೇಹ ನೋಡಿ ಪರಿಪರಿಯಾಗಿ ಕೇಳಿದ್ದಳು. ಅವಳದೋ ಬರೀ ಹಾರಿಕೆಯ ಉತ್ತರ, ತೋರಿಕೆಯ ನಗು. ಶುಭಾಳ ಈ ವೈಖರಿ ನೋಡಿ, ಅಸಮಾಧಾನದಲ್ಲೇ ಅಲ್ಲಿಂದ ಹಿಂತಿರುಗಿದ್ದಳು. ‘ಛೇ... ತಾನೊಮ್ಮೆ ಹೋಗಿ ನೋಡಬೇಕಿತ್ತು. ತನ್ನದೇ ತಪ್ಪು. ಹೇಗೂ ಮದುವೆ ಖರೀದಿಗೆ ಮುಂದಿನ್ವಾರ ಆ ಕಡೆ ಹೋಗೋದಿದೆ ಅಂತ ಸುಮ್ನಾದೆ. ದೇವ್ರೇ.. ಏನೂ ಆಗ್ದೇ ಇರ್ಲಪ್ಪಾ... ಬರೀ ಹದಿನೈದು ದಿನದ ಎಳೆಗೂಸು ಅದು.' ಮನದಲ್ಲೇ ಪ್ರಾರ್ಥಿಸುತ್ತಾ, ಅರ್ಧಂಬರ್ಧ ನಿದ್ದೆಯಲ್ಲೇ ಬೆಂಗಳೂರನ್ನು ತಲುಪಿದಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jeevatantu, a Kannada short story by writer Tejaswini Hegde on pleasure of motherhood, problems faced by mother when a girl child is born etc. There is always light at the end of dark tunnel. The short story is from collection Samhita.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more